
ಇತ್ತೀಚಿನ ದಿನಗಳಲ್ಲಿ ಕಾರ್ಪೊರೇಟ್ ಕಂಪನಿಗಳಲ್ಲಿ ಉದ್ಯೋಗಿಗಳ ಮೇಲಿನ ಕೆಲಸದ ಒತ್ತಡ ಮತ್ತು ವಿಲಕ್ಷಣ ನಿಯಮಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಚರ್ಚೆಗಳು ನಡೆಯುತ್ತಲೇ ಇರುತ್ತವೆ. ಸದ್ಯ ಅಂತಹದ್ದೇ ಒಂದು ಆಘಾತಕಾರಿ ಮತ್ತು ವಿಚಿತ್ರವಾದ ಕಚೇರಿ ನಿಯಮದ (New Office Rule) ನೋಟಿಸ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದೆ. “ನಿಮ್ಮ ಲಂಚ್ ಬ್ರೇಕ್ ನಿಗದಿತ ಸಮಯಕ್ಕಿಂತ ಕೇವಲ ಒಂದು ನಿಮಿಷ ಹೆಚ್ಚಾದರೂ, ನೀವು ಕಂಪನಿಗೆ ಒಂದು ಗಂಟೆ ಹೆಚ್ಚುವರಿ ಕೆಲಸ ಮಾಡಿಕೊಡಬೇಕು” ಎಂಬ ನಿಯಮ ಉದ್ಯೋಗಿಗಳನ್ನು ಬೆಚ್ಚಿಬೀಳಿಸಿದೆ.
@NalinisKitchen ಎಂಬ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿರುವ ಪೋಸ್ಟ್ ನಲ್ಲಿ “ಹೊಸ ಆಫೀಸ್ ನಿಯಮ: ನಿಮ್ಮ ಲಂಚ್ ಬ್ರೇಕ್ ನಿಗದಿಪಡಿಸಿದ 30 ನಿಮಿಷಗಳಿಗಿಂತ 1 ನಿಮಿಷ ಹೆಚ್ಚಾದರೂ ಸಹ, ನೀವು ಸಂಜೆ 6 ಗಂಟೆಯ ನಂತರ ಕಂಪನಿಗೆ 60 ನಿಮಿಷಗಳ ಕಾಲ ಹೆಚ್ಚುವರಿಯಾಗಿ ಉಚಿತವಾಗಿ (Unpaid Focus Time) ಕೆಲಸ ಮಾಡಬೇಕಾಗುತ್ತದೆ” ಎಂದು ಬರೆಯಲಾಗಿದೆ. ಅಷ್ಟೇ ಅಲ್ಲದೆ, ಉದ್ಯೋಗಿಗಳಿಗೆ ಅರ್ಥವಾಗುವಂತೆ ಒಂದು ಉದಾಹರಣೆಯನ್ನೂ ನೀಡಲಾಗಿದ್ದು, “ಒಂದು ವೇಳೆ ನೀವು 31 ನಿಮಿಷಗಳ ಕಾಲ ಊಟದ ವಿರಾಮ ತಗೆದುಕೊಂಡರೆ, ನೀವು ಸಂಜೆ 7 ಗಂಟೆಗೆ ಕಚೇರಿಯಿಂದ ಹೊರಡಬೇಕಾಗುತ್ತದೆ. ಬೇಗ ಊಟ ಮಾಡಿ (Eat Faster)” ಎಂದು ಮ್ಯಾನೇಜ್ಮೆಂಟ್ ಪರವಾಗಿ ‘ಪ್ರತಿಕ್ ಶೆಟ್ಟಿ’ ಎಂಬುವವರು ಸಹಿ ಹಾಕಿ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಆಟೋ ಬಾಡಿಗೆ 150ರೂ., ಖಾತೆಗೆ ಬಂದಿದ್ದು 15 ಸಾವಿರ; ಪ್ರಯಾಣಿಕನ ಹಣವನ್ನು ಮರಳಿಸಿ ಮಾದರಿಯಾದ ಚಾಲಕ
ಈ ಪೋಸ್ಟ್ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ಹಾಗೂ ಕಾರ್ಪೊರೇಟ್ ಉದ್ಯೋಗಿಗಳು ಕಂಪನಿಯ ಮ್ಯಾನೇಜ್ಮೆಂಟ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. “ಇದು ಕಚೇರಿಯೋ ಅಥವಾ ಜೈಲೋ? ಊಟ ಮಾಡಲು ಕೇವಲ 30 ನಿಮಿಷ ನೀಡುವುದೇ ತಪ್ಪು, ಅದರಲ್ಲೂ 1 ನಿಮಿಷ ತಡವಾದರೆ 1 ಗಂಟೆ ಸಂಬಳವಿಲ್ಲದೆ ಕೆಲಸ ಮಾಡಿಸಿಕೊಳ್ಳುವುದು ಯಾವ ನ್ಯಾಯ?” ಎಂದು ನೆಟ್ಟಿಗರು ಪ್ರಶ್ನಿಸುತ್ತಿದ್ದಾರೆ. ಇನ್ನೂ ಕೆಲವರು, “ಇಂತಹ ವಿಷಕಾರಿ ಕೆಲಸದ ವಾತಾವರಣ ಇರುವ (Toxic Work Culture) ಕಂಪನಿಗಳಿಗೆ ತಕ್ಷಣವೇ ರಾಜೀನಾಮೆ ನೀಡಿ ಹೊರಬರುವುದು ಒಳ್ಳೆಯದು” ಎಂದು ಕಮೆಂಟ್ ಮಾಡುತ್ತಿದ್ದಾರೆ. ಸದ್ಯ ಈ ವಿಲಕ್ಷಣ ನಿಯಮದ ಪೋಸ್ಟ್ ಇಂಟರ್ನೆಟ್ನಲ್ಲಿ ಭಾರಿ ಸದ್ದು ಮಾಡುತ್ತಿದೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:49 am, Wed, 24 June 26