ಸ್ಟಂಟ್​ ಮಾಡಿದ ಯುವತಿಯು ತನ್ನ ಸ್ಕಾರ್ಪಿಯೋದೊಂದಿಗೆ ಈಗ ಪೊಲೀಸರ ಅತಿಥಿ

Noida : ‘ಮೇಡಮ್, ತಾವು ಮಹಾರಾಣಿಯಲ್ಲ , ಇದು ರಥಬೀದಿಯೂ ಅಲ್ಲ, ತಮ್ಮ ರಥಸಮೇತ ನಮ್ಮ ಠಾಣೆಗೆ ಬಂದು ನಮ್ಮ ಆತಿಥ್ಯವನ್ನು ಸ್ವೀಕರಿಸಬೇಕು ಎಂದು ಭ್ರಮೆ ಬಿಡಿಸಿದ್ದಾರೆ ನೋಯ್ಡಾ ಪೊಲೀಸರು. ನೋಡಿ ಈ ಸ್ಟಂಟ್​ ವಿಡಿಯೋ.

ಸ್ಟಂಟ್​ ಮಾಡಿದ ಯುವತಿಯು ತನ್ನ ಸ್ಕಾರ್ಪಿಯೋದೊಂದಿಗೆ ಈಗ ಪೊಲೀಸರ ಅತಿಥಿ
Woman in Noida performs dangerous stunt on Mahindra Scorpio SUV Police takes strict action
Follow us
TV9 Web
| Updated By: ಶ್ರೀದೇವಿ ಕಳಸದ

Updated on:Nov 11, 2022 | 2:33 PM

Viral Video : ಈ ಹದಿವಯಸ್ಸು ಹೀಗೇ ಸಾಹಸಗಳತ್ತ ಕೈಮಾಡಿ ಕರೆಯುತ್ತಿರುತ್ತದೆ. ಆದರೆ ಎಲ್ಲಿ ಯಾವ ವಿಷಯಗಳಿಗೆ ಎಷ್ಟು ತೆರೆದುಕೊಳ್ಳಬೇಕು ಎನ್ನುವ ವಿವೇಚನೆ ಇರಬೇಕು. ಇಲ್ಲದಿದ್ದರೆ ಹೀಗೆ ಮಾನ ಹರಾಜಾಗಲು ಮತ್ತು ಶಿಕ್ಷೆ ಅನುಭವಿಸಲು ಇಂದಿನ ತಂತ್ರಜ್ಞಾನದ ಕಾಲದಲ್ಲಿ ಬಹಳ ಹೊತ್ತು ಹಿಡಿಯುವುದಿಲ್ಲ. ನೋಯ್ಡಾದಲ್ಲಿ ರಾತ್ರಿಹೊತ್ತಿನಲ್ಲಿ ಮಹೀಂದ್ರಾ ಸ್ಕಾರ್ಪಿಯೋ ಎಸ್​ಯುವಿ ಬೈನೆಟ್​ ಮೇಲೆ ಕುಳಿತು ಸ್ಟಂಟ್ ಮಾಡುತ್ತಿದ್ದ ಕಾರಣ ಈ ಯುವತಿಯನ್ನು ಮತ್ತು ವಾಹನವನ್ನು ಪೊಲೀಸರ ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ. ಈ ಘಟನೆ ನಡೆದ ಸಮಯ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ, ಈ ವಿಡಿಯೋ ಇದೀಗ ವೈರಲ್ ಆಗುತ್ತಿದ್ದು, ನೆಟ್ಟಿಗರು ಈ ಕೃತ್ಯವನ್ನು ಟೀಕಿಸುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸೆಕೆಂಡುಗಳ ಲೆಕ್ಕದಲ್ಲಿ ಸಾಹಸ ಪ್ರದರ್ಶಿಸಿ ರೀಲು ಮಾಡಿ ಹಣ ಗಳಿಸಲು ಜೀವವನ್ನೇ ಅಪಾಯಕ್ಕೆ ತಳ್ಳಿಕೊಳ್ಳುತ್ತಿರುವ ಅನೇಕ ವಿಡಿಯೋಗಳನ್ನು ಈಗಾಗಲೇ ನೋಡಿದ್ದೀರಿ. ಇದೀಗ ಈ ಯುವತಿಯು ಅದೇ ಸಾಲಿನಲ್ಲಿ ಸಾಗುತ್ತಿದ್ದಾಳಾ ಎಂಬ ಅನುಮಾನ ಬಾರದೇ ಇರದು. ಮಹೀಂದ್ರಾ ಸ್ಕಾರ್ಪಿಯೋ ಎಸ್‌ಯುವಿಯ ಬಾನೆಟ್​ ಏರಿ ಕುಳಿತು ಸಾಗುತ್ತಿದ್ದಾಳೆ. ರಥಬೀದಿ ಎಂದುಕೊಂಡಿದ್ದಾಳೋ ಏನೋ. ಆದರೆ ಉತ್ತರ ಪ್ರದೇಶದ ಪೊಲೀಸರು ಅವಳ ಈ ರಥಯಾತ್ರೆಯನ್ನು ಭಂಗಗೊಳಿಸಿ ಈಕೆಯ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದಾರೆ. ಆದರೆ ಈಕೆಯ ಹೆಸರನ್ನು ಬಹಿರಂಗಪಡಿಸಿಲ್ಲ.

ಸಾರ್ವಜನಿಕ ರಸ್ತೆಗಳಲ್ಲಿ ಅದೂ ರಾತ್ರಿ ಹೊತ್ತಿನಲ್ಲಿ ಹೀಗೆ ಚಲಿಸುವುದು ಯಾರಿಗೂ ಅಪಾಯಕಾರಿಯೇ. ನಿಮ್ಮ ಗತಿ ನಿಧಾನವೇ ಇರಬಹುದು. ಆದರೆ ಅತ್ತಕಡೆಯಿಂದ ಬರುವ ವಾಹನಗಳ ವೇಗ? ಎಷ್ಟೇ ಹುಷಾರಿನಲ್ಲಿ ಓಡಾಡುತ್ತಿದ್ದರೂ ಒಂದಿಲ್ಲಾ ಒಂದು ಅಪಘಾತ ಸಂಭವಿಸುತ್ತಲೇ ಇರುತ್ತದೆ. ಆದರೆ ಹೀಗೆಲ್ಲ ಹುಚ್ಚಾಟಗಳನ್ನು ಮಾಡುತ್ತಿದ್ದರೆ ಏನಾಗಬೇಡ?

ಈ ದೃಶ್ಯ ನೋಡುತ್ತಿರುವ ನೆಟ್ಟಿಗರು ಕುಪಿತರಾಗುತ್ತಿದ್ದಾರೆ. ರಸ್ತೆನಿಯಮ ಪಾಲಿಸುವುದನ್ನು ಬಿಟ್ಟು ಹೀಗೆಲ್ಲ ಮಾಡುವುದು ಸರಿಯಲ್ಲ ಎಂದು ಹೇಳುತ್ತಿದ್ದಾರೆ. ಇದು ಕಾನೂನು ರೀತಿ ಅಪರಾಧ ಈ ಯುವತಿಗೆ ತಕ್ಕ ಶಿಕ್ಷೆಯಾಗಬೇಕು ಎಂದಿದ್ದಾರೆ ಕೆಲವರು. ಕ್ಷಣಗಳ ಲೆಕ್ಕದ ಮೋಜಿಗಾಗಿ ಜೀವವನ್ನೇ ಬಲಿ ಕೊಟ್ಟುಕೊಳ್ಳುವುದು ಸರಿಯಲ್ಲ ಎಂದು ಬುದ್ಧಿ ಹೇಳಿದ್ದಾರೆ ಹಲವರು.

ಜೀವನದಲ್ಲಿ ಯಾವ ವಿಷಯವಾಗಿ ಮತ್ತು ಎಲ್ಲಿ ಸಾಹಸ ಮಾಡಬೇಕು ಎನ್ನುವುದು ಬಹಳ ಮುಖ್ಯ. ನೀವೇನಂತೀರಿ?

ಮತ್ತಷ್ಟು ವೈರಲ್​ ವಿಡಿಯೋಗಾಗಿ ಕ್ಲಿಕ್ ಮಾಡಿ

Published On - 2:32 pm, Fri, 11 November 22