ಮುರಸು ಚಂಡಮಾರುತದ ಎಫೆಕ್ಟ್: ಕರ್ನಾಟಕದಲ್ಲಿ 5 ದಿನಗಳ ಕಾಲ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
Karnataka Rain Forecast: ಮುರಸು ಚಂಡಮಾರುತದ ಪ್ರಭಾವದಿಂದ ಕರ್ನಾಟಕದಲ್ಲಿ ಇಂದಿನಿಂದ ನವೆಂಬರ್ 6ರ ವರೆಗೆ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ. ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಆಂಧ್ರಪ್ರದೇಶದಷ್ಟು ತೀವ್ರ ಮಳೆ ಕರ್ನಾಟಕದಲ್ಲಿ ಇರುವುದಿಲ್ಲ ಎಂದವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು, ನವೆಂಬರ್ 02: ಮುರಸು ಚಂಡಮಾರುತದ ಪರಿಣಾಮವಾಗಿ ಕರ್ನಾಟಕದಲ್ಲಿ ಮುಂದಿನ ಐದು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ತಜ್ಞ ಸಿ.ಎಸ್. ಪಾಟೀಲ್ ತಿಳಿಸಿದ್ದಾರೆ. ನವೆಂಬರ್ 2 ರಿಂದ 6ರ ವರೆಗೆ ರಾಜ್ಯಾದ್ಯಂತ ಮಳೆಯ ನಿರೀಕ್ಷೆಯಿದೆ. ಈ ಚಂಡಮಾರುತವು ಚೆನ್ನೈ ಮತ್ತು ಓಂಗೋಲ್‌ನಿಂದ ಕೆಲವು ಕಿಲೋಮೀಟರ್ ದೂರದಲ್ಲಿದ್ದು, ನವೆಂಬರ್ 2ರ ಮಧ್ಯರಾತ್ರಿಯ ವೇಳೆಗೆ ನರಸಾಪುರ ಮತ್ತು ನೆಲ್ಲೂರು ನಡುವೆ ಭೂಸ್ಪರ್ಶ ಮಾಡುವ ಸಾಧ್ಯತೆಯಿದೆ. ಭೂಸ್ಪರ್ಶದ ವೇಳೆ ಗಾಳಿಯ ವೇಗ ಗಂಟೆಗೆ 150 ಕಿಲೋಮೀಟರ್ ಇರಬಹುದು ಎಂದು ಅಂದಾಜಿಸಲಾಗಿದೆ. ಆಂಧ್ರಪ್ರದೇಶದಲ್ಲಿ ವ್ಯಾಪಕ ಮಳೆ ಮತ್ತು ರೆಡ್ ಅಲರ್ಟ್ ಘೋಷಿಸಲಾಗಿದೆಯಾದರೂ, ಕರ್ನಾಟಕದಲ್ಲಿ ಆಂಧ್ರದಷ್ಟು ತೀವ್ರ ಮಳೆ ನಿರೀಕ್ಷಿಸಲಾಗುವುದಿಲ್ಲ ಎಂದವರು ತಿಳಿಸಿದ್ದಾರೆ.
ನವೆಂಬರ್ 2 ರಂದು ದಕ್ಷಿಣ ಒಳನಾಡು ಮತ್ತು ಕರಾವಳಿ ಜಿಲ್ಲೆಗಳಲ್ಲಿ ಹಗುರದಿಂದ ಸಾಧಾರಣ ಮಳೆಯಾಗಬಹುದು. ನವೆಂಬರ್ 3, 4 ಮತ್ತು 5 ರಂದು ರಾಜ್ಯಾದ್ಯಂತ ಉತ್ತಮ ಮಳೆಯಾಗುವ ಸಾಧ್ಯತೆಯಿದೆ. ಉತ್ತರ ಕನ್ನಡ, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಸೇರಿದಂತೆ ಕೆಲವು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಳೆಯ ಪ್ರಮಾಣವು ರಾಜ್ಯದಲ್ಲಿನ ನೀರಿನ ಕೊರತೆಯನ್ನು ಸ್ವಲ್ಪ ಮಟ್ಟಿಗೆ ನೀಗಿಸಬಹುದು ಎಂದು ಸಿ.ಎಸ್. ಪಾಟೀಲ್ ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

