ತಾಯಿಯ ತ್ಯಾಗ… ತಂದೆಯ ಪರಿಶ್ರಮ: ನನ್ನೆಲ್ಲಾ ಸಾಧನೆಗೆ ಹೆತ್ತವರೇ ಕಾರಣ..!
IPL 2025 RR vs GT: ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್ 2025) 47ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 209 ರನ್ ಕಲೆಹಾಕಿತು. ಈ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ಪರ ವೈಭವ್ ಸೂರ್ಯವಂಶಿ (Vaibhav Suryavanshi) 38 ಎಸೆತಗಳಲ್ಲಿ 11 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 101 ರನ್ ಬಾರಿಸಿದ್ದರು. ಈ ಸೆಂಚುರಿ ನೆರವಿನೊಂದಿಗೆ ರಾಜಸ್ಥಾನ್ ರಾಯಲ್ಸ್ ತಂಡ 15.5 ಓವರ್ಗಳಲ್ಲಿ 212 ರನ್ ಬಾರಿಸಿ 8 ವಿಕೆಟ್ಗಳ ಗೆಲುವು ದಾಖಲಿಸಿದೆ.

IPL 2025: ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಹೊಸ ತಾರೋದಯವಾಗಿದೆ. ಅದು ಸಹ 14 ವರ್ಷದ ಹದಿ ಹರೆಯದ ದಾಂಡಿಗನ ರೂಪದಲ್ಲಿ ಎಂಬುದು ವಿಶೇಷ. ಹೌದು, ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿಯುತ್ತಿರುವ ವೈಭವ್ ಸೂರ್ಯವಂಶಿ (Vaibhav Suryavanshi) ಐಪಿಎಲ್ನಲ್ಲಿ ಸಂಚಲನ ಸೃಷ್ಟಿಸಿದ್ದಾರೆ. ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದಲ್ಲಿ ಸ್ಪೋಟಕ ಸೆಂಚುರಿ ಸಿಡಿಸಿ ಇದೀಗ ವೈಭವ್ ಮನೆಮಾತಾಗಿದ್ದಾರೆ.
ಅಲ್ಲದೆ ಚೊಚ್ಚಲ ಸೆಂಚುರಿಯೊಂದಿಗೆ ವಿಶ್ವ ದಾಖಲೆಯನ್ನು ತನ್ನದಾಗಿಸಿಕೊಂಡಿರುವ ಯುವ ದಾಂಡಿಗ ಇಡೀ ವಿಶ್ವವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದಾನೆ. ಈ ಸಾಧನೆಯ ಬೆನ್ನಲ್ಲೇ ಮಾತನಾಡಿದ ವೈಭವ್ ಸೂರ್ಯವಂಶಿ, ಇದಕ್ಕೆಲ್ಲಾ ತನ್ನ ಹೆತ್ತವರ ತ್ಯಾಗವೇ ಕಾರಣ ಎಂದಿದ್ದಾರೆ.
ಗುಜರಾತ್ ಟೈಟಾನ್ಸ್ ವಿರುದ್ಧದ ಪಂದ್ಯದ ಬಳಿಕ ಮಾತನಾಡಿದ ವೈಭವ್, ಇಂದು ನಾನು ಏನಾಗಿದ್ದೇನೋ ಅದಕ್ಕೆ ನನ್ನ ಹೆತ್ತವರೇ ಕಾರಣ. ನನ್ನ ಅಭ್ಯಾಸಕ್ಕಾಗಿ, ನನ್ನ ತಾಯಿ ರಾತ್ರಿ 11 ಗಂಟೆಗೆ ಮಲಗಿ, ಬೆಳಿಗ್ಗೆ 2 ಗಂಟೆಗೆ ಎದ್ದೇಳುತ್ತಿದ್ದರು. ಅಂದರೆ ನನಗಾಗಿ ಅವರು ಕೇವಲ ಮೂರು ಗಂಟೆಗಳ ಕಾಲ ಮಾತ್ರ ನಿದ್ರಿಸುತ್ತಿದ್ದರು.
ಹಾಗೆಯೇ ತಂದೆ ನನ್ನ ಬೆಂಬಲಕ್ಕೆ ನಿಂತಿದ್ದರು. ಇದಕ್ಕಾಗಿ ಅವರು ತಮ್ಮ ಕೆಲಸವನ್ನು ಸಹ ತೊರೆದಿದ್ದರು. ನನ್ನ ಅಣ್ಣ ಕೆಲಸ ಮಾಡುತ್ತಾ ಮನೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ಇದರಿಂದ ಆರ್ಥಿಕ ಸಮಸ್ಯೆಯೊಂದಿಗೆ ಕುಟುಂಬ ನಿರ್ವಹಿಸಬೇಕಾದ ಪರಿಸ್ಥಿತಿ ಎದುರಾಗಿತ್ತು.
ಇದಾಗ್ಯೂ ತಂದೆ ನನಗೆ ಸಂಪೂರ್ಣ ಬೆಂಬಲ ನೀಡುತ್ತಿದ್ದರು. ಹೀಗಾಗಿ ಇಂದಿನ ನನ್ನೆಲ್ಲಾ ಸಾಧನೆಗೆ ತಂದೆ-ತಾಯಿಯೇ ಕಾರಣ ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ.
ಕಷ್ಟಪಟ್ಟರೆ, ದೇವರು ಎಂದಿಗೂ ಕೈ ಬಿಡಲ್ಲ. ಅದು ಇಂದು ಸಾಬೀತಾಗಿದೆ. ನಾವು ನೋಡುತ್ತಿರುವ ಫಲಿತಾಂಶಗಳು ಮತ್ತು ನಾನು ಸಾಧಿಸುತ್ತಿರುವ ಯಶಸ್ಸು ನನ್ನ ಹೆತ್ತವರಿಂದಾಗಿದೆ. ಹೀಗಾಗಿ ಎಲ್ಲಾ ಶ್ರೇಯಸ್ಸು ನನ್ನ ಹೆತ್ತವರಿಗೆ ಸಲ್ಲಬೇಕು ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ.
ವೈಭವ್ ಸೂರ್ಯವಂಶಿ ವಿಡಿಯೋ:
𝙏𝙖𝙡𝙚𝙣𝙩 𝙢𝙚𝙚𝙩𝙨 𝙊𝙥𝙥𝙤𝙧𝙩𝙪𝙣𝙞𝙩𝙮 🤗
He announced his arrival to the big stage in grand fashion 💯
It’s time to hear from the 14-year old 𝗩𝗮𝗶𝗯𝗵𝗮𝘃 𝗦𝘂𝗿𝘆𝗮𝘃𝗮𝗻𝘀𝗵𝗶 ✨
Full Interview 🎥🔽 -By @mihirlee_58 | #TATAIPL | #RRvGT https://t.co/x6WWoPu3u5 pic.twitter.com/8lFXBm70U2
— IndianPremierLeague (@IPL) April 29, 2025
ಇದೇ ವೇಳೆ ತನ್ನ ಇನಿಂಗ್ಸ್ ಬಗ್ಗೆ ಮಾತನಾಡಿದ ವೈಭವ್, ಐಪಿಎಲ್ನಲ್ಲಿ ಆಡುವುದು ನನಗೆ ಸಾಮಾನ್ಯ ವಿಷಯವಾಗಿತ್ತು. ನಾನು ಭಾರತದ ಪರ 19 ವರ್ಷದೊಳಗಿನವರ ತಂಡದಲ್ಲಿ ಆಡಿದ್ದೇನೆ. ದೇಶೀಯ ಮಟ್ಟದಲ್ಲಿಯೂ ಸಹ ಮೊದಲ ಎಸೆತದಲ್ಲಿ ಸಿಕ್ಸರ್ ಬಾರಿಸಿದ್ದೇನೆ. ಮೊದಲ 10 ಎಸೆತಗಳನ್ನು ಆಡುವ ಒತ್ತಡ ನನಗಿರಲಿಲ್ಲ. ಚೆಂಡು ನನ್ನ ಕಣ್ಣಿಗೆ ಬಿದ್ದರೆ ನಾನು ಅದನ್ನು ಹೊಡೆಯುತ್ತೇನೆ ಎಂದು ನನ್ನ ಮನಸ್ಸಿನಲ್ಲಿ ಸ್ಪಷ್ಟವಾಗಿತ್ತು.
ಹೀಗಾಗಿ ನಾನು ಚೊಚ್ಚಲ ಪಂದ್ಯವನ್ನು ನನ್ನ ಮೊದಲ ಮ್ಯಾಚ್ ಎಂದೂ ಭಾವಿಸುತ್ತಿರಲಿಲ್ಲ. ಒಬ್ಬ ಅಂತರರಾಷ್ಟ್ರೀಯ ಬೌಲರ್ ನನ್ನ ಮುಂದೆ ಇದ್ದದ್ದು ನಿಜ. ವೇದಿಕೆ ಕೂಡ ದೊಡ್ಡದಾಗಿತ್ತು. ಇದಾಗ್ಯೂ ನಾನು ನನ್ನ ಆಟವನ್ನು ಆಡುತ್ತಿದ್ದೆ. ಹೀಗಾಗಿ ಎದುರಾಳಿ ಯಾರೇ ಆಗಿದ್ದರೂ ನಾನು ಚಿಂತಿತನಾಗುತ್ತಿರಲಿಲ್ಲ ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ.
ಸದ್ಯ ನನ್ನ ಗುರಿ ಟೀಮ್ ಇಂಡಿಯಾ ಪರ ಆಡುವುದು. ನಾನು ಭಾರತಕ್ಕೆ ಕೊಡುಗೆ ನೀಡಲು ಬಯಸುತ್ತೇನೆ. ಅದಕ್ಕಾಗಿ ನಾನು ಶ್ರಮಿಸಬೇಕು. ಆ ಮಟ್ಟವನ್ನು ತಲುಪುವವರೆಗೆ ನನ್ನ ಶ್ರಮ ನಿಲ್ಲುವುದಿಲ್ಲ. ದೇಶಕ್ಕಾಗಿ ಒಳ್ಳೆಯದನ್ನು ಮಾಡಲು ಪ್ರಯತ್ನಿಸುತ್ತೇನೆ ಎಂದರು.
ಇನ್ನು ಐಪಿಎಲ್ ಆಡಲು ನಾನು ಬಹಳ ಸಮಯದಿಂದ ತಯಾರಿ ನಡೆಸುತ್ತಿದ್ದೆ. ಇದೀಗ ನಾನು ಬಯಸಿದ ರೀತಿಯಲ್ಲಿ ಶತಕ ಮೂಡಿಬಂದಿರುವುದು ನನಗೆ ಸಂತೋಷ ತಂದಿದೆ.
ಟ್ರಯಲ್ಸ್‌ನಲ್ಲಿ, ನಾನು ಚೆನ್ನಾಗಿ ಬ್ಯಾಟಿಂಗ್ ಮಾಡಿದ್ದೆ. ಈ ವೇಳೆ ರಾಜಸ್ಥಾನ್ ರಾಯಲ್ಸ್ ತಂಡದ ಬ್ಯಾಟಿಂಗ್ ಕೋಚ್ ವಿಕ್ರಮ್ ರಾಥೋಡ್ ಸರ್ ಮತ್ತು ತಂಡದ ವ್ಯವಸ್ಥಾಪಕ ರೋಮಿ ಭಿಂದರ್ ಸರ್ ಇದ್ದರು. ಅವರು ನಿಮ್ಮನ್ನು ತಂಡದಲ್ಲಿ ಆಯ್ಕೆ ಮಾಡಲು ಪ್ರಯತ್ನಿಸುತ್ತೇವೆ ಎಂದು ಹೇಳಿದ್ದರು.
ಇದನ್ನೂ ಓದಿ: IPL 2025: ಎಡಗೈ ದಾಂಡಿಗರ ಸಿಡಿಲಬ್ಬರಕ್ಕೆ RCB ದಾಖಲೆ ಧೂಳೀಪಟ
ಆ ಬಳಿಕ ಅವರು ನನ್ನನ್ನು ಮುಖ್ಯ ತರಬೇತುದಾರ ರಾಹುಲ್ ದ್ರಾವಿಡ್ ಸರ್‌ಗೆ ಪರಿಚಯಿಸಿದರು. ರಾಹುಲ್ ಸರ್ ಅವರಿಂದ ತರಬೇತಿ ಪಡೆಯುವುದು ನನ್ನ ಕನಸಾಗಿತ್ತು. ಅದು ಈಗ ನನಸಾಗಿದೆ. ಇತರ ಸಹಾಯಕ ಸಿಬ್ಬಂದಿ ಮತ್ತು ಹಿರಿಯ ಆಟಗಾರರಿಂದ ನನಗೆ ಸಾಕಷ್ಟು ಬೆಂಬಲ ಸಿಗುತ್ತಿದೆ. ಅದರ ಫಲವಾಗಿ ಇಂದು ನಾನು ಉತ್ತಮ ಬ್ಯಾಟಿಂಗ್ ಪ್ರದರ್ಶಿಸಿದ್ದೇನೆ ಎಂದು ವೈಭವ್ ಸೂರ್ಯವಂಶಿ ಹೇಳಿದ್ದಾರೆ.




