ನಂದಿನಿ ಹಾಲು ದರ ಏರಿಕೆ ಪರಿಣಾಮ: ರಾಜ್ಯಾದ್ಯಂತ ಕಾಫಿ, ಟೀ ಬೆಲೆ ₹5 ಹೆಚ್ಚಳ
ರಾಜ್ಯಾದ್ಯಂತ ಕಾಫಿ ಮತ್ತು ಟೀ ಪ್ರಿಯರಿಗೆ ಶಾಕ್. ಹಾಲು ದರ ಏರಿಕೆಯಾದ ಬೆನ್ನಲ್ಲೇ ಒಂದು ಕಪ್ ಕಾಫಿ ಅಥವಾ ಟೀ ಬೆಲೆ ಏಕಾಏಕಿ 5 ರೂಪಾಯಿ ಹೆಚ್ಚಳವಾಗಿದೆ. 15 ರೂಪಾಯಿ ಇದ್ದ ಮಿನಿ ಕಾಫಿ-ಟೀ ಈಗ 20 ರೂಪಾಯಿ, 20 ರೂಪಾಯಿ ಇದ್ದ ಪೂರ್ಣ ಕಪ್ 25 ರೂಪಾಯಿಗೆ ಏರಿಕೆಯಾಗಿದೆ. ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಬೆಲೆ ಹೆಚ್ಚಿಸಿದ್ದಾರೆ.
ಬೆಂಗಳೂರು, ನವೆಂಬರ್ 2: ಇಂದಿನಿಂದ ರಾಜ್ಯದಾದ್ಯಂತ ಕಾಫಿ ಮತ್ತು ಟೀ ಪ್ರಿಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟಿದೆ. ಚಳಿಗೆ ಬಿಸಿ ಬಿಸಿ ಕಾಫಿ-ಟೀ ಕುಡಿಯುವುದಕ್ಕೂ ಜನ ಯೋಚಿಸುವಂತಾಗಿದೆ. ಕೆಎಂಎಫ್ ಹಾಲಿನ ದರ ಹೆಚ್ಚಳ ಮಾಡಿದ ಬೆನ್ನಲ್ಲೇ, ಒಂದು ಕಪ್ ಕಾಫಿ ಅಥವಾ ಟೀ ಬೆಲೆ ಏಕಾಏಕಿ 5 ರೂಪಾಯಿ ಹೆಚ್ಚಳವಾಗಿದೆ. ಸಾಮಾನ್ಯವಾಗಿ 15 ರೂಪಾಯಿ ಇದ್ದ ಮಿನಿ ಕಾಫಿ ಮತ್ತು ಟೀ ಬೆಲೆ ಈಗ 20 ರೂಪಾಯಿಗೆ ಏರಿಕೆ ಕಂಡಿದೆ. ಇನ್ನು 20 ರೂಪಾಯಿ ಇದ್ದ ಒಂದು ಕಪ್ ಪೂರ್ಣ ಕಾಫಿ ಅಥವಾ ಟೀ ಬೆಲೆ 25 ರೂಪಾಯಿಗೆ ತಲುಪಿದೆ. ಬೆಂಗಳೂರು ಸೇರಿ ರಾಜ್ಯಾದ್ಯಂತ ಹೋಟೆಲ್ಗಳಲ್ಲಿ ಕಾಫಿ ಮತ್ತು ಟೀಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದೆ.
ರಾಜ್ಯ ಸರ್ಕಾರ ಹಾಲಿನ ದರ ಏರಿಸಿದ್ದೇ ಈ ಪರಿಣಾಮಕ್ಕೆ ಕಾರಣ. ಹೋಟೆಲ್ ಮಾಲೀಕರು ಈಗಾಗಲೇ ಈ ಬಗ್ಗೆ ಮಾತನಾಡುತ್ತಿದ್ದು, ಕಾಫಿ-ಟೀ ಬೆಲೆ ಹೆಚ್ಚಳ ಮಾಡಲೇಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದ್ದರು. ಇದೀಗ ದರ ಹೆಚ್ಚಳ ಅಸ್ತಿತ್ವಕ್ಕೆ ಬಂದಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

