ತಮಿಳುನಾಡಲ್ಲಿ ಚುನಾವಣೆ ಸೋತವ್ರು ಕರ್ನಾಟಕದಲ್ಲಿ ಉಸ್ತುವಾರಿ: ಅಣ್ಣಾಮಲೈ ಬಗ್ಗೆ ತೇಜಸ್ವಿನಿ ವ್ಯಂಗ್ಯ
Tejaswini Gowda attacks K Annamalai: ರಾಯಚೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಕಾಂಗ್ರೆಸ್ ನಾಯಕಿ ತೇಜಸ್ವಿನಿ ಗೌಡ ತಾನು ಮೋದಿಯನ್ನು ವಿರೋಧಿಸುತ್ತಿಲ್ಲ. ಆದರೆ, ಬಿಜೆಪಿ ಈ ದೇಶಕ್ಕೆ ಸೂಕ್ತವಾದ ಪಕ್ಷವಲ್ಲ ಎನ್ನುವುದಾಗಿ ಅವರು ಹೇಳಿದ್ದಾರೆ. ಕೆ ಅಣ್ಣಾಮಲೈ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ತೇಜಸ್ವಿನಿ ಗೌಡ, ಅವರು ಯಾವ ದೊಡ್ಡ ಪಿಡಿಂಗಿ ನಾಯಕ ಎಂದು ಕೇಳಿ ವ್ಯಂಗ್ಯ ಮಾಡಿದ್ದಾರೆ. ಕರ್ನಾಟಕದಲ್ಲಿ ಆಫೀಸರ್ ಆಗಿದ್ದವರು ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಾರೆ. ಅಂಥವರನ್ನು ಕರ್ನಾಟಕ ಬಿಜೆಪಿ ಉಸ್ತುವಾರಿ ಮಾಡಲಾಗಿದೆ ಎಂದು ರಾಜ್ಯ ಬಿಜೆಪಿ ಬಗ್ಗೆ ಮರುಕ ವ್ಯಕ್ತಪಡಿಸಿದ್ದಾರೆ.
ರಾಯಚೂರು, ಮೇ 2: ಕರ್ನಾಟಕದ ಮೇಕೆದಾಟು ಕುಡಿಯುವ ನೀರು ಯೋಜನೆಯನ್ನು (Mekedatu project) ವಿರೋಧಿಸಿದ ಅಣ್ಣಾಮಲೈ ಅವರನ್ನು ಲೋಕಸಭಾ ಚುನಾವಣೆಯಲ್ಲಿ ಕರ್ನಾಟಕದ ಬಿಜೆಪಿ ಉಸ್ತುವಾರಿಯಾಗಿ (Karnataka BJP in-charge) ಮಾಡಲಾಗಿದೆ ಎಂದು ಕಾಂಗ್ರೆಸ್ ನಾಯಕಿ ತೇಜಸ್ವಿನಿ ಗೌಡ (Tejaswini Gowda) ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಯಚೂರಿನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ತೇಜಸ್ವಿನಿ, ಮೇಕೆದಾಟು ವಿರೋಧಿಸಿದವರಿಂದ ಚುನಾವಣೆಯಲ್ಲಿ ಮಾರ್ಗದರ್ಶನ ಪಡೆಯುವ ಪರಿಸ್ಥಿತಿಗೆ ರಾಜ್ಯ ಬಿಜೆಪಿ ಬಂದಿದೆ ಎಂದು ಮರುಕ ವ್ಯಕ್ತಪಡಿಸಿದ್ದಾರೆ.
ಅಣ್ಣಾಮಲೈ ಅವರನ್ನು ಒಂದು ಹಂತದಲ್ಲಿ ಯಾವ ದೊಡ್ಡ ಪಿಡಿಂಗಿ ನಾಯಕ ಎಂದು ವ್ಯಂಗ್ಯ ಮಾಡಿದ ತೇಜಸ್ವಿನಿ ಗೌಡ, ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲಲಾಗದ ಅಣ್ಣಾಮಲೈ ಕರ್ನಾಟಕಕ್ಕೆ ಚುನಾವಣಾ ಉಸ್ತುವಾರಿ ಆಗುವ ದುರ್ಗತಿ ಬಿಜೆಪಿಗೆ ಬಂದಿದೆ ಎಂದಿದ್ದಾರೆ.
ಇದನ್ನೂ ಓದಿ: ಸೋಲುತ್ತಿರುವ ಹತಾಶೆಯಲ್ಲಿ ಕಾಂಗ್ರೆಸ್ ಏನೇನೋ ಮಾತಾಡುತ್ತೆ: ಬಾಗಲಕೋಟೆಯಲ್ಲಿ ಅಣ್ಣಾಮಲೈ ತಿರುಗೇಟು
ಬಿಜೆಪಿಯಿಂದ ಇತ್ತೀಚೆಗೆ ಕಾಂಗ್ರೆಸ್ಗೆ ಪಕ್ಷಾಂತರ ಮಾಡಿದ ತೇಜಸ್ವಿನಿ ಗೌಡ, ತಾನು ನರೇಂದ್ರ ಮೋದಿ ಅವರನ್ನು ಟೀಕಿಸುತ್ತಿಲ್ಲ. ಆದರೆ, ಬಿಜೆಪಿ ಈ ದೇಶಕ್ಕೆ ಸೂಕ್ತವಾದ ಪಕ್ಷವಲ್ಲ ಎನ್ನುವ ಅಭಿಪ್ರಾಯಪಟ್ಟಿದ್ದಾರೆ. ಅಣ್ಣಾಮಲೈ ಅವರನ್ನು ಮೇಲಿಂದ ಕ್ರಿಯೇಟ್ ಮಾಡಿರುವ ನಾಯಕ ಎಂದು ಅವರು ವರ್ಣಿಸಿದ್ದಾರೆ. ಜನನಾಯಕರು ಜನರಿಂದ ಹುಟ್ಟಿಬರುತ್ತಾರೆ. ಹೀಗೇ ಮೇಲಿಂದ ಕ್ರಿಯೇಟ್ ಆಗುವುದಿಲ್ಲ. ಅಣ್ಣಾಮಲೈ ಕರ್ನಾಟಕದಲ್ಲಿ ಆಫೀಸರ್ ಆಗಿದ್ರೂ ಅಲ್ಲಿಗೆ ಹೋಗಿ ನಂಗೆ ಕನ್ನಡ ಗೊತ್ತಿಲ್ಲ, ಅದು ಗೊತ್ತಿಲ್ಲ, ಇದು ಗೊತ್ತಿಲ್ಲ ಅಂತಾರೆ ಎಂದು ವ್ಯಂಗ್ಯ ಮಾಡಿದ್ದಾರೆ. ಜನರು ದಡ್ರಲ್ಲ. ಚುನಾವಣೆಯಲ್ಲಿ ಇದಕ್ಕೆ ಉತ್ತರ ಕೊಡುತ್ತಾರೆ ಎಂದೂ ಹೇಳಿದ್ದಾರೆ.
ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ