ಮೈಸೂರು ಅಗ್ನಿ ದುರಂತ ಕೇಸ್ಗೆ ಟ್ವಿಸ್ಟ್: ನಿಯಮ ಬಾಹಿರವಾಗಿ ಕಾರ್ಯಾಚರಣೆ ನಡೆಸುತ್ತಿತ್ತಾ ಪಬ್?
ಮೈಸೂರಿನ ರಿಂಗ್ ರಸ್ತೆಯಲ್ಲಿರುವ ಮಾರಾ ಪಬ್ ಅಲಿಯಾಸ್ ಫಾಕ್ಸ್ ಡೆನ್ ರೆಸ್ಟೋ ಬಾರ್ ನಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಇಬ್ಬರು ಸಜೀವ ದಹನವಾಗಿ, ಹಲವರು ಗಾಯಗೊಂಡಿದ್ದಾರೆ. ಆಸ್ಪತ್ರೆ ಸಮೀಪದಲ್ಲೇ ನಿಯಮಬಾಹಿರವಾಗಿ ಈ ರೆಸ್ಟೋ ಬಾರ್ ಕಾರ್ಯನಿರ್ವಹಿಸುತ್ತಿತ್ತು ಎಂಬ ಆರೋಪ ಕೇಳಿಬಂದಿದೆ. ಕಿರಿದಾದ ಪ್ರವೇಶದ್ವಾರ, ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ವಸ್ತುಗಳ ಬಳಕೆ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯ ಘಟನೆಗೆ ಕಾರಣ ಎನ್ನಲಾಗಿದೆ.
ಮೈಸೂರು, ಜೂನ್ 16: ದಟ್ಟಗಳ್ಳಿಯಲ್ಲಿರುವ ಫಾಕ್ಸ್ ಡೆನ್ ರೆಸ್ಟೋ ಬಾರ್ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಗ್ನಿ ದುರಂತದ ಕುರಿತು ಹಲವು ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ರೆಸ್ಟೋ ಬಾರ್ ಅನ್ನು ನಿಯಮಬಾಹಿರವಾಗಿ ನಡೆಸಲಾಗುತ್ತಿತ್ತು ಎಂದು ಹೇಳಲಾಗಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಪಕ್ಕದಲ್ಲೇ ಈ ಪಬ್ ಕಾರ್ಯನಿರ್ವಹಿಸುತ್ತಿದ್ದು, 100 ಮೀಟರ್ ಅಂತರದಲ್ಲಿ ಆಸ್ಪತ್ರೆ, ಶಾಲೆ, ದೇವಸ್ಥಾನಗಳಿರಬಾರದು ಎಂಬ ನಿಯಮವನ್ನು ಉಲ್ಲಂಘಿಸಲಾಗಿದೆ ಎಂಬುದು ಮುಖ್ಯ ಆರೋಪವಾಗಿದೆ. ಪಬ್‌ಗೆ ಕೇವಲ ಒಂದೇ ಕಿರಿದಾದ ಪ್ರವೇಶದ್ವಾರ ಇದ್ದು, ತಾತ್ಕಾಲಿಕ ರಚನೆಯನ್ನು ಮಾಡಲಾಗಿತ್ತು. ಅಲ್ಲದೆ, ಬೆಂಕಿಗೆ ಸುಲಭವಾಗಿ ಆಹುತಿಯಾಗುವಂತಹ ಹುಲ್ಲು ಮತ್ತು ಬಿದಿರಿನಂತಹ ವಸ್ತುಗಳನ್ನು ಬಳಸಲಾಗಿದ್ದು, ಇದು ಬೆಂಕಿ ವೇಗವಾಗಿ ಹರಡಲು ಕಾರಣವಾಯಿತು. ಘಟನೆಗೆ ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.
