ವಾಯುಮಾರ್ಗ ಮಧ್ಯದಲ್ಲಿ ಡಿಕ್ಕಿ ಹೊಡೆದ ಎರಡು ವಿಮಾನಗಳು; ಮೂವರು ಪೈಲಟ್​​ಗಳು ಮೃತಪಟ್ಟಿದ್ದಾಗಿ ವರದಿ

ವಾಯುಮಾರ್ಗ ಮಧ್ಯದಲ್ಲಿ ಡಿಕ್ಕಿ ಹೊಡೆದ ಎರಡು ವಿಮಾನಗಳು; ಮೂವರು ಪೈಲಟ್​​ಗಳು ಮೃತಪಟ್ಟಿದ್ದಾಗಿ ವರದಿ
ಸಾಂದರ್ಭಿಕ ಚಿತ್ರ

ದಕ್ಷಿಣ ಕೊರಿಯಾದ ಆಗ್ನೇಯ ನಗರವಾದ ಸಚೆನ್​​ನಲ್ಲಿ ಘಟನೆ ನಡೆದಿದ್ದಾಗಿ ಅಲ್ಲಿನ ಏರ್​ಫೋರ್ಸ್​ ಹೇಳಿದೆ. ಪೈಲಟ್​ಗಳು ಸತ್ತಿದ್ದನ್ನು ಏರ್​ಫೋರ್ಸ್​ ದೃಢಪಡಿಸಿಲ್ಲ.

TV9kannada Web Team

| Edited By: Lakshmi Hegde

Apr 01, 2022 | 1:22 PM

ಸಿಯೋಲ್​: ದಕ್ಷಿಣ ಕೊರಿಯಾದ  ಏರ್​ಫೋರ್ಸ್​ಗೆ ಸೇರಿದ ಎರಡು ತರಬೇತಿ ವಿಮಾನಗಳು ವಾಯು ಮಾರ್ಗದಲ್ಲಿ (ಆಕಾಶದಲ್ಲಿ ಹಾರಾಟ ನಡೆಸುತ್ತಿರುವ ಸಂದರ್ಭ) ಡಿಕ್ಕಿ ಹೊಡೆದುಕೊಂಡಿದ್ದು, ಮೂವರು ಪೈಲಟ್​ಗಳು ಮೃತಪಟ್ಟಿದ್ದು, ಇನ್ನೊಬ್ಬ ಪೈಲಟ್​ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ. ಹೀಗೆ ವಿಮಾನಗಳು ಹಾರಾಟ ನಡೆಸುತ್ತಿರುವಾಗ ವಾಯುಮಾರ್ಗ ಮಧ್ಯೆ ಡಿಕ್ಕಿಯಾಗುವುದು ಅಪರೂಪದ ಪ್ರಕರಣ ಎಂದೂ ಹೇಳಲಾಗಿದೆ.

ದಕ್ಷಿಣ ಕೊರಿಯಾದ ಆಗ್ನೇಯ ನಗರವಾದ ಸಚೆನ್​​ನಲ್ಲಿ ಘಟನೆ ನಡೆದಿದ್ದಾಗಿ ಅಲ್ಲಿನ ಏರ್​ಫೋರ್ಸ್​ ಹೇಳಿದೆ. ಪೈಲಟ್​ಗಳು ಸತ್ತಿದ್ದನ್ನು ಏರ್​ಫೋರ್ಸ್​ ದೃಢಪಡಿಸಿಲ್ಲ. ಆದರೆ ದಕ್ಷಿಣ ಕೊರಿಯಾದ ಸುದ್ದಿ ಮಾಧ್ಯಮ ಯೊನ್ಹಾಪ್​ ಈ ಬಗ್ಗೆ ವರದಿ ಮಾಡಿದೆ. ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಕೆಳಗೆ ಬಿದ್ದಿವೆ. ಘಟನೆ ನಡೆಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸುಮಾರು 30 ಸಿಬ್ಬಂದಿ ತೆರಳಿದ್ದಾರೆ. ಅಷ್ಟೇ ಅಲ್ಲ, ರಕ್ಷಣಾ ಪಡೆಗಳೂ ಧಾವಿಸಿವೆ ಎನ್ನಲಾಗಿದೆ.

ಇತ್ತೀಚೆಗೆ ಚೀನಾದಲ್ಲಿ ಭೀಕರ ವಿಮಾನ ಅಪಘಾತ ಆಗಿತ್ತು. ಒಟ್ಟು 133 ಪ್ರಯಾಣಿಕರಿದ್ದ, ಚೀನಾ ಈಸ್ಟರ್ನ್​ ಏರ್​ಲೈನ್ಸ್​ಗೆ ಸೇರಿದ ಬೋಯಿಂಗ್​ 737 ವಿಮಾನ ಪತನ ಆಗಿತ್ತು. ಕುನ್ಮಿಂಗ್​ ನಗರದಿಂದ ಗುವಾಂಗ್​ಝೌಗೆ ತೆರಳುತ್ತಿದ್ದ ವಿಮಾನ ಗುವಾಂಗ್ಸ್ಕಿ ಪ್ರದೇಶದ ವುಝೌ ಬಳಿ, ಪರ್ವತ ಪ್ರದೇಶದಲ್ಲಿ ವಾಯುಗಾಮಿ ಸಂಪರ್ಕ ಕಳೆದುಕೊಂಡು ಅದೇ ಜಾಗದಲ್ಲಿಯೇ ಅಪಘಾತಕ್ಕೀಡಾಗಿತ್ತು. ಈ ದುರ್ಘಟನೆಯಲ್ಲಿ ಎಲ್ಲ 133 ಪ್ರಯಾಣಿಕರೂ ಮೃತಪಟ್ಟಿದ್ದರು. ಇತ್ತೀಚಿನ ವರ್ಷಗಳಲ್ಲಿ ನಡೆದ ಭೀಕರ ವಿಮಾನ ಅಪಘಾತ ಇದಾಗಿದೆ. ಚೀನಾ ವಿಮಾನ ಪತನದ ಭಯ ಹುಟ್ಟಿಸುವ ವಿಡಿಯೋಗಳು ವೈರಲ್ ಆಗಿದ್ದವು.

ಇದನ್ನೂ ಓದಿ: Literature: ನೆರೆನಾಡ ನುಡಿಯೊಳಗಾಡಿ; ಪ್ರಾಣಿಯಾಗಿದ್ದರೆ ಆತ್ಮಹತ್ಯೆ ಮಾಡಿಕೊಳ್ಳಲೂ ಆಗುತ್ತಿರಲಿಲ್ಲ

Follow us on

Related Stories

Most Read Stories

Click on your DTH Provider to Add TV9 Kannada