ಪಾಕಿಸ್ತಾನದಲ್ಲಿ ನೀರಿಗಾಗಿ ಹಾಹಾಕಾರ; ಭಾರತ ಸಿಂಧೂ ಜಲ ಒಪ್ಪಂದ ರದ್ದುಗೊಳಿಸಿದ ಬೆನ್ನಲ್ಲೇ ಪಾಕ್​ನಲ್ಲಿ ಶೇ. 22ರಷ್ಟು ನೀರಿನ ಕೊರತೆ

ಪಾಕಿಸ್ತಾನವು ಪ್ರಸ್ತುತ ಅತ್ಯಂತ ಭೀಕರವಾದ ನೀರಿನ ಬಿಕ್ಕಟ್ಟು ಎದುರಿಸುತ್ತಿದ್ದು, ಇದು ದೇಶದ ಕೃಷಿ ಕ್ಷೇತ್ರ, ಆಹಾರ ಭದ್ರತೆ ಹಾಗೂ ಆರ್ಥಿಕತೆಯ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಶೇ. 22ರಿಂದ 25ರಷ್ಟು ನೀರಿನ ಕೊರತೆ ಎದುರಾಗಿದ್ದು, ಮುಂಬರುವ ರಬಿ ಹಾಗೂ ಖಾರಿಫ್ ಕೃಷಿ ಹಂಗಾಮಿನಲ್ಲಿ ಪಾಕ್ ತೀವ್ರ ನೀರಿನ ಕೊರತೆಯನ್ನು ಎದುರಿಸಲಿದೆ. ಇದು ಗೋಧಿ ಹಾಗೂ ಇತರ ಪ್ರಮುಖ ಬೆಳೆಗಳ ಉತ್ಪಾದನೆಗೆ ಭಾರಿ ಹೊಡೆತ ನೀಡಲಿದೆ. ಪಾಕಿಸ್ತಾನದಲ್ಲಿ ಜನಸಂಖ್ಯೆ ತೀವ್ರವಾಗಿ ಹೆಚ್ಚುತ್ತ ಇರುವಂತೆಯೇ, ತಲಾವಾರು ನೀರಿನ ಲಭ್ಯತೆಯು 1951ರಲ್ಲಿ 5,260 ಕ್ಯೂಬಿಕ್ ಮೀಟರ್ ಇದ್ದದ್ದು, ಪ್ರಸ್ತುತ 899 ಕ್ಯೂಬಿಕ್ ಮೀಟರ್‌ಗೆ ಕುಸಿದಿದೆ. ಇದು ವಿಶ್ವ ಆರೋಗ್ಯ ಸಂಸ್ಥೆಯ ನೀರಿನ ಅಭಾವದ ಮಿತಿಗಿಂತಲೂ ಕಡಿಮೆಯಾಗಿದೆ.

ಪಾಕಿಸ್ತಾನದಲ್ಲಿ ನೀರಿಗಾಗಿ ಹಾಹಾಕಾರ; ಭಾರತ ಸಿಂಧೂ ಜಲ ಒಪ್ಪಂದ ರದ್ದುಗೊಳಿಸಿದ ಬೆನ್ನಲ್ಲೇ ಪಾಕ್​ನಲ್ಲಿ ಶೇ. 22ರಷ್ಟು ನೀರಿನ ಕೊರತೆ
ಸಿಂಧೂ ಜಲ
Image Credit source: PTI

Updated on: Oct 13, 2026 | 1:24 PM

ಇಸ್ಲಾಮಾಬಾದ್, ಅಕ್ಟೋಬರ್ 13: 2025ರ ಏಪ್ರಿಲ್​ನಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಭಾರತವು ‘ಸಿಂಧೂ ಜಲ ಒಪ್ಪಂದ’ವನ್ನು ಸ್ಥಗಿತಗೊಳಿಸಿರುವ ಹಿನ್ನೆಲೆಯಲ್ಲಿ, ಮುಂಬರುವ 2026-27ರ ಖಾರಿಫ್ ಕೃಷಿ ಹಂಗಾಮಿನಲ್ಲಿ ಸಿಂಧೂ ನದಿ ಪಾತ್ರಕ್ಕೆ ಹರಿದುಬರುವ ನೀರಿನ ಪ್ರಮಾಣದಲ್ಲಿ ಶೇ. 22ರಷ್ಟು ತೀವ್ರ ಅಭಾವ ಉಂಟಾಗಲಿದೆ ಎಂದು ಪಾಕಿಸ್ತಾನ ಸರ್ಕಾರ ಅಧಿಕೃತವಾಗಿ ಅಂದಾಜಿಸಿದೆ. ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಗಳೆರಡಕ್ಕೂ ಒಟ್ಟಾರೆಯಾಗಿ ಶೇ. 22ರಷ್ಟು ನೀರಿನ ಕೊರತೆಯಾಗಲಿದೆ. ಕಳೆದ  ಖಾರಿಫ್ ಹಂಗಾಮಿನಲ್ಲೂ ಪಾಕಿಸ್ತಾನವು ಶೇ. 22ರಷ್ಟು ನೀರಿನ ಹರಿವಿನ ಇಳಿತವನ್ನು ಎದುರಿಸಿತ್ತು ಎನ್ನಲಾಗಿದೆ.

ಈ ಬಗ್ಗೆ ಸಿಎನ್​ಎನ್​-ನ್ಯೂಸ್18 ವರದಿ ಮಾಡಿದ್ದು, ಪಾಕಿಸ್ತಾನದ ಪ್ರಮುಖ ಜಲಾಶಯಗಳಲ್ಲಿ ನೀರಿನ ಸಂಗ್ರಹವು ಗಣನೀಯವಾಗಿ ಕುಸಿದಿದ್ದು, ಕೇವಲ 90 ದಿನಗಳಿಗೆ ಮಾತ್ರ ಆಗುವಷ್ಟು ನೀರು ಉಳಿದಿದೆ ಎಂದು ಪಾಕಿಸ್ತಾನ ಸರ್ಕಾರದ ವರದಿಗಳು ಎಚ್ಚರಿಸಿವೆ.

ಸಿಂಧೂ ಜಲ ಒಪ್ಪಂದವನ್ನು ಭಾರತ ಸ್ಥಗಿತಗೊಳಿಸಿರುವುದನ್ನು ಜಾಗತಿಕ ವೇದಿಕೆಗಳಲ್ಲಿ ಪ್ರಶ್ನಿಸುತ್ತಿರುವ ಪಾಕಿಸ್ತಾನ, ಇದನ್ನು ಭಾರತ ತನ್ನ ವಿರುದ್ಧ ನಡೆಸುತ್ತಿರುವ ‘ನೀರಿನ ಯುದ್ಧ’ ಎಂದು ಕರೆದಿದೆ. ಆದರೆ, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಭಾರತ ಸರ್ಕಾರವು “ರಕ್ತ ಮತ್ತು ನೀರು ಒಟ್ಟಿಗೆ ಹರಿಯಲು ಸಾಧ್ಯವಿಲ್ಲ” ಎಂದು ಕಟ್ಟುನಿಟ್ಟಾಗಿ ಸ್ಪಷ್ಟಪಡಿಸಿದ್ದು, ಭಾರತದ ವಿರುದ್ಧದ ಗಡಿಪಾರಿನ ಭಯೋತ್ಪಾದನೆಯನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ನೀಡಿದೆ.

ಇದನ್ನೂ ಓದಿ: ಕ್ವೆಟ್ಟಾ ಬಳಿ ಪಾಕಿಸ್ತಾನ ಸೇನೆಯ ವಿಮಾನ ಪತನ; ಇಬ್ಬರು ಪೈಲಟ್​​ಗಳು ಸಜೀವದಹನ

ನೀರಿನ ಬಿಕ್ಕಟ್ಟಿಗೆ ಪ್ರಮುಖ ಕಾರಣಗಳು:

ಭಾರತ ಮತ್ತು ಪಾಕಿಸ್ತಾನದ ನಡುವಿನ ಸಿಂಧೂ ಜಲ ಒಪ್ಪಂದಕ್ಕೆ ಸಂಬಂಧಿಸಿದ ಕಾನೂನು ಹಾಗೂ ರಾಜತಾಂತ್ರಿಕ ಬೆಳವಣಿಗೆಗಳು, ಹಾಗೂ ನದಿ ನೀರಿನ ಹರಿವಿನಲ್ಲಿ ಉಂಟಾಗಿರುವ ವ್ಯತ್ಯಯಗಳು ನೀರಿನ ಲಭ್ಯತೆಯ ಮೇಲೆ ಪರಿಣಾಮ ಬೀರಿದೆ. ಜಲಾಶಯಗಳ ವಿಸ್ತರಣೆ ಮತ್ತು ನಿರ್ವಹಣೆಯಲ್ಲಿನ ವಿಳಂಬಗಳು ಕೂಡ ಸಮಸ್ಯೆಯನ್ನು ಉಲ್ಬಣಗೊಳಿಸಿವೆ.

ನೀರಿನ ಸಂಪನ್ಮೂಲಗಳ ದುರ್ಬಳಕೆ, ಹಳೆಯದಾದ ಮತ್ತು ಸೋರುವ ನೀರು ಸರಬರಾಜು ಪೈಪ್‌ಲೈನ್‌ಗಳು, ಕಾಲುವೆಗಳ ನಿರ್ವಹಣೆಯ ಕೊರತೆ ಹಾಗೂ ಅಂತರ್ಜಲದ ವಿಪರೀತ ಬಳಕೆ ಬಿಕ್ಕಟ್ಟನ್ನು ತೀವ್ರಗೊಳಿಸಿದೆ. ಅನಿಯಮಿತ ಮಳೆ, ಹಿಮಾಲಯನ್ ಹಿಮನದಿಗಳು ಕರಗುವಿಕೆಯಲ್ಲಿ ವ್ಯತ್ಯಯ ಹಾಗೂ ತೀವ್ರ ಉಷ್ಣಾಂಶ ಏರಿಕೆಯಿಂದಾಗಿ ನದಿಗಳಿಗೆ ಬರುವ ನೀರಿನ ಪ್ರಮಾಣದಲ್ಲಿ ಏರಿಳಿತ ಉಂಟಾಗಿದೆ.

ಪಾಕಿಸ್ತಾನದ ಆಹಾರ ಭದ್ರತೆಯ ಬೆನ್ನೆಲುಬಾಗಿರುವ ಪಂಜಾಬ್ ಮತ್ತು ಸಿಂಧ್ ಪ್ರಾಂತ್ಯಗಳು ನೀರಿನ ಕೊರತೆಯ ನೇರ ಪರಿಣಾಮ ಎದುರಿಸುತ್ತಿವೆ. ಕೃಷಿಗೆ ನೀರಿಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ.  ಹೈದರಾಬಾದ್, ಕರಾಚಿ ಸೇರಿದಂತೆ ಪ್ರಮುಖ ನಗರಗಳಲ್ಲಿ ಕಲುಷಿತ ನೀರು ಸರಬರಾಜು ಮತ್ತು ಕುಡಿಯುವ ನೀರಿನ ತೀವ್ರ ಅಭಾವ ಉಂಟಾಗಿದ್ದು, ನಾಗರಿಕರು ಟ್ಯಾಂಕರ್‌ಗಳನ್ನು ಅವಲಂಬಿಸುವಂತಾಗಿದೆ.   ಈ ನೀರಿನ ಬಿಕ್ಕಟ್ಟು ಪಾಕಿಸ್ತಾನದಲ್ಲಿ ಮುಂಬರುವ ದಿನಗಳಲ್ಲಿ ಕೇವಲ ಆರ್ಥಿಕ ಅಥವಾ ಕೃಷಿ ಸಮಸ್ಯೆಯಷ್ಟೇ ಅಲ್ಲದೆ, ರಾಷ್ಟ್ರೀಯ ಭದ್ರತೆ ಹಾಗೂ ಸಾಮಾಜಿಕ ಅಶಾಂತಿಗೆ ಕಾರಣವಾಗಬಹುದು ಎಂದು ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಡ್ಯುರಾಂಡ್ ರೇಖೆಯಲ್ಲಿ ಮುಂದುವರೆದ ರಕ್ತಸಿಕ್ತ ಸಂಘರ್ಷ: ವೈಫಲ್ಯಗಳಿಗೆ ನಮ್ಮನ್ನು ದೂಷಿಸಬೇಡಿ ಎಂದು ಪಾಕಿಸ್ತಾನಕ್ಕೆ ತಾಲಿಬಾನ್ ತಿರುಗೇಟು

ಪಾಕಿಸ್ತಾನದ ಜಲ ಮಂಡಳಿ ಮತ್ತು ಕಂದಾಯ ದಾಖಲೆಗಳ ಪ್ರಕಾರ, ಸಿಂಧೂ ನದಿ ವ್ಯವಸ್ಥೆಯ ಪ್ರಮುಖ ಜೀವನಾಡಿಗಳಾದ ಜೀಲಂ ಮತ್ತು ಚೀನಾಬ್ ನದಿಗಳಲ್ಲಿ ನೀರಿನ ಹರಿವು ತೀವ್ರವಾಗಿ ಕುಸಿದಿದೆ. ಭಾರತದಿಂದ ಚೀನಾಬ್ ನದಿಗೆ ಹರಿದುಬರುವ ನೀರಿನ ಪ್ರಮಾಣ ಕಡಿಮೆಯಾಗಿರುವುದು ಕೃತಕ ಬಿಕ್ಕಟ್ಟು ಸೃಷ್ಟಿಸಿದೆ ಎಂದು ಪಾಕಿಸ್ತಾನಿ ಅಧಿಕಾರಿಗಳು ಆರೋಪಿಸಿದ್ದಾರೆ.

ಪಾಕಿಸ್ತಾನದ ಒಟ್ಟು ಕೃಷಿ ಉತ್ಪಾದನೆಯ ಶೇ. 90ರಷ್ಟು ಭಾಗವು ಸಿಂಧೂ ನದಿ ಪಾತ್ರದ ನೀರಾವರಿ ವ್ಯವಸ್ಥೆಯನ್ನೇ ಅವಲಂಬಿಸಿದೆ. ದೇಶದ ಪ್ರಮುಖ ಕೃಷಿ ಪ್ರಾಂತ್ಯಗಳಾದ ಪಂಜಾಬ್ ಮತ್ತು ಸಿಂಧ್ ನೀರಿಲ್ಲದೆ ಪರದಾಡುತ್ತಿದ್ದು, ಈ ನೀರಿನ ಅಭಾವವು ಪಾಕಿಸ್ತಾನದ ಆಹಾರ ಭದ್ರತೆ ಮತ್ತು ಆರ್ಥಿಕತೆಯ ಮೇಲೆ ಅತ್ಯಂತ ಗಂಭೀರ ಪರಿಣಾಮ ಬೀರಲಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
Loading...
Unable to load recommendations.
Follow Us