Sign In

By signing in or creating an account, you agree with Associated Broadcasting Company's Terms & Conditions and Privacy Policy.

Bangladesh Crisis: ಹೊತ್ತಿ ಉರಿಯುತ್ತಿದೆ ನೆರೆಯ ದೇಶ; ಬಾಂಗ್ಲಾದೇಶ ಬಿಕ್ಕಟ್ಟಿಗೆ ನಿಜವಾದ ಕಾರಣವೇನು?

ಬಾಂಗ್ಲಾದೇಶದಲ್ಲಿ ಹಿಂಸಾತ್ಮಕ ಪ್ರತಿಭಟನೆಗಳ ನಡುವೆ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ. ಮಧ್ಯಂತರ ಸರ್ಕಾರ ಅಧಿಕಾರ ವಹಿಸಿಕೊಳ್ಳುತ್ತಿದೆ ಎಂದು ಬಾಂಗ್ಲಾದೇಶದ ಸೇನಾ ಮುಖ್ಯಸ್ಥ ಜನರಲ್ ವಕಾರ್-ಉಸ್-ಜಮಾನ್ ಸೋಮವಾರ ಪ್ರಕಟಿಸಿದ್ದಾರೆ. ಬಾಂಗ್ಲಾ ಬಿಟ್ಟು ಭಾರತಕ್ಕೆ ಬಂದರೂ ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ವಿರುದ್ಧದ ಆಕ್ರೋಶ ಇನ್ನೂ ಕಡಿಮೆಯಾಗಿಲ್ಲ. ಅಷ್ಟಕ್ಕೂ ಬಾಂಗ್ಲಾದೇಶದಲ್ಲಿ ಉಂಟಾಗಿರುವ ಉದ್ವಿಗ್ನತೆ, ಹಿಂಸಾಚಾರಕ್ಕೆ ನಿಜವಾದ ಕಾರಣವೇನು?

Bangladesh Crisis: ಹೊತ್ತಿ ಉರಿಯುತ್ತಿದೆ ನೆರೆಯ ದೇಶ; ಬಾಂಗ್ಲಾದೇಶ ಬಿಕ್ಕಟ್ಟಿಗೆ ನಿಜವಾದ ಕಾರಣವೇನು?
ಬಾಂಗ್ಲಾದೇಶದ ಸಂಸತ್​ ಆವರಣದಲ್ಲಿ ಪ್ರತಿಭಟನಾಕಾರರ ಸಂಭ್ರಮಾಚಣೆ
Follow us
ಸುಷ್ಮಾ ಚಕ್ರೆ
|

Updated on: Aug 06, 2024 | 5:40 PM

ಢಾಕಾ: ನಮ್ಮ ನೆರೆಯ ದೇಶವಾದ ಬಾಂಗ್ಲಾದೇಶದಲ್ಲಿ ಉದ್ವಿಗ್ನತೆ ಹೆಚ್ಚಾಗಿದ್ದು, ಪ್ರಧಾನಿ ಸ್ಥಾನಕ್ಕೆ ಶೇಖ್ ಹಸೀನಾ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಬಾಂಗ್ಲಾದಲ್ಲಿ 15 ವರ್ಷಗಳ ಅಧಿಕಾರ ಅಂತ್ಯಗೊಂಡಿದೆ. ಇತ್ತೀಚೆಗಿನ ದಿನಗಳಲ್ಲಿ ಪ್ರತಿಪಕ್ಷಗಳನ್ನು ಹತ್ತಿಕ್ಕಿ ಸರ್ವಾಧಿಕಾರಿ ಎಂಬ ಆರೋಪವನ್ನೂ ಹೊತ್ತಿದ್ದ ಶೇಖ್ ಹಸೀನಾ ಅವರಿಗೆ ಕೊನೆಯ ಭಾಷಣವನ್ನೂ ಮಾಡಲು ಅವಕಾಶ ಸಿಗದೆ ಆತುರಾತುರವಾಗಿ ದೇಶ ಬಿಟ್ಟು ಪರಾರಿಯಾಗಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಹಾಗಾದರೆ, ಬಾಂಗ್ಲಾದಲ್ಲಿ ಉಂಟಾಗಿರುವ ಈ ಸಂಘರ್ಷಕ್ಕೆ ನಿಜವಾದ ಕಾರಣವೇನು?

ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ಬಾಂಗ್ಲಾದೇಶದಲ್ಲಿ ವಿದ್ಯಾರ್ಥಿಗಳ, ಯುವಕರ ಚಳವಳಿ ನಡೆಯುತ್ತಿತ್ತು. ಇದಕ್ಕೆ ಮುಖ್ಯ ಕಾರಣವೆಂದರೆ ಶೇಖ್ ಹಸೀನಾ ಅವರ ಸರ್ಕಾರ ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಸ್ಥರಿಗೆ ಸರ್ಕಾರಿ ಉದ್ಯೋಗಗಳಲ್ಲಿ ನೀಡಿದ್ದ ಮೀಸಲಾತಿ. ಇದುವರೆಗೂ ಶೇಖ್ ಹಸೀನಾ ಸರ್ಕಾರದ ವಿರುದ್ಧ ನಡೆದ ಪ್ರತಿಭಟನೆಯಲ್ಲಿ 400ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಕಳೆದ ತಿಂಗಳು ಬಾಂಗ್ಲಾದೇಶದಲ್ಲಿ ಆರಂಭವಾದ ಪ್ರತಿಭಟನೆಗಳು, 1971ರಲ್ಲಿ ಬಾಂಗ್ಲಾದೇಶದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಮುಕ್ತಿಜೋದ್ಧರ ಕುಟುಂಬದ ಸದಸ್ಯರಿಗೆ ಶೇ. 30ರಷ್ಟು ಸರ್ಕಾರಿ ಉದ್ಯೋಗಗಳನ್ನು ಮೀಸಲಿಡುವ ಕೋಟಾ ವ್ಯವಸ್ಥೆಯ ವಿರುದ್ಧ ಆಂದೋಲನವಾಗಿ ಪ್ರಾರಂಭವಾಯಿತು. ಈ ವ್ಯವಸ್ಥೆಯು ಆಡಳಿತಾರೂಢ ಅವಾಮಿ ಲೀಗ್‌ನ ಬೆಂಬಲಿಗರನ್ನು ಬೆಂಬಲಿಸುತ್ತದೆ ಮತ್ತು ಅದನ್ನು ಬದಲಿಸಲು ಅರ್ಹತೆ ಆಧಾರಿತ ವ್ಯವಸ್ಥೆಯನ್ನು ಬಯಸಿತು. ಈ ಕುರಿತು ಪ್ರತಿಭಟನೆಗಳು ಹೆಚ್ಚಾದಂತೆ, ಅವಾಮಿ ಲೀಗ್ ಸರ್ಕಾರ ಅದನ್ನು ತನ್ನ ಅಧಿಕಾರ ಬಳಸಿ ಹತ್ತಿಕ್ಕಲು ಪ್ರಯತ್ನಿಸಿತು. ಶೇಖ್ ಹಸೀನಾ ಆ ಪರಿಸ್ಥಿತಿಯನ್ನು ನಿಭಾಯಿಸಿದ ರೀತಿ ಮತ್ತು ಅವರ ಕೆಲವು ಹೇಳಿಕೆಗಳು ಜನರಲ್ಲಿ ತೀವ್ರ ಆಕ್ರೋಶ ಉಂಟುಮಾಡಿತು.

ಇದನ್ನೂ ಓದಿ: 49 ವರ್ಷಗಳ ಹಿಂದೆಯೂ ಶೇಖ್ ಹಸೀನಾಗೆ ಆಶ್ರಯ ನೀಡಿ ಪ್ರಾಣ ಉಳಿಸಿತ್ತು ಭಾರತ; ಆಗ ನಡೆದಿದ್ದೇನು?

ಬಾಂಗ್ಲಾದೇಶದಲ್ಲಿ ಹಲವು ವರ್ಷಗಳಿಂದ ಮೀಸಲಾತಿ ಜ್ವಲಂತ ಸಮಸ್ಯೆಯಾಗಿದೆ. 2018ರಲ್ಲಿ ಈ ವಿಷಯದ ಮೇಲಿನ ಆಂದೋಲನವು ಮೀಸಲಾತಿ ವ್ಯವಸ್ಥೆಯನ್ನು ತಗ್ಗಿಸಲು ಸರ್ಕಾರವನ್ನು ಒತ್ತಾಯಿಸಿತು ಮತ್ತು ಕೆಲವು ಸ್ಥಾನಗಳಿಗೆ ಕೋಟಾಗಳನ್ನು ರದ್ದುಗೊಳಿಸಿತು. ಸರ್ಕಾರಿ ಉದ್ಯೋಗಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರರ ವಂಶಸ್ಥರಿಗೆ ಶೇ. 30ರಷ್ಟು ಕೋಟಾವನ್ನು ರದ್ದುಗೊಳಿಸಿದ 2018ರ ಸರ್ಕಾರಿ ಸುತ್ತೋಲೆಯನ್ನು ಕಾನೂನುಬಾಹಿರ ಎಂದು ಘೋಷಿಸಿದ ಹೈಕೋರ್ಟ್ ಆದೇಶದಿಂದ ಇತ್ತೀಚಿನ ಅಶಾಂತಿ ಉಂಟಾಯಿತು. ಈ ಆದೇಶವನ್ನು ದೇಶದ ಸುಪ್ರೀಂ ಕೋರ್ಟ್ ರದ್ದುಗೊಳಿಸಿತ್ತು. ಶೇ. 93ರಷ್ಟು ಸರ್ಕಾರಿ ಉದ್ಯೋಗಗಳನ್ನು ಅರ್ಹತೆಯ ಆಧಾರದ ಮೇಲೆ ನಿಯೋಜಿಸಬೇಕು ಮತ್ತು ಉಳಿದವುಗಳನ್ನು ಸ್ವಾತಂತ್ರ್ಯ ಹೋರಾಟಗಾರರ ಸಂಬಂಧಿಕರಿಗೆ ಮೀಸಲಿಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶಿಸಿತ್ತು. ಆದರೆ ಸುಪ್ರೀಂ ಕೋರ್ಟ್‌ನ ಆದೇಶವೂ ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಸಾಧ್ಯವಾಗಲಿಲ್ಲ.

ಮೊದಲು ಉದ್ಯೋಗಗಳಲ್ಲಿ ಮೀಸಲಾತಿ ಕೋಟಾದ ವಿರುದ್ಧ ಚಳುವಳಿ ಪ್ರಾರಂಭವಾಯಿತು. ಆದರೆ ನಂತರ ಅದು ಶೇಖ್ ಹಸೀನಾ ಸರ್ಕಾರದ ವಿರುದ್ಧ ವ್ಯಾಪಕ ಕೋಪಕ್ಕೆ ತಿರುಗಿತು. ಸಮಾಜದ ಎಲ್ಲ ವರ್ಗದ ಜನರು ಇದರಲ್ಲಿ ಭಾಗಿಯಾಗಿದ್ದರು. ಶೇಖ್ ಹಸೀನಾ ರಾಜೀನಾಮೆ ನೀಡುವಂತೆ ಒತ್ತಾಯಿಸುವಲ್ಲಿ ಪ್ರತಿಪಕ್ಷಗಳ ಒಗ್ಗಟ್ಟು ದೊಡ್ಡ ಪಾತ್ರ ವಹಿಸಿದೆ ಎಂಬುದು ಸುಳ್ಳಲ್ಲ. ಶೇಖ್ ಹಸೀನಾ ರಾಜೀನಾಮೆಗೆ ಕಾರಣವಾದ ಮುಖ್ಯವಾದ 5 ಕಾರಣಗಳು ಇಲ್ಲಿವೆ…

ಭಿನ್ನಮತ ವ್ಯಕ್ತಪಡಿಸಿದವರ ದಮನ:

ಶೇಖ್ ಹಸೀನಾ ಕಳೆದ 15 ವರ್ಷಗಳಲ್ಲಿ ತಮ್ಮ ವಿರುದ್ಧ ಧ್ವನಿಯೆತ್ತಿದವರನ್ನು ಮಟ್ಟ ಹಾಕುತ್ತಲೇ ಬಂದಿದ್ದಾರೆ. ಅವರ ಆಡಳಿತವು ವ್ಯವಸ್ಥಿತವಾಗಿ ವಿರೋಧದ ಧ್ವನಿ ಮತ್ತು ಭಿನ್ನಾಭಿಪ್ರಾಯಗಳನ್ನು ಹತ್ತಿಕ್ಕುತ್ತಿದೆ ಎಂದು ಆರೋಪಿಸಲಾಗಿದೆ. ಆಕೆಯ ಸುದೀರ್ಘ ಅಧಿಕಾರಾವಧಿಯಲ್ಲಿ ವಿರೋಧ ಪಕ್ಷದ ನಾಯಕರ ಬಂಧನಗಳು, ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ದಬ್ಬಾಳಿಕೆ ಸಾಮಾನ್ಯವಾಗಿತ್ತು.

ಇದನ್ನೂ ಓದಿ: Viral Video: ಶೇಖ್ ಹಸೀನಾ ಪರಾರಿಯಾಗುತ್ತಿದ್ದಂತೆ ಪ್ರಧಾನಿ ನಿವಾಸದಲ್ಲಿ ಶಾಪಿಂಗ್ ಮಾಡಿದ ಜನ!

ಪ್ರಜಾಸತ್ತಾತ್ಮಕ ಮಾನದಂಡಗಳ ನಾಶ:

ಶೇಖ್ ಹಸೀನಾ ಅವರ ಸರ್ಕಾರವು ಪ್ರಜಾಪ್ರಭುತ್ವ ಪ್ರಕ್ರಿಯೆಗಳು ಮತ್ತು ಸಂಸ್ಥೆಗಳನ್ನು ದುರ್ಬಲಗೊಳಿಸಿದೆ ಎಂಬ ಅಭಿಪ್ರಾಯವಿದೆ. ಆಕೆಯ ಅಧಿಕಾರಾವಧಿಯಲ್ಲಿ ಚುನಾವಣೆಗಳಲ್ಲಿ ಹಿಂಸಾಚಾರ ಮಾಮೂಲಾಗಿತ್ತು.

ಮಾನವ ಹಕ್ಕುಗಳ ಉಲ್ಲಂಘನೆ:

ಬಲವಂತದ ನಾಪತ್ತೆಗಳು, ಗೃಹಬಂಧನ ಮತ್ತು ಕಾನೂನುಬಾಹಿರ ಹತ್ಯೆಗಳು ಸೇರಿದಂತೆ ಶೇಖ್ ಹಸೀನಾ ಅವರ ಸರ್ಕಾರದ ಅಡಿಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯ ಹಲವಾರು ವರದಿಗಳು ದಾಖಲಾಗಿವೆ.

ಉದ್ಯೋಗಗಳಲ್ಲಿ ಮೀಸಲಾತಿ:

ಇತ್ತೀಚೆಗಷ್ಟೇ ಶೇಖ್ ಹಸೀನಾ ಸರ್ಕಾರ 1971ರಲ್ಲಿ ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಕುಟುಂಬಸ್ಥರಿಗೆ ಉದ್ಯೋಗದಲ್ಲಿ ಕೋಟಾ ನೀಡಿತ್ತು. ಇದನ್ನು ವಿರೋಧಿಸಿ ವಿದ್ಯಾರ್ಥಿಗಳು ಹಾಗೂ ನಿರುದ್ಯೋಗಿ ಯುವಕರು ಪ್ರತಿಭಟನೆ ನಡೆಸಿದರು.

ಮಾಧ್ಯಮ ಸೆನ್ಸಾರ್​ಶಿಪ್:

ಶೇಖ್ ಹಸೀನಾ ಆಡಳಿತವು ಪತ್ರಿಕಾ ಸ್ವಾತಂತ್ರ್ಯವನ್ನು ನಿಗ್ರಹಿಸುವ ಟೀಕೆಗಳನ್ನು ಎದುರಿಸುತ್ತಿದೆ. ಸರ್ಕಾರವನ್ನು ಟೀಕಿಸುವ ಪತ್ರಕರ್ತರು ಮತ್ತು ಮಾಧ್ಯಮಗಳಿಗೆ ಕಿರುಕುಳ, ಕಾನೂನು ಕ್ರಮದ ಹಿಂಸೆ ನೀಡುವುದಷ್ಟೇ ಅಲ್ಲದೆ ಅಂತಹ ಮಾಧ್ಯಮ ಸಂಸ್ಥೆಗಳನ್ನು ಮುಚ್ಚಲಾಗುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ