ಟರ್ಕಿ, ಸಿರಿಯಾದ ಭೂಕಂಪ ಸಂತ್ರಸ್ತರಿಗೆ 3 ತಿಂಗಳ ವೀಸಾ ಘೋಷಿಸಿದ ಜರ್ಮನಿ
ಟರ್ಕಿಶ್ ಮೂಲದ ಸುಮಾರು 2.9 ಮಿಲಿಯನ್ ಜನರು ಜರ್ಮನಿಯಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಟರ್ಕಿಶ್ ರಾಷ್ಟ್ರೀಯತೆಯನ್ನು ಹೊಂದಿದ್ದಾರೆ. ಜರ್ಮನಿಯಲ್ಲಿರುವ ಸಿರಿಯನ್ ಸಮುದಾಯ ಸಹ ದೊಡ್ಡದಾಗಿದೆ.
ಇಸ್ಲಾಂಬುಲ್: ಟರ್ಕಿ (Turkey Earthquake) ಮತ್ತು ಸಿರಿಯಾದಲ್ಲಿನ (Syria Earthquake) ಭಯಾನಕ ಭೂಕಂಪಕ್ಕೆ ಸಿಲುಕಿರುವ ಸಂತ್ರಸ್ತರಿಗೆ ಜರ್ಮನಿ 3 ತಿಂಗಳ ವೀಸಾಗಳನ್ನು ನೀಡಲಿದೆ. ಭೂಕಂಪದಿಂದ ತತ್ತರಿಸಿರುವ ಟರ್ಕಿ ಮತ್ತು ಸಿರಿಯಾದ ಜನರಿಗೆ ಸಹಾಯಹಸ್ತ ಚಾಚಿರುವ ಜರ್ಮನಿ ತುರ್ತು ನೆರವಿನ ಉದ್ದೇಶದಿಂದ 3 ತಿಂಗಳ ವೀಸಾ ನೀಡಲಿದೆ ಎಂದು ಜರ್ಮನ್ ಆಂತರಿಕ ಸಚಿವ ನ್ಯಾನ್ಸಿ ಫೈಸರ್ ಸ್ಥಳೀಯ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ.
“ಜರ್ಮನಿಯಲ್ಲಿರುವ ಟರ್ಕಿಶ್ ಅಥವಾ ಸಿರಿಯನ್ ಕುಟುಂಬಗಳು ತಮ್ಮ ನಿಕಟ ಸಂಬಂಧಿಗಳನ್ನು ಭೂಕಂಪದ ಪ್ರದೇಶದಿಂದ ತಮ್ಮ ಮನೆಗಳಿಗೆ ಕರೆತರಲು ನಾವು ಅನುಮತಿ ನೀಡುತ್ತಿದ್ದೇವೆ. ಅವರಿಗೆ 3 ತಿಂಗಳ ವೀಸಾ ನೀಡಲಾಗುವುದು” ಎಂದು ಅವರು ತಿಳಿಸಿದ್ದಾರೆ.
ಇದನ್ನೂ ಓದಿ: Turkey Earthquake: 128 ಗಂಟೆಗಳ ಬಳಿಕವೂ ಅವಶೇಷಗಳಡಿ ಅಚ್ಚರಿಯ ರೀತಿಯಲ್ಲಿ ಬದುಕುಳಿದ 2 ತಿಂಗಳ ಮಗು!
ಟರ್ಕಿ ಮತ್ತು ಸಿರಿಯಾದ ಭೂಕಂಪದಲ್ಲಿ 28,000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಭೂಕಂಪ ಸಂತ್ರಸ್ತರು ನಿಯಮಿತ ವೀಸಾಗಳನ್ನು ಹೊಂದಬಹುದು. ಅವರಿಗೆ ತ್ವರಿತವಾಗಿ ವೀಸಾಗಳನ್ನು ನೀಡಲಾಗುತ್ತದೆ. ಆ ವೀಸಾಗಳು 3 ತಿಂಗಳವರೆಗೆ ಮಾನ್ಯವಾಗಿರುತ್ತದೆ. ಜರ್ಮನಿಯಲ್ಲಿ ಟರ್ಕಿ ಮತ್ತು ಸಿರಿಯಾದ ಭೂಕಂಪ ಸಂತ್ರಸ್ತರಿಗೆ ವೈದ್ಯಕೀಯ ಚಿಕಿತ್ಸೆಯನ್ನೂ ನೀಡಲಾಗುವುದು ಎಂದು ಸಚಿವ ನ್ಯಾನ್ಸಿ ಫೈಸರ್ ಹೇಳಿದ್ದಾರೆ.
ಅಂದಹಾಗೆ, ಟರ್ಕಿಶ್ ಮೂಲದ ಸುಮಾರು 2.9 ಮಿಲಿಯನ್ ಜನರು ಜರ್ಮನಿಯಲ್ಲಿ ವಾಸಿಸುತ್ತಿದ್ದಾರೆ. ಅವರಲ್ಲಿ ಅರ್ಧಕ್ಕಿಂತ ಹೆಚ್ಚು ಜನರು ಟರ್ಕಿಶ್ ರಾಷ್ಟ್ರೀಯತೆಯನ್ನು ಹೊಂದಿದ್ದಾರೆ. ಹಾಗೇ, ಜರ್ಮನಿಯಲ್ಲಿರುವ ಸಿರಿಯನ್ ಸಮುದಾಯ ಸಹ ದೊಡ್ಡದಾಗಿದೆ.
ಇದನ್ನೂ ಓದಿ: Turkey Earthquake: ಟರ್ಕಿ ಭೂಕಂಪ ವೇಳೆ ನಾಪತ್ತೆಯಾಗಿದ್ದ ಬೆಂಗಳೂರಿನ ಟೆಕ್ಕಿ ಶವ ಹೋಟೆಲ್ನ ಅವಶೇಷಗಳಲ್ಲಿ ಪತ್ತೆ
ಸೋಮವಾರ ಸಂಭವಿಸಿದ 7.8 ತೀವ್ರತೆಯ ಭೂಕಂಪವು ಟರ್ಕಿ ಮತ್ತು ಸಿರಿಯಾದಾದ್ಯಂತ ಭಾರೀ ಅನಾಹುತ ಸೃಷ್ಟಿಸಿದೆ. ಇದು ಈ ಶತಮಾನದ ವಿಶ್ವದ ಏಳನೇ ಮಾರಣಾಂತಿಕ ನೈಸರ್ಗಿಕ ವಿಕೋಪವಾಗಿದೆ. 2003ರಲ್ಲಿ ನೆರೆಯ ಇರಾನ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ 31,000 ಜನರು ಸಾವನ್ನಪ್ಪಿದ್ದರು. ಟರ್ಕಿಯಲ್ಲಿ ಇದುವರೆಗೆ 24,617 ಜನ ಸಾವನ್ನಪ್ಪಿದ್ದು, ಇದು 1939ರಿಂದ ಈಚೆಗೆ ಟರ್ಕಿಯಲ್ಲಿ ನಡೆದ ಅತ್ಯಂತ ಭೀಕರ ಭೂಕಂಪವಾಗಿದೆ. ಸಿರಿಯಾದಲ್ಲಿ 3,500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.