AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Turkey Earthquake: 128 ಗಂಟೆಗಳ ಬಳಿಕವೂ ಅವಶೇಷಗಳಡಿ ಅಚ್ಚರಿಯ ರೀತಿಯಲ್ಲಿ ಬದುಕುಳಿದ 2 ತಿಂಗಳ ಮಗು!

ಶನಿವಾರ ದಕ್ಷಿಣ ಟರ್ಕಿಯಲ್ಲಿ 128 ಗಂಟೆಗಳ ನಂತರ ಭೂಕಂಪದ ಅವಶೇಷಗಳ ಅಡಿಯಿಂದ 2 ತಿಂಗಳ ಮಗುವನ್ನು ರಕ್ಷಿಸಲಾಗಿದೆ.

Turkey Earthquake: 128 ಗಂಟೆಗಳ ಬಳಿಕವೂ ಅವಶೇಷಗಳಡಿ ಅಚ್ಚರಿಯ ರೀತಿಯಲ್ಲಿ ಬದುಕುಳಿದ 2 ತಿಂಗಳ ಮಗು!
ಟರ್ಕಿಯ ಭೂಕಂಪದಲ್ಲಿ ಬದುಕುಳಿದ ಮಗು
ಸುಷ್ಮಾ ಚಕ್ರೆ
|

Updated on: Feb 12, 2023 | 8:54 AM

Share

ಇಸ್ಲಾಂಬುಲ್: ಸಿರಿಯಾ (Syria Earthquake) ಮತ್ತು ಟರ್ಕಿಯಲ್ಲಿ (Turkey Earthquake) ಸಂಭವಿಸಿರುವ ಭೀಕರ ಭೂಕಂಪದಲ್ಲಿ ಇದುವರೆಗೂ 28,000 ಜನರು ಸಾವನ್ನಪ್ಪಿದ್ದು, 6,000 ಕಟ್ಟಡಗಳು ಕುಸಿದುಬಿದ್ದಿವೆ. ಕಳೆದ ಸೋಮವಾರ ಸಂಭವಿಸಿದ 7.8 ತೀವ್ರತೆಯ ಭೂಕಂಪದಿಂದ ಟರ್ಕಿ ಸಂಪೂರ್ಣ ತತ್ತರಿಸಿದೆ. ಆದರೆ, ಈ ದುರಂತದಲ್ಲೂ ಅಚ್ಚರಿಯ ರೀತಿಯಲ್ಲಿ ಬದುಕುಳಿದವರ ಫೋಟೋಗಳು, ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಇದೀಗ ಟರ್ಕಿಯ ಭೂಕಂಪದಲ್ಲಿ 128 ಗಂಟೆಗಳ ಕಾಲ ಅವಶೇಷಗಳಡಿ ಸಿಲುಕಿದ್ದರೂ ಬದುಕುಳಿದಿದ್ದ 2 ತಿಂಗಳ ಮಗುವೊಂದನ್ನು ರಕ್ಷಿಸಲಾಗಿದ್ದು, ಆ ಮಗುವಿನ ಅದೃಷ್ಟ ಮತ್ತು ರಕ್ಷಣಾ ಸಿಬ್ಬಂದಿಯ ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಶನಿವಾರ ದಕ್ಷಿಣ ಟರ್ಕಿಯಲ್ಲಿ 128 ಗಂಟೆಗಳ ನಂತರ ಭೂಕಂಪದ ಅವಶೇಷಗಳ ಅಡಿಯಿಂದ 2 ತಿಂಗಳ ಮಗುವನ್ನು ರಕ್ಷಿಸಲಾಗಿದೆ. ಆ ಮಗು ಪ್ರಾಣಾಪಾಯದಿಂದ ಪಾರಾಗಿದ್ದು, ತಕ್ಷಣ ವೈದ್ಯಕೀಯ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಫೆಬ್ರವರಿ 6ರಂದು ಸಂಭವಿಸಿದ ಭಾರೀ ಭೂಕಂಪವು ಟರ್ಕಿಯನ್ನು ಹೈರಾಣಾಗಿಸಿದೆ. ಅದೆಷ್ಟೋ ಕುಟುಂಬಗಳೇ ಭೂಕಂಪಕ್ಕೆ ಸಿಲುಕಿ ಸಂಪೂರ್ಣವಾಗಿ ನಾಶವಾಗಿವೆ.

ಇದನ್ನೂ ಓದಿ: Turkey Earthquake: 28 ಸಾವಿರ ಗಡಿದಾಟಿದ ಸಾವಿನ ಸಂಖ್ಯೆ; ಸಂತ್ರಸ್ತರ ಲೂಟಿ ಮಾಡಿದ 48 ಮಂದಿ ಬಂಧನ

ಶನಿವಾರ ಮುಂಜಾನೆ ಟರ್ಕಿಯ ಆಗ್ನೇಯ ಆದಿಯಮಾನ್ ಪ್ರಾಂತ್ಯದಲ್ಲಿ ದಂಪತಿಯನ್ನು ರಕ್ಷಿಸಲಾಯಿತು. ಅದಕ್ಕೂ ಮೊದಲು ಟರ್ಕಿಯ ದಕ್ಷಿಣ ಹಟಾಯ್ ಪ್ರಾಂತ್ಯದಲ್ಲಿ 13 ವರ್ಷದ ಬಾಲಕನನ್ನು ಅವಶೇಷಗಳಿಂದ ರಕ್ಷಿಸಲಾಯಿತು. ಈ ಹಿಂದೆ, ಕಹ್ರಮನ್ಮರಸ್ ಪ್ರಾಂತ್ಯದಲ್ಲಿ ಭೂಕಂಪ ಸಂಭವಿಸಿದ 120 ಗಂಟೆಗಳ ನಂತರ ಅಜರ್ಬೈಜಾನಿ ರಕ್ಷಣಾ ತಂಡವು 50 ವರ್ಷದ ಮಹಿಳೆಯನ್ನು ಕುಸಿದ ಕಟ್ಟಡದಿಂದ ಹೊರತೆಗೆದಿತ್ತು.

ಟರ್ಕಿಯಲ್ಲಿ ಜನರೆಲ್ಲರೂ ಚಪ್ಪಾಳೆ ತಟ್ಟಿ ಸಂಭ್ರಮಿಸುತ್ತಿದ್ದಾಗ ರಕ್ಷಣಾ ಸಿಬ್ಬಂದಿ 2 ತಿಂಗಳ ಮಗುವನ್ನು ಟರ್ಕಿಯ ಹಟೇಯಲ್ಲಿ ಅವಶೇಷಗಳಡಿಯಿಂದ ರಕ್ಷಿಸಿದ್ದಾರೆ. ಭೂಕಂಪದ ಸುಮಾರು 128 ಗಂಟೆಗಳ ನಂತರ ಮಗು ಜೀವಂತವಾಗಿ ಪತ್ತೆಯಾಗಿದೆ. ಭೂಕಂಪದ 5 ದಿನಗಳ ನಂತರ ರಕ್ಷಿಸಲ್ಪಟ್ಟವರಲ್ಲಿ 2 ವರ್ಷದ ಬಾಲಕಿ, 6 ತಿಂಗಳ ಗರ್ಭಿಣಿ ಮತ್ತು 70 ವರ್ಷದ ಮಹಿಳೆ ಸೇರಿದ್ದಾರೆ ಎಂದು ಟರ್ಕಿಶ್ ಮಾಧ್ಯಮ ವರದಿ ಮಾಡಿದೆ.

ಇದನ್ನೂ ಓದಿ: Turkey Earthquake: ಟರ್ಕಿ ಭೂಕಂಪ ವೇಳೆ ನಾಪತ್ತೆಯಾಗಿದ್ದ ಬೆಂಗಳೂರಿನ ಟೆಕ್ಕಿ ಶವ ಹೋಟೆಲ್​ನ ಅವಶೇಷಗಳಲ್ಲಿ ಪತ್ತೆ

ಸೋಮವಾರ ಸಂಭವಿಸಿದ 7.8 ತೀವ್ರತೆಯ ಭೂಕಂಪವು ಟರ್ಕಿ ಮತ್ತು ಸಿರಿಯಾದಾದ್ಯಂತ ಭಾರೀ ಅನಾಹುತ ಸೃಷ್ಟಿಸಿದೆ. ಇದು ಈ ಶತಮಾನದ ವಿಶ್ವದ ಏಳನೇ ಮಾರಣಾಂತಿಕ ನೈಸರ್ಗಿಕ ವಿಕೋಪವಾಗಿದೆ. 2003ರಲ್ಲಿ ನೆರೆಯ ಇರಾನ್‌ನಲ್ಲಿ ಸಂಭವಿಸಿದ ಭೂಕಂಪದಲ್ಲಿ 31,000 ಜನರು ಸಾವನ್ನಪ್ಪಿದ್ದರು.

ಟರ್ಕಿಯಲ್ಲಿ ಇದುವರೆಗೆ 24,617 ಜನ ಸಾವನ್ನಪ್ಪಿದ್ದು, ಇದು 1939ರಿಂದ ಈಚೆಗೆ ಟಟರ್ಕಿಯಲ್ಲಿ ನಡೆದ ಅತ್ಯಂತ ಭೀಕರ ಭೂಕಂಪವಾಗಿದೆ. ಸಿರಿಯಾದಲ್ಲಿ 3,500ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ