ಇಮ್ರಾನ್ ಖಾನ್ ಬದುಕಿಲ್ಲವೇ?; ಮಾಜಿ ಪ್ರಧಾನಿಯ ಕುರಿತು ಪಾಕಿಸ್ತಾನಿ ಪತ್ರಕರ್ತನ ಶಾಕಿಂಗ್ ಹೇಳಿಕೆ

ಪಾಕಿಸ್ತಾನದ ಮಾಜಿ ಪ್ರಧಾನಿ ಹಾಗೂ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (ಪಿಟಿಐ) ಸಂಸ್ಥಾಪಕ ಇಮ್ರಾನ್ ಖಾನ್ ಅವರ ಆರೋಗ್ಯದ ಕುರಿತು ಅನಿಶ್ಚಿತತೆ ಮುಂದುವರಿದಿದೆ. "ಬಂಧನದಲ್ಲಿರುವ ಇಮ್ರಾನ್ ಖಾನ್ ಜೈಲಿನಲ್ಲೇ ನಿಧನ ಹೊಂದಿರಬಹುದು" ಎಂಬ ಅಮೆರಿಕ ಮೂಲದ ಪಾಕಿಸ್ತಾನಿ ಪತ್ರಕರ್ತನ ಸ್ಫೋಟಕ ಹೇಳಿಕೆಯು ಭಾರಿ ಸಂಚಲನ ಮೂಡಿಸಿದೆ. ಪ್ರಸ್ತುತ ಅಮೆರಿಕದಲ್ಲಿ ವಾಸಿಸುತ್ತಿರುವ ಪ್ರಸಿದ್ಧ ಪತ್ರಕರ್ತ ವಜಾಹತ್ ಸಯೀದ್ ಖಾನ್ ಸಂದರ್ಶನವೊಂದರಲ್ಲಿ ಈ ಕುರಿತು ಮಾತನಾಡಿದ್ದಾರೆ. ಈ ವಿಷಯ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.

ಇಮ್ರಾನ್ ಖಾನ್ ಬದುಕಿಲ್ಲವೇ?; ಮಾಜಿ ಪ್ರಧಾನಿಯ ಕುರಿತು ಪಾಕಿಸ್ತಾನಿ ಪತ್ರಕರ್ತನ ಶಾಕಿಂಗ್ ಹೇಳಿಕೆ
Imran Khan
Image Credit source: Getty Image

Updated on: Aug 12, 2026 | 6:45 PM

ವಾಷಿಂಗ್ಟನ್, ಆಗಸ್ಟ್ 12: ಪಾಕಿಸ್ತಾನದ ರಾವಲ್ಪಿಂಡಿಯ ಅಡಿಯಾಲ ಜೈಲಿನಲ್ಲಿ ಬಂಧಿಯಾಗಿರುವ ಪಾಕಿಸ್ತಾನದ (Pakistan) ಮಾಜಿ ಪ್ರಧಾನಿ ಹಾಗೂ ಪಾಕಿಸ್ತಾನ್ ತೆಹ್ರೀಕ್-ಎ-ಇನ್ಸಾಫ್ (PTI) ಮುಖ್ಯಸ್ಥ ಇಮ್ರಾನ್ ಖಾನ್ ಅವರ ಆರೋಗ್ಯದ ಕುರಿತು ಉಂಟಾಗಿದ್ದ ತೀವ್ರ ಗೊಂದಲಗಳು ಮತ್ತೊಮ್ಮೆ ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ. ಇಮ್ರಾನ್ ಖಾನ್ (Imran Khan) ಜೈಲಿನಲ್ಲೇ ನಿಧನರಾಗಿರಬಹುದು ಎಂದು ಅಮೆರಿಕ ಮೂಲದ ಪಾಕಿಸ್ತಾನಿ ಪತ್ರಕರ್ತ ವಜಾಹತ್ ಸಯೀದ್ ಖಾನ್ ನೀಡಿದ್ದ ಸ್ಫೋಟಕ ಹೇಳಿಕೆ ಭಾರಿ ಆತಂಕ ಸೃಷ್ಟಿಸಿದೆ.

“ಸೇನೆಯ ಮೂವರು ಹಿರಿಯ ಮಿಲಿಟರಿ ಮೂಲಗಳು ಇಮ್ರಾನ್ ಖಾನ್ ನಿಧನರಾಗಿರಬಹುದು ಎಂಬ ಆತಂಕ ವ್ಯಕ್ತಪಡಿಸಿವೆ. ಆದರೆ, ಇದನ್ನು ಯಾರೂ ಕಣ್ಣಾರೆ ಕಂಡಿಲ್ಲ” ಎಂದು ಪಾಕಿಸ್ತಾನದ ಪ್ರಸಿದ್ಧ ಪತ್ರಕರ್ತ ವಜಾಹತ್ ಸಯೀದ್ ಖಾನ್ ಪ್ರತಿಪಾದಿಸಿದ್ದಾರೆ. ಹೀಗಾಗಿ, ಈ ಮಾಹಿತಿ ಅಧಿಕೃತವಲ್ಲ.

ಜೈಲಿನಲ್ಲಿ ಇಮ್ರಾನ್ ಖಾನ್:

73 ವರ್ಷದ ಇಮ್ರಾನ್ ಖಾನ್ ಅವರು 2023ರ ಆಗಸ್ಟ್ 5ರಿಂದ ಜೈಲಿನಲ್ಲಿದ್ದು, 190 ಮಿಲಿಯನ್ ಅಲ್-ಖಾದಿರ್ ಟ್ರಸ್ಟ್ ಭ್ರಷ್ಟಾಚಾರ ಪ್ರಕರಣದಲ್ಲಿ 14 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾರೆ. ಪ್ರಸ್ತುತ ಪಾಕಿಸ್ತಾನ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ ಮತ್ತು ಇಮ್ರಾನ್ ಖಾನ್ ನಡುವಿನ ತೀವ್ರ ರಾಜಕೀಯ ಹಗೆತನವೇ ಈ ಸುದೀರ್ಘ ಬಂಧನಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಇದನ್ನೂ ಓದಿ: ಪಾಕಿಸ್ತಾನ ಸೇನೆಯ ಪ್ರಧಾನ ಕಚೇರಿ ಮೇಲೆ ಗುಂಡಿನ ದಾಳಿ; ಓರ್ವ ಸೈನಿಕ ಸಾವು

ಇನ್ನೊಂದೆಡೆ, ಇಮ್ರಾನ್ ಖಾನ್ ಸಾವಿನ ಸುದ್ದಿಯನ್ನು ತಳ್ಳಿಹಾಕಿರುವ ಅವರ ಪಕ್ಷದ ನಾಯಕರು ಕಣ್ಣಿನ ಸಮಸ್ಯೆ ಸೇರಿದಂತೆ ವಿವಿಧ ಅನಾರೋಗ್ಯ ಸಮಸ್ಯೆಗಳಿಂದ ಬಳಲುತ್ತಿರುವ ಇಮ್ರಾನ್ ಖಾನ್ ಅವರಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಸಿಗುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. ಇಮ್ರಾನ್ ಖಾನ್ ಅವರ ಕುಟುಂಬಸ್ಥರು, ವಕೀಲರು ಹಾಗೂ ಪಕ್ಷದ ನಾಯಕರಿಗೆ ಅವರನ್ನು ಭೇಟಿಯಾಗಲು ಅಧಿಕಾರಿಗಳು ಅವಕಾಶ ನೀಡುತ್ತಿಲ್ಲ ಎಂದು ಅವರ ಪಕ್ಷದ ನಾಯಕರು ಆರೋಪಿಸಿದ್ದಾರೆ.

ಬೃಹತ್ ಪ್ರತಿಭಟನೆಯ ಎಚ್ಚರಿಕೆ: 

ಖೈಬರ್ ಪಖ್ತುಂಖ್ವಾ ಮುಖ್ಯಮಂತ್ರಿ ಹಾಗೂ ಪಿಟಿಐ ನಾಯಕ ಸೊಹೈಲ್ ಅಫ್ರಿದಿ ಅವರು ಮಂಗಳವಾರ ಜೈಲಿನಲ್ಲಿ ಇಮ್ರಾನ್ ಖಾನ್ ಅವರನ್ನು ಭೇಟಿಯಾಗಲು ಬಿಡದ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. “ಸುಮಾರು 20 ಲಕ್ಷಕ್ಕೂ ಹೆಚ್ಚು ಜನರು ಬೀದಿಗಿಳಿದು ಹೋರಾಟ ನಡೆಸಲು ಸಿದ್ಧರಾಗಿದ್ದಾರೆ. ಪಾಕಿಸ್ತಾನದ ಯುವಜನತೆಯಲ್ಲಿ ಮೂಡಿರುವ ಆಕ್ರೋಶವನ್ನು ನಿಯಂತ್ರಿಸುವುದು ಸರ್ಕಾರಕ್ಕೆ ಸಾಧ್ಯವಾಗುವುದಿಲ್ಲ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಕುರ್ಚಿಗೆ ಕುತ್ತು ತಂದಿದ್ದ ಅಸಲಿ ರಹಸ್ಯ ದಾಖಲೆ ಬಯಲು

ಇಮ್ರಾನ್ ಖಾನ್ ಅವರ ಭೇಟಿಗೆ ಅವಕಾಶ ನೀಡದಿದ್ದರೆ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಬೆದರಿಕೆ ಹಾಕಿರುವ ಪಿಟಿಐ, ಸೆಪ್ಟೆಂಬರ್ 27ರಂದು ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ಗೆ ಬೃಹತ್ ಪಾದಯಾತ್ರೆ ನಡೆಸುವುದಾಗಿ ಘೋಷಿಸಿದೆ. ಇಮ್ರಾನ್ ಖಾನ್ ಅವರ ಸುದೀರ್ಘ ಜೈಲುವಾಸ ಹಾಗೂ ಅನಾರೋಗ್ಯದ ಕುರಿತು ಪಾಕಿಸ್ತಾನ ಸರ್ಕಾರದ ಮೇಲೆ ದೇಶೀಯವಾಗಿ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಭಾರಿ ಒತ್ತಡ ಹೆಚ್ಚುತ್ತಿದೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

ಸುಷ್ಮಾ ಚಕ್ರೆ

ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವಳು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ.

Read More
Loading...
Unable to load recommendations.
Follow Us