ದಿನಕ್ಕೆ ಒಂದೇ ಸಿಗರೇಟ್ ಸೇದುವವರೂ ಸಹ ಬಲುಬೇಗನೇ ನಿಕೋಟಿನ್ ಚಟಕ್ಕೆ ಅಂಟಿಕೊಳ್ಳುವ ಸಾಧ್ಯತೆ ಇದೆ ಎಂಬ ಸಂಗತಿಯನ್ನು ಅಮೆರಿಕದ ಅಧ್ಯಯನವೊಂದು ತಿಳಿಸಿದೆ. ಅಧ್ಯಯನಕ್ಕೆ ಒಳಪಟ್ಟ ಸುಮಾರು 6,700 ಕ್ಕೂ ಅಧಿಕ ಧೂಮಪಾನಿಗಳ ಪೈಕಿ ಅರ್ಧಕ್ಕೂ ಹೆಚ್ಚು ಜನ ದಿನಕ್ಕೆ ಕೇವಲ 1 ರಿಂದ 4 ಸಿಗರೇಟ್ ಸೇದುವವರಾದರೂ ಅವರು ನಿಕೋಟಿನ್ ಅಂಶಕ್ಕೆ ದಾಸರಾಗಿರುವುದು ತಿಳಿದುಬಂದಿದೆ.
ಈ ಹಿಂದೆ ಕೆಲವರು ದಿನಕ್ಕೆ 10 ಅಥವಾ ಅದಕ್ಕಿಂತ ಹೆಚ್ಚು ಸಿಗರೇಟ್ ಸೇದುವವರು ಮಾತ್ರ ಚಟಕ್ಕೆ ಬಲಿಯಾಗುತ್ತಾರೆ. ಕಡಿಮೆ ಸಿಗರೇಟ್ ಸೇದಿದರೆ ಹಾನಿಯಿಲ್ಲ ಎಂದು ವಿತಂಡವಾದ ಮಾಡುತ್ತಿದ್ದರು. ಅದನ್ನು ನಾನು ಈ ಕ್ಷಣಕ್ಕೂ ಸ್ಮರಿಸಿಕೊಳ್ಳುತ್ತೇನೆ ಎಂದು ಅಧ್ಯಯನ ನಡೆಸಿದ ಪೆನ್ ಯುನಿವರ್ಸಿಟಿಯ ಜೊನಾಥನ್ ಫೌಲ್ಡ್ಸ್ ಹೇಳಿದ್ದಾರೆ.
ದಿನದಲ್ಲಿ ಸೇದುವ ಸಿಗರೇಟಿನ ಸಂಖ್ಯೆ ಹೆಚ್ಚಿದಂತೆಯೇ ಚಟಕ್ಕೆ ಅಂಟಿಕೊಳ್ಳುವ ಸಾಧ್ಯತೆ ಏರುವುದು ಸಹಜ. ಆದರೆ, ಕಡಿಮೆ ಸಿಗರೇಟ್ ಸೇದುವವರು ಚಟಕ್ಕೆ ಬಲಿಯಾಗುವುದಿಲ್ಲ ಎಂಬ ವಾದ ಸತ್ಯಕ್ಕೆ ದೂರವಾದದ್ದು. ಕೆಲವು ವ್ಯಕ್ತಿಗಳು ದಿನ ಬಿಟ್ಟು ದಿನ ಸಿಗರೇಟ್ ಸೇದಿದರೂ ತಮಗರಿವಿಲ್ಲದಂತೆಯೇ ಅದಕ್ಕೆ ದಾಸರಾಗಿರುತ್ತಾರೆ. ಇವರಿಗೆ ಚಿಕಿತ್ಸೆಯ ಅಗತ್ಯವೂ ಇದೆ ಎಂಬುದನ್ನು ಪ್ರಸ್ತುತ ಅಧ್ಯಯನದಲ್ಲಿ ಹೇಳಲಾಗಿದೆ.