ಡೆಲವೇರ್: ವಾಯುಪುತ್ರ ಹನುಮಾನ್ ಅಂದ್ರೆ ಯಾರಿಗೆ ಭಕ್ತಿ ಗೌರವಗಳಿಲ್ಲ ಹೇಳಿ. ರಾಮನ ಪರಮಭಕ್ತ ಹನುಮಾನನ ಕೀರ್ತಿ ಪತಾಕೆ ಸಪ್ತಸಾಗರದಾಚೆಗೂ ಹರಡಿದೆ. ಈಗ ಇಂತಹ ಹನುಮಾನನ ಮೂರ್ತಿಯೊಂದು ಸಪ್ತಸಾಗರ ದಾಟಿ ದೂರದ ಅಮೆರಿಕದಲ್ಲಿ ಸ್ಥಾಪನೆಯಾಗಿದೆ.
ಹೌದು, ಸಾವಿರಾರು ಮೈಲಿಗಳ ದೂರದ ಅಮೆರಿಕದಲ್ಲಿ ಭಾರತ ಸೇರಿದಂತೆ ಲಕ್ಷಾಂತರ ಹಿಂದೂಗಳಿದ್ದಾರೆ. ಅದ್ರಲ್ಲೂ ಡೆಲವೇರ್‌ನಲ್ಲಿ ಭಾರೀ ಸಂಖ್ಯೆಯಲ್ಲಿ ಭಾರತದ ಹಿಂದೂಗಳಿದ್ದಾರೆ. ಇವರಲ್ಲಿ ರಾಮಭಕ್ತ ಹನುಮಾನನ ಭಕ್ತರ ಸಂಖ್ಯೆಯೇ ಹೆಚ್ಚು. ಹೀಗಾಗಿ ಅಮೇರಿಕದ ಡೆಲವೇರ್‌ನಲ್ಲಿ ವಾಯುಪುತ್ರನ ಪ್ರತಿಮೆ ಪ್ರತಿಷ್ಠಾಪಿಸಲಾಗಿದೆ.
ಅಮೆರಿಕದಲ್ಲಿನ ಅತ್ಯಂತ ಎತ್ತರದ ಹಿಂದೂ ಮೂರ್ತಿ
ಸುಮಾರು 25 ಅಡಿ ಎತ್ತರದ ಹನುಮಾನ ಪ್ರತಿಮೆಯನ್ನ ಡೆಲವೇರ್‌ನಲ್ಲಿ ಹಿಂದೂ ಸಂಪ್ರದಾಯದ ರೀತಿ ರಿವಾಜುಗಳಂತೆ ಪ್ರತಿಷ್ಠಾಪಿಸಲಾಗಿದೆ. ಇದಕ್ಕಾಗಿ ಹತ್ತು ದಿನಗಳ ಪ್ರತಿಷ್ಠಾಪನಾ ಕಾರ್ಯಕ್ರಮಗಳನ್ನು ಅನುಸರಿಸಲಾಗಿದೆ ಎಂದು ಡೆಲವೇರ್‌ನಲ್ಲಿರುವ ಹೊಕೆಸ್ಸಿನ್ ಹಿಂದೂ ದೇವಾಲಯ ಸಮತಿ ಅಧ್ಯಕ್ಷ ಪತಿಬಂದ್ ಶರ್ಮಾ ತಿಳಿಸಿದ್ದಾರೆ.
ಹೀಗೆ ಪ್ರತಿಷ್ಠಾಪಿಸಲಾಗಿರುವ ಈ ಪವನಪುತ್ರನ ಪ್ರತಿಮೆ ಅಮೆರಿಕದದಲ್ಲಿಯೇ ಅತ್ಯಂತ ಎತ್ತರದ ಹಿಂದೂ ಪ್ರತಿಮೆಯಾಗಿದೆ. ಜೊತೆಗೆ ಯಾವುದೇ ಧರ್ಮಗಳ ಪ್ರತಿಮೆಗಳನ್ನ ಪರಿಗಣಿಸಿದ್ರೆ ಅಮೆರಿಕದಲ್ಲಿನ ಎರಡನೇ ಅತ್ಯಂತ ಎತ್ತರದ ಪ್ರತಿಮೆ ಹನುಮಾನನದ್ದು. ನ್ಯೂಕ್ಯಾಸ್ಟಲ್‌ನಲ್ಲಿರುವ ಹೋಲಿ ಸ್ಪಿರಿಟ್ ಚರ್ಚ್‌ನ ಲೇಡಿ ಕ್ವೀನ್ ಆಫ್ ಪೀಸ್ ಪ್ರತಿಮೆ ಅಮೆರಿಕದಲ್ಲಿಯೇ ಅತ್ಯಂತ ಎತ್ತರದ ಪ್ರತಿಮೆಯಾಗಿದೆ.
ತೆಲಂಗಾಣದ ವಾರಂಗಲ್‌ನಿಂದ ರವಾನೆ ಅಂದ ಹಾಗೆ ಈ ಪ್ರತಿಮೆಯನ್ನ ತೆಲಂಗಾಣದ ವಾರಂಗಲ್‌ನ ಖ್ಯಾತ ಕಪ್ಪು ಶಿಲೆಯಲ್ಲಿ ಕೆತ್ತಲಾಗಿದೆ. ಸುಮಾರು 45 ಟನ್ ಭಾರವಿರುವ ಏಕಶಿಲಾ ಪ್ರತಿಮೆಯನ್ನ ಕೆಲ ದಿನಗಳ ಹಿಂದೆ ವಾರಂಗಲ್‌ನಿಂದ ಡೆಲವೇರ್‌ಗೆ ಸಮುದ್ರ ಮಾರ್ಗದಿಂದ ಕಳುಹಿಸಲಾಗಿತ್ತು.