‘ಮೇಡಂ ನಿದ್ರೆ ಮಾಡ್ತಿದ್ದಾರೆ’! ವಿಮಾನದ ಹೈಜಾಕ್ ವೇಳೆ ಉಡಾಫೆಯಿಂದ ಪೋನ್ ಕಟ್ ಮಾಡಿದ್ದರಂತೆ ಪಾಕ್ ನಾಯಕರು
ಪಾಕಿಸ್ತಾನದ ರಾಜಕಾರಣ ಮತ್ತು ರಾಜಕಾರಣಿಗಳ ಅಸಲಿ ಮುಖವನ್ನು ಇಡೀ ಜಗತ್ತಿನೆದೆರು ಸಿಂಗಾಪುರದ ಮಾಜಿ ರಾಯಭಾರಿ ಕೌಶಿಕನ್ ತೆರೆದಿಟ್ಟಿದ್ದಾರೆ. ಈ ಮೂಲಕ ಸಿಂಗಾಪುರದ ಹಿರಿಯ ಮತ್ತು ಅನುಭವಿ ಮಾಜಿ ರಾಜತಾಂತ್ರಿಕ ಬಿಲಹರಿ ಕೌಸಿಕನ್ ಅವರು ಇತ್ತೀಚೆಗೆ ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ತೀವ್ರ ಸುದ್ದಿಯಲ್ಲಿದ್ದಾರೆ. ಪಾಕಿಸ್ತಾನದ ಆಂತರಿಕ ಬಿಕ್ಕಟ್ಟು ಮತ್ತು ಮಿಲಿಟರಿ ಆಡಳಿತದ ಕುರಿತು ಅವರು ನೀಡಿದ ಕಟು ವಿಮರ್ಶೆಗಳ ಬೆನ್ನಲ್ಲೇ, 1991ರಲ್ಲಿ ನಡೆದ ಸಿಂಗಾಪುರ ಏರ್‌ಲೈನ್ಸ್ ವಿಮಾನ ಹೈಜಾಕ್ ಪ್ರಕರಣದ ವೇಳೆ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಜೊತೆ ಮಾತನಾಡಲು ಕರೆ ಮಾಡಿದಾಗ ತಮಗಾದ ಒಂದು ಆಘಾತಕಾರಿ ಅನುಭವವನ್ನು ಕೂಡ ಅವರು ಹಂಚಿಕೊಂಡಿದ್ದಾರೆ.

ಮುಖ್ಯಾಂಶಗಳು
- 1991ರಲ್ಲಿ ಸಿಂಗಾಪುರದ ವಿಮಾನ ಹೈಜಾಕ್ ಮಾಡಿದ್ದ ಪಾಕ್ ಉಗ್ರರು
- ಬೆನಜೀರ್ ಭುಟ್ಟೋಗೆ ಕಾಲ್ ಮಾಡಿದ್ದ ಮಾಜಿ ರಾಯಭಾರಿ
- ಮೇಡಂ ನಿದ್ರೆ ಮಾಡಿದ್ದಾರೆ ಎಂದಿದ್ದ ಭುಟ್ಟೋ ಸಹಾಯಕರು
ಸಿಂಗಾಪುರ, ಜುಲೈ 3: ಅಂತಾರಾಷ್ಟ್ರೀಯ ಮಾಧ್ಯಮಗಳಲ್ಲಿ ಪಾಕಿಸ್ತಾನದ ಮರ್ಯಾದೆ ಮೂರು ಕಾಸಿಗೆ ಹರಾಜಾಗುತ್ತಿದೆ. ಪಾಕಿಸ್ತಾನದ (Pakistan) ಆರ್ಥಿಕ, ಸಾಮಾಜಿಕ ಬಿಕ್ಕಟ್ಟಿನ ಬಗ್ಗೆ ಮಾತನಾಡಿದ್ದ ಸಿಂಗಾಪುರದ ಮಾಜಿ ರಾಯಭಾರಿ ಕೌಶಿಕನ್ ಸುದ್ದಿಗೋಷ್ಠಿಯಲ್ಲಿದ್ದ ಪಾಕಿಸ್ತಾನದ ಪತ್ರಕರ್ತರು ತಲೆತಗ್ಗಿಸುವಂತೆ ಮಾಡಿದ್ದರು. ಇದೀಗ ಅದೇ ಕಾರ್ಯಕ್ರಮದಲ್ಲಿ ಪಾಕಿಸ್ತಾನದ ರಾಜಕೀಯ ನಾಯಕರು ಯಾವ ರೀತಿ ಅನಾಗರಿಕರಂತೆ ವರ್ತಿಸುತ್ತಾರೆ, ಸಾಮಾನ್ಯ ಜ್ಞಾನವೂ ಇಲ್ಲದೆ ಯಾವ ರೀತಿ ಹುದ್ದೆಯನ್ನು ಅಲಂಕರಿಸುತ್ತಾರೆ ಎಂಬುದನ್ನು ಅವರು ತೆರೆದಿಟ್ಟಿದ್ದಾರೆ. ಪಾಕಿಸ್ತಾನದ ಭವಿಷ್ಯ ಮುಂದಿನ 5 ವರ್ಷಗಳಲ್ಲಿ ಏನಾಗಲಿದೆ? ಎಂಬ ಪಾಕ್ ಪತ್ರಕರ್ತೆಯ ಪ್ರಶ್ನೆಗೆ ಉತ್ತರಿಸಿದ ಮಾಜಿ ರಾಯಭಾರಿ ಕೌಶಿಕನ್ ನಿಮ್ಮ ದೇಶದ ರಾಜಕೀಯ ನಾಯಕರು ಸಮಯ ವ್ಯರ್ಥ ಮಾಡುವುದರಲ್ಲಿ ನಿಸ್ಸೀಮರು ಎಂದು ವ್ಯಂಗ್ಯವಾಡಿದ್ದಾರೆ. ಇದಕ್ಕೆ ಪೂರಕವಾಗಿ ಪಾಕಿಸ್ತಾನದ ರಾಜಕೀಯ ನಾಯಕರ ಉಡಾಫೆಯ ಕುರಿತಾಗಿ ತಮಗಾದ ಹಳೆಯ ಒಂದು ಅನುಭವವನ್ನು ನೆನಪಿಸಿಕೊಂಡಿದ್ದಾರೆ.
ಅಂದು ಸಿಂಗಾಪುರ ವಿದೇಶಾಂಗ ಸಚಿವಾಲಯದಲ್ಲಿ ಉನ್ನತ ಅಧಿಕಾರಿಯಾಗಿದ್ದ ಕೌಶಿಕನ್, ಬಿಕ್ಕಟ್ಟಿನ ಸಮಯದಲ್ಲಿ ಪಾಕಿಸ್ತಾನದ ನಾಯಕತ್ವ ಎಷ್ಟು ಬೇಜವಾಬ್ದಾರಿಯಾಗಿ ನಡೆದುಕೊಂಡಿತ್ತು ಎಂಬುದನ್ನು ಈ ಘಟನೆಯ ಮೂಲಕ ನೆನಪಿಸಿಕೊಂಡಿದ್ದಾರೆ. ಈ ವಿಡಿಯೋ ಕೂಡ ಇಂಟರ್ನೆಟ್ನಲ್ಲಿ ಭಾರೀ ಟ್ರೆಂಡಿಂಗ್ನಲ್ಲಿದೆ. ಇದು ಪಾಕಿಸ್ತಾನಕ್ಕೆ ದೊಡ್ಡ ಮುಜುಗರವನ್ನು ತಂದೊಡ್ಡಿದೆ.
ಇದನ್ನೂ ಓದಿ: ಪಾಕಿಸ್ತಾನದ ಬಿಕ್ಕಟ್ಟಿಗೆ ಅಲ್ಲಿನ ಮಿಲಿಟರಿ ಕಾರಣವೇ ವಿನಃ ಭಾರತವಲ್ಲ; ಸಿಂಗಾಪುರದ ಮಾಜಿ ರಾಯಭಾರಿ ವ್ಯಂಗ್ಯ
ಸಿಂಗಾಪುರದ ವಿಮಾನ ಹೈಜಾಕ್:
ಮಾರ್ಚ್ 26, 1991ರಂದು ಕರಾಚಿಯಿಂದ ಸಿಂಗಾಪುರಕ್ಕೆ ಹೊರಟಿದ್ದ ಸಿಂಗಾಪುರ ಏರ್‌ಲೈನ್ಸ್ ವಿಮಾನ SQ 117 ಅನ್ನು ಪಾಕಿಸ್ತಾನಿ ಮೂಲದ ನಾಲ್ವರು ಉಗ್ರರು ಅಪಹರಿಸಿದ್ದರು. ಆ ವಿಮಾನದಲ್ಲಿ 114 ಪ್ರಯಾಣಿಕರು ಮತ್ತು 11 ಸಿಬ್ಬಂದಿ ಇದ್ದರು, ಅವರನ್ನು ಉಗ್ರರು ಒತ್ತೆಯಾಳಾಗಿ ಇರಿಸಿಕೊಂಡಿದ್ದರು. ಆ ವಿಮಾನದಲ್ಲಿದ್ದ ಪ್ರಯಾಣಿಕರನ್ನು ಒತ್ತೆಯಾಳಾಗಿ ಇರಿಸಿದ್ದ ಉಗ್ರರು, ಪಾಕಿಸ್ತಾನದ ಜೈಲಿನಲ್ಲಿದ್ದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೋ ಅವರ ಪತಿ ಆಸಿಫ್ ಅಲಿ ಜರ್ದಾರಿ ಸೇರಿದಂತೆ ಹಲವು ರಾಜಕೀಯ ಕೈದಿಗಳನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿದ್ದರು. ಹಾಗೇ, ಬೆನಜೀರ್ ಭುಟ್ಟೋ ಅವರೊಂದಿಗೆ ಮಾತನಾಡಬೇಕೆಂದು ಕೂಡ ಬೇಡಿಕೆ ಇಟ್ಟಿದ್ದರು.
ಆಗ ಬೆನಜೀರ್ ಭುಟ್ಟೋ ಪಾಕಿಸ್ತಾನದ ವಿರೋಧ ಪಕ್ಷದ ನಾಯಕಿಯಾಗಿದ್ದರು. ಅಪಹರಣಕಾರರು ವಿಮಾನದಾದ್ಯಂತ ಆಲ್ಕೋಹಾಲ್ ಸುರಿದು, ಅದಕ್ಕೆ ಬೆಂಕಿ ಹಚ್ಚುವುದಾಗಿ ಬೆದರಿಕೆ ಹಾಕಿದ್ದರು. ಕೆಲವು ವರದಿಗಳ ಪ್ರಕಾರ, ಆ ಉಗ್ರರು ಬೆನಜೀರ್ ಭುಟ್ಟೋ ಅವರದ್ದೇ ಆದ ‘ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ’ (PPP)ಗೆ ಸೇರಿದವರಾಗಿದ್ದರು.
2007ರಲ್ಲಿ ರಾವಲ್ಪಿಂಡಿಯಲ್ಲಿ ಹತ್ಯೆಯಾಗುವ ಮುನ್ನ ಭುಟ್ಟೋ ಎರಡು ಬಾರಿ ಪಾಕ್ ಪ್ರಧಾನಿಯಾಗಿದ್ದರು. ಆದರೆ 1991ರಲ್ಲಿ ನವಾಜ್ ಷರೀಫ್ ಪಾಕಿಸ್ತಾನದ ಪ್ರಧಾನಿಯಾಗಿದ್ದರು. ಆ ಸಮಯದಲ್ಲಿ ಭುಟ್ಟೋ ಇಸ್ಲಮಾಬಾದ್‌ನಲ್ಲಿ ಇರಲಿಲ್ಲ, ಬದಲಿಗೆ ಸಿಂಧ್‌ನಲ್ಲಿರುವ ತಮ್ಮ ಕೌಟುಂಬಿಕ ಎಸ್ಟೇಟ್‌ನಲ್ಲಿದ್ದರು ಎಂದು ಕೌಶಿಕನ್ ನೆನಪಿಸಿಕೊಂಡಿದ್ದಾರೆ.
ಮೇಡಂ ನಿದ್ರಿಸುತ್ತಿದ್ದಾರೆ, ಅವರನ್ನು ಎಬ್ಬಿಸಲು ಸಾಧ್ಯವಿಲ್ಲ!:
ಉಗ್ರರಿಂದ ಹೈಜಾಕ್ ಆಗಿದ್ದ ವಿಮಾನವು ಸಿಂಗಾಪುರದ ಚಾಂಗಿ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದಾಗ, ಪರಿಸ್ಥಿತಿ ಅತ್ಯಂತ ಉದ್ವಿಗ್ನವಾಗಿತ್ತು. ಉಗ್ರರ ಬೇಡಿಕೆಗಳ ಬಗ್ಗೆ ಮತ್ತು ಪಾಕಿಸ್ತಾನದ ರಾಜಕೀಯ ಕೈದಿಗಳ ಬಿಡುಗಡೆಯ ಸಾಧ್ಯತೆಗಳ ಬಗ್ಗೆ ತುರ್ತಾಗಿ ಚರ್ಚಿಸಲು ಸಿಂಗಾಪುರ ಸರ್ಕಾರ ನಿರ್ಧರಿಸಿತು. ಈ ಜವಾಬ್ದಾರಿಯನ್ನು ಹೊತ್ತ ಆಗಿನ ರಾಯಭಾರಿ ಬಿಲಹರಿ ಕೌಶಿಕನ್, ಮಧ್ಯರಾತ್ರಿಯ ಸಮಯದಲ್ಲಿ ಪಾಕಿಸ್ತಾನದ ಅಂದಿನ ವಿರೋಧ ಪಕ್ಷದ ನಾಯಕಿಯಾಗಿದ್ದ ಬೆನಜೀರ್ ಭುಟ್ಟೋ ಅವರಿಗೆ ನೇರವಾಗಿ ಫೋನ್ ಮಾಡಿದರು.
ಇದನ್ನೂ ಓದಿ: ಭಾರತ-ಪಾಕ್ ಕೈದಿಗಳ ಪಟ್ಟಿ ವಿನಿಮಯ: 188 ಭಾರತೀಯರ ತಕ್ಷಣದ ಬಿಡುಗಡೆಗೆ ಪಾಕಿಸ್ತಾನಕ್ಕೆ ಭಾರತ ಒತ್ತಾಯ
ಆದರೆ, ಆಗ ಕೌಶಿಕನ್ ಅವರಿಗೆ ಎದುರಾದ ಪ್ರತಿಕ್ರಿಯೆ ಅತ್ಯಂತ ಆಘಾತಕಾರಿಯಾಗಿತ್ತು. ಬೆನಜೀರ್ ಭುಟ್ಟೋ ಅವರಿಗೆ ಕರೆ ಮಾಡಿದಾಗ ಅಲ್ಲಿದ್ದವರಿಗೆ ಉರ್ದು ಬಿಟ್ಟರೆ ಬೇರೆ ಭಾಷೆ ಬರುತ್ತಿರಲಿಲ್ಲ. ನಮ್ಮ ತಂಡದಲ್ಲಿ ಯಾರಿಗೂ ಉರ್ದು ಬರುತ್ತಿರಲಿಲ್ಲ. ಕೊನೆಗೂ ಆ ನಿವಾಸದಲ್ಲಿ ಯಾರೋ ಒಬ್ಬರು ಇಂಗ್ಲಿಷ್ ಮಾತನಾಡುವವರು ಸಿಕ್ಕರು. ಅವರಿಗೆ ನಾನು ಪರಿಸ್ಥಿತಿಯನ್ನು ವಿವರಿಸಿದರೂ ಕೂಡ ಅವರು ಉಡಾಫೆಯಿಂದ ‘ಮೇಡಂ ನಿದ್ರೆ ಮಾಡುತ್ತಿದ್ದಾರೆ, ನಾವೀಗ ಅವರನ್ನು ಎಬ್ಬಿಸಲು ಸಾಧ್ಯವಿಲ್ಲ!’ ಎಂದು ಹೇಳಿ ಫೋನ್ ಕಟ್ ಮಾಡಿಬಿಟ್ಟರು ಎಂದು ಈ ಘಟನೆಯನ್ನು ಕೌಶಿಕನ್ ನೆನಪಿಸಿಕೊಂಡಿದ್ದಾರೆ.
ಕಮಾಂಡೋ ಕಾರ್ಯಾಚರಣೆ:
ಪಾಕಿಸ್ತಾನದ ನಾಯಕರಿಂದ ಯಾವುದೇ ಸಕಾರಾತ್ಮಕ ಸ್ಪಂದನೆ ಸಿಗದಿದ್ದಾಗ, ಸಿಂಗಾಪುರ ಸರ್ಕಾರವು ಉಗ್ರರೊಂದಿಗೆ ಮಾತುಕತೆ ನಡೆಸಿ ಸಮಯ ವ್ಯರ್ಥ ಮಾಡುವ ಬದಲು ಅವರನ್ನು ಎದುರಿಸಲು ನಿರ್ಧರಿಸಿತು. ಅದೇ ದಿನ ಮುಂಜಾನೆ ಸಿಂಗಾಪುರ ಸಶಸ್ತ್ರ ಪಡೆಯ ವಿಶೇಷ ಕಾರ್ಯಾಚರಣೆ ಪಡೆ (SAF Commandos) ಹೈಜಾಕ್ ಆಗಿದ್ದ ವಿಮಾನದೊಳಗೆ ನುಗ್ಗಿ ವಿಮಾನದೊಳಗಿದ್ದ ಪಾಕಿಸ್ತಾನದ ನಾಲ್ಕೂ ಉಗ್ರರನ್ನು ಸ್ಥಳದಲ್ಲೇ ಹೊಡೆದುರುಳಿಸಲಾಯಿತು. ಯಾವುದೇ ಪ್ರಯಾಣಿಕರಿಗೆ ಗಾಯಗಳಾಗದಂತೆ ಅತ್ಯಂತ ಯಶಸ್ವಿಯಾಗಿ ಎಲ್ಲರನ್ನೂ ರಕ್ಷಿಸಲಾಯಿತು ಎಂಬ ಸಂಗತಿಯನ್ನು ಕೌಶಿಕನ್ ನೆನಪಿಸಿಕೊಂಡಿದ್ದಾರೆ.
ಪಾಕಿಸ್ತಾನದ ರಾಜಕಾರಣಿಗಳು ಮತ್ತು ಮಿಲಿಟರಿ ವ್ಯವಸ್ಥೆಯು ದೇಶದ ಹಿತಾಸಕ್ತಿಗಿಂತ ತಮ್ಮ ವೈಯಕ್ತಿಕ ಹಿತಾಸಕ್ತಿಗೇ ಮೊದಲಿನಿಂದಲೂ ಆದ್ಯತೆ ನೀಡುತ್ತಾ ಬಂದಿದೆ ಎಂಬುದಕ್ಕೆ ಈ ಹಳೆಯ ಘಟನೆಯೇ ಸಾಕ್ಷಿ ಎಂದು ಬಿಲಹರಿ ಕೌಶಿಕನ್ ಅಭಿಪ್ರಾಯಪಟ್ಟಿದ್ದಾರೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 6:25 pm, Fri, 3 July 26




