ವಿಭಜಿಸುವುದಕ್ಕಿಂತ ಒಗ್ಗೂಡಿಸುವ ಅಂಶಗಳಿಗೆ ಒತ್ತು ನೀಡಿದರೆ ಜಗತ್ತು ಇನ್ನಷ್ಟು ಸುಂದರವಾಗಲಿದೆ: ಮೋಹನ್ ಭಾಗವತ್

ಲಂಡನ್‌ನಲ್ಲಿ ನಡೆದ ‘ಸೆಲೆಬ್ರೇಷನ್ ಆಫ್ ಒನ್​ನೆಸ್’ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್ ಸರಸಂಘಚಾಲಕ ಮೋಹನ್ ಭಾಗವತ್, ಸಮಾಜವನ್ನು ವಿಭಜಿಸುವ ವಿಚಾರಗಳಿಗಿಂತ ಒಗ್ಗೂಡಿಸುವ ಅಂಶಗಳಿಗೆ ಒತ್ತು ನೀಡಬೇಕು ಎಂದು ಹೇಳಿದ್ದಾರೆ. ಹಿಂದೂ ಚಿಂತನೆ, ಸೇವೆ, ಯುವ ಪೀಳಿಗೆ ಹಾಗೂ ಬ್ರಿಟನ್‌ನಲ್ಲಿನ ಹಿಂದೂಗಳ ನಿಷ್ಠೆ ಕುರಿತು ಅವರು ಮಾತನಾಡಿದ್ದಾರೆ.

ವಿಭಜಿಸುವುದಕ್ಕಿಂತ ಒಗ್ಗೂಡಿಸುವ ಅಂಶಗಳಿಗೆ ಒತ್ತು ನೀಡಿದರೆ ಜಗತ್ತು ಇನ್ನಷ್ಟು ಸುಂದರವಾಗಲಿದೆ: ಮೋಹನ್ ಭಾಗವತ್
ಮಮತಾ ಸುಬ್ರಹ್ಮಣ್ಯಂ ಹಾಗೂ ಮೋಹನ್ ಭಾಗವತ್
Image Credit source: RSS.org

Updated on: Sep 07, 2026 | 9:42 AM

ಮುಖ್ಯಾಂಶಗಳು

  • ವಿಭಜಿಸುವುದಕ್ಕಿಂತ ಒಗ್ಗೂಡಿಸುವ ಅಂಶಗಳಿಗೆ ಒತ್ತು ನೀಡಬೇಕೆಂದ ಭಾಗವತ್
  • ಹಿಂದೂ ಚಿಂತನೆ ವೈವಿಧ್ಯವನ್ನು ಗೌರವಿಸುತ್ತದೆ: ಭಾಗವತ್
  • ಯುವ ಪೀಳಿಗೆ ಮೇಲೆ ಹೆಚ್ಚಿನ ವಿಶ್ವಾಸವಿದೆ ಎಂದ ಆರ್​​ಎಸ್​ಎಸ್ ಮುಖ್ಯಸ್ಥ

ಲಂಡನ್, ಸೆಪ್ಟೆಂಬರ್ 7: ಸಮಾಜದಲ್ಲಿ ನಮ್ಮನ್ನು ವಿಭಜಿಸುವ ವಿಚಾರಗಳಿಗಿಂತ ಒಗ್ಗೂಡಿಸುವ ಅಂಶಗಳಿಗೆ ಹೆಚ್ಚು ಒತ್ತು ನೀಡಿದರೆ ಜಗತ್ತು ಇನ್ನಷ್ಟು ಸುಂದರವಾಗಿಯೂ, ಉತ್ತಮವಾಗಿಯೂ ಇರಲಿದೆ ಎಂದು ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಮುಖ್ಯಸ್ಥ ಅಥವಾ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಹೇಳಿದ್ದಾರೆ. ಲಂಡನ್‌ನಲ್ಲಿ ಸೆಪ್ಟೆಂಬರ್ 6ರಂದು ನಡೆದ ‘Celebration of Oneness’ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಂಘದ 100 ವರ್ಷಗಳ ಪಯಣದಲ್ಲಿ ಕಾಲದ ಪರೀಕ್ಷೆಯನ್ನು ಎದುರಿಸಿ ಉಳಿದಿರುವ ಪ್ರಮುಖ ಅಂಶ ಯಾವುದು ಎಂಬ ಪ್ರಶ್ನೆಗೆ ‘ಅಪನಾಪನ್’ ಎಂದು ಉತ್ತರಿಸಿದರು. ಅಂದರೆ, ಎಲ್ಲರ ಬಗ್ಗೆಯೂ ಶುದ್ಧ, ನಿಸ್ವಾರ್ಥ ಪ್ರೀತಿ ಎಂಬುದೇ ಅದರ ಮೂಲ ತತ್ವ ಎಂದು ವಿವರಿಸಿದರು.

ಹಿಂದೂಗಳು ಜಗತ್ತಿಗೆ ಸಮತೋಲಿತ ದೃಷ್ಟಿಕೋನ ನೀಡಬಲ್ಲರು: ಮೋಹನ್ ಭಾಗವತ್

ಹಿಂದೂ ಸಮಾಜದ ಸಾಂಪ್ರದಾಯಿಕ ಸ್ವಭಾವವೇ ವ್ಯಕ್ತಿ, ಸಮುದಾಯ, ಸಮಾಜ ಹಾಗೂ ಇಡೀ ಮಾನವಕುಲದ ಬಗ್ಗೆ ಪ್ರೀತಿ ಹೊಂದಿರುವುದು ಎಂದು ಮೋಹನ್ ಭಾಗವತ್ ಹೇಳಿದರು. ಹಿಂದೂ ಚಿಂತನೆ ಜಗತ್ತನ್ನು ಸಮತೋಲಿತವಾಗಿ ನೋಡುವ ದೃಷ್ಟಿಕೋನವನ್ನು ನೀಡಬಲ್ಲದು. ಅಸ್ತಿತ್ವ ಮೂಲತಃ ಒಂದೇ ಆಗಿದ್ದು, ಅದು ಹಲವು ರೂಪಗಳಲ್ಲಿ ಕಾಣಿಸಿಕೊಳ್ಳುತ್ತದೆ. ವೈವಿಧ್ಯ ಸಹಜವಾಗಿರುವುದರಿಂದ ಅದನ್ನು ಒಪ್ಪಿಕೊಳ್ಳಬೇಕು ಮತ್ತು ಗೌರವಿಸಬೇಕು ಎಂದು ಅವರು ಹೇಳಿದರು.

ಯಾವ ಕ್ಷೇತ್ರ ನೋಡಿದರೂ ಸ್ವಯಂಸೇವಕರ ಸೇವೆ ಇದೆ: ಭಾಗವತ್

ಸಂಘದ ಸೇವಾ ಚಟುವಟಿಕೆಗಳ ಕುರಿತು ಮಾತನಾಡಿದ ಮೋಹನ್ ಭಾಗವತ್, ಸ್ವಯಂಸೇವಕರು ಮಾನವ ಜೀವನದ ಬಹುತೇಕ ಎಲ್ಲ ಕ್ಷೇತ್ರಗಳಲ್ಲೂ ಸಕ್ರಿಯರಾಗಿದ್ದಾರೆ ಎಂದು ಹೇಳಿದರು. ಸ್ವಯಂಸೇವಕರ ಕಾರ್ಯವನ್ನು ಸಂಪೂರ್ಣವಾಗಿ ಸಂಕ್ಷಿಪ್ತವಾಗಿ ಹೇಳುವುದು ಕಷ್ಟ. ರಾಜಕೀಯ ಕಾರಣಗಳಿಂದ ಸಂಘವನ್ನು ವಿರೋಧಿಸುವವರೂ ಸಹ ಸ್ವಯಂಸೇವಕರ ಕಾರ್ಯ ಹಾಗೂ ಅವರ ಗುಣಗಳನ್ನು ಗುರುತಿಸುತ್ತಾರೆ. ಅಗತ್ಯ ಸಂದರ್ಭಗಳಲ್ಲಿ ಅವರ ಸಹಕಾರವನ್ನು ಕೋರುತ್ತಾರೆ ಮತ್ತು ಸಂವಾದ ನಡೆಸುತ್ತಾರೆ ಎಂದು ಅವರು ಹೇಳಿದರು. ‘ಯಾರೂ ಏನೂ ಮಾಡದಿರುವಲ್ಲಿ ಸಂಘ ಸೇವೆ ಮಾಡುತ್ತಿದೆ’ ಎಂದು ಹೇಳಿದ ಅವರು, ಲಡಾಖ್‌ನಿಂದ ಕನ್ಯಾಕುಮಾರಿವರೆಗೆ ಸೇವಾ ಚಟುವಟಿಕೆಗಳು ನಡೆಯುತ್ತಿವೆ ಎಂದು ವಿವರಿಸಿದರು.

ಮುಂದಿನ 100 ವರ್ಷಗಳ ಆರ್​ಎಸ್​ಎಸ್ ಕಾರ್ಯ ಏನು?

ಸಂಘದ ಮುಂದಿನ 100 ವರ್ಷಗಳ ಗುರಿ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿ, ಈಗ ನಡೆಯುತ್ತಿರುವ ಕಾರ್ಯವನ್ನು ಮುಂದುವರಿಸಬೇಕಿದೆ ಎಂದು ಭಾಗವತ್ ಹೇಳಿದರು. ಹಿಂದೂ ಸಮಾಜದ ಸಂಘಟನೆಯ ಕಾರ್ಯವನ್ನು ಸಾಧ್ಯವಾದಷ್ಟು ಬೇಗ ಪೂರ್ಣಗೊಳಿಸಬೇಕು. ಈಗಾಗಲೇ ಮೂರನೇ ತಲೆಮಾರಿನವರು ಸಂಘದೊಂದಿಗೆ ಕೆಲಸ ಮಾಡುತ್ತಿದ್ದಾರೆ. ಎರಡು ತಲೆಮಾರುಗಳು ಇನ್ನೂ ಸಂಘದ ಕಾರ್ಯದಲ್ಲಿ ತೊಡಗಿವೆ. ಒಟ್ಟಿನಲ್ಲಿ ಐದು ತಲೆಮಾರುಗಳು ಒಂದೇ ಸಮಯದಲ್ಲಿ ಕೆಲಸ ಮಾಡುತ್ತಿವೆ. ಏಳನೇ ತಲೆಮಾರು ಬರುವ ಮುನ್ನ ಹಿಂದೂ ಸಮಾಜದ ಸಂಘಟನೆಯ ಕಾರ್ಯ ಪೂರ್ಣಗೊಳ್ಳಬೇಕು ಎಂಬ ಆಶಯವನ್ನು ಅವರು ವ್ಯಕ್ತಪಡಿಸಿದರು.

ವೈವಿಧ್ಯದಲ್ಲೇ ಏಕತೆಯನ್ನು ಕಾಣಬೇಕು: ಭಾಗವತ್ ಪ್ರತಿಪಾದನೆ

ಹಿಂದೂ ನಾಗರಿಕತೆ ಜಗತ್ತಿಗೆ ನೀಡಬಹುದಾದ ಪ್ರಮುಖ ವಿಚಾರವೇನು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಹಿಂದೂ ಚಿಂತನೆಯ ಮೂಲದಲ್ಲಿರುವುದು ಅಸ್ತಿತ್ವದ ಏಕತೆ ಎಂದು ಹೇಳಿದರು. ಅಸ್ತಿತ್ವ ಒಂದೇ ಆಗಿದ್ದು, ಅದು ಹಲವು ರೂಪಗಳಲ್ಲಿ ಕಾಣಿಸುತ್ತದೆ. ಹೀಗಾಗಿ ವೈವಿಧ್ಯವನ್ನು ಗೌರವಿಸುವುದರ ಜೊತೆಗೆ ಅದರ ಹಿಂದಿರುವ ಏಕತೆಯನ್ನು ಅರ್ಥಮಾಡಿಕೊಳ್ಳಬೇಕು. ಒಂದೇ ಅಸ್ತಿತ್ವ ಹಲವು ರೂಪಗಳಲ್ಲಿ ಕಾಣಿಸಿಕೊಳ್ಳುವುದರಿಂದ ಆ ಎಲ್ಲ ರೂಪಗಳನ್ನೂ ಗೌರವಿಸಬೇಕು ಎಂದು ಅವರು ಹೇಳಿದರು.

ಹಿಂದೂ ಎಂಬುದು ಕೇವಲ ಧರ್ಮವಲ್ಲ: ಭಾಗವತ್

‘ಹಿಂದೂ ರಾಷ್ಟ್ರ’ ಮತ್ತು ‘ಹಿಂದೂತ್ವ’ದ ಪರಿಕಲ್ಪನೆ ಕುರಿತು ಮಾತನಾಡಿದ ಮೋಹನ್ ಭಾಗವತ್, ಹಿಂದೂ ಎಂಬ ಪದವನ್ನು ಕೇವಲ ಧಾರ್ಮಿಕ ಆಚರಣೆ ಅಥವಾ ಜೀವನಶೈಲಿಯ ಆಧಾರದ ಮೇಲೆ ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು. ಎಲ್ಲ ವೈವಿಧ್ಯತೆಗಳನ್ನು ಒಪ್ಪಿಕೊಂಡು ಗೌರವಿಸುವ ಸ್ವಭಾವವೇ ಹಿಂದೂ ಚಿಂತನೆ ಎಂದು ಅವರು ವಿವರಿಸಿದರು. ಎಲ್ಲ ಮಾರ್ಗಗಳೂ ಒಂದೇ ಗುರಿಯತ್ತ ಸಾಗುತ್ತವೆ ಎಂಬ ದೃಷ್ಟಿಕೋನವನ್ನು ಇದು ಹೊಂದಿದೆ. ಧರ್ಮಗಳು ತಮ್ಮದೇ ಆದ ತತ್ವ ಮತ್ತು ಆಚರಣೆಗಳನ್ನು ಹೊಂದಿದ್ದರೂ, ಅವು ವಿಶಾಲವಾದ ಹಿಂದೂ ನಾಗರಿಕತೆಯ ಚೌಕಟ್ಟಿನೊಳಗೆ ಅಸ್ತಿತ್ವದಲ್ಲಿರಬಹುದು ಎಂದು ಅವರು ಹೇಳಿದರು.

ಯುವ ಪೀಳಿಗೆ ಮೇಲೆ ಹೆಚ್ಚಿನ ವಿಶ್ವಾಸವಿದೆ: ಮೋಹನ್ ಭಾಗವತ್

ಭವಿಷ್ಯದ ಪೀಳಿಗೆಯ ಪಾತ್ರದ ಕುರಿತು ಮಾತನಾಡಿದ ಅವರು, ಯುವಕರ ಮೇಲೆ ತಮಗೆ ಹೆಚ್ಚಿನ ವಿಶ್ವಾಸವಿದೆ ಎಂದು ಹೇಳಿದರು. ಜಗತ್ತನ್ನು ಉತ್ತಮ ಸ್ಥಳವನ್ನಾಗಿ ಮಾಡುವ ಉತ್ಸಾಹ ಯುವಕರಲ್ಲಿದೆ. ತಮ್ಮ ನಡುವಿನ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಉತ್ತಮ ಉದ್ದೇಶಕ್ಕಾಗಿ ಕೆಲಸ ಮಾಡಲು ಅವರು ಸಿದ್ಧರಾಗಿದ್ದಾರೆ. ಯುವಕರು ಸರಿಯೆಂದು ಕಂಡ ವಿಚಾರವನ್ನು ಹೆಚ್ಚು ಯೋಚಿಸದೆ ಸ್ವೀಕರಿಸಿ ಕಾರ್ಯರೂಪಕ್ಕೆ ತರುವ ಗುಣ ಹೊಂದಿದ್ದಾರೆ ಎಂದು ಹೇಳಿದರು.

ಹಿರಿಯರು ತಮ್ಮ ಅನುಭವದಿಂದ ಯುವಕರಿಗೆ ಅಗತ್ಯ ಜ್ಞಾನ ಮತ್ತು ಒಳನೋಟ ನೀಡಬೇಕು. ಆದರೆ ಅದನ್ನು ಅವರ ಮೇಲೆ ಹೇರಬಾರದು. ಯುವಕರೇ ತಮ್ಮದೇ ದಾರಿಯನ್ನು ಕಂಡುಕೊಳ್ಳಲು ಅವಕಾಶ ನೀಡಬೇಕು ಎಂದು ಮೋಹನ್ ಭಾಗವತ್ ಸಲಹೆ ನೀಡಿದರು.

ಸೇವೆ ಎಂದರೆ ದೇವರಿಗೆ ಹತ್ತಿರವಾಗುವ ಅವಕಾಶ: ಭಾಗವತ್

ಭಾರತದ ಭವಿಷ್ಯದ ಸವಾಲುಗಳನ್ನು ಎದುರಿಸುವಲ್ಲಿ ಯುವ ಹಿಂದೂಗಳ ಪಾತ್ರದ ಕುರಿತು ಮಾತನಾಡಿದ ಅವರು, ತಮ್ಮ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದು ಯುವ ಪೀಳಿಗೆಯ ಕರ್ತವ್ಯ ಎಂದರು. ಸೇವೆ ನಿಸ್ವಾರ್ಥವಾಗಿರಬೇಕು. ಸೇವೆ ಮಾಡುವ ಮೂಲಕ ತಾವು ಯಾರಿಗೋ ಉಪಕಾರ ಮಾಡುತ್ತಿದ್ದೇವೆ ಎಂಬ ಭಾವನೆ ಇರಬಾರದು. ಸೇವೆ ಎನ್ನುವುದು ದೇವರಿಗೆ ಇನ್ನಷ್ಟು ಹತ್ತಿರವಾಗುವ ಅವಕಾಶ. ನಾವು ಸೇವೆ ಪಡೆಯುವ ವ್ಯಕ್ತಿಗೆ ಉಪಕಾರ ಮಾಡುತ್ತಿದ್ದೇವೆ ಎಂದು ಭಾವಿಸುವ ಬದಲು, ಸೇವೆ ಮಾಡುವ ಅವಕಾಶ ನೀಡುವ ಮೂಲಕ ಅವರೇ ನಮಗೆ ಉಪಕಾರ ಮಾಡುತ್ತಿದ್ದಾರೆ ಎಂಬ ಮನೋಭಾವ ಇರಬೇಕು ಎಂದು ಅವರು ಹೇಳಿದರು.

ಬ್ರಿಟನ್ ಹಿಂದೂಗಳ ನಿಷ್ಠೆ ಭಾರತಕ್ಕಿರಬೇಕೇ?

ಬ್ರಿಟನ್‌ನಲ್ಲಿರುವ ಹಿಂದೂಗಳ ನಿಷ್ಠೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮೋಹನ್ ಭಾಗವತ್, ಬ್ರಿಟನ್ ಮತ್ತು ಭಾರತದ ಹಿತಾಸಕ್ತಿಗಳ ನಡುವೆ ಸಂಘರ್ಷ ಉಂಟಾಗಬೇಕೆಂದಿಲ್ಲ ಎಂದು ಹೇಳಿದರು. ಬ್ರಿಟನ್‌ನಲ್ಲಿ ವಾಸಿಸುವ ಹಿಂದೂಗಳು ತಮ್ಮ ಮೌಲ್ಯಗಳನ್ನು ಪಾಲಿಸುತ್ತಿದ್ದರೆ, ತಾವು ವಾಸಿಸುವ ದೇಶದ ಬಗ್ಗೆ ನಿಷ್ಠೆ ಹೊಂದುವುದರಲ್ಲಿ ಯಾವುದೇ ಗೊಂದಲವಿಲ್ಲ. ಬ್ರಿಟನ್ ಮತ್ತು ಭಾರತದ ಹಿತಾಸಕ್ತಿಗಳು ನೇರವಾಗಿ ಸಂಘರ್ಷಿಸುವ ಪರಿಸ್ಥಿತಿ ಎದುರಾದರೆ, ಬ್ರಿಟನ್‌ನಲ್ಲಿರುವ ಹಿಂದೂಗಳು ತಮ್ಮ ಕರ್ಮಭೂಮಿಯಾದ ಬ್ರಿಟನ್‌ನ ಪರವಾಗಿರುತ್ತಾರೆ ಎಂದು ಅವರು ಹೇಳಿದರು.

ಜನ್ಮಭೂಮಿ ಮತ್ತು ಪುಣ್ಯಭೂಮಿಯಿಂದ ಮೌಲ್ಯಗಳನ್ನು ಪಡೆಯುತ್ತಾರೆ. ಆದರೆ ಆ ಮೌಲ್ಯಗಳನ್ನು ತಾವು ವಾಸಿಸುವ ಕರ್ಮಭೂಮಿಯಲ್ಲಿ ಅಳವಡಿಸಿಕೊಂಡು ಅಲ್ಲಿನ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂಬುದು ಹಿಂದೂತ್ವದ ದೃಷ್ಟಿಕೋನ ಎಂದು ಅವರು ವಿವರಿಸಿದರು.

ಒಗ್ಗೂಡಿಸುವ ಅಂಶಗಳಿಗೆ ಆದ್ಯತೆ ನೀಡಿ: ಭಾಗವತ್ ಕರೆ

RSS@100 Event In London: RSS ಕಾರ್ಯಗಳು ದ್ವೇಷದ ಮೇಲೆ ನಡೆಯುವುದಿಲ್ಲ: ಮೋಹನ್ ಭಾಗವತ್
ಹಿಂದೂ ಸಮಾಜ ಒಗ್ಗಟ್ಟಾಗಿಲ್ಲ ಎಂಬ ಅಭಿಪ್ರಾಯದ ಕುರಿತು ಮಾತನಾಡಿದ ಮೋಹನ್ ಭಾಗವತ್, ಮಾನವ ಸಮಾಜದಲ್ಲಿ ವೈವಿಧ್ಯ ಸಹಜವಾಗಿದೆ. ಆದರೆ ನಮ್ಮನ್ನು ವಿಭಜಿಸುವ ಅಂಶಗಳಿಗಿಂತ ನಮ್ಮನ್ನು ಒಗ್ಗೂಡಿಸುವ ಅಂಶಗಳಿಗೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು. ಹೀಗೆ ಮಾಡಿದರೆ ಸಮುದಾಯಗಳು ಮತ್ತು ಸಮಾಜ ಅಭಿವೃದ್ಧಿ ಹೊಂದಲಿವೆ. ಅಂತಿಮವಾಗಿ ಜಗತ್ತೇ ಉತ್ತಮ ಸ್ಥಳವಾಗಲಿದೆ ಎಂಬ ಸಂದೇಶವನ್ನು ಅವರು ನೀಡಿದರು.

326 ಸಂಘಟನೆಗಳ ಪ್ರತಿನಿಧಿಗಳು ಭಾಗಿ

ಬ್ರಿಟನ್‌ನಲ್ಲಿ ನೆಲೆಸಿರುವ ಹಿಂದೂಗಳ ಸಂಘಟನೆಯಾದ Hindu Swayamsevak Sangh (HSS) ಆಯೋಜಿಸಿದ್ದ ಕಾರ್ಯಕ್ರಮವನ್ನು ಯುಕೆಯಲ್ಲಿ ನೆಲೆಸಿರುವ ವೆಲ್‌ನೆಸ್ ತಜ್ಞೆ ಮಮತಾ ಸುಬ್ರಹ್ಮಣ್ಯಂ ನಿರ್ವಹಿಸಿದರು. ಕಾರ್ಯಕ್ರಮದಲ್ಲಿ 326 ಸಂಘಟನೆಗಳನ್ನು ಪ್ರತಿನಿಧಿಸುವ ಸುಮಾರು 600 ಮಂದಿ ಭಾಗವಹಿಸಿದ್ದರು.

ಹೌಸ್ ಆಫ್ ಲಾರ್ಡ್ಸ್ ಸದಸ್ಯರು, ಹೌಸ್ ಆಫ್ ಕಾಮನ್ಸ್ ಸದಸ್ಯರು, ಮೇಯರ್‌ಗಳು, ಕೌನ್ಸಿಲರ್‌ಗಳು ಹಾಗೂ ಬ್ರಿಟನ್‌ನಲ್ಲಿರುವ ಭಾರತದ ಹೈಕಮಿಷನರ್ ಪೆರಿಯಾಸಾಮಿ ಕುಮಾರನ್, ಡೆಪ್ಯುಟಿ ಹೈಕಮಿಷನರ್ ಕಾರ್ತಿಕ್ ಪಾಂಡೆ ಸೇರಿದಂತೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಇದನ್ನೂ ಓದಿ: ‘ಪ್ರತಿಯೊಬ್ಬರ ಮೇಲಿನ ಸಾತ್ವಿಕ ಪ್ರೇಮವೇ ಹಿಂದೂವಿನ ಮೂಲ ಸ್ವಭಾವ’: ಲಂಡನ್​ನಲ್ಲಿ ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್

ನೇಪಾಳದಲ್ಲಿ ಸಂಭವಿಸಿದ ಪ್ರವಾಹದಿಂದ ಮೃತಪಟ್ಟವರು ಹಾಗೂ ಸ್ಥಳಾಂತರಗೊಂಡ ಕುಟುಂಬಗಳ ಸ್ಮರಣಾರ್ಥ ಕಾರ್ಯಕ್ರಮವನ್ನು ಮೌನಾಚರಣೆಯೊಂದಿಗೆ ಆರಂಭಿಸಲಾಯಿತು. ನೇಪಾಳದ ಪರಿಹಾರ ಕಾರ್ಯಗಳಿಗಾಗಿ ‘ಸೇವಾ ಯುಕೆ’ ಮೂಲಕ ದೇಣಿಗೆಯಾಗಿ ಒಂದು ಲಕ್ಷ ಪೌಂಡ್ ಸಂಗ್ರಹಿಸಲಾಗಿದೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.

ಆರ್‌ಎಸ್‌ಎಸ್ ಶತಮಾನೋತ್ಸವದ ಅಂಗವಾಗಿ ಪ್ರವಾಸ

ಆರ್‌ಎಸ್‌ಎಸ್ ಶತಮಾನೋತ್ಸವದ ಅಂಗವಾಗಿ ಸೇವೆ, ಸಾಮಾಜಿಕ ಸಾಮರಸ್ಯ ಹಾಗೂ ಹಂಚಿಕೊಂಡ ಮೌಲ್ಯಗಳ ಕುರಿತು ನಾಗರಿಕತೆಯ ಸಂವಾದ ನಡೆಸುವ ಕಾರ್ಯಕ್ರಮದ ಭಾಗವಾಗಿ ಮೋಹನ್ ಭಾಗವತ್ ಅವರ ಲಂಡನ್ ಪ್ರವಾಸ ನಡೆದಿದೆ. ಲಂಡನ್ ಪ್ರವಾಸದ ವೇಳೆ ಅವರು ಧಾರ್ಮಿಕ ಮುಖಂಡರು, ಶಿಕ್ಷಣ ತಜ್ಞರು, ಸಂಶೋಧಕರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರನ್ನು ಭೇಟಿ ಮಾಡಿದ್ದಾರೆ. ಅಂತರ್‌ಧರ್ಮೀಯ ಸಂವಾದದ ಭಾಗವಾಗಿ ವಿಲ್ಲೆಸ್‌ಡನ್‌ನ ಶ್ರೀ ಸ್ವಾಮಿನಾರಾಯಣ ಮಂದಿರ, ಖಾಲ್ಸಾ ಜಥಾ ಬ್ರಿಟಿಷ್ ಐಲ್ಸ್ ಗುರುದ್ವಾರ ಸೇರಿದಂತೆ ವಿವಿಧ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

ಇನ್ನಷ್ಟು ವಿದೇಶ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 9:33 am, Mon, 7 September 26

Loading...
Unable to load recommendations.
Follow Us