ನೇಪಾಳದಲ್ಲಿ ಭೋಟೆ ಕೋಶಿ ನದಿಯ ರುದ್ರನರ್ತನ: ಭೀಕರ ಪ್ರವಾಹಕ್ಕೆ 7 ಸಾವು, 41 ಭದ್ರತಾ ಸಿಬ್ಬಂದಿ ನಾಪತ್ತೆ

ನೇಪಾಳದ ಭೋಟೆ ಕೋಶಿ ನದಿಯಲ್ಲಿ ಉಂಟಾದ ಭೀಕರ ಪ್ರವಾಹದಿಂದ 7 ಮಂದಿ ಸಾವನ್ನಪ್ಪಿದ್ದು, 41 ಭದ್ರತಾ ಸಿಬ್ಬಂದಿ ನಾಪತ್ತೆಯಾಗಿದ್ದಾರೆ. ಹಿಮಯುಗದ ಸರೋವರ ಒಡೆದಿದ್ದೇ ಈ ಹಠಾತ್ ಜಲಪ್ರಳಯಕ್ಕೆ ಕಾರಣವೆಂದು ತಜ್ಞರು ಶಂಕಿಸಿದ್ದಾರೆ. ಪ್ರವಾಹದಿಂದ ನೂರಾರು ಮನೆಗಳು, ರಸ್ತೆಗಳು, ಸೇತುವೆಗಳು ಮತ್ತು ಜಲವಿದ್ಯುತ್ ಯೋಜನೆಗಳಿಗೆ ಅಪಾರ ಹಾನಿಯಾಗಿದೆ. ಸೇನೆ ಮತ್ತು ವೈದ್ಯಕೀಯ ತಂಡಗಳು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದು, ಕೆಳಭಾಗದ ಭಾರತೀಯ ಗಡಿಗೂ ಮುನ್ನೆಚ್ಚರಿಕೆ ನೀಡಲಾಗಿದೆ.

ನೇಪಾಳದಲ್ಲಿ ಭೋಟೆ ಕೋಶಿ ನದಿಯ ರುದ್ರನರ್ತನ: ಭೀಕರ ಪ್ರವಾಹಕ್ಕೆ 7 ಸಾವು, 41 ಭದ್ರತಾ ಸಿಬ್ಬಂದಿ ನಾಪತ್ತೆ
ನೇಪಾಳ ಪ್ರವಾಹ

Updated on: Aug 26, 2026 | 2:46 PM

ಕಠ್ಮಂಡು, ಆಗಸ್ಟ್​ 26: ಉತ್ತರ ನೇಪಾಳದ ರಸುವಾ ಜಿಲ್ಲೆಯಲ್ಲಿ ಭೋಟೆ ಕೋಶಿ ನದಿಯಲ್ಲಿ ಉಂಟಾದ ಭೀಕರ ಹಠಾತ್ ಪ್ರವಾಹ(Flood)ಕ್ಕೆ ಕನಿಷ್ಠ 7 ಮಂದಿ ಸಾವನ್ನಪ್ಪಿದ್ದು, 41 ಭದ್ರತಾ ಸಿಬ್ಬಂದಿ ಸೇರಿದಂತೆ ಹಲವರು ನಾಪತ್ತೆಯಾಗಿದ್ದಾರೆ. ಟಿಬೆಟ್ ಗಡಿಗೆ ಹೊಂದಿಕೊಂಡಿರುವ ತಿಮುರೆ ಮತ್ತು ಸಯಾಪ್ರು ಬೆಸಿ ಪ್ರದೇಶಗಳಲ್ಲಿ ಪ್ರವಾಹವು ವ್ಯಾಪಕ ವಿನಾಶ ಸೃಷ್ಟಿಸಿದ್ದು, ನೂರಾರು ಮನೆಗಳು, ರಸ್ತೆಗಳು, ಪ್ರಮುಖ ಸೇತುವೆಗಳು ಹಾಗೂ ಜಲವಿದ್ಯುತ್ ಯೋಜನೆಗಳ ಮೂಲಸೌಕರ್ಯಗಳು ನೀರಿನಲ್ಲಿ ಕೊಚ್ಚಿಹೋಗಿವೆ.

ಪ್ರವಾಹ ಪೀಡಿತ ಪ್ರದೇಶದಲ್ಲಿ ರಕ್ಷಣಾ ಮತ್ತು ಗಡಿ ಕರ್ತವ್ಯದಲ್ಲಿದ್ದ 32 ನೇಪಾಳ ಪೊಲೀಸರು ಹಾಗೂ 9 ಮಂದಿ ಸಶಸ್ತ್ರ ಪೊಲೀಸ್ ಪಡೆ (APF) ಸಿಬ್ಬಂದಿ ನೀರಿನ ರಭಸಕ್ಕೆ ಕೊಚ್ಚಿಹೋಗಿದ್ದು, ಅವರ ಪತ್ತೆಗಾಗಿ ತೀವ್ರ ಶೋಧ ನಡೆಸಲಾಗುತ್ತಿದೆ.

ಸೇನೆ ಮತ್ತು ಹೆಲಿಕಾಪ್ಟರ್ ನಿಯೋಜನೆ: ಪರಿಸ್ಥಿತಿಯ ಗಂಭೀರತೆಯನ್ನು ಗಮನಿಸಿ ನೇಪಾಳ ಸೇನೆ, ಪೊಲೀಸ್ ಪಡೆಗಳು, ವೈದ್ಯಕೀಯ ತಂಡಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆಗೆ ನಿಯೋಜಿಸಲಾಗಿದೆ. ನದಿ ತೀರದ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರನ್ನು ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವಂತೆ ಸ್ಥಳೀಯ ಆಡಳಿತಕ್ಕೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.

ಮತ್ತಷ್ಟು ಓದಿ: Heavy Rain: ಕೊಡಗಿನಲ್ಲಿ ವರುಣನ ಅಬ್ಬರ; ಭಾಗಮಂಡಲದ ತ್ರಿವೇಣಿ ಸಂಗಮ ಮತ್ತೆ ಜಲಾವೃತ!

ಭೋಟೆ ಕೋಶಿ ನದಿಯು ಟಿಬೆಟ್‌ನಲ್ಲಿ ಹುಟ್ಟಿ ನೇಪಾಳವನ್ನು ಪ್ರವೇಶಿಸುತ್ತದೆ. ಟಿಬೆಟ್ ಪ್ರಸ್ಥಭೂಮಿಯಲ್ಲಿರುವ ಸೂಪರ್‌ಗ್ಲೇಶಿಯಲ್  ಸರೋವರವೊಂದು ದಿಢೀರ್ ಒಡೆದು ನೀರು ನುಗ್ಗಿದ್ದೇ ಈ ಹಠಾತ್ ಜಲಪ್ರಳಯಕ್ಕೆ ಪ್ರಮುಖ ಕಾರಣ ಎಂದು ಹವಾಮಾನ ತಜ್ಞರು ಶಂಕಿಸಿದ್ದಾರೆ.

ಮರುಕಳಿಸಿದ ದುರಂತ: ಕಳೆದ ವರ್ಷವೂ ಇದೇ ನದಿಯಲ್ಲಿ ಸಂಭವಿಸಿದ್ದ ಜಲಸ್ಫೋಟಕ್ಕೆ 9 ಮಂದಿ ಬಲಿಯಾಗಿ, ನೇಪಾಳ-ಚೀನಾ ಸಂಪರ್ಕಿಸುವ ಐತಿಹಾಸಿಕ ‘ಮೈತ್ರಿ ಸೇತುವೆ’ ಕೊಚ್ಚಿಹೋಗಿತ್ತು.

ವಿಡಿಯೋ

ತ್ರಿಶೂಲಿ ಮತ್ತು ಗಂಡಕ್ ನದಿ ಅಪಾಯ: ಭೋಟೆ ಕೋಶಿ ನದಿಯು ಮುಂದೆ ತ್ರಿಶೂಲಿ ನದಿಯನ್ನು ಸೇರುತ್ತದೆ. ಈ ನದಿಯು ಮುಂದುವರಿದು ಭಾರತದ ಬಿಹಾರ ಮತ್ತು ಉತ್ತರ ಪ್ರದೇಶ ಪ್ರವೇಶಿಸುವಾಗ ‘ಗಂಡಕ್ ನದಿ’ ಎಂದು ಕರೆಯಲ್ಪಡುತ್ತದೆ. ಹೀಗಾಗಿ ಕೆಳಭಾಗದ ಭಾರತೀಯ ಗಡಿ ಭಾಗಗಳಲ್ಲೂ ನದಿ ತೀರದ ಜನರಿಗೆ ಮುನ್ನೆಚ್ಚರಿಕೆ ನೀಡಲಾಗಿದೆ.

ವಿಡಿಯೋ

ಜಲವಿದ್ಯುತ್ ಸ್ಥಾವರಗಳಿಗೆ ಹೊಡೆತ: ನೇಪಾಳದ ಪ್ರಮುಖ ಜಲವಿದ್ಯುತ್ ಯೋಜನೆಗಳ ಡ್ಯಾಮ್‌ಗಳು ಮತ್ತು ಟರ್ಬೈನ್‌ಗಳಿಗೆ ಪ್ರವಾಹದ ಹೂಳು ಹಾಗೂ ಬಂಡೆಗಳು ಅಪ್ಪಳಿಸಿದ್ದು, ಉತ್ತರ ನೇಪಾಳದಲ್ಲಿ ವಿದ್ಯುತ್ ಮತ್ತು ಸಂಪರ್ಕ ಜಾಲ ಸಂಪೂರ್ಣ ಕಡಿತಗೊಂಡಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

ನಯನಾ ರಾಜೀವ್

ನಯನಾ ರಾಜೀವ್ ಮೂಲತಃ ಶಿವಮೊಗ್ಗ ಜಿಲ್ಲೆಯ ಸಾಗರದ ಬಾಳೆಗೆರೆಯವರು, ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಮಾಧ್ಯಮ ಕ್ಷೇತ್ರದಲ್ಲಿ 10ಕ್ಕೂ ಹೆಚ್ಚು ವರ್ಷ ಕೆಲಸ ಮಾಡಿದ ಅನುಭವವಿದೆ. ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದಾರೆ. ಒನ್​ ಇಂಡಿಯಾ ಕನ್ನಡ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದಾರೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಮೂರು ವರ್ಷಗಳಿಂದ ಕೆಲಸ ಮಾಡುತ್ತಿದ್ದಾರೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್ ಮತ್ತು ಸಂಗೀತ.

Read More
Loading...
Unable to load recommendations.
Follow Us