
ಕಠ್ಮಂಡು, ಆಗಸ್ಟ್ 31: ನೇಪಾಳ ಪ್ರವಾಹದಲ್ಲಿ ಸಾವಿರಾರು ಮನೆಗಳ ಜತೆಗೆ ನೂರಾರು ಜೀವಗಳು ಕೊಚ್ಚಿಹೋಗಿ, ಕಣ್ಣೀರ ಕಡಲಿನಲ್ಲಿ ಮುಳುಗಿರುವ ನೇಪಾಳದಲ್ಲಿ ಕಗ್ಗತ್ತಲೆಯ ನಡುವೆ ಒಂದು ಪುಟ್ಟ ಬೆಳಕಿನ ಕಿರಣ ಮೂಡಿದೆ. ಭೋಟೆ ಕೋಶಿ ನದಿಯ ಪ್ರವಾಹ(Flood)ಕ್ಕೆ ನೆಲಸಮವಾಗಿದ್ದ ರಸುವಾ ಜಿಲ್ಲೆಯ ತಿಮುರೆ ಗ್ರಾಮದ ದಟ್ಟವಾದ ಮಣ್ಣು ಹಾಗೂ ಕಲ್ಲು-ಬಂಡೆಗಳ ರಾಶಿಯಡಿಯಲ್ಲಿ ಬರೋಬ್ಬರಿ 72 ಗಂಟೆಗಳಿಗೂ ಹೆಚ್ಚು ಕಾಲ ಸಿಲುಕಿದ್ದ 6 ವರ್ಷದ ಬಾಲಕಿ ಮನೀಷಾ ಮಗರ್ನನ್ನು ರಕ್ಷಿಸಲಾಗಿದೆ.
ಶುಕ್ರವಾರ ಸಂಜೆ ತಿಮುರೆ ಗ್ರಾಮದ ಅವಶೇಷಗಳ ರಾಶಿಯ ನಡುವೆ ಶೋಧ ನಡೆಸುತ್ತಿದ್ದ ನೇಪಾಳದ ಸಶಸ್ತ್ರ ಪೊಲೀಸ್ ಪಡೆ (APF) ಸಿಬ್ಬಂದಿಗೆ ಮಣ್ಣಿನ ಆಳದಿಂದ ಮಗುವಿನ ಮಸುಕಾದ ಅಳು ಮತ್ತು ಕಿರುಚಾಟದ ಧ್ವನಿ ಕೇಳಿಸಿತು.
ಕೈಗಳಿಂದಲೇ ಅಗೆದ ಯೋಧರು: ಸಣ್ಣ ಸುಳಿವೂ ಸಾಕೆಂದು ಬಗೆದ ಯೋಧರು, ಯಾವುದೇ ಯಂತ್ರಗಳ ಸಹಾಯವಿಲ್ಲದೆ ಕೈಗಳು ಮತ್ತು ಸಲಿಕೆಗಳಿಂದ ಎಚ್ಚರಿಕೆಯಿಂದ ಮಣ್ಣು ತೆರವುಗೊಳಿಸಿ, ಆ ಪುಟ್ಟ ಕಂದಮ್ಮನನ್ನು ಜೀವಂತವಾಗಿ ಹೊರತೆಗೆಯುವಲ್ಲಿ ಯಶಸ್ವಿಯಾದರು.
ಗಡಿ ಹೊರಠಾಣೆಯಲ್ಲಿ ಪ್ರಾಥಮಿಕ ಚಿಕಿತ್ಸೆ: ಮಣ್ಣಿನಿಂದ ಹೊರತೆಗೆದಾಗ ಮಗುವಿನ ಉಸಿರಾಟ ಕ್ಷೀಣಿಸುತ್ತಿತ್ತು. ತಕ್ಷಣ ಸಮೀಪದ ಎಪಿಎಫ್ ಔಟ್‌ಪೋಸ್ಟ್‌ನಲ್ಲಿ ಪ್ರಥಮ ಚಿಕಿತ್ಸೆ ನೀಡಿ ಸ್ಥಿತಿ ಹದಗೆಡದಂತೆ ನೋಡಿಕೊಳ್ಳಲಾಯಿತು.
ಮತ್ತಷ್ಟು ಓದಿ:
ಹಿಮಬಂಡೆ ಹೊಡೆತಕ್ಕೆ ನೇಪಾಳದ ಶೇ. 10 ಆರ್ಥಿಕತೆ ಧ್ವಂಸ; ಈ ಪುಟ್ಟ ದೇಶದ ಪುನರ್ನಿರ್ಮಾಣಕ್ಕೆ ಬೇಕು 5 ಬಿಲಿಯನ್ ಡಾಲರ್
ಕಠ್ಮಂಡು ಆಸ್ಪತ್ರೆಗೆ ರವಾನೆ: ಪ್ರತಿಕೂಲ ಹವಾಮಾನ, ಮಳೆ ಮತ್ತು ಮಂಜಿನ ಕಾರಣ ಹೆಲಿಕಾಪ್ಟರ್ ಹಾರಾಟ ವಿಳಂಬವಾದರೂ, ಶನಿವಾರ ವಾತಾವರಣ ತಿಳಿಯಾಗುತ್ತಿದ್ದಂತೆ ಸೇನಾ ಹೆಲಿಕಾಪ್ಟರ್ ಮೂಲಕ ಬಾಲಕಿಯನ್ನು ಕಠ್ಮಂಡುವಿನ ಸುಸಜ್ಜಿತ ಆಸ್ಪತ್ರೆಗೆ ಏರ್‌ಲಿಫ್ಟ್ ಮಾಡಲಾಯಿತು. ಸದ್ಯ ಆಕೆ ತೀವ್ರ ನಿಗಾ ಘಟಕದಲ್ಲಿ (ICU) ಚೇತರಿಸಿಕೊಳ್ಳುತ್ತಿದ್ದಾಳೆ.
ವೈರಲ್ ಆದ ವೀಡಿಯೊ: ಮಗುವನ್ನು ಮಣ್ಣಿನಡಿಯಿಂದ ಹೊರತೆಗೆಯುವ ಭಾವನಾತ್ಮಕ ವಿಡಿಯೋ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ರಕ್ಷಣಾ ಸಿಬ್ಬಂದಿಯ ಕರ್ತವ್ಯನಿಷ್ಠೆಗೆ ಜಾಗತಿಕ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.
ಕುಟುಂಬಸ್ಥರ ಪತ್ತೆಗೆ ಮನವಿ: ಪ್ರವಾಹದಲ್ಲಿ ಬಾಲಕಿಯ ಹೆತ್ತವರು ಕಣ್ಮರೆಯಾಗಿದ್ದು, “ಈ ಮುಗ್ಧ ಮಗು ಮನೀಷಾ ಮಗರ್ ಅವರ ಹೆತ್ತವರು ಅಥವಾ ಸಂಬಂಧಿಕರ ಬಗ್ಗೆ ಮಾಹಿತಿ ಇದ್ದರೆ ತಕ್ಷಣ ಅಧಿಕಾರಿಗಳನ್ನು ಸಂಪರ್ಕಿಸಿ” ಎಂದು ಸಾರ್ವಜನಿಕರು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಈವರೆಗೆ ಪ್ರವಾಹದಲ್ಲಿ 675ಕ್ಕೂ ಹೆಚ್ಚು ಮೃತದೇಹಗಳನ್ನು ಹೊರತೆಗೆಯಲಾಗಿದ್ದು, 2,400ಕ್ಕೂ ಅಧಿಕ ಜನರು ಇನ್ನೂ ನಾಪತ್ತೆಯಾಗಿದ್ದಾರೆ.
ಶತಕೋಟಿ ಡಾಲರ್ ಆರ್ಥಿಕ ನಷ್ಟ: ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಮಾತನಾಡಿ, ಧ್ವಂಸಗೊಂಡ ಹಳ್ಳಿಗಳು, ರಸ್ತೆಗಳು ಮತ್ತು ಜಲವಿದ್ಯುತ್ ಯೋಜನೆಗಳ ಮರುನಿರ್ಮಾಣಕ್ಕೆ ನೂರಾರು ಕೋಟಿ ಡಾಲರ್‌ಗಳ ಅಗತ್ಯವಿದ್ದು, ಅಂತಾರಾಷ್ಟ್ರೀಯ ಸಮುದಾಯದ ನೆರವು ಕೋರಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ