ನೇಪಾಳ ಪ್ರವಾಹದ ನೀರಿನಲ್ಲಿ ಭಾರತಕ್ಕೆ ಕೊಚ್ಚಿಕೊಂಡು ಬಂದ ಮೃತದೇಹಗಳು; ಉತ್ತರಪ್ರದೇಶದಲ್ಲಿ 7 ಶವಗಳು ಪತ್ತೆ
7 bodies swept into Gandak river in Uttar Pradesh's Maharajganj and Kushi Nagar districts: ಉತ್ತರಪ್ರದೇಶದಲ್ಲಿ ಗಂಡಕ ನದಿಯಲ್ಲಿ ಏಳು ಮೃತದೇಹಗಳು ಪತ್ತೆಯಾಗಿವೆ. ಮಹಾರಾಜಗಂಜ್ನಲ್ಲಿ 4, ಹಾಗೂ ಕುಶಿನಗರ ಜಿಲ್ಲೆಯಲ್ಲಿ 3 ಮೃತ ದೇಹಗಳು ಗಂಡಕ ನದಿ ನೀರಿನಲ್ಲಿ ಸಿಕ್ಕಿವೆ. ನೇಪಾಳ ಪ್ರವಾಹದಲ್ಲಿ ಬಲಿಯಾದವರ ಶವಗಳು ಇವಾಗಿರಬಹುದು ಎನ್ನುವ ಶಂಕೆ ಇದೆ.

ನವದೆಹಲಿ, ಆಗಸ್ಟ್ 30: ಉತ್ತರ ಪ್ರದೇಶದ ಮಹಾರಾಜ್‌ಗಂಜ್ ಮತ್ತು ಕುಶಿನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಹರಿಯುವ ಗಂಡಕ ನದಿಯಲ್ಲಿ (Gandak River) 7 ಮೃತದೇಹಗಳು ಹರಿದುಬಂದಿರುವುದು ಪತ್ತೆಯಾಗಿದೆ. ಈ ದೃಶ್ಯವು ಸ್ಥಳೀಯರಲ್ಲಿ ಭೀತಿ ಮತ್ತು ಆತಂಕವನ್ನು ಹುಟ್ಟುಹಾಕಿದೆ. ನೇಪಾಳ ಪ್ರವಾಹದಿಂದಾಗಿ ಈ ನದಿ ಭರಪೂರವಾಗಿ ತುಂಬಿ ಹರಿಯುತ್ತಿದ್ದು, ಅಲ್ಲಿಂದ ಮೃತದೇಹಗಳು ಕೊಚ್ಚಿಕೊಂಡು ಬಂದಿರಬಹುದು.
ಮಹಾರಾಜ್‌ಗಂಜ್‌ನ ಸೊಹಗಿಬಾರ್ವಾ ವನ್ಯಜೀವಿ ಅಭಯಾರಣ್ಯದ ಬಳಿ ಗಂಡಕ್ ನದಿಯಲ್ಲಿ 4 ಮೃತದೇಹಗಳು ಹಾಗೂ ನೆರೆಯ ಕುಶಿನಗರ ಜಿಲ್ಲೆಯ ಖಡ್ಡಾ ಪ್ರದೇಶದ ಬಳಿ 3 ಮೃತದೇಹಗಳು ನದಿಯ ನೀರಿನಲ್ಲಿ ತೇಲುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ: ಹಿಮಬಂಡೆ ಹೊಡೆತಕ್ಕೆ ನೇಪಾಳದ ಶೇ. 10 ಆರ್ಥಿಕತೆ ಧ್ವಂಸ; ಈ ಪುಟ್ಟ ದೇಶದ ಪುನರ್ನಿರ್ಮಾಣಕ್ಕೆ ಬೇಕು 5 ಬಿಲಿಯನ್ ಡಾಲರ್
ನೇಪಾಳ ಪ್ರವಾಹದ ಶಂಕೆ: ಇತ್ತೀಚೆಗೆ ನೇಪಾಳದ ಹಿಮಾಲಯ ಪ್ರದೇಶಗಳಲ್ಲಿ ಸುರಿದ ಭಾರಿ ಮಳೆ ಮತ್ತು ಪ್ರವಾಹದಿಂದಾಗಿ ನದಿ ಉಕ್ಕಿ ಹರಿಯುತ್ತಿದ್ದು, ನೇಪಾಳದಿಂದಲೇ ಈ ಮೃತದೇಹಗಳು ಕೊಚ್ಚಿಕೊಂಡು ಬಂದಿರಬಹುದು ಎಂದು ಪೊಲೀಸರು ಮತ್ತು ಸ್ಥಳೀಯ ಆಡಳಿತ ಶಂಕಿಸಿದೆ.
ಮಾಹಿತಿ ತಿಳಿದ ತಕ್ಷಣವೇ ಪೊಲೀಸ್ ಮತ್ತು ಜಿಲ್ಲಾಡಳಿತದ ತಂಡಗಳು ಸ್ಥಳಕ್ಕೆ ಧಾವಿಸಿ ಮೃತದೇಹಗಳನ್ನು ನದಿಯಿಂದ ಹೊರತೆಗೆದಿವೆ. ಮೃತರ ಗುರುತು ಪತ್ತೆ ಹಚ್ಚಲು ಮತ್ತು ಮರಣೋತ್ತರ ಪರೀಕ್ಷೆಗೆ ಕಳುಹಿಸಲು ಕ್ರಮ ಕೈಗೊಳ್ಳಲಾಗಿದೆ.
ಸ್ಥಳೀಯರಿಗೆ ಎಚ್ಚರಿಕೆ: ಗಂಡಕ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿರುವುದರಿಂದ ಮತ್ತು ಪ್ರವಾಹದ ಪರಿಸ್ಥಿತಿ ಇರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಗ್ರಾಮಸ್ಥರು ಜಾಗರೂಕರಾಗಿರಲು ಮತ್ತು ನದಿಗೆ ಇಳಿಯದಂತೆ ಆಡಳಿತ ಸೂಚಿಸಿದೆ.
ಇದನ್ನೂ ಓದಿ: ನೇಪಾಳ ಪ್ರವಾಹ: ಗುರುತು ಸಿಗದ, ವಾರಸುದಾರರಿಲ್ಲದ ಸಂತ್ರಸ್ತರ ಸಮಾಧಿ, ಆಮೇಲೆ ಕುಟುಂಬದವರು ಬಂದ್ರೆ ಏನು ಮಾಡ್ತಾರೆ?
ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹ ದುರಂತ ಘಟನೆಯಲ್ಲಿ 700ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಎರಡು ಸಾವಿರಕ್ಕೂ ಹೆಚ್ಚು ಮಂದಿ ನಾಪತ್ತೆಯಾಗಿದ್ದಾರೆ. ಸಾವನ್ನಪ್ಪಿದವರಲ್ಲಿ ಬಹಳಷ್ಟು ಭಾರತೀಯರೂ ಇದ್ದಾರೆ. ಸದ್ಗುರು ಜಗ್ಗಿ ವಾಸುದೇವ್ ಅವರ ಈಶ ಫೌಂಡೇಶನ್ನ ಕಾರ್ಯಕರ್ತರು, ಭಕ್ತರು ಸಾವನ್ನಪ್ಪಿದವರ ಪೈಕಿ ಇದ್ದಾರೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ




