ನೇಪಾಳ ಪ್ರವಾಹ: ಗುರುತು ಸಿಗದ, ವಾರಸುದಾರರಿಲ್ಲದ ಸಂತ್ರಸ್ತರ ಸಮಾಧಿ, ಆಮೇಲೆ ಕುಟುಂಬದವರು ಬಂದ್ರೆ ಏನು ಮಾಡ್ತಾರೆ?
ನೇಪಾಳ ಪ್ರವಾಹದಲ್ಲಿ ಗುರುತು ಸಿಗದ ಶವಗಳನ್ನು ಸಾಮೂಹಿಕವಾಗಿ ಸಮಾಧಿ ಮಾಡಲು ನಿರ್ಧರಿಸಲಾಗಿದೆ. ಶವಾಗಾರಗಳಲ್ಲಿ ಜಾಗದ ಕೊರತೆ ಹಾಗೂ ರೋಗ ಹರಡುವ ಭೀತಿ ಇದರ ಹಿಂದಿದೆ. ಭವಿಷ್ಯದಲ್ಲಿ ಕುಟುಂಬಸ್ಥರು ಪತ್ತೆಯಾದಲ್ಲಿ, ಮೃತದೇಹಗಳನ್ನು ಗುರುತಿಸಲು ಡಿಎನ್‌ಎ (DNA) ಪ್ರೊಫೈಲಿಂಗ್ ಮತ್ತು ಜಿಯೋ-ಟ್ಯಾಗಿಂಗ್ ವಿಧಾನ ಬಳಸಲಾಗುತ್ತಿದೆ. ಪ್ರತಿಯೊಂದು ಶವಕ್ಕೂ ವಿಶಿಷ್ಟ ಗುರುತಿನ ಸಂಖ್ಯೆ ನೀಡಿ, ಫೋಟೋ, ಡಿಎನ್‌ಎ ಮಾದರಿ ಸಂಗ್ರಹಿಸಿ ನಂತರ ವೈಜ್ಞಾನಿಕವಾಗಿ ಸಮಾಧಿ ಮಾಡಲಾಗುತ್ತದೆ.

ಕಠ್ಮಂಡು, ಆಗಸ್ಟ್ 30: ನೇಪಾಳದಲ್ಲಿ ಸಂಭವಿಸಿದ ವಿನಾಶಕಾರಿ ಪ್ರವಾಹ(Flood)ದಲ್ಲಿ ಮೃತಪಟ್ಟಿರುವ, ಇದುವರೆಗೆ ವಾರಸುದಾರರಿಲ್ಲದ ಹಾಗೂ ಗುರುತಿಸಲಾಗದ ಸ್ಥಿತಿಯಲ್ಲಿರುವ ಮೃತದೇಹಗಳನ್ನು ಸಮಾಧಿ ಮಾಡಲು ನೇಪಾಳ ಸರ್ಕಾರ ನಿರ್ಧರಿಸಿದೆ. ಶವಾಗಾರಗಳಲ್ಲಿ ಸ್ಥಳಾವಕಾಶದ ಕೊರತೆ, ಮೃತದೇಹಗಳು ಕೊಳೆಯುತ್ತಿರುವುದು ಮತ್ತು ಸಾಂಕ್ರಾಮಿಕ ರೋಗ ಹರಡುವ ಭೀತಿಯಿಂದ ಈ ಕ್ರಮ ಕೈಗೊಳ್ಳಲಾಗಿದ್ದು, ಭವಿಷ್ಯದಲ್ಲಿ ಕುಟುಂಬಸ್ಥರು ಪತ್ತೆಯಾದಾಗ ಶವಗಳನ್ನು ಗುರುತಿಸಿ ಹೊರತೆಗೆಯಲು ವೈಜ್ಞಾನಿಕ ಡಿಎನ್‌ಎ ಪ್ರೊಫೈಲಿಂಗ್ ಹಾಗೂ ಜಿಯೋ-ಟ್ಯಾಗಿಂಗ್ ಪದ್ಧತಿಯನ್ನು ಅಳವಡಿಸಿಕೊಳ್ಳಲಾಗಿದೆ.
ಸಮಾಧಿ ಪ್ರಕ್ರಿಯೆ ಮತ್ತು ವೈಜ್ಞಾನಿಕ ನಿರ್ವಹಣೆಯ ವಿಧಾನ
ಪ್ರತಿ ಮೃತದೇಹವನ್ನು ಸಮಾಧಿ ಮಾಡುವ ಮುನ್ನ ಅದರ ಡಿಎನ್‌ಎ ಮಾದರಿ, ಫೋಟೋ ಮತ್ತು ಗುರುತುಗಳನ್ನು ಸಂಗ್ರಹಿಸಲಾಗುತ್ತಿದೆ. ಪ್ರತಿಯೊಂದು ದೇಹಕ್ಕೆ ಪ್ರತ್ಯೇಕ ಯುನಿಕ್ ಐಡೆಂಟಿಫಿಕೇಶನ್ ನಂಬರ್ (Unique ID) ನೀಡಲಾಗುತ್ತಿದೆ. ಭವಿಷ್ಯದಲ್ಲಿ ಸುಲಭವಾಗಿ ಹೊರತೆಗೆಯಲು (Exhumation) ಅನುಕೂಲವಾಗುವಂತೆ 1.5ಮೀಟರ್ ಆಳ ಮತ್ತು ಶವಗಳ ನಡುವೆ 40 ಸೆಂ.ಮೀ ಅಂತರವಿರುವಂತೆ ಪ್ರತ್ಯೇಕ ಹೊಂಡಗಳನ್ನು ಅಗೆಯಲಾಗುತ್ತಿದೆ.
ಶವವನ್ನು ಐಡಿ ನಂಬರ್ ಇರುವ ಬ್ಯಾಗ್‌ನಲ್ಲಿರಿಸಿ, ಸಮಾಧಿಯ ಮೇಲೆ ಸಂಖ್ಯೆಯುಳ್ಳ ಕಾಂಕ್ರೀಟ್ ಫಲಕ ಅಳವಡಿಸಲಾಗುತ್ತದೆ. ಜೊತೆಗೆ ಇಡೀ ಸ್ಥಳವನ್ನು ಜಿಪಿಎಸ್ (GPS) ಮೂಲಕ ಜಿಯೋ-ಟ್ಯಾಗ್ ಮಾಡಲಾಗುತ್ತಿದೆ.
ಮತ್ತಷ್ಟು ಓದಿ: ಭೋಟೆ ಕೋಶಿ ನದಿಯ ಹರಿವು ಹೆಚ್ಚಾಗುತ್ತಿದ್ದಂತೆ ನೇಪಾಳದಲ್ಲಿ ಕಟ್ಟೆಚ್ಚರ, ಮತ್ತೆ ಪ್ರವಾಹದ ಭೀತಿ
ನಂತರ ಕುಟುಂಬಸ್ಥರು ಮೃತದೇಹವನ್ನು ಪಡೆಯುವುದು ಹೇಗೆ?
ಕುಟುಂಬಸ್ಥರಿಂದ ಸ್ಯಾಂಪಲ್: ನಾಪತ್ತೆಯಾದ ತಮ್ಮವರನ್ನು ಹುಡುಕುತ್ತಿರುವ ಕುಟುಂಬಸ್ಥರು ಗೊತ್ತುಪಡಿಸಿದ ಆಸ್ಪತ್ರೆಗಳಲ್ಲಿ ರಕ್ತ,ಡಿಎನ್‌ಎ ಮಾದರಿಗಳನ್ನು ನೀಡಬೇಕಾಗುತ್ತದೆ. ಕುಟುಂಬಸ್ಥರ ಡಿಎನ್‌ಎ ಮತ್ತು ಈ ಮೊದಲೇ ಸಂಗ್ರಹಿಸಿಟ್ಟ ಶವದ ಡಿಎನ್‌ಎ ಹೊಂದಾಣಿಕೆಯಾದರೆ, ಆ ಸಂಬಂಧಿತ ವಿಶಿಷ್ಟ ಐಡಿ ನಂಬರ್ ದಾಖಲೆಯನ್ನು ಪರಿಶೀಲಿಸಲಾಗುತ್ತದೆ. ದಾಖಲೆಯ ಜಿಯೋ-ಟ್ಯಾಗ್ ಸ್ಥಳವನ್ನು ಗುರುತಿಸಿ, ಸಮಾಧಿಯಿಂದ ಮೃತದೇಹವನ್ನು ಹೊರತೆಗೆದು ವಿಧಿವಿಜ್ಞಾನ ನಿಯಮಗಳ ಪ್ರಕಾರ ಕುಟುಂಬಸ್ಥರಿಗೆ ಗೌರವಯುತವಾಗಿ ಹಸ್ತಾಂತರಿಸಲಾಗುತ್ತದೆ.
ಚಿತ್ವಾನ್‌ನಲ್ಲಿ ಭೀಕರ ಪರಿಸ್ಥಿತಿ: ದುರಂತದಲ್ಲಿ ಈವರೆಗೆ 675 ಶವಗಳು ಪತ್ತೆಯಾಗಿದ್ದು, ಭಾರತದ ಗಡಿಗೆ ಹೊಂದಿಕೊಂಡಿರುವ ಚಿತ್ವಾನ್ ಜಿಲ್ಲೆಯೊಂದರಲ್ಲೇ ಅತಿ ಹೆಚ್ಚು 233 ಮೃತದೇಹಗಳು ಸಿಕ್ಕಿವೆ. ಶವಾಗಾರಗಳು ಭರ್ತಿಯಾಗಿದ್ದರಿಂದ ಸಾಂಕ್ರಾಮಿಕ ರೋಗ ತಡೆಯಲು ಈ ತುರ್ತು ನಿರ್ಧಾರ ಅನಿವಾರ್ಯವಾಗಿದೆ.
ಆನ್‌ಲೈನ್ ಪೋರ್ಟಲ್: ಗುರುತಿಸಲಾಗದ ಶವಗಳ ವಿವರಗಳು ಮತ್ತು ಬಟ್ಟೆ,ವಸ್ತುಗಳ ಫೋಟೋಗಳನ್ನು ನೇಪಾಳ ಪೊಲೀಸರ ಅಧಿಕೃತ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲಾಗಿದೆ. ಭಾರತೀಯರು ಹಾಗೂ ವಿದೇಶಿ ಪ್ರವಾಸಿಗರು ಸೇರಿದಂತೆ ಒಟ್ಟು 2,426 ಜನರು ಇನ್ನೂ ನಾಪತ್ತೆಯಾಗಿದ್ದಾರೆ.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




