
ಕಠ್ಮಂಡು, ನವೆಂಬರ್ 6: ಪ್ರೋಟೋಕಾಲ್ (ರಾಜತಾಂತ್ರಿಕ ಶಿಷ್ಟಾಚಾರ) ನೆಪವೊಡ್ಡಿ ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ಭೇಟಿಯಾಗಲು ನಿರಾಕರಿಸಿದ್ದ ನೇಪಾಳ ಪ್ರಧಾನಮಂತ್ರಿ ಬಾಲೆನ್ ಶಾ (ಬಾಲೇಂದ್ರ ಶಾ), ಇದೀಗ ತಮ್ಮ ನಿಲುವನ್ನು ಬದಲಿಸಿಕೊಂಡು ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರೊಂದಿಗೆ ಕಠ್ಮಂಡುವಿನಲ್ಲಿ ಉನ್ನತ ಮಟ್ಟದ ದ್ವಿಪಕ್ಷೀಯ ಸಭೆ ನಡೆಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಅವರ ಆಹ್ವಾನದ ಮೇರೆಗೆ ಬಾಲೆನ್ ಶಾ ಶೀಘ್ರದಲ್ಲೇ ಭಾರತಕ್ಕೆ ಅಧಿಕೃತ ಭೇಟಿ ನೀಡಲಿದ್ದು, ಈ ಭೇಟಿಯ ಸಿದ್ಧತೆ ಮತ್ತು ರಾಜತಾಂತ್ರಿಕ ಬಾಂಧವ್ಯ ಮರುಸ್ಥಾಪನೆಯ ಭಾಗವಾಗಿ ಈ ಮಹತ್ವದ ಸಭೆ ನಡೆದಿದೆ.
ಸುಮಾರು 6 ತಿಂಗಳ ಹಿಂದೆ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ನೇಪಾಳಕ್ಕೆ ಭೇಟಿ ನೀಡಬೇಕಿತ್ತು. ಆದರೆ, ತಮ್ಮ ಸಮಾನ ದರ್ಜೆಯ ಅಧಿಕಾರಿಗಳಲ್ಲದ ಹೊರದೇಶದ ಪ್ರತಿನಿಧಿಗಳನ್ನು ಪ್ರತ್ಯೇಕವಾಗಿ ಭೇಟಿಯಾಗುವುದಿಲ್ಲ ಎಂಬ ನಿಲುವನ್ನು ಪುನರುಚ್ಛರಿಸಿದ್ದ ನೇಪಾಳದ ಪ್ರಧಾನಿ ಬಾಲೆನ್ ಶಾ, ವಿಕ್ರಮ್ ಮಿಸ್ರಿ ಅವರೊಂದಿಗಿನ ಭೇಟಿಗೆ ನಿರಾಕರಿಸಿದ್ದರು. ಇದರಿಂದಾಗಿ ಅಂದು ಭಾರತೀಯ ಅಧಿಕಾರಿಯ ನೇಪಾಳ ಭೇಟಿ ರದ್ದಾಗಿತ್ತು.
ಇದನ್ನೂ ಓದಿ: ಅಧಿಕಾರಕ್ಕೇರಿದ 150 ದಿನಗಳಲ್ಲೇ ರಾಜಕೀಯ ವರ್ಚಸ್ಸು ಕಳೆದುಕೊಂಡ ನೇಪಾಳದ ಪ್ರಧಾನಿ ಬಾಲೆನ್ ಶಾ
ಬದಲಾದ ನಿಲುವು ಮತ್ತು ಸಭೆ:
ಕಠ್ಮಂಡುವಿನಲ್ಲಿ ನಡೆದ ಇತ್ತೀಚಿನ ಸಭೆಯಲ್ಲಿ ಪ್ರಧಾನಿ ಬಾಲೆನ್ ಶಾ ಅವರು ವಿಕ್ರಮ್ ಮಿಸ್ರಿ ಅವರನ್ನು ಆಹ್ವಾನಿಸಿ ಮಾತುಕತೆ ನಡೆಸಿದರು. ಈ ಸಭೆಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಶುಭಾಶಯ ಸಂದೇಶವನ್ನು ಮಿಸ್ರಿ ಅವರು ನೇಪಾಳ ಪ್ರಧಾನಿಗೆ ತಲುಪಿಸಿದರು. ನವೆಂಬರ್ ಕೊನೆಯಲ್ಲಿ ಪ್ರಧಾನಿ ಬಾಲೆನ್ ಶಾ ಭಾರತಕ್ಕೆ ಕೈಗೊಳ್ಳಲಿರುವ ಮೊದಲ ಅಧಿಕೃತ ಭೇಟಿಯ ಕಾರ್ಯಸೂಚಿ ಮತ್ತು ಆದ್ಯತೆಗಳ ಕುರಿತು ಎರಡೂ ಕಡೆಯಿಂದ ಚರ್ಚಿಸಲಾಯಿತು.
ನವೆಂಬರ್ 4ರಂದು ವಿಕ್ರಮ್ ಮಿಸ್ರಿ ಮತ್ತು ರಾಯ್ ನೇತೃತ್ವದಲ್ಲಿ ನಡೆದ ನಿಯೋಗ ಮಟ್ಟದ ಮಾತುಕತೆಯಲ್ಲಿ, ವಿವಿಧ ಕ್ಷೇತ್ರಗಳಲ್ಲಿ ಪ್ರಸ್ತುತ ನಡೆಯುತ್ತಿರುವ ಯೋಜನೆಗಳ ಪರಿಶೀಲನೆ ನಡೆಸಲಾಯಿತು. ಜೊತೆಗೆ ಭಾರತ-ನೇಪಾಳ ಸಂಸದೀಯ ಮೈತ್ರಿ ಗುಂಪಿನ ಸದಸ್ಯರು ಹಾಗೂ ಅಂತಾರಾಷ್ಟ್ರೀಯ ಸಂಬಂಧಗಳ ಸಂಸದೀಯ ಸಮಿತಿಯ ಪ್ರತಿನಿಧಿಗಳೊಂದಿಗೂ ಮಿಸ್ರಿ ಸಂವಾದ ನಡೆಸಿದರು.
ಇದನ್ನೂ ಓದಿ: ನೇಪಾಳದ ಪ್ರವಾಹದಲ್ಲಿ ಸಾವನ್ನಪ್ಪಿದವರ ಸಂಖ್ಯೆ 1,259ಕ್ಕೆ ಏರಿಕೆ, 5 ಸಾವಿರ ಜನರಿಗಾಗಿ ಹುಡುಕಾಟ
ಇತ್ತೀಚೆಗೆ ನೇಪಾಳದಲ್ಲಿ ಸಂಭವಿಸಿದ ರಸುವಾ-ಭೋಟೇಕೋಶಿ ಪ್ರವಾಹದ ಸಮಯದಲ್ಲಿ ಭಾರತ ನೀಡಿದ ತಕ್ಷಣದ ಮಾನವೀಯ ಹಾಗೂ ತಾಂತ್ರಿಕ ನೆರವಿಗಾಗಿ ನೇಪಾಳ ಸರ್ಕಾರವು ಭಾರತಕ್ಕೆ ಕೃತಜ್ಞತೆ ಸಲ್ಲಿಸಿತು. ವ್ಯಾಪಾರ, ಮೂಲಸೌಕರ್ಯ, ಜಲವಿದ್ಯುತ್, ಗಡಿ ನಿರ್ವಹಣೆ ಹಾಗೂ ಇಂಧನ ಪೂರೈಕೆಯಂತಹ ಸಾಂಪ್ರದಾಯಿಕ ಕ್ಷೇತ್ರಗಳ ಜೊತೆಗೆ, ಸ್ಟಾರ್ಟ್ಅಪ್ಗಳು, ಡಿಜಿಟಲ್ ಸಂಪರ್ಕ, ಕೃತಕ ಬುದ್ಧಿಮತ್ತೆ (ಎಐ) ಮತ್ತು ಕ್ರೀಡಾ ಕ್ಷೇತ್ರದಲ್ಲೂ ಪರಸ್ಪರ ಸಹಕಾರ ವಿಸ್ತರಿಸಲು ಎರಡೂ ದೇಶಗಳು ಒಪ್ಪಿಕೊಂಡಿವೆ.
ಈ ಮಾತುಕತೆ ವೇಳೆ ಇತ್ತೀಚೆಗೆ ನೇಪಾಳದ ರಸುವಾ-ಭೋಟೇಕೋಶಿ ಪ್ರದೇಶದಲ್ಲಿ ಸಂಭವಿಸಿದ ಭಾರಿ ಪ್ರವಾಹದ ಸಮಯದಲ್ಲಿ ಭಾರತ ನೀಡಿದ ತಕ್ಷಣದ ಪರಿಹಾರ ಸಾಮಗ್ರಿ ಮತ್ತು ರಕ್ಷಣಾ ಕಾರ್ಯಾಚರಣೆಗೆ ಪ್ರಧಾನಿ ಬಾಲೆನ್ ಶಾ ಕೃತಜ್ಞತೆ ಸಲ್ಲಿಸಿದರು.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ