ನಿಜ್ಜರ್ ಹತ್ಯೆ, ಭಾರತಕ್ಕೆ ಕ್ಲೀನ್ ಚಿಟ್, ಸಂಪೂರ್ಣ ಚಿತ್ರಣವನ್ನೇ ಬದಲಿಸಿದ ಆಪರೇಷನ್ ಹಾರ್ಡ್ ಬಾಲ್

ಅಮೆರಿಕ, ಕೆನಡಾ, ಯುರೋಪ್ ಕಾನೂನು ಸಂಸ್ಥೆಗಳು ನಡೆಸಿದ 'ಆಪರೇಷನ್ ಹಾರ್ಡ್‌ಬಾಲ್' ಕಾರ್ಯಾಚರಣೆ ಮೂಲಕ ಗ್ಯಾಂಗ್‌ಸ್ಟರ್ ಲಾರೆನ್ಸ್ ಬಿಷ್ಣೋಯ್‌ನ ಜಾಗತಿಕ ಅಪರಾಧ ಜಾಲಕ್ಕೆ ಭಾರಿ ಹೊಡೆತ ನೀಡಲಾಗಿದೆ. ಈ ಕಾರ್ಯಾಚರಣೆಯಲ್ಲಿ 24 ಶೂಟರ್‌ಗಳು ಬಂಧಿತರಾಗಿದ್ದಾರೆ. ಜೈಲಿನಿಂದಲೇ ಕಾರ್ಯನಿರ್ವಹಿಸುತ್ತಿದ್ದ ಬಿಷ್ಣೋಯ್, ಖಲಿಸ್ತಾನಿ ನಿಜ್ಜರ್ ಹತ್ಯೆಯಲ್ಲೂ ಭಾಗಿಯಾಗಿದ್ದಾನೆ ಎಂದು ಅಮೆರಿಕದ ನ್ಯಾಯಾಲಯದಲ್ಲಿ ಚಾರ್ಜ್‌ಶೀಟ್ ದಾಖಲಾಗಿದೆ. ಇದು ಭಾರತದ ನಿಲುವಿಗೆ ಬಲ ನೀಡಿದೆ.

ನಿಜ್ಜರ್ ಹತ್ಯೆ, ಭಾರತಕ್ಕೆ ಕ್ಲೀನ್ ಚಿಟ್, ಸಂಪೂರ್ಣ ಚಿತ್ರಣವನ್ನೇ ಬದಲಿಸಿದ ಆಪರೇಷನ್ ಹಾರ್ಡ್ ಬಾಲ್
ಲಾರೆನ್ಸ್

Updated on: Jul 08, 2026 | 12:35 PM

ವಾಷಿಂಗ್ಟನ್, ಜುಲೈ 08: ಭಾರತದ ಜೈಲಿನಲ್ಲಿ ಕುಳಿತು ಜಾಗತಿಕ ಅಪರಾಧ ಜಾಲವನ್ನು ನಿರ್ವಹಿಸುತ್ತಿದ್ದ ಗ್ಯಾಂಗ್​ಸ್ಟರ್ ಲಾರೆನ್ಸ್​ ಬಿಷ್ಣೋಯ್(Lawrence Bishnoi) ಮತ್ತು ಆತನ ಸಹಚರರಿಗೆ ಅಮೆರಿಕ ಭಾರಿ ಹೊಡೆತ ನೀಡಿದೆ. ಅಮರಿಕ, ಕೆನಡಾ ಮತ್ತು ಯುರೋಪ್​ನ ಕಾನೂನು ಜಾರಿ ಸಂಸ್ಥೆಗಳು ಜಂಟಿಯಾಗಿ ನಡೆಸಿದ ಆಪರೇಷನ್ ಹಾರ್ಡ್​ ಬಾಲ್ ಎಂಬ ಜಾಗತಿಕ ಕಾರ್ಯಾಚರಣೆಯಲ್ಲಿ ಬಿಷ್ಣೋಯ್ ಸಿಂಡಿಕೇಟ್​​ನ 24 ಅಂತಾರಾಷ್ಟ್ರೀಯ ಶೂಟರ್​ಗಳು ಹಾಗೂ ಅಪರಾಧಿಗಳನ್ನು ಬಂಧಿಸಲಾಗಿದೆ.

2023 ರಲ್ಲಿ ಕೆನಡಾದಲ್ಲಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯಾದಾಗ, ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ನಿಜ್ಜರ್ ಹತ್ಯೆಯ ಹಿಂದೆ ಭಾರತ ಸರ್ಕಾರದ ಏಜೆಂಟರ ಕೈವಾಡವಿದೆ ಎಂದು ಕೆನಡಾ ವಾದಿಸಿತ್ತು.

ಬಿಷ್ಣೋಯ್ ಗ್ಯಾಂಗ್ ಬಳಕೆ: ಭಾರತ ಸರ್ಕಾರವು ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ಅನ್ನು ಬಳಸಿಕೊಂಡು ವಿದೇಶದಲ್ಲಿರುವ ಖಲಿಸ್ತಾನಿ ಮುಖಂಡರನ್ನು ಹತ್ಯೆ ಮಾಡಿಸುತ್ತಿದೆ ಎಂದು ಕೆನಡಾ ಆರೋಪಿಸಿತ್ತು. ಭಾರತ ಸರ್ಕಾರವು ಈ ಆರೋಪಗಳನ್ನು ಸಂಪೂರ್ಣವಾಗಿ ತಿರಸ್ಕರಿಸಿತ್ತು. ಇದು ಯಾವುದೇ ಆಧಾರವಿಲ್ಲದ, ರಾಜಕೀಯ ಪ್ರೇರಿತ ಮತ್ತು ಅಸಂಬದ್ಧ ಆರೋಪ ಎಂದು ಭಾರತ ಸ್ಪಷ್ಟಪಡಿಸಿತ್ತು ಹಾಗೂ ಇದಕ್ಕೆ ತಕ್ಕ ಸಾಕ್ಷಿಗಳನ್ನು ನೀಡುವಂತೆ ಕೆನಡಾಕ್ಕೆ ಸವಾಲು ಹಾಕಿತ್ತು.

ಅಮೆರಿಕದ ತನಿಖೆ ಬಯಲಿಗೆಳೆದ ಸತ್ಯವೇನು?
ಅಮೆರಿಕದ ಎಫ್‌ಬಿಐ (FBI) ನೇತೃತ್ವದಲ್ಲಿ ಜಾಗತಿಕ ಏಜೆನ್ಸಿಗಳು ಜಂಟಿಯಾಗಿ ನಡೆಸಿದ ‘ಆಪರೇಷನ್ ಹಾರ್ಡ್ ಬಾಲ್’ ತನಿಖೆಯ ವರದಿ ಈಗ ಸಂಪೂರ್ಣ ಚಿತ್ರಣವನ್ನು ಬದಲಾಯಿಸಿದೆ.

ಭಾರತ ಸರ್ಕಾರಕ್ಕೆ ಕ್ಲೀನ್ ಚೀಟ್: ಅಮೆರಿಕದ ಫೆಡರಲ್ ಕೋರ್ಟ್‌ನಲ್ಲಿ ಸಲ್ಲಿಕೆಯಾಗಿರುವ ಅಧಿಕೃತ ಆರೋಪಪಟ್ಟಿಯಲ್ಲಿ , ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಯಾವುದೇ ಪಾತ್ರ ಅಥವಾ ಭಾಗೀದಾರಿಕೆ ಇಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಅಮೆರಿಕದ ಪ್ರಾಸಿಕ್ಯೂಟರ್‌ಗಳು ಎಲ್ಲೂ ಭಾರತ ಸರ್ಕಾರದ ಹೆಸರನ್ನು ಉಲ್ಲೇಖಿಸಿಲ್ಲ.

ಇದೇ ವೇಳೆ 2023ರಲ್ಲಿ ಕೆನಡಾದ ಬ್ರಿಟಿಷ್ ಕೊಲಂಬಿಯಾದಲ್ಲಿ ನಡೆದಿದ್ದ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿಂದೆ ಲಾರೆನ್ಸ್​ ಬಿಷ್ಣೋಯ್ ಮತ್ತು ಆತನ ಆಪ್ತ ಗೋಲ್ಡಿ ಬ್ರಾರ್ ಕೈವಾಡವಿದೆ ಎಂದು ಅಮೆರಿಕದ ಫೆಡರಲ್ ಕೋರ್ಟ್​ನಲ್ಲಿ ಚಾರ್ಜ್​ಶೀಟ್ ಸಲ್ಲಿಕೆಯಾಗಿದೆ.

ಏನಿದು ‘ಆಪರೇಷನ್ ಹಾರ್ಡ್ ಬಾಲ್’
ಅಮೆರಿಕದ ನ್ಯಾಯಾಂಗ ಇಲಾಖೆ (DoJ) ಪ್ರಕಾರ, ಭಾರತ ಮೂಲದ ಅಪರಾಧ ಜಾಲಗಳು ಅಮೆರಿಕ, ಕೆನಡಾ, ಯುಕೆ, ಯುರೋಪ್ ಹಾಗೂ ಆಸ್ಟ್ರೇಲಿಯಾದಲ್ಲಿ ನೆಲೆಸಿರುವ ಭಾರತೀಯ ಉದ್ಯಮಿಗಳನ್ನು ಗುರಿಯಾಗಿಸಿಕೊಂಡು ಕೊಲೆ, ಸುಲಿಗೆ, ಮತ್ತು ಮಾದಕವಸ್ತು ಕಳ್ಳಸಾಗಣೆ ನಡೆಸುತ್ತಿದ್ದವು. ಇದನ್ನು ಮಟ್ಟಹಾಕಲು ವರ್ಷಗಳ ಕಾಲ ರಹಸ್ಯ ತನಿಖೆ ನಡೆಸಿ ಈ ಕಾರ್ಯಾಚರಣೆ ರೂಪಿಸಲಾಗಿತ್ತು.

37 ಜನರ ವಿರುದ್ಧ ಚಾರ್ಜ್​ಶೀಟ್: ಅಮೆರಿಕದ ನ್ಯಾಯಾಲಯದಲ್ಲಿ ಬಿಷ್ಣೋಯ್ ಸೇರಿದಂತೆ ಒಟ್ಟು 37 ಆರೋಪಿಗಳ ವಿರುದ್ಧ ಮೂರು ಪ್ರತ್ಯೇಕ ದೋಷಾರೋಪಣೆ ಪಟ್ಟಿಗಳನ್ನು ದಾಖಲಿಸಲಾಗಿದೆ.

ಮತ್ತಷ್ಟು ಓದಿ: ಹತ್ತು ವರ್ಷಗಳಿಂದ ಜೈಲಿಂದಲೇ ಎಲ್ಲಾ ‘ಆಟ’ ಆಡುತ್ತಿರುವ ಲಾರೆನ್ಸ್ ಬಿಷ್ಣೋಯ್ ಮತ್ತವನ ಗ್ಯಾಂಗ್​ನ ಅಸಲಿಯತ್ತೇನು?

ಕಾರ್ಯಾಚರಣೆಯ ಭಾಗವಾಗಿ ಕ್ಯಾಲಿಫೋರ್ನಿಯಾದಲ್ಲಿ 11 ಜನ ಸೇರಿದಂತೆ ಅಮೆರಿಕದಲ್ಲಿ 13, ಕೆನಡಾದಲ್ಲಿ 3, ಸ್ಪೇನ್‌ನಲ್ಲಿ ಒಬ್ಬನನ್ನು ಬಂಧಿಸಲಾಗಿದೆ. 7 ಜನ ಈಗಾಗಲೇ ವಿವಿಧ ಜೈಲುಗಳಲ್ಲಿದ್ದಾರೆ. ಇನ್ನುಳಿದ 10 ಪರಾರಿಯಾದ ಉಗ್ರರಿಗಾಗಿ ತೀವ್ರ ಹುಡುಕಾಟ ಮುಂದುವರೆದಿದೆ.

ಈ ದಾಳಿಗಳ ವೇಳೆ ಬರೋಬ್ಬರಿ 1,000 ಕಿಲೋ ಕೊಕೇನ್, ಹೆರಾಯಿನ್, ಲಕ್ಷಾಂತರ ನಗದು ಹಣ ಮತ್ತು ಮಾರಕಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಲಾರೆನ್ಸ್ ಬಿಷ್ಣೋಯ್ ಸದ್ಯ ಭಾರತದ ಹೈ-ಸೆಕ್ಯುರಿಟಿ ಜೈಲಿನಲ್ಲಿದ್ದರೂ, ಕಳ್ಳಸಾಗಣೆ ಮಾಡಲಾದ ಮೊಬೈಲ್ ಫೋನ್‌ಗಳು ಮತ್ತು ಇಂಟರ್ನೆಟ್ ಕರೆಗಳ (VoIP) ಮೂಲಕ ವಿದೇಶಿ ಅಪರಾಧಗಳನ್ನು ನಿಯಂತ್ರಿಸುತ್ತಿದ್ದ ಎಂದು ಅಮೆರಿಕದ ತನಿಖಾಧಿಕಾರಿಗಳು ಬಯಲಿಗೆಳೆದಿದ್ದಾರೆ.

ಗೋಲ್ಡಿ ಬ್ರಾರ್ (ಉತ್ತರ ಅಮೆರಿಕ): ಕೆನಡಾ ಮತ್ತು ಅಮೆರಿಕದಲ್ಲಿ ಬಿಷ್ಣೋಯ್ ಗ್ಯಾಂಗ್‌ನ ಮುಖ್ಯ ಕಮಾಂಡರ್ ಆಗಿ ಕಾರ್ಯಾಚರಣೆ ನಡೆಸುತ್ತಿದ್ದಾನೆ.

ರೋಹಿತ್ ಗೋದಾರ (ಯುರೋಪ್): ಯುರೋಪಿಯನ್ ದೇಶಗಳಲ್ಲಿ ಕುಳಿತು ಶಸ್ತ್ರಾಸ್ತ್ರ ಹಾಗೂ ಹತ್ಯೆಗಳ ಸ್ಕೆಚ್ ಹಾಕುತ್ತಿದ್ದಾನೆ.

ಸುಖ್‌ರಾಜ್ ಸಿಂಗ್ ಕಾಂಗ್ (ಭಾರತ): ಗ್ಯಾಂಗ್‌ನ ಭಾರತದ ಆಪರೇಷನ್‌ಗಳನ್ನು ನಿರ್ವಹಿಸುತ್ತಿದ್ದ.

ಸಾಮಾಜಿಕ ಮಾಧ್ಯಮದಲ್ಲಿ ‘ದೇಶಭಕ್ತಿ’ಯ ಮುಖವಾಡ
ಕೊಲೆ, ಅಪಹರಣ, ಮತ್ತು ಮಾನವ ಕಳ್ಳಸಾಗಣೆ ದಂಧೆ ನಡೆಸುತ್ತಿದ್ದ ಲಾರೆನ್ಸ್ ಬಿಷ್ಣೋಯ್, ಸಾರ್ವಜನಿಕವಾಗಿ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ತಾನೊಬ್ಬ ದೇಶಭಕ್ತ, ರಾಷ್ಟ್ರೀಯವಾದಿ ಮತ್ತು ಧಾರ್ಮಿಕ ವ್ಯಕ್ತಿ ಎಂದು ಬಿಂಬಿಸಿಕೊಳ್ಳುತ್ತಿದ್ದ. ವಿದೇಶಗಳಲ್ಲಿರುವ ಭಾರತೀಯ ಯುವಕರನ್ನು ತನ್ನ ಗ್ಯಾಂಗ್‌ಗೆ ಸೆಳೆಯಲು ಬಿಷ್ಣೋಯ್ ಈ ಮುಖವಾಡವನ್ನು ಬಳಸಿಕೊಳ್ಳುತ್ತಿದ್ದ ಎಂದು ಅಮೆರಿಕದ ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.

ವಾಟ್ಸಾಪ್ ಮೂಲಕ 5 ಮಿಲಿಯನ್ ಡಾಲರ್ ಸುಲಿಗೆ, ನಟನ ಮನೆಗೆ ಗುಂಡು
ಬಿಷ್ಣೋಯ್ ಗ್ಯಾಂಗ್ ಅಮೆರಿಕದ ಲಾಸ್ ಏಂಜಲೀಸ್‌ನ ಪ್ರಮುಖ ಉದ್ಯಮಿಗಳಿಗೆ ಎನ್‌ಕ್ರಿಪ್ಟ್ ಮಾಡಿದ ವಾಟ್ಸಾಪ್ ಕರೆಗಳ ಮೂಲಕ ಬೆದರಿಕೆ ಹಾಕಿ ಬರೋಬ್ಬರಿ 40 ಕೋಟಿ ರೂಪಾಯಿ (5 ಮಿಲಿಯನ್ ಯುಎಸ್ ಡಾಲರ್) ಸುಲಿಗೆಗೆ ಬೇಡಿಕೆ ಇಟ್ಟಿತ್ತು. ಅಲ್ಲದೆ, 2023 ರ ನವೆಂಬರ್‌ನಲ್ಲಿ ಕೆನಡಾದಲ್ಲಿ ವಾಸಿಸುತ್ತಿದ್ದ ಪ್ರಮುಖ ಭಾರತೀಯ ನಟ ಮತ್ತು ಗಾಯಕನ ನಿವಾಸದ ಮೇಲೆ ಗುಂಡಿನ ದಾಳಿ ನಡೆಸಿ, ಯಾರೂ ನಮ್ಮಿಂದ ನಿಮ್ಮನ್ನು ರಕ್ಷಿಸಲು ಸಾಧ್ಯವಿಲ್ಲ ಎಂದು ಪಂಜಾಬಿ ಭಾಷೆಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಬೆದರಿಕೆ ಪೋಸ್ಟ್ ಹಾಕಿದ್ದನ್ನೂ ದೋಷಾರೋಪಣೆಯಲ್ಲಿ ಉಲ್ಲೇಖಿಸಲಾಗಿದೆ.

ಭಾರತ-ಕೆನಡಾ ಸಂಬಂಧದ ಮೇಲಿನ ಪರಿಣಾಮ
ಈ ಹಿಂದೆ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರು ನಿಜ್ಜರ್ ಹತ್ಯೆಯಲ್ಲಿ ಭಾರತ ಸರ್ಕಾರದ ಕೈವಾಡವಿದೆ ಎಂದು ಆರೋಪಿಸಿದ್ದರು. ಭಾರತವು ಇದನ್ನು ಅಸಂಬದ್ಧ ಮತ್ತು ರಾಜಕೀಯ ಪ್ರೇರಿತ ಎಂದು ತಳ್ಳಿಹಾಕಿತ್ತು. ಈಗ ಅಮೆರಿಕದ ತನಿಖೆಯಲ್ಲಿ ಈ ಹತ್ಯೆಯ ಹಿಂದೆ ಲಾರೆನ್ಸ್ ಬಿಷ್ಣೋಯ್ ಮತ್ತು ಗೋಲ್ಡಿ ಬ್ರಾರ್ ಅವರಂತಹ  ಇಂಟರ್​ನ್ಯಾಷನಲ್ ಗ್ಯಾಂಗ್‌ಸ್ಟರ್‌ಗಳ ಒಪ್ಪಂದ ಇರುವುದು ಸಾಬೀತಾಗುತ್ತಿರುವುದರಿಂದ, ಭಾರತದ ವಾದಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಬೆಂಬಲ ಸಿಕ್ಕಂತಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

ನಯನಾ ರಾಜೀವ್

ನಯನಾ ರಾಜೀವ್- ಮೂಲತಃ ಸಾಗರದ ಬಾಳೆಗೆರೆಯವಳು, ಹಿಂದಿಯಲ್ಲಿ ಎಂ.ಎ ಮಾಡಿದ್ದೇನೆ, ಮಾಧ್ಯಮದಲ್ಲಿ 9 ವರ್ಷಗಳ ಅನುಭವವಿದೆ, ಕನ್ನಡ ಪ್ರಭ ದಿನಪತ್ರಿಕೆಯಲ್ಲಿ 3 ವರ್ಷಗಳ ಕಾಲ ಕೆಲಸ ಮಾಡಿದ್ದೇನೆ, ಒನ್​ ಇಂಡಿಯಾ ವೆಬ್​ಸೈಟ್​ನಲ್ಲಿ ನಾಲ್ಕೂವರೆ ವರ್ಷ ಕೆಲಸ ನಿರ್ವಹಿಸಿದ್ದೇನೆ. ಡಿಜಿಟಲ್ ವಿಭಾಗದಲ್ಲಿ ಕಳೆದ 6 ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಟಿವಿ 9 ಕನ್ನಡ ಡಿಜಿಟಲ್​ನಲ್ಲಿ ಸೀನಿಯರ್ ಸಬ್​ ಎಡಿಟರ್ ಆಗಿ ಕಳೆದ ಒಂದೂವರೆ ವರ್ಷಗಳಿಂದ ಕೆಲಸ ಮಾಡುತ್ತಿದ್ದೇನೆ. ಆಸಕ್ತಿಕರ ಕ್ಷೇತ್ರ ಟ್ರೆಕಿಂಗ್, ಸಂಗೀತ

Read More
Loading...
Unable to load recommendations.
Follow Us