ಅಫ್ಘಾನ್ ಪತ್ರಕರ್ತೆಗೆ ಗಂಟಲು ಸೀಳುವ ಸನ್ನೆ: ವಿಶ್ವಸಂಸ್ಥೆಯಲ್ಲಿ ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್ ಅಸಭ್ಯ ವರ್ತನೆ
ನ್ಯೂಯಾರ್ಕ್‌ನ ವಿಶ್ವಸಂಸ್ಥೆ ಸಭೆಯಲ್ಲಿ ಪಾಕ್ ರಕ್ಷಣಾ ಸಚಿವ ಖವಾಜಾ ಆಸಿಫ್, ಅಫ್ಘಾನ್ ಮಹಿಳಾ ಪತ್ರಕರ್ತೆಯೊಬ್ಬರಿಗೆ ಗಂಟಲು ಸೀಳುವ ಬೆದರಿಕೆ ಸನ್ನೆ ಮಾಡಿದ್ದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ತಾಲಿಬಾನ್ ಆಡಳಿತದಲ್ಲಿ ಮಹಿಳೆಯರ ಹಕ್ಕುಗಳ ಕುರಿತು ಕೇಳಿದ ಪ್ರಶ್ನೆಗೆ ಸಚಿವರು ಅಸಭ್ಯವಾಗಿ ಪ್ರತಿಕ್ರಿಯಿಸಿ, ಅವರ ಬಟ್ಟೆಯ ಬಗ್ಗೆ ಟೀಕಿಸಿದರು. ಈ ಘಟನೆ ಪಾಕಿಸ್ತಾನದ ಸ್ತ್ರೀದ್ವೇಷಿ ಮನಸ್ಥಿತಿಯನ್ನು ಜಾಗತಿಕವಾಗಿ ಎತ್ತಿ ತೋರಿಸಿದೆ.

ನ್ಯೂಯಾರ್ಕ್, ಸೆಪ್ಟೆಂಬರ್ 29: ನ್ಯೂಯಾರ್ಕ್‌ನಲ್ಲಿ ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ (UNGA) ನೇಪಥ್ಯದಲ್ಲಿ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ ಅವರು ಅಫ್ಘಾನ್ ಪತ್ರಕರ್ತೆಯೊಬ್ಬರ ಪ್ರಶ್ನೆಗೆ ಅತ್ಯಂತ ಕೀಳುಮಟ್ಟದ ಹಾಗೂ ಬೆದರಿಕೆ ಹಾಕುವ ಸನ್ನೆ ಮೂಲಕ ಪ್ರತಿಕ್ರಿಯಿಸಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಗುರಿಯಾಗಿದೆ.
ವಿಶ್ವಸಂಸ್ಥೆಯ ಸಭಾಂಗಣದ ಹೊರಗೆ ಅಫ್ಘಾನ್ ಪತ್ರಕರ್ತೆಯೊಬ್ಬರು ರಕ್ಷಣಾ ಸಚಿವ ಖವಾಜಾ ಆಸಿಫ್ ಅವರನ್ನು ತಡೆದು, “ಪಾಕಿಸ್ತಾನವು ತಾಲಿಬಾನ್ ಅನ್ನು ಮೊದಲಿನಿಂದಲೂ ಮಿತ್ರನೆಂದು ಪರಿಗಣಿಸುತ್ತಾ ಬಂದಿದೆ. ಆದರೆ ಅದೇ ತಾಲಿಬಾನ್ ಅಫ್ಘಾನಿಸ್ತಾನದಲ್ಲಿ ಮಹಿಳೆಯರ ಹಕ್ಕುಗಳು ಮತ್ತು ಸ್ವಾತಂತ್ರ್ಯವನ್ನು ಕಸಿದುಕೊಂಡಾಗ ಇಸ್ಲಾಮಾಬಾದ್ ಏಕೆ ಮೌನವಾಗಿತ್ತು? ಮಹಿಳಾ ವಿರೋಧಿ ನೀತಿಗಳನ್ನು ಬದಲಾಯಿಸಲು ಪಾಕಿಸ್ತಾನ ಈಗಲಾದರೂ ತಾಲಿಬಾನ್ ಮೇಲೆ ಒತ್ತಡ ಹೇರುತ್ತದೆಯೇ? ಎಂದು ನೇರ ಪ್ರಶ್ನೆಗಳನ್ನು ಕೇಳಿದರು.
ಸಚಿವರ ಅಸಭ್ಯ ಸನ್ನೆ ಮತ್ತು ನಗು
ಪತ್ರಕರ್ತೆಯ ಗಂಭೀರ ಪ್ರಶ್ನೆಗೆ ಸಕಾರಾತ್ಮಕ ಉತ್ತರ ನೀಡುವ ಬದಲು, ಆಕೆಯ ಮಾತನ್ನು ಅರ್ಧದಲ್ಲೇ ತಡೆದ ಖವಾಜಾ ಆಸಿಫ್: ಪತ್ರಕರ್ತೆ ಧರಿಸಿದ್ದ ಆಧುನಿಕ ಉಡುಪಿನ (ಪಾಶ್ಚಿಮಾತ್ಯ ವಸ್ತ್ರ) ಕಡೆಗೆ ಬೆರಳು ತೋರಿಸಿ, ಈ ರೀತಿ ಬಟ್ಟೆ ಧರಿಸಿ ಅಫ್ಘಾನಿಸ್ತಾನಕ್ಕೆ ವಾಪಸ್ ಹೋಗಬೇಡಿ ಎಂದರು. ಅಷ್ಟಕ್ಕೇ ನಿಲ್ಲದೆ, ಹಾಗೆ ಹೋದರೆ ತಾಲಿಬಾನಿಗಳು ನಿಮ್ಮ ಕುತ್ತಿಗೆ ಕೊಯ್ಯುತ್ತಾರೆ ಎಂಬಂತೆ ತಮ್ಮ ಕೈಯನ್ನು ಗಂಟಲಿನ ಮೇಲೆ ಅಡ್ಡಲಾಗಿ ಚಲಿಸಿ ಗಂಟಲು ಸೀಳುವ ಸಂಕೇತ ಸನ್ನೆ ಮಾಡಿದರು. ಈ ವೇಳೆ ಸಚಿವರ ಜೊತೆಗಿದ್ದ ಇತರ ಪಾಕಿಸ್ತಾನಿ ನಿಯೋಗದ ಸದಸ್ಯರು ನಗುತ್ತಾ ಆಕೆಯನ್ನು ಅಪಹಾಸ್ಯ ಮಾಡಿದ್ದು ವಿಡಿಯೋದಲ್ಲಿ ಸ್ಪಷ್ಟವಾಗಿ ಸೆರೆಯಾಗಿದೆ.
ಮತ್ತಷ್ಟು ಓದಿ:
‘ಭಯೋತ್ಪಾದನೆ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಿ’; ಅಫ್ಘಾನ್ ಮೇಲಿನ ಪಾಕಿಸ್ತಾನದ ದಾಳಿಗೆ ಭಾರತ ಖಂಡನೆ
ಜಾಗತಿಕ ಮಟ್ಟದಲ್ಲಿ ಭುಗಿಲೆದ್ದ ಆಕ್ರೋಶ
ಈ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದಂತೆ ರಾಜತಾಂತ್ರಿಕರು, ಹಕ್ಕುಗಳ ಹೋರಾಟಗಾರರು ಮತ್ತು ನೆಟ್ಟಿಗರು ಪಾಕ್ ಸಚಿವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. “ಅಫ್ಘಾನ್ ಮಹಿಳೆಯರ ಯಾತನೆ ಮತ್ತು ಹಕ್ಕುಗಳ ಬಗ್ಗೆ ಕೇಳಿದ ಗಂಭೀರ ಪ್ರಶ್ನೆಗೆ ಜೀವ ಬೆದರಿಕೆಯ ಸನ್ನೆ ಮತ್ತು ಅಪಹಾಸ್ಯದ ಮೂಲಕ ಉತ್ತರಿಸುವುದು ಒಬ್ಬ ಜವಾಬ್ದಾರಿಯುತ ಸಚಿವನ ಲಕ್ಷಣವಲ್ಲ, ಇದು ಪಾಕಿಸ್ತಾನ ಸರ್ಕಾರದ ಸ್ತ್ರೀದ್ವೇಷಿ ಮನಸ್ಥಿತಿಯನ್ನು ಎತ್ತಿ ತೋರಿಸಿದೆ” ಎಂದು ಕಿಡಿಕಾರಿದ್ದಾರೆ.
ವಿಡಿಯೋ
An Afghan woman asked #KhawajaAsif a legitimate question about Pakistan’s friendship with Taliban, and Taliban’s treatment of #AfghanWomen, and why #Pakistan did not challenge these policies from the beginning when the #Taliban were considered friends. His response? Don’t go… pic.twitter.com/cJFVGCbhKB
— Aina Durkhanai آئینه درخانۍ (@khybereena) September 26, 2026
ತಾಲಿಬಾನ್ ಆಡಳಿತದಲ್ಲಿ ಮಹಿಳೆಯರ ದುಃಸ್ಥಿತಿ: 2021 ರಲ್ಲಿ ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ನಂತರ ಮಹಿಳೆಯರ ಪ್ರೌಢಶಾಲೆ ಮತ್ತು ವಿಶ್ವವಿದ್ಯಾಲಯ ಶಿಕ್ಷಣವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮಹಿಳೆಯರು ಉದ್ಯಾನಗಳು, ಜಿಮ್‌ಗಳಿಗೆ ಹೋಗುವುದು ಮತ್ತು ಪುರುಷ ಸಂಬಂಧಿ ಇಲ್ಲದೆ ದೂರ ಪ್ರಯಾಣಿಸುವುದನ್ನು ನಿರ್ಬಂಧಿಸಲಾಗಿದ್ದು, ಇತ್ತೀಚೆಗೆ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಧ್ವನಿ ಎತ್ತುವುದನ್ನೂ ನಿಷೇಧಿಸುವ ಕಠಿಣ ‘ನೈತಿಕ ಕಾನೂನು’ ಜಾರಿಗೊಳಿಸಲಾಗಿದೆ.
ಪಾಕ್-ಅಫ್ಘಾನ್ ಗಡಿ ಸಂಘರ್ಷ ತೀವ್ರ: ತೆಹ್ರೀಕ್-ಎ-ತಾಲಿಬಾನ್ ಪಾಕಿಸ್ತಾನ್ (TTP) ಉಗ್ರರಿಗೆ ಅಫ್ಘಾನ್ ನೆಲದಲ್ಲಿ ಆಶ್ರಯ ನೀಡಲಾಗುತ್ತಿದೆ ಎಂದು ಆರೋಪಿಸಿ ಸೆಪ್ಟೆಂಬರ್ 24 ರಂದು ಪಾಕಿಸ್ತಾನ ಸೇನೆಯು ಅಫ್ಘಾನಿಸ್ತಾನದ 10 ಪ್ರಮುಖ ಸ್ಥಳಗಳ ಮೇಲೆ ಏರ್‌ಸ್ಟ್ರೈಕ್ ಮತ್ತು ಡ್ರೋನ್ ದಾಳಿ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ತಾಲಿಬಾನ್ ಆಡಳಿತವು ಪಾಕಿಸ್ತಾನದ ಆಕ್ರಮಣವನ್ನು ಖಂಡಿಸಿದ್ದು, ದಾಳಿಯಲ್ಲಿ 4 ಅಮಾಯಕ ನಾಗರಿಕರು ಬಲಿಯಾಗಿದ್ದಾರೆ ಎಂದು ತಿಳಿಸಿದೆ.
ಖವಾಜಾ ಆಸಿಫ್ ಹಿಂದಿನ ವಿವಾದಗಳು: ಖವಾಜಾ ಆಸಿಫ್ ಈ ಹಿಂದೆಯೂ ಸಂಸತ್ತಿನಲ್ಲಿ ಮಹಿಳಾ ವಿರೋಧಿ ಹೇಳಿಕೆಗಳನ್ನು ನೀಡಿ ವಿವಾದಕ್ಕೀಡಾಗಿದ್ದರು. ಈ ಹಿಂದೆ ಪಾಕಿಸ್ತಾನದ ಸಂಸತ್ತಿನಲ್ಲೇ ಮಾಜಿ ಸಚಿವೆ ಶಿರೀನ್ ಮಜಾರಿ ಅವರನ್ನು “ಟ್ರಾಕ್ಟರ್ ಟ್ರಾಲಿ” ಎಂದು ಕರೆದು ತೀವ್ರ ಮುಖಭಂಗ ಅನುಭವಿಸಿದ್ದರು.
ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:59 am, Tue, 29 September 26




