12 ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದ ಪಾಕ್ ಸೇನೆ: ಭಾರತ ಹೇಳಿದ್ದೇನು?
12 ಭಾರತೀಯ ಡ್ರೋನ್‌ಗಳು ಪಾಕಿಸ್ತಾನ ವಾಯು ಪ್ರದೇಶ ಉಲ್ಲಂಘಿಸಿದ್ದು, ಅವುಗಳನ್ನು ಹೊಡೆದುರುಳಿಸಲಾಗಿದೆ ಎಂದು ಪಾಕಿಸ್ತಾನ ಸೇನೆ ಹೇಳಿದೆ. ಇದೇ ಸಂದರ್ಭದಲ್ಲಿ ಲಾಹೋರ್ ಮತ್ತು ಕರಾಚಿಯಲ್ಲಿ ಸ್ಫೋಟಗಳು ಸಂಭವಿಸಿವೆ. ಆದರೆ, ಭಾರತ ಬೇರೆಯದ್ದೇ ಹೇಳಿಕೆ ನೀಡಿದೆ. ಒಟ್ಟಿನಲ್ಲಿ, ಪಹಲ್ಗಾಮ್ ದಾಳಿ ಹಾಗೂ ಆಪರೇಷನ್ ಸಿಂದೂರ್ ನಂತರ ಉಭಯ ದೇಶಗಳ ಮಧ್ಯೆ ಉದ್ವಿಗ್ನತೆ ಹೆಚ್ಚಿದೆ.

ಲಾಹೋರ್, ಮೇ 8: ಪಾಕಿಸ್ತಾನದ ವಾಯುಪ್ರದೇಶ ಉಲ್ಲಂಘಿಸಿದ ಭಾರತದ 12 ಡ್ರೋನ್‌ಗಳನ್ನು (Indian Drones) ಪಾಕಿಸ್ತಾನ (Pakistan) ಹೊಡೆದುರುಳಿಸಿದೆ ಎಂದು ಪಾಕಿಸ್ತಾನ ಸೇನೆ ಗುರುವಾರ ತಿಳಿಸಿರುವುದಾಗಿ ‘ರಾಯಿಟರ್ಸ್’ ಸುದ್ದಿ ಸಂಸ್ಥೆ ವರದಿ ಮಾಡಿದೆ. ಭಾರತೀಯ ಸೇನೆಯ ಆಪರೇಷನ್ ಸಿಂದೂರ್ ನಂತರ ಭಾರತ ಹಾಗೂ ಪಾಕಿಸ್ತಾನ ಮಧ್ಯೆ ಉದ್ವಿಗ್ನತೆ ಹೆಚ್ಚಿದ್ದು ಕಾಶ್ಮೀರ ಗಡಿಯಲ್ಲಿ ಸುಮಾರು 15 ನಾಗರಿಕರನ್ನು ಪಾಕಿಸ್ತಾನ ಸೇನೆ ಗುಂಡಿನ ದಾಳಿ ಮೂಲಕ ಹತ್ಯೆ ಮಾಡಿದೆ. ಇದರ ಬೆನ್ನಲ್ಲೇ, ಗುರುವಾರ ಬೆಳಗ್ಗೆ ಲಾಹೋರ್ನಲ್ಲಿ ಸ್ಫೋಟ ಸಂಭವಿಸಿತ್ತು. ಅದಾದ ನಂತರ ಕರಾಚಿಯಲ್ಲೂ ಸ್ಫೋಟ ಸಂಭವಿಸಿದೆ ಎಂದು ಕೆಲವು ಮೂಲಗಳು ತಿಳಿಸಿವೆ.
ಭಾರತವು ಇಸ್ರೇಲಿ ಹರೋಪ್ ಡ್ರೋನ್‌ಗಳನ್ನು ಕರಾಚಿ ಮತ್ತು ಲಾಹೋರ್‌ನ ಸೇರಿದಂತೆ ಹಲವು ಸ್ಥಳಗಳಿಗೆ ಕಳುಹಿಸಿದೆ. ಅವುಗಳನ್ನು ಹೊಡೆದುರುಳಿಸಿದ್ದೇವೆ. ಅವುಗಳ ಅವಶೇಷಗಳನ್ನು ಸಂಗ್ರಹಿಸಲಾಗುತ್ತಿದೆ ಎಂದು ಪಾಕಿಸ್ತಾನದ ಮಿಲಿಟರಿ ವಕ್ತಾರ ಅಹ್ಮದ್ ಷರೀಫ್ ಚೌಧರಿ ತಿಳಿಸಿರುವುದಾಗಿ ‘ರಾಯಿಟರ್ಸ್’ ವರದಿ ತಿಳಿಸಿದೆ.
ಭಾರತ ಹೇಳಿದ್ಧೇನು?
ಪಹಲ್ಗಾಮ್ ದಾಳಿಗೆ ಪ್ರತೀಕಾರವಾಗಿ ನಡೆಸಿರುವ ಸಿಂದೂರ್ ಕಾರ್ಯಾಚರಣೆಯನ್ನು ನಿಲ್ಲಿಸಲಾಗಿದೆ. ಹಾಗೆಂದು, ನಮ್ಮ ಮೇಲೆ ದಾಳಿ ನಡೆಸಿದರೆ ಸುಮ್ಮನಿರುವ ಮಾತೇ ಇಲ್ಲ ಎಂದು ಭಾರತದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಸರ್ವಪಕ್ಷ ಸಭೆಯಲ್ಲಿ ಹೇಳಿದ್ದಾರೆ. ಆಪರೇಷನ್ ಸಿಂದೂರ್ನಲ್ಲಿ ಪಾಕಿಸ್ತಾನದಲ್ಲಿ ಆಶ್ರಯ ಪಡೆದಿರುವ 100 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದೂ ಅವರು ಮಾಹಿತಿ ನೀಡಿದ್ದಾರೆ.
ಲಾಹೋರ್, ಕರಾಚಿಯಲ್ಲಿ ಸ್ಫೋಟ
ಗುರವಾರ ಬೆಳಗ್ಗೆ ಲಾಹೋರ್ನಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಈಗ ಪಾಕಿಸ್ತಾನದ ಆರ್ಥಿಕ ರಾಜಧಾನಿ ಎಂದು ಪರಿಗಣಿಸಲಾಗಿರುವ ಕರಾಚಿಯಲ್ಲಿ ಕೂಡ ಸ್ಫೋಟ ಸಂಭವಿಸಿದ ಬಗ್ಗೆ ವರದಿಯಾಗಿವೆ. ಕರಾಚಿಯಲ್ಲಿ ಸಂಭವಿಸಿದ ಸ್ಫೋಟವು ಪಾಕಿಸ್ತಾನದಾದ್ಯಂತ ಭೀತಿಯನ್ನು ಸೃಷ್ಟಿಸಿದೆ. ಸ್ಫೋಟದ ನಂತರ ಇಡೀ ಪ್ರದೇಶವನ್ನು ಸೀಲ್ ಮಾಡಲಾಗಿದೆ ಎಂದು ವರದಿಯಾಗಿದೆ.
ಪಾಕಿಸ್ತಾನಿ ಮಾಧ್ಯಮಗಳ ಪ್ರಕಾರ, ಕರಾಚಿಯಲ್ಲಿ ಡ್ರೋನ್ ಸ್ಫೋಟ ಸಂಭವಿಸಿದ್ದು, ಆ ನಂತರ ಇಡೀ ಪ್ರದೇಶದಲ್ಲಿ ಭೀತಿಯ ವಾತಾವರಣವಿದೆ. ಸೇನೆಯು ಆ ಪ್ರದೇಶವನ್ನು ತನ್ನ ಹಿಡಿತಕ್ಕೆ ತೆಗೆದುಕೊಂಡಿದೆ. ಪಾಕಿಸ್ತಾನದ ಎಲ್ಲಾ ಪರಮಾಣು ಬಾಂಬ್‌ಗಳು ಕರಾಚಿಯಲ್ಲಿ ಸಂಗ್ರಹಿಸಲ್ಪಟ್ಟಿವೆ ಎಂಬುದು ಗಮನಾರ್ಹ.
ಇದನ್ನೂ ಓದಿ: ಭಾರತ ಉಗ್ರರ ಟಾರ್ಗೆಟ್ ಮಾಡಿದ್ರೆ ಪಾಕಿಸ್ತಾನ ಸೇನೆ ಮೇಲೆಯೇ ದಾಳಿ ನಡೆಸಿದ ಬಲೂಚ್ ಆರ್ಮಿ: 12 ಪಾಕ್ ಸೈನಿಕರು ಸಾವು
ಕರಾಚಿಯಲ್ಲಿ ಡ್ರೋನ್ ಸ್ಫೋಟ ಸಂಭವಿಸಿರುವುದು ಪಾಕಿಸ್ತಾನದ ಭದ್ರತಾ ವ್ಯವಸ್ಥೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಕರಾಚಿ ಸ್ಫೋಟವನ್ನು ಭದ್ರತಾ ವ್ಯವಸ್ಥೆಯ ಪ್ರಮುಖ ಉಲ್ಲಂಘನೆ ಎಂದು ಬಣ್ಣಿಸಲಾಗುತ್ತಿದೆ. ಲಾಹೋರ್‌ನ ನೌಕಾ ನೆಲೆ ಮತ್ತು ಕರಾಚಿಯ ಸೇನಾ ನೆಲೆಯ ಬಳಿ ಸ್ಫೋಟಗಳು ಸಂಭವಿಸಿವೆ ಎಂದು ವರದಿಗಳು ತಿಳಿಸಿವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:29 pm, Thu, 8 May 25








