AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪ್ರಧಾನಿ ಮೋದಿಗೆ ಮತ್ತೊಂದು ಜಾಗತಿಕ ಗೌರವ; ಸೆಶೆಲ್ಸ್​ನ ‘ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್’ ಪ್ರಶಸ್ತಿ ಪ್ರದಾನ

ಪರಿಸರ ಸಂರಕ್ಷಣೆ, ಹವಾಮಾನ ವೈಪರೀತ್ಯದ ವಿರುದ್ಧದ ಹೋರಾಟ ಹಾಗೂ ಸುಸ್ಥಿರ ಅಭಿವೃದ್ಧಿಗೆ ಜಾಗತಿಕ ಮಟ್ಟದಲ್ಲಿ ಶ್ರಮಿಸುತ್ತಿರುವ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಂದು ಅತ್ಯುನ್ನತ ಅಂತಾರಾಷ್ಟ್ರೀಯ ಗೌರವ ಲಭಿಸಿದೆ. ಪೂರ್ವ ಆಫ್ರಿಕಾದ ದ್ವೀಪ ರಾಷ್ಟ್ರವಾದ ಸೆಶೆಲ್ಸ್ ಇಂದು ಪ್ರಧಾನಿ ಮೋದಿಯವರಿಗೆ ತನ್ನ ದೇಶದ ಅತ್ಯುನ್ನತ ನಾಗರಿಕ ವಿಶಿಷ್ಟ ಗೌರವವಾದ 'ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್' (Guardian of the Blue Horizon) ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಇದು ವಿದೇಶಿ ರಾಷ್ಟ್ರವೊಂದರಿಂದ ಪ್ರಧಾನಿ ಮೋದಿಯವರು ಪಡೆಯುತ್ತಿರುವ 34ನೇ ಅಂತಾರಾಷ್ಟ್ರೀಯ ಗೌರವವಾಗಿದೆ. ಸೆಶೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನೀ ಅವರು ಭಾನುವಾರ ನಡೆದ ಅಧಿಕೃತ ಸಮಾರಂಭದಲ್ಲಿ ಪ್ರಧಾನಿ ಮೋದಿಯವರಿಗೆ ಈ ಪ್ರಶಸ್ತಿಯನ್ನು ಪ್ರಧಾನ ಮಾಡಿದರು.

ಪ್ರಧಾನಿ ಮೋದಿಗೆ ಮತ್ತೊಂದು ಜಾಗತಿಕ ಗೌರವ; ಸೆಶೆಲ್ಸ್​ನ 'ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್' ಪ್ರಶಸ್ತಿ ಪ್ರದಾನ
Pm Modi Conferred With Seychelles Guardian Of The Blue Horizon Honour
ಸುಷ್ಮಾ ಚಕ್ರೆ
|

Updated on: Jun 28, 2026 | 4:20 PM

Share

ಮುಖ್ಯಾಂಶಗಳು

  • ಪ್ರಧಾನಿ ಮೋದಿಗೆ 34ನೇ ಜಾಗತಿಕ ಗೌರವ
  • ಸೆಶೆಲ್ಸ್​ನ ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್ ಪ್ರಶಸ್ತಿ ಪ್ರದಾನ
  • 3 ದಿನಗಳ ಭೇಟಿಗೆ ಸೆಶೆಲ್ಸ್​ಗೆ ತೆರಳಿರುವ ಮೋದಿ

ವಿಕ್ಟೋರಿಯಾ, ಜೂನ್ 28: ಪರಿಸರ ಸಂರಕ್ಷಣೆ ಮತ್ತು ಸುಸ್ಥಿರ ಅಭಿವೃದ್ಧಿಯ ನಾಯಕತ್ವಕ್ಕಾಗಿ ಸೆಶೆಲ್ಸ್ ದೇಶದ ಅತ್ಯುನ್ನತ ವಿಶಿಷ್ಟ ಗೌರವವಾದ ‘ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್’ (Guardian of the Blue Horizon) ಪ್ರಶಸ್ತಿಯನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂದು (ಜೂನ್ 28) ಪ್ರದಾನ ಮಾಡಲಾಯಿತು. ಸೆಶೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನೀ ಅವರು ಪ್ರಧಾನಿ ಮೋದಿಗೆ (PM Modi) ಈ ಪ್ರಶಸ್ತಿಯನ್ನು ನೀಡಿ ಗೌರವಿಸಿದರು. ವಿದೇಶಿ ರಾಷ್ಟ್ರವೊಂದರಿಂದ ಪ್ರಧಾನಿ ಮೋದಿಯವರು ಸ್ವೀಕರಿಸುತ್ತಿರುವ 34ನೇ ಅಂತಾರಾಷ್ಟ್ರೀಯ ಗೌರವ ಇದಾಗಿದೆ.

ಸೆಶೆಲ್ಸ್ ಗಣರಾಜ್ಯದ ಇತಿಹಾಸದಲ್ಲಿಯೇ ಅಂತಾರಾಷ್ಟ್ರೀಯ ಗಣ್ಯರೊಬ್ಬರಿಗೆ ಈ ವಿಶಿಷ್ಟ ಪ್ರಶಸ್ತಿಯನ್ನು ನೀಡುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಈ ಮುಂಚೆ ಈ ಪ್ರಶಸ್ತಿಯನ್ನು ಯಾರಿಗೂ ನೀಡಿರಲಿಲ್ಲ. ಇದು ಭಾರತ ಮತ್ತು ಪ್ರಧಾನಿ ಮೋದಿಯವರ ನಾಯಕತ್ವಕ್ಕೆ ಜಾಗತಿಕ ಮಟ್ಟದಲ್ಲಿ ಸಿಕ್ಕ ಭಾರಿ ಮನ್ನಣೆಯಾಗಿದೆ.

ಸೆಶೆಲ್ಸ್ ಕರಾವಳಿ ಕಾವಲು ಪಡೆಯ ನೆಲೆಯಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ಮೋದಿ ಅವರು ಭಾರತದಲ್ಲೇ ತಯಾರಿಸಲಾದ ವೇಗದ ಗಸ್ತು ನೌಕೆಯನ್ನು ಆ ದೇಶದ ಕರಾವಳಿ ಕಾವಲು ಪಡೆಗೆ ಹಸ್ತಾಂತರಿಸಿದರು. ಇದು ಸೆಶೆಲ್ಸ್​​ನ ಕಡಲ ಭದ್ರತಾ ಸಾಮರ್ಥ್ಯಗಳನ್ನು ಬಲಪಡಿಸುವಲ್ಲಿ ಭಾರತದ ಬದ್ಧತೆಯನ್ನು ಪುನರುಚ್ಚರಿಸಿದೆ.

ಇದನ್ನೂ ಓದಿ: ಸೆಶೆಲ್ಸ್‌ನ ಸ್ಟೇಟ್ ಹೌಸ್‌ನಲ್ಲಿ ಪ್ರಧಾನಿ ಮೋದಿಗೆ ಸರ್ಕಾರಿ ಗೌರವದ ಸ್ವಾಗತ

ಸೆಶೆಲ್ಸ್‌ನಲ್ಲಿ ‘ಗಾರ್ಡಿಯನ್ ಆಫ್ ದಿ ಬ್ಲೂ ಹೊರೈಜನ್’ ಪ್ರಶಸ್ತಿಯನ್ನು ಸ್ವೀಕರಿಸಿದ ನಂತರ, ಪ್ರಧಾನಿ ಮೋದಿ ಅವರು ಹವಾಮಾನ ವೈಪರೀತ್ಯದ ಸವಾಲುಗಳನ್ನು ಎದುರಿಸಲು ಶ್ರಮಿಸುತ್ತಿರುವ ಎಲ್ಲಾ ರಾಷ್ಟ್ರಗಳಿಗೆ ಈ ಗೌರವವನ್ನು ಸಮರ್ಪಿಸಿದರು. ಸೆಶೆಲ್ಸ್ ಅಧ್ಯಕ್ಷ ಡಾ. ಪ್ಯಾಟ್ರಿಕ್ ಹರ್ಮಿನೀ ಅವರೊಂದಿಗೆ ಜಂಟಿ ಪತ್ರಿಕಾ ಪ್ರಕಟಣೆಯ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ‘ಗಾರ್ಡಿಯನ್ ಆಫ್ ದಿ ಬ್ಲೂ ಹಾರಿಜಾನ್’ ಪ್ರಶಸ್ತಿಯನ್ನು ಪಡೆಯುವುದು ತಮಗೆ ಮತ್ತು ಭಾರತದ 140 ಕೋಟಿ ಜನರಿಗೆ ಅಪಾರ ಹೆಮ್ಮೆಯ ವಿಷಯವಾಗಿದೆ ಎಂದು ಹೇಳಿದರು.

“ನಾನು ಈ ಗೌರವವನ್ನು ನಮ್ರತೆಯಿಂದ ಸ್ವೀಕರಿಸುತ್ತೇನೆ ಮತ್ತು ಹವಾಮಾನ ವೈಪರೀತ್ಯದ ಸವಾಲಿನ ವಿರುದ್ಧ ಹೋರಾಡುತ್ತಿರುವ ಹಾಗೂ ಪರಿಸರ ಸಂರಕ್ಷಣೆಯನ್ನು ಭವಿಷ್ಯದ ಪೀಳಿಗೆಯ ಕಡೆಯ ಜವಾಬ್ದಾರಿ ಎಂದು ಪರಿಗಣಿಸುವ ಎಲ್ಲಾ ರಾಷ್ಟ್ರಗಳಿಗೆ ಇದನ್ನು ಸಮರ್ಪಿಸುತ್ತೇನೆ” ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ: ಸೆಶೆಲ್ಸ್ ರಾಷ್ಟ್ರೀಯ ದಿನಾಚರಣೆಗೆ ಪ್ರಧಾನಿ ಮೋದಿ ಮುಖ್ಯ ಅತಿಥಿ; ಜೂನ್ 27ರಿಂದ ದ್ವೀಪ ರಾಷ್ಟ್ರಕ್ಕೆ ಪ್ರವಾಸ

ಪ್ರಧಾನಿ ಮೋದಿ ಸೆಶೆಲ್ಸ್ ಅಧ್ಯಕ್ಷ ಪ್ಯಾಟ್ರಿಕ್ ಹರ್ಮಿನೀ ಅವರೊಂದಿಗೆ ಮಾತುಕತೆ ನಡೆಸಿದರು. ದ್ವಿಪಕ್ಷೀಯ ಸಹಕಾರದ ಸಂಪೂರ್ಣ ವ್ಯಾಪ್ತಿಯನ್ನು ಪರಾಮರ್ಶಿಸಿದರು. ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಅಂತಾರಾಷ್ಟ್ರೀಯ ವಿಷಯಗಳ ಕುರಿತು ಅನಿಸಿಕೆಗಳನ್ನು ವಿನಿಮಯ ಮಾಡಿಕೊಂಡರು. ಉಭಯ ನಾಯಕರು ನಿಯೋಗ ಮಟ್ಟದ ಮಾತುಕತೆಗಳನ್ನು ನಡೆಸಿದರು.

3 ದಿನಗಳ ಪ್ರವಾಸಕ್ಕಾಗಿ ಶನಿವಾರ ಸೆಶೆಲ್ಸ್‌ಗೆ ತೆರಳಿದ ಪ್ರಧಾನಿ ಮೋದಿಯವರನ್ನು ಸ್ಟೇಟ್ ಹೌಸ್‌ನಲ್ಲಿ ಅಧ್ಯಕ್ಷ ಹರ್ಮಿನೀ ಅವರು ಸ್ವಾಗತಿಸಿದರು. ಅಧ್ಯಕ್ಷ ಹರ್ಮಿನೀ ಅವರ ಆಹ್ವಾನದ ಮೇರೆಗೆ ಸೆಶೆಲ್ಸ್‌ಗೆ ಭೇಟಿ ನೀಡಿರುವ ಪ್ರಧಾನಿ ಮೋದಿ ಸೋಮವಾರ ನಡೆಯಲಿರುವ ಸೆಶೆಲ್ಸ್ ರಾಷ್ಟ್ರೀಯ ದಿನಾಚರಣೆಯ ಸುವರ್ಣ ಮಹೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಅವರು ಸೆಶೆಲ್ಸ್‌ನ ರಾಷ್ಟ್ರೀಯ ಅಸೆಂಬ್ಲಿಯನ್ನು (ಸಂಸತ್) ಉದ್ದೇಶಿಸಿ ಮಾತನಾಡಲಿದ್ದಾರೆ. ಹಾಗೇ, ಭಾರತೀಯ ಸಮುದಾಯದವರೊಂದಿಗೆ ಸಂವಾದ ನಡೆಸಲಿದ್ದಾರೆ.

ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Follow Us