Boris Johnson ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ರಾಜೀನಾಮೆ
ಹಗರಣಗಳ ಸುಳಿಯಲ್ಲಿರುವ ಜಾನ್ಸನ್ ರಾಜೀನಾಮೆಗೆ ಎಲ್ಲ ಕಡೆಯಿಂದಲೂ ಒತ್ತಡ ಬರುತ್ತಿದ್ದರೂ ರಾಜೀನಾಮೆ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಜಾನ್ಸನ್ ಇಂದು ರಾಜೀನಾಮೆ ಸಲ್ಲಿಸಿದ್ದಾರೆ.
ಲಂಡನ್: ಬ್ರಿಟನ್‌ನಲ್ಲಿ ಸಚಿವರು ಒಬ್ಬರ ಹಿಂದೆ ಒಬ್ಬರಂತೆ ರಾಜೀನಾಮೆ (resignation) ಸಲ್ಲಿಸಿದ ಬಳಿಕ ಬ್ರಿಟಿಷ್ ಪ್ರಧಾನ ಮಂತ್ರಿ (British PM) ಬೋರಿಸ್ ಜಾನ್ಸನ್ (Boris Johnson) ಗುರುವಾರ ಪ್ರಧಾನ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಗರಣಗಳ ಸುಳಿಯಲ್ಲಿರುವ ಜಾನ್ಸನ್ ರಾಜೀನಾಮೆಗೆ ಎಲ್ಲ ಕಡೆಯಿಂದಲೂ ಒತ್ತಡ ಬರುತ್ತಿದ್ದರೂ ರಾಜೀನಾಮೆ ನೀಡುವುದಿಲ್ಲ ಎಂದು ಪಟ್ಟು ಹಿಡಿದಿದ್ದ ಜಾನ್ಸನ್ ಇಂದು ರಾಜೀನಾಮೆ ನೀಡುವುದಾಗಿ ಹೇಳಿದ್ದಾರೆ. ಬ್ರಿಟನ್‌ನಲ್ಲಿ ಕಳೆದ 48 ಗಂಟೆಗಳಲ್ಲಿ 5 ಕ್ಯಾಬಿನೆಟ್ ಸಚಿವರು ಅಧಿಕಾರಿಗಳು ಸೇರಿದಂತೆ 40ಕ್ಕೂ ಹೆಚ್ಚು ಮಂದಿ ರಾಜೀನಾಮೆ ನೀಡಿದ ಬೆನ್ನಲ್ಲೇ ಬೋರಿಸ್ ಜಾನ್ಸನ್ ಈ ನಿರ್ಧಾರ ತೆಗೆದುಕೊಂಡಿದ್ದಾರೆ. ಒಂದು ತಿಂಗಳ ಹಿಂದೆ ಸರ್ಕಾರವನ್ನು ಉಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಸಚಿವರಾದ ರಿಷಿ ಸುನಕ್ ಮತ್ತು ಸಾಜಿದ್ ಜಾವಿದ್ ಕೂಡ ಜಾನ್ಸ್ನ್ ತಂಡವನ್ನು ತೊರೆದು ಅಂತರ ಕಾಯ್ದುಕೊಂಡಿದ್ದಾರೆ. ಶಿಕ್ಷಣ ಇಲಾಖೆಯ ಕಿರಿಯ ಕಾರ್ಯದರ್ಶಿ ಅಲೆಕ್ಸ್ ಬರ್ಗರ್ಟ್ ಜಾನ್ ಗ್ಲೇನ್, ಭದ್ರತಾ ಕಾರ್ಯದರ್ಶಿ ರಾಚೆಲ್ ಮೆಕ್ಲೀನ್, ರಫ್ತು ಸಚಿವ ಮೈಕ್ ಫ್ರೀರ್, ವಸತಿ ಮತ್ತು ಸಮುದಾಯಗಳ ಜೂನಿಯರ್ ಸಚಿವ ನೀಲ್ ಒಬ್ರೇನ್ ಸೇರಿ 40ಕ್ಕೂ ಹೆಚ್ಚು ಸಚಿವರು ಅವಿಶ್ವಾಸ ವ್ಯಕ್ತಪಡಿಸಿದ್ದರು.
ಗುರುವಾರ ದೇಶವನ್ನುದ್ದೇಶಿಸಿ ಮಾತನಾಡಿದ ಅವರು ಕನ್ಸರ್ವೇಟಿವ್ ಪಕ್ಷದ ಸಚಿವರು ಮತ್ತು ಸಹೋದ್ಯೋಗಿಗಳು ರಾಜೀನಾಮೆ ನೀಡಬೇಕು ಎಂದು ಕೇಳಿದ್ದರಿಂದ ನಾನು ಬ್ರಿಟನ್ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡುತ್ತಿದ್ದೇನೆ ಎಂದು ಬೋರಿಸ್ ಜಾನ್ಸನ್ ಹೇಳಿದ್ದಾರೆ.
ಅಧಿಕಾರಾವಧಿ ಮುಗಿಯುವ ಮುನ್ನವೇ ನಿರ್ಗಮಿಸುತ್ತಿರುವುದಕ್ಕೆ ದುಃಖ ವ್ಯಕ್ತಪಡಿಸಿದ ಜಾನ್ಸನ್ ನಾನು ಅಧಿಕಾರದ ಅವಧಿ ಪೂರ್ಣಗೊಳಿಸದೇ ಹೋಗುತ್ತಿರುವುದಕ್ಕೆ ನೋವಿದೆ. ಗುಂಪಿನ ಶಕ್ತಿಯು ಪ್ರಭಾವಶಾಲಿಯಾಗಿದ್ದು ರಾಜಕೀಯದಲ್ಲಿ ಯಾರೊಬ್ಬರೂ ಅನಿವಾರ್ಯವಲ್ಲ. ಮುಂದಿನ ಪ್ರಧಾನಿ ಬರುವವರೆಗೆ ಈ ಸ್ಥಾನದಲ್ಲಿ ಮುಂದುವರಿಯುತ್ತೇನೆ ಎಂದು ಹೇಳಿದ ಅವರು ಕುಟುಂಬ ಮತ್ತು ವ್ಯವಹಾರದ ಹೊರೆಯನ್ನು ಕಡಿಮೆ ಮಾಡಲಿರುವ ಮುಂದಿನ ಪ್ರಧಾನಿಗೆ ನನ್ನ ಪೂರ್ಣ ಬೆಂಬಲವಿದೆ ಎಂದು ಹೇಳಿದ್ದಾರೆ. ಸಾರ್ವಜನಿಕರನ್ನುದ್ದೇಶಿಸಿದ ಜಾನ್ಸನ್, ನಿಮ್ಮಲ್ಲಿ ಹಲವಾರು ಮಂದಿಗೆ ಸಮಾಧಾನವಾಗಿದೆ ಎಂದು ನನಗೆ ಗೊತ್ತಿದೆ. ಜಗತ್ತಿನಲ್ಲಿರುವ ಅತ್ಯುತ್ತಮ ಕೆಲಸವನ್ನು ತ್ಯಜಿಸಿದ್ದಕ್ಕೆ ನನಗೆ ದುಃಖವಿದೆ ಎಂದು ಹೇಳಿದ್ದಾರೆ.
Published On - 5:16 pm, Thu, 7 July 22