ಸುಟ್ಟ ಮುಖ, ಬೆತ್ತಲೆಯಾದ ದೇಹಗಳು ಪತ್ತೆ; ಹಮಾಸ್ ದಾಳಿ ವೇಳೆ ಲೈಂಗಿಕ ದೌರ್ಜನ್ಯದ ಭೀಕರತೆ ಬಿಚ್ಚಿಟ್ಟ ವರದಿ
ನ್ಯೂಯಾರ್ಕ್ ಟೈಮ್ಸ್ ಮಾಡಿದ ತನಿಖೆಯು ಇಸ್ರೇಲಿ ಮಹಿಳೆಯರು ಮತ್ತು ಹುಡುಗಿಯರು ಲೈಂಗಿಕವಾಗಿ ದೌರ್ಜನ್ಯಕ್ಕೊಳಗಾದ ಅಥವಾ ವಿರೂಪಗೊಳಿಸಲಾದ ಕನಿಷ್ಠ ಏಳು ಸ್ಥಳಗಳನ್ನು ಗುರುತಿಸಿದೆ. ಹೆಣ್ಮಕ್ಕಳ ಮೇಲೆ ಪೈಶಾಚಿಕ ರೀತಿಯಲ್ಲಿ ಅತ್ಯಾಚಾರವೆಸಗಿ ಕೊಂದು ಹಾಕಿದ ಫೋಟೊಗಳು ಸಿಕ್ಕಿವೆ ಎಂದು ಪತ್ರಿಕಾ ವರದಿ ಹೇಳುತ್ತದೆ.
ಟೆಲ್ ಅವೀವ್ ಡಿಸೆಂಬರ್ 29: ದಕ್ಷಿಣ ಇಸ್ರೇಲ್‌ನಲ್ಲಿ (Israel) ಅಕ್ಟೋಬರ್ 7 ರಂದು ಹಮಾಸ್ (Hamas )ನಡೆಸಿದ ದಾಳಿಯ ನಂತರ, ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯದ (sexual violence)ಭೀಕರತೆಯನ್ನು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ತಿಂಗಳ ತನಿಖೆಯನ್ನು ನಡೆಸಿದ ನ್ಯೂಯಾರ್ಕ್ ಟೈಮ್ಸ್ , ಭಯೋತ್ಪಾದಕರು ಗುರಿಯಾಗಿಸಿಕೊಂಡ ಅನೇಕ ಸ್ಥಳಗಳಲ್ಲಿ ಲೈಂಗಿಕ ದೌರ್ಜನ್ಯ ಮತ್ತು ದೇಹಗಳನ್ನು ವಿರೂಪಗೊಳಿಸಿರುವ ಬಗ್ಗೆ ವರದಿ ಪ್ರಕಟಿಸಿದೆ.
ಸಂತ್ರಸ್ತರಲ್ಲಿ ಒಬ್ಬರಾದ ಮಧ್ಯ ಇಸ್ರೇಲ್‌ನ ಎರಡು ಮಕ್ಕಳ ತಾಯಿಯಾದ ಗಾಲ್ ಅಬ್ದುಶ್, ಹತ್ಯಾಕಾಂಡದ ಸ್ಥಳವಾಗಿ ಮಾರ್ಪಟ್ಟ ರೇವ್‌ನಿಂದ ನಾಪತ್ತೆಯಾಗಿದ್ದರು. ಕಾಣೆಯಾದ ತನ್ನ ಸ್ನೇಹಿತನನ್ನು ಹುಡುಕುತ್ತಿರುವ ಮಹಿಳೆಯೊಬ್ಬರು ಚಿತ್ರೀಕರಿಸಿದ ವೈರಲ್ ವಿಡಿಯೊದಲ್ಲಿ ಗಾಲ್ ಅಬ್ದುಶ್ ರಸ್ತೆಯ ಮೇಲೆ ಬಿದ್ದಿರುವುದನ್ನು ತೋರಿಸಿದೆ. ಆಕೆಯ ಮೇಲೆ ತುಂಡುಬಟ್ಟೆ ಮಾತ್ರವಿದೆ, ಆಕೆಯ ಮುಖ ಗುರುತಿಸಲಾಗದಷ್ಟು ಸುಟ್ಟುಹೋಗಿದೆ.
ಇಸ್ರೇಲಿ ಪೊಲೀಸ್ ಅಧಿಕಾರಿಗಳು, ವಿಡಿಯೊ ಸಾಕ್ಷ್ಯವನ್ನು ಆಧರಿಸಿ, ಗಾಲ್ ಅಬ್ದುಶ್ ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ನಂಬುತ್ತಾರೆ. ಆಕೆಯ ಮೇಲೆ ನಡೆದಿರುವ ದೌರ್ಜನ್ಯ ಇಸ್ರೇಲಿ ಮಹಿಳೆಯರ ಮೇಲೆ ಉಂಟಾದ ಭಯಾನಕತೆಯ ಸಂಕೇತವಾಗಿದೆ ಎನ್ನುತ್ತಿದೆ ಮಾಧ್ಯಮ ವರದಿ. ತನಿಖೆಯು ಇಸ್ರೇಲಿ ಮಹಿಳೆಯರು ಮತ್ತು ಹುಡುಗಿಯರು ಲೈಂಗಿಕವಾಗಿ ದೌರ್ಜನ್ಯಕ್ಕೊಳಗಾದ ಅಥವಾ ವಿರೂಪಗೊಳಿಸಲಾದ ಕನಿಷ್ಠ ಏಳು ಸ್ಥಳಗಳನ್ನು ಗುರುತಿಸಿದೆ. ನ್ಯೂಯಾರ್ಕ್ ಟೈಮ್ಸ್ ಸಂದರ್ಶನ ಮಾಡಿದ 150 ಜನರಲ್ಲಿ ಸಾಕ್ಷಿಗಳು, ವೈದ್ಯಕೀಯ ಸಿಬ್ಬಂದಿ, ಸೈನಿಕರು ಮತ್ತು ಸಲಹೆಗಾರರು ಅಕ್ಟೋಬರ್ 7 ರಂದು ವ್ಯಾಪಕವಾಗಿ ನಡೆದ ಲೈಂಗಿಕ ದೌರ್ಜನ್ಯದ ಬಗ್ಗೆ ಮಾಹಿತಿ ನೀಡಿದ್ದಾರೆ.
ರೇವ್, ಗಾಜಾ ಗಡಿಯಲ್ಲಿರುವ ಸೇನಾ ನೆಲೆಗಳು ಮತ್ತು ಕಿಬ್ಬುತ್ಜಿಮ್ನಲ್ಲಿ ಭಯೋತ್ಪಾದನೆ ನಡೆದಿದ್ದು ಗಾಲ್ ಅಬ್ದುಶ್ನ ಶವ ಪತ್ತೆಯಾದ ಹೆದ್ದಾರಿ ಮಾರ್ಗ 232 ರ ಉದ್ದಕ್ಕೂ ವಿವಿಧ ಸ್ಥಳಗಳಲ್ಲಿ ಮಹಿಳೆಯರ ಅತ್ಯಾಚಾರ ಮತ್ತು ಹತ್ಯೆಯ ಗ್ರಾಫಿಕ್ ದೃಶ್ಯಗಳನ್ನು ಸಾಕ್ಷಿಗಳು ವಿವರಿಸಿದ್ದಾರೆ.
ನ್ಯೂಯಾರ್ಕ್ ಟೈಮ್ಸ್ ಪ್ರಕಾರ, ಸ್ವಯಂಸೇವಕ ವೈದ್ಯರು ಮತ್ತು ಸೈನಿಕರು ಗಾಲ್ ಅಬ್ದುಶ್ನಂತೆಯೇ ರಾಜ್ಯದಲ್ಲಿ 30 ಕ್ಕೂ ಹೆಚ್ಚು ಮಹಿಳೆಯರು ಮತ್ತು ಹುಡುಗಿಯರ ದೇಹಗಳನ್ನು ಪತ್ತೆ ಮಾಡಿದ್ದಾರೆ ಎಂದು ವರದಿ ಹೇಳಿದೆ. ಹೆಣ್ಮಕ್ಕಳ ಮೇಲೆ ಪೈಶಾಚಿಕ ರೀತಿಯಲ್ಲಿ ಅತ್ಯಾಚಾರವೆಸಗಿ ಕೊಂದು ಹಾಕಿದ ಫೋಟೊಗಳು ಸಿಕ್ಕಿವೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಹೇಳುತ್ತದೆ. ಇಸ್ರೇಲಿ ಮಿಲಿಟರಿ ಒದಗಿಸಿದ ಮತ್ತೊಂದು ವಿಡಿಯೊದಲ್ಲಿ ಗಾಜಾ ಬಳಿಯ ನೆಲೆಯಲ್ಲಿ ಇಬ್ಬರು ಸತ್ತ ಸೈನಿಕರನ್ನು ತೋರಿಸಿದೆ, ಅವರ ಜನನಾಂಗ ಭಾಗದಲ್ಲಿ ನೇರವಾಗಿ ಗುಂಡು ಹಾರಿಸಲಾಗಿದೆ ಎಂಬುದನ್ನು ವಿಡಿಯೊ ತೋರಿಸಿದೆ.
ಇದನ್ನೂ ಓದಿ: ಸಂಸತ್ನಲ್ಲಿ ಹಮಾಸ್ ಕುರಿತ ಪ್ರಶ್ನೆಯ ಉತ್ತರಕ್ಕೆ ಸಹಿ ಹಾಕಿಲ್ಲ ಎಂದು ಸ್ಪಷ್ಟನೆ ನೀಡಿದ ಮೀನಾಕ್ಷಿ ಲೇಖಿ
ಏತನ್ಮಧ್ಯೆ, ಹಮಾಸ್ ಲೈಂಗಿಕ ದೌರ್ಜನ್ಯದ ಆರೋಪಗಳನ್ನು ನಿರಾಕರಿಸಿದೆ.ಇದು ಇಸ್ರೇಲಿ ಕಾರ್ಯಕರ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಇಸ್ರೇಲಿ ಪೊಲೀಸರು, ಅಕ್ಟೋಬರ್ 7 ರಲ್ಲಿನ ಘಟನೆಗಳನ್ನು ಒಪ್ಪಿಕೊಂಡಿದ್ದು ಆರಂಭದಲ್ಲಿ ಮಹಿಳೆಯರ ದೇಹದಿಂದ ಫೋರೆನ್ಸಿಕ್ ಪುರಾವೆಗಳನ್ನು ಸಂಗ್ರಹಿಸಲು ಗಮನಹರಿಸಲಿಲ್ಲ ಎಂದು ಬಹಿರಂಗಪಡಿಸಿದರು. ಅವ್ಯವಸ್ಥೆ, ದುಃಖ ಮತ್ತು ಧಾರ್ಮಿಕ ಕರ್ತವ್ಯಗಳು ಅವಸರದ ಶವ ಸಂಸ್ಕಾರಕ್ಕೆ ಕಾರಣವಾಯಿತು, ಅನೇಕ ದೇಹಗಳು ಪರೀಕ್ಷಿಸದೆ ಉಳಿದಿವೆ. ಘರ್ಷಣೆಯ ಸಮಯದಲ್ಲಿ ವ್ಯಾಪಕವಾದ ಲೈಂಗಿಕ ಹಿಂಸೆಯ ಪ್ರಕರಣಗಳಲ್ಲಿ ವಿಶಿಷ್ಟವಾದ ವಿಧಿವಿಜ್ಞಾನ ಸಾಕ್ಷ್ಯವನ್ನು ಸಂಗ್ರಹಿಸುವಲ್ಲಿ ತನಿಖೆಯು ಅಡಚಣೆಗಳನ್ನು ಎದುರಿಸಿತು ಎಂದು ವರದಿಯಲ್ಲಿ ಹೇಳಿದೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 1:02 pm, Fri, 29 December 23