ಶೀಘ್ರದಲ್ಲೇ ಕಾಶ್ಮೀರದ ನದಿ, ಡ್ಯಾಂಗಳು ನಮ್ಮದಾಗಲಿವೆ; ಭಾರತಕ್ಕೆ ಲಷ್ಕರ್ ನಾಯಕ ಸವಾಲು
ಮುರಿಡ್ಕೆ ಪ್ರಧಾನ ಕಚೇರಿಯ ಮರುರ್ನಿರ್ಮಾಣದಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಸೇನೆ ಭಯೋತ್ಪಾದಕ ಗುಂಪುಗಳಿಗೆ ಹಣಕಾಸು ನೆರವು ನೀಡುತ್ತಿದೆ ಎಂದು ಲಷ್ಕರ್ ಉಪ ಮುಖ್ಯಸ್ಥ ಒಪ್ಪಿಕೊಂಡಿದ್ದಾನೆ. ಲಷ್ಕರ್-ಎ-ತೈಬಾ (LeT) ಭಯೋತ್ಪಾದಕ ಗುಂಪಿನ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿಯ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋದಲ್ಲಿ ಪಾಕಿಸ್ತಾನ ಸರ್ಕಾರ ಮತ್ತು ಮಿಲಿಟರಿ ಮುರಿಡ್ಕೆಯಲ್ಲಿರುವ ಎಲ್‌ಇಟಿಯ ಪ್ರಧಾನ ಕಚೇರಿಯ ಪುನರ್ನಿರ್ಮಾಣಕ್ಕೆ ಹಣಕಾಸು ಒದಗಿಸುತ್ತಿದೆ ಎಂದು ಕಸೂರಿ ಹೇಳುವ ಮೂಲಕ ಪಾಕಿಸ್ತಾನದ ಅಸಲಿ ಮುಖವನ್ನು ಬಯಲು ಮಾಡಿದ್ದಾನೆ.

ನವದೆಹಲಿ, ಸೆಪ್ಟೆಂಬರ್ 17: ಭಯೋತ್ಪಾದನಾ ಸಂಘಟನೆಗಳು ಮತ್ತು ಪಾಕಿಸ್ತಾನದ (Pakistan) ನಡುವಿನ ನಂಟಿನ ಒಂದೊಂದೇ ಅಸಲಿ ಸತ್ಯಗಳು ಇದೀಗ ಬಯಲಿಗೆ ಬರುತ್ತಿದೆ. ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಕಾಣಿಸಿಕೊಂಡ ವೀಡಿಯೊವೊಂದರಲ್ಲಿ, ಲಷ್ಕರ್-ಎ-ತೈಬಾ (LeT)ದ ಉಪ ಮುಖ್ಯಸ್ಥ ಸೈಫುಲ್ಲಾ ಕಸೂರಿ ಭಯೋತ್ಪಾದಕ ಸಂಘಟನೆಗೆ ಪಾಕಿಸ್ತಾನದ ಬೆಂಬಲದ ಬಗ್ಗೆ ದಿಟ್ಟ ಹೇಳಿಕೆಗಳನ್ನು ನೀಡಿದ್ದಾನೆ. ಈ ವಿಡಿಯೋದಲ್ಲಿ ಭಾರತದ ‘ಆಪರೇಷನ್ ಸಿಂಧೂರ್’ ಸಮಯದಲ್ಲಿ ನಾಶವಾದ ಸ್ಥಳವಾದ ಮುರಿಡ್ಕೆಯಲ್ಲಿರುವ ಭಯೋತ್ಪಾದಕ ಗುಂಪಿನ ಪ್ರಧಾನ ಕಚೇರಿಯನ್ನು ಪುನರ್ನಿರ್ಮಿಸಲು ಪಾಕಿಸ್ತಾನ ಸರ್ಕಾರ ಮತ್ತು ಸೇನೆ ಹಣವನ್ನು ಒದಗಿಸಿದೆ ಎಂದು ಕಸೂರಿ ಹೇಳಿದ್ದಾನೆ.
ಸುಮಾರು 2 ನಿಮಿಷಗಳ ವೀಡಿಯೊದಲ್ಲಿ, ಕಸೂರಿ ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತಕ್ಕೆ ಕಟು ಎಚ್ಚರಿಕೆ ನೀಡಿದ್ದಾರೆ. ಶೀಘ್ರದಲ್ಲೇ ಜಮ್ಮು ಮತ್ತು ಕಾಶ್ಮೀರದ ನದಿಗಳು ಹಾಗೂ ಅಣೆಕಟ್ಟುಗಳು ನಮಗೆ ಸೇರುತ್ತವೆ ಎಂದು ಆತ ಹೇಳಿದ್ದಾನೆ. ವಿವಿಧ ಮಾಧ್ಯಮ ವರದಿಗಳ ಪ್ರಕಾರ, ಏಪ್ರಿಲ್ 22ರ ಪಹಲ್ಗಾಮ್ ಭಯೋತ್ಪಾದಕ ದಾಳಿಯ ಹಿಂದಿನ ಮಾಸ್ಟರ್ ಮೈಂಡ್ ಆಗಿರುವ ಕಸೂರಿ, ಎಲ್‌ಇಟಿಯ ನಿರಂತರ ಕಾರ್ಯಾಚರಣೆಗಳ ಬಗ್ಗೆ ಹೆಮ್ಮೆಪಡಲು ಈ ವೀಡಿಯೊವನ್ನು ಬಳಸಿದ್ದಾರೆ. ಆದರೆ, ಈ ವಿಡಿಯೋ ಇದೀಗ ಪಾಕಿಸ್ತಾನದ ಅಸಲಿ ಮುಖವನ್ನು ಜಗತ್ತಿನೆದುರು ತೆರೆದಿಟ್ಟಿದೆ.
ಇದನ್ನೂ ಓದಿ: ದೆಹಲಿ ಸಂಸತ್ ದಾಳಿ, ಮುಂಬೈ ದಾಳಿ ಹಿಂದೆ ಮಸೂದ್ ಅಜರ್ ಕೈವಾಡ ಬಯಲು; ಪಾಕಿಸ್ತಾನಕ್ಕೆ ಮುಖಭಂಗ
ಈ ವಿಡಿಯೋದಲ್ಲಿ ಕಸೂರಿ ಎಲ್‌ಇಟಿಯ ಕಾರ್ಯಾಚರಣೆಗಳನ್ನು ಹೊಸ ಸಂಪನ್ಮೂಲಗಳೊಂದಿಗೆ ಬಲಪಡಿಸಲಾಗಿದೆ ಎಂದು ಸುಳಿವು ನೀಡಿದ್ದಾನೆ. ಎಲ್ಇಟಿಗೆ ಪಾಕಿಸ್ತಾನದ ಬೆಂಬಲವನ್ನು ಇದು ಸೂಚಿಸುತ್ತದೆ. ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿರುವ ಮುರಿಡ್ಕೆ ಹಲವು ವರ್ಷಗಳಿಂದ ಎಲ್‌ಇಟಿಯ ಕಾರ್ಯಾಚರಣೆಗಳ ಕೇಂದ್ರವಾಗಿದೆ. ಕಸೂರಿಯ ಈ ಹೇಳಿಕೆಗಳು ಈಗ ಆ ಗುಂಪು ತನ್ನ ಕಳೆದುಹೋದ ನೆಲೆಯನ್ನು ಮರಳಿ ಪಡೆಯಲು ಸಕ್ರಿಯವಾಗಿ ಕೆಲಸ ಮಾಡುತ್ತಿದೆ ಎಂಬುದನ್ನು ಸೂಚಿಸುತ್ತವೆ.
ಇನ್ನಷ್ಟು ಅಂತಾರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




