ಈ ವಿದ್ಯಾರ್ಥಿಗಳು ಗ್ರಾಜುವೇಷನ್ ದಿನ ಹೇಗೆ ಆಚರಿಸಿದ್ರು ಅಂತಾ ತಿಳಿದ್ರೆ ನೀವು ಅಚ್ಚರಿಪಡ್ತೀರಾ..!

  • TV9 Web Team
  • Published On - 18:59 PM, 12 Jun 2020
ಈ ವಿದ್ಯಾರ್ಥಿಗಳು ಗ್ರಾಜುವೇಷನ್ ದಿನ ಹೇಗೆ ಆಚರಿಸಿದ್ರು ಅಂತಾ ತಿಳಿದ್ರೆ ನೀವು ಅಚ್ಚರಿಪಡ್ತೀರಾ..!

ಕೊರೊನಾ ಬಂದ ಬಳಿಕ ಜಗವೆಲ್ಲಾ ಬದಲಾಗಿದೆ. ಅದನ್ನು ನಾವು ಕಣ್ಣಿಂದ ನೋಡ್ತಾ ಇದ್ದೇವೆ. ಅನುಭವಿಸ್ತಾ ಇದ್ದೇವೆ. ವಿದ್ಯಾರ್ಥಿಗಳು ಶಾಲೆಗೆ ಹೋಗುವ ಹಾಗಿಲ್ಲ. ಆನ್ ಲೈನ್​​ನಲ್ಲಿ ಪಾಠ ಕಲಿಯಬೇಕು. ಹೀಗೆ ಶಿಕ್ಷಣದ ಸಾಂಪ್ರದಾಯಿಕ ಕ್ರಮ ಬದಲಾಗಿದೆ. ಆದ್ರೆ ಫಿಲಿಪೈನ್ಸ್ ನಲ್ಲಿ ಇದಕ್ಕಿಂತ ಭಿನ್ನ ಕತೆಯೊಂದಿದೆ. ಆ ಘಟನೆ ಬಗ್ಗೆ ಒಂದಿಷ್ಟು ಮಾಹಿತಿ ಪಡೆದುಕೊಳ್ಳಿ. ಅಲ್ಲಿ ವಿದ್ಯಾರ್ಥಿಗಳು ಗ್ರಾಜುವೇಷನ್ ದಿನವನ್ನು ಹೇಗೆ ಆಚರಿಸಿದ್ರು ಅಂತಂದ್ರೆ ನೀವು ಅಚ್ಚರಿಯಾಗ್ತೀರಾ..!

ಫಿಲಿಪೈನ್ಸ್ ನಲ್ಲಿ ಒಂದು ಶಾಲೆಯಿದೆ. ಅಸಲಿಗೆ ಕೊರೊನಾ ಅಪ್ಪಳಿಸುವುದಕ್ಕೂ ಮೊದಲು ಅಲ್ಲಿ ಮಕ್ಕಳ ಗ್ರಾಜುವೇಷನ್ ಡೇ ನಡೆಯಬೇಕಿತ್ತು. ಆದ್ರೆ ಅಲ್ಲಿ ಕೊರೊನಾ ತುರ್ತು ಪರಿಸ್ಥಿತಿ ಘೋಷಣೆಯಾದ ಕಾರಣಕ್ಕೆ ಈ ಸಮಾರಂಭವನ್ನು ಮುಂದೂಡಲಾಗಿತ್ತು. ಆ ನಡುವೆ ಕೊರೊನಾ ಸಂಬಂಧಿ ಭಾರಿ ಕತೆಗಳೇ ನಡೆದು ಹೋದವು. ಮೊದಲು ಜನ ಹೆದರಿದ್ರು ಬಳಿಕ ಜನ ಕೊರೊನಾ ಜೊತೆ ಬದುಕೋಕೆ ಕಲಿತ್ರು. ಲಾಕ್ ಡೌನ್ ಒಂದಿಷ್ಟು ಸಡಿಲಿಸಿದ ಬಳಿಕ ಅಲ್ಲಿ ಮತ್ತೊಮ್ಮೆ ಗ್ರಾಜುವೇಷನ್ ದಿನವನ್ನು ಗೊತ್ತು ಪಡಿಸಲಾಯ್ತು. ಆದ್ರೆ..?

ಇಷ್ಟೆಲ್ಲಾ ಆದ ಬಳಿಕವೂ ಗ್ರಾಜುವೇಷನ್ ದಿನ ಮಕ್ಕಳಿಗೆ ವೇದಿಕೆಗೆ ಹೋಗುವ ಅವಕಾಶ ಸಿಗಲೇ ಇಲ್ಲ. ಯಾಕೆ ಗೊತ್ತಾ..? ಅಲ್ಲಿ ವಿದ್ಯಾರ್ಥಿಗಳ ಬದಲಿಗೆ ರೋಬೋಗಳು ವೇದಿಕೆಗೆ ಹೋದವು. ಆ ಎಲ್ಲಾ ರೋಬೋಗಳು ಮಕ್ಕಳ ಪರವಾಗಿ, ಮಕ್ಕಳನ್ನು ಪ್ರತಿನಿಧಿಸಿದವು..ಅಂತಂದ್ರೆ, ಕಷ್ಟಪಟ್ಟು ಪರೀಕ್ಷೆ ಬರೆದಿದ್ದು ಮಕ್ಕಳು ಆದ್ರೆ ಪದವಿ ಗಳಿಸಿದ್ದು ಮಾತ್ರ ರೋಬೋಟ್​​ಗಳು .! ಎಂಥಾ ಅನ್ಯಾಯ ಅಂತೀರಾ..? ಆದ್ರೆ ಅದರ ಹಿಂದೆ ಆರೋಗ್ಯ ಸಂರಕ್ಷಣೆಯ ಗುಟ್ಟಿತ್ತು.

ಕೊರೊನಾ ನಡುವೆ ಈ ಸಮಾರಂಭವನ್ನು ನಡೆಸಬೇಕಿದ್ರೆ ಅಲ್ಲಿ ಸಿಕ್ಕಾಪಟ್ಟೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಅಲ್ಲಿ ಥರ್ಮಲ್ ಸ್ಕ್ರೀನಿಂಗ್ ಮಾಡಲಾಗಿತ್ತು. ಸ್ಯಾನಿಟೈಸೇಷನ್ ಮಾಡಲಾಗಿತ್ತು. ಸಾಮಾಜಿಕ ಅಂತರವನ್ನು ಕಾಪಾಡಲಾಗಿತ್ತು. ಅಷ್ಟಿದ್ದೂ ಮಕ್ಕಳನ್ನು ಮಾತ್ರ ವೇದಿಕೆಗೆ ಕಳಿಸಲೇ ಇಲ್ಲ. ಅವರ ಬದಲಾಗಿ ರೋಬೋಟ್​​​ಗಳೇ ವೇದಿಕೆಯಲ್ಲಿ ಪದವಿ ಪದಕ ಪಡೆದರು.

ಪ್ರತಿ ರೋಬೋಟಿನ ಮುಖದ ಭಾಗದಲ್ಲಿ ಫಿಕ್ಸ್ ಮಾಡಲಾದ ಟ್ಯಾಬ್ ನಲ್ಲಿ ಆಯಾ ಮಕ್ಕಳ ಮುಖ ಕಾಣುವ ಹಾಗೆ ವ್ಯವಸ್ಥೆ ಮಾಡಲಾಗಿತ್ತು. ಎಲ್ಲಾ ಮಕ್ಕಳು ಮನೆಯಿಂದಲೇ ಈ ಕಾರ್ಯಕ್ರಮವನ್ನು ಆನ್ ಲೈನ್ ಮೂಲಕ ನೋಡ್ತಾ ಇದ್ರು. ಮತ್ತು ಪ್ರತಿಕ್ರಿಯೆ ನೀಡ್ತಾ ಇದ್ರು. ಶಿಕ್ಷಕರು ಶಾಲೆಯಲ್ಲಿದ್ದು ಅಚ್ಚುಕಟ್ಟಾಗಿ ಕಾರ್ಯಕ್ರಮ ನಿಭಾಯಿಸಿದ್ರು. ಹೀಗೆ ಸೈಬರ್ ಗ್ರಾಜುವೇಷನ್ ಡೇಯನ್ನು ಸಾಂಗವಾಗಿ ಆಚರಿಸಲಾಯಿತು. -ರಾಜೇಶ್ ಶೆಟ್ಟಿ