Sri Lanka Crisis: ಶ್ರೀಲಂಕಾದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಘೋಷಣೆ
ಸಾರ್ವಜನಿಕ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆಯ ರಕ್ಷಣೆ ಮತ್ತು ಸಮುದಾಯದ ಜೀವನಕ್ಕೆ ಅಗತ್ಯವಾದ ವಸ್ತುಗಳ ಸರಬರಾಜು ಮತ್ತು ಸೇವೆಗಳ ನಿರ್ವಹಣೆಯ ಕಾರಣದಿಂದ ಶ್ರೀಲಂಕಾದಲ್ಲಿ ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ.
ಕೊಲಂಬೊ: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟಿನ (Sri Lanka Economic Crisis) ಜೊತೆಗೆ ರಾಜಕೀಯ ಬಿಕ್ಕಟ್ಟು ಕೂಡ ತಲೆದೋರಿದೆ. ಇದರ ನಡುವೆ ಶ್ರೀಲಂಕಾದ ಹಂಗಾಮಿ ಅಧ್ಯಕ್ಷ ರಾನಿಲ್ ವಿಕ್ರಮಸಿಂಘೆ (Ranil Wickremesinghe) ಇಂದಿನಿಂದ ಜಾರಿಗೆ ಬರುವಂತೆ ಶ್ರೀಲಂಕಾದಲ್ಲಿ ತುರ್ತು ಪರಿಸ್ಥಿತಿಯನ್ನು (Emergency in Sri Lanka) ಘೋಷಿಸಿದ್ದಾರೆ. ಶ್ರೀಲಂಕಾ ದೇಶವು ಸಾಮಾಜಿಕ ಅಶಾಂತಿ ಮತ್ತು ದುರ್ಬಲ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿದೆ. ಹೀಗಾಗಿ, ಶ್ರೀಲಂಕಾದಲ್ಲಿ ಮತ್ತೆ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ. ಈ ಹಿಂದೆ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ (Gotabaya Rajapaksa) ಪರಾರಿಯಾದಾಗ ಜನರು ದಂಗೆದ್ದು, ಸರ್ಕಾರಿ ಬಂಗಲೆ, ಕಚೇರಿಗಳಿಗೆ ಮುತ್ತಿಗೆ ಹಾಕಿ, ಪ್ರತಿಭಟನೆ ನಡೆಸಿದ್ದರಿಂದ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು.
ಸಾರ್ವಜನಿಕ ಭದ್ರತೆ, ಸಾರ್ವಜನಿಕ ಸುವ್ಯವಸ್ಥೆಯ ರಕ್ಷಣೆ ಮತ್ತು ಸಮುದಾಯದ ಜೀವನಕ್ಕೆ ಅಗತ್ಯವಾದ ವಸ್ತುಗಳ ಸರಬರಾಜು ಮತ್ತು ಸೇವೆಗಳ ನಿರ್ವಹಣೆಯ ಕಾರಣದಿಂದ ಶ್ರೀಲಂಕಾದಲ್ಲಿ ಸಾರ್ವಜನಿಕ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದು ಸ್ಥಳೀಯ ಮಾಧ್ಯಮ ಔಟ್‌ಲೆಟ್ ಡೈಲಿ ಮಿರರ್ ವರದಿ ಮಾಡಿದೆ.
Acting Sri Lankan President Ranil Wickremesinghe declares a State Of Emergency in the country. pic.twitter.com/ycDwJupUa3
— ANI (@ANI) July 18, 2022
ಸಂವಿಧಾನದ ಪರಿಚ್ಛೇದ 40(1)(C) ಪ್ರಕಾರ, ರಾನಿಲ್ ವಿಕ್ರಮಸಿಂಘೆ ಸಾರ್ವಜನಿಕ ಭದ್ರತಾ ಸುಗ್ರೀವಾಜ್ಞೆಯ ಸೆಕ್ಷನ್ 2 (ಅಧ್ಯಾಯ 40)ರ ಮೂಲಕ ಅವರಿಗೆ ನೀಡಲಾದ ಅಧಿಕಾರಗಳ ಕಾರಣದಿಂದ ತುರ್ತು ಪರಿಸ್ಥಿತಿಯನ್ನು ಘೋಷಿಸಲಾಗಿದೆ. ಶ್ರೀಲಂಕಾದ ಮಾಜಿ ಅಧ್ಯಕ್ಷ ಗೊಟಬಯ ರಾಜಪಕ್ಸ ಭಾರತದಿಂದ ಸಿಂಗಾಪುರ್ಗೆ ಪಲಾಯನ ಮಾಡಿದ ನಂತರ ರಾಜೀನಾಮೆ ನೀಡಿದ್ದರು. ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿರುವ ಅವರ ಅಧಿಕೃತ ನಿವಾಸಕ್ಕೆ 10,000 ಪ್ರತಿಭಟನಾಕಾರರು ನುಗ್ಗಿದ ನಂತರ ಗೊಟಬಯ ರಾಜಪಕ್ಸ ಮೊದಲು ಮಾಲ್ಡೀವ್ಸ್‌ಗೆ ಹಾರಿದ್ದರು. ನಂತರ ಅಲ್ಲಿಂದ ಸಿಂಗಾಪುರ್ಗೆ ಹಾರಿದ್ದರು.
ಇದನ್ನೂ ಓದಿ:Gotabaya Rajapaksa: ಇಂದು ಮಾಲ್ಡೀವ್ಸ್ನಿಂದ ಸಿಂಗಾಪುರ್ಗೆ ಹಾರಲಿದ್ದಾರೆ ಶ್ರೀಲಂಕಾ ಅಧ್ಯಕ್ಷ ಗೊಟಬಯ ರಾಜಪಕ್ಸ
ಅಧ್ಯಕ್ಷೀಯ ಚುನಾವಣೆಗೆ ನಾಮನಿರ್ದೇಶನಗಳು ನಡೆಯಲಿದ್ದು, ಜುಲೈ 20ರಂದು ಶ್ರೀಲಂಕಾದ ನೂತನ ಅಧ್ಯಕ್ಷರನ್ನು ಆಯ್ಕೆ ಮಾಡಲಾಗುವುದು ಎಂದು ಶ್ರೀಲಂಕಾ ಸಂಸತ್ ಪ್ರಕಟಿಸಿದೆ. ಶ್ರೀಲಂಕಾದ ಪ್ರಮುಖ ವಿರೋಧ ಪಕ್ಷದ ನಾಯಕ ಸಜಿತ್ ಪ್ರೇಮದಾಸ್ ಶ್ರೀಲಂಕಾದ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವುದು ಕುತೂಹಲ ಮೂಡಿಸಿದೆ.
ನಾಳೆ ದೆಹಲಿಯಲ್ಲಿ ಸರ್ವಪಕ್ಷ ಸಭೆ: ಶ್ರೀಲಂಕಾದಲ್ಲಿನ ಆರ್ಥಿಕ ಬಿಕ್ಕಟ್ಟಿನ ಕುರಿತು ಮಂಗಳವಾರ ಸಂಜೆ ದೆಹಲಿಯಲ್ಲಿ ಸರ್ವಪಕ್ಷಗಳ ಸಭೆಯನ್ನು ಕರೆಯಲಾಗಿದೆ. ಶ್ರೀಲಂಕಾದಲ್ಲಿ ಸಿಲುಕಿರುವ ತಮಿಳಿಗರಿಗೆ ನೆರವು ನೋಡಲು ಕೇಂದ್ರ ಸಚಿವರಾದ ನಿರ್ಮಲಾ ಸೀತಾರಾಮನ್ ಮತ್ತು ಡಾ. ಎಸ್ ಜೈಶಂಕರ್ ಮಧ್ಯಪ್ರವೇಶಿಸುವಂತೆ ತಮಿಳುನಾಡು ಮೂಲದ ಪಕ್ಷಗಳು ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಸಭೆ ಕರೆಯಲಾಗಿದೆ.
ಇದನ್ನೂ ಓದಿ: ಶ್ರೀಲಂಕಾ ಬಿಕ್ಕಟ್ಟು: ಭಾರತದ ಹಸ್ತಕ್ಷೇಪಕ್ಕೆ ಡಿಎಂಕೆ, ಎಐಎಡಿಎಂಕೆ ಒತ್ತಾಯ, ಜುಲೈ 19ಕ್ಕೆ ಸರ್ವಪಕ್ಷಗಳ ಸಭೆ ಕರೆದ ಕೇಂದ್ರ
ಸಂಸತ್ತಿನ ಮುಂಗಾರು ಅಧಿವೇಶನಕ್ಕೆ ಮುನ್ನ ನಡೆದ ತಮಿಳುನಾಡಿನ ಸ್ಥಳೀಯ ಪಕ್ಷಗಳ ಸಭೆಯಲ್ಲಿ, 7 ದಶಕಗಳಲ್ಲೇ ಅತ್ಯಂತ ಕೆಟ್ಟ ಆರ್ಥಿಕ ತುರ್ತುಸ್ಥಿತಿಯನ್ನು ಎದುರಿಸುತ್ತಿರುವ ನೆರೆಯ ರಾಷ್ಟ್ರ ಶ್ರೀಲಂಕಾದಲ್ಲಿ ನೆಲೆಸಿರುವ ತಮಿಳಿಗರ ರಕ್ಷಣೆಗೆ ಭಾರತ ಮಧ್ಯಪ್ರವೇಶಿಸಬೇಕು ಎಂದು ಡಿಎಂಕೆ ಮತ್ತು ಎಐಎಡಿಎಂಕೆ ಒತ್ತಾಯಿಸಿವೆ.
ಡಿಎಂಕೆ ಮತ್ತು ಎಐಎಡಿಎಂಕೆ ಈ ಎರಡೂ ಪಕ್ಷಗಳು ಭಾರತದ ತಮಿಳು ಜನಸಂಖ್ಯೆಯ ಸ್ಥಿತಿಯನ್ನು ಪ್ರಸ್ತಾಪಿಸಿವೆ. ಕೇಂದ್ರದಲ್ಲಿ ಆಡಳಿತಾರೂಢ ಒಕ್ಕೂಟದ ಭಾಗವಾಗಿರುವ ಎಐಎಡಿಎಂಕೆಯ ಎಂ. ತಂಬಿದುರೈ ಮತ್ತು ತಮಿಳುನಾಡು ಆಡಳಿತ ಪಕ್ಷವಾದ ಡಿಎಂಕೆಯ ಟಿಆರ್ ಬಾಲು ಈ ಬಗ್ಗೆ ಒತ್ತಾಯಿಸಿದ್ದಾರೆ.
Published On - 9:57 am, Mon, 18 July 22