ಕಾಶ್ಮೀರವೂ ಸೇರಿ ವಿಶ್ವದ ಎಲ್ಲ ಮುಸ್ಲಿಮರ ಪರ ದನಿ ಎತ್ತಲು ಹಕ್ಕಿದೆ: ತಾಲಿಬಾನ್ ವಕ್ತಾರ ಸುಹೈಲ್ ಶಾಹೀನ್

Taliban on Kashmir: ತಾಲಿಬಾನಿಗಳು ಈ ಮೊದಲು ಕಾಶ್ಮೀರದ ವಿಚಾರ ಪ್ರಸ್ತಾಪಿಸಿ ಮಾತನಾಡಿದ್ದಾಗ, ಅದು ದೇಶದ ಆಂತರಿಕ ವಿಷಯ ಎಂದು ಹೇಳಿದ್ದರು. ಇದೀಗ ಮಾತು ತಿರುಗಿಸಿರುವುದು ತಾಲಿಬಾನಿಗಳ ನಿಲುವನ್ನು ಅನುಮಾನಿಸುವಂತೆ ಮಾಡಿದೆ.

ಕಾಶ್ಮೀರವೂ ಸೇರಿ ವಿಶ್ವದ ಎಲ್ಲ ಮುಸ್ಲಿಮರ ಪರ ದನಿ ಎತ್ತಲು ಹಕ್ಕಿದೆ: ತಾಲಿಬಾನ್ ವಕ್ತಾರ ಸುಹೈಲ್ ಶಾಹೀನ್
ತಾಲಿಬಾನ್ ವಕ್ತಾರ ಸುಹೇಲ್ ಶಾಹೀನ್
Follow us
TV9 Web
| Updated By: ganapathi bhat

Updated on:Sep 03, 2021 | 4:53 PM

ದೆಹಲಿ: ವಿಶ್ವದಲ್ಲಿ ಇರುವ ಎಲ್ಲಾ ಮುಸ್ಲಿಮರಿಗಾಗಿಯೂ ಧ್ವನಿ ಎತ್ತಲು ತಮಗೆ ಹಕ್ಕಿದೆ ಎಂದು ತಾಲಿಬಾನಿಗಳು ಹೇಳಿಕೊಂಡಿದ್ದಾರೆ. ಕಾಶ್ಮೀರವನ್ನೂ ಸೇರಿ ಮುಸ್ಲಿಂ ಪ್ರದೇಶ ಅಥವಾ ಮುಸ್ಲಿಮರಿಗಾಗಿ ತಾವು ಧ್ವನಿ ಎತ್ತಬಹುದು ಎಂದು ತಿಳಿಸಿದ್ದಾರೆ. ತಾಲಿಬಾನಿಗಳು ಅಫ್ಘಾನಿಸ್ತಾನವನ್ನು ಭಾರತ ವಿರೋಧಿ ಚಟುವಟಿಕೆ ಅಥವಾ ಭಯೋತ್ಪಾದಕ ಕೆಲಸಗಳಿಗೆ ಬಳಸಬಹುದು ಎಂಬ ಬಗ್ಗೆ ಈ ಮೊದಲೇ ಅನುಮಾನಗಳು ದಟ್ಟವಾಗಿದ್ದವು. ಹಾಗೂ ಆ ಬಗ್ಗೆ ಆತಂಕವೂ ಇತ್ತು. ಇದೀಗ ತಾಲಿಬಾನಿಗಳು ನೀಡಿರುವ ಈ ಹೇಳಿಕೆ ಅವರ ನಿಲುವುಗಳ ಬಗ್ಗೆ ಅನುಮಾನ ಹೆಚ್ಚಿಸಿದೆ. ನಾವು ಮುಸ್ಲಿಮರಾಗಿ ಕಾಶ್ಮೀರದಲ್ಲಿ ಇರುವ, ಭಾರತದಲ್ಲಿ ಇರುವ ಅಥವಾ ಯಾವುದೇ ದೇಶದಲ್ಲಿ ಇರುವ ಮುಸ್ಲಿಮರ ಪರವಾಗಿ ಧ್ವನಿ ಎತ್ತಬಹುದು ಎಂದು ತಾಲಿಬಾನ್ ವಕ್ತಾರ ಸುಹೈಲ್ ಶಹೀನ್ ಹೇಳಿದ್ದಾರೆ. ಈ ಬಗ್ಗೆ ಕೆಲ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.

ನಾವು ಮುಸ್ಲಿಮರ ಪರವಾಗಿ ಧ್ವನಿ ಎತ್ತುತ್ತೇವೆ. ಹಾಗೂ ಮುಸ್ಲಿಮರು ಕೂಡ ನಿಮ್ಮ ಸ್ವಂತ ಜನರು, ನಿಮ್ಮ ನಾಗರಿಕರು. ಅವರಿಗೂ ನಿಮ್ಮ ಕಾನೂನಿನ ಅಡಿಯಲ್ಲಿ ಸಮಾನ ಹಕ್ಕು ನೀಡಬೇಕು ಎಂದು ತಿಳಿಸಿದ್ದಾರೆ. ಈ ವಿಚಾರವನ್ನು ಬಿಬಿಸಿ ಉರ್ದು ಜೊತೆಗಿನ ಸಂದರ್ಶನದಲ್ಲಿ ಹೇಳಿದ್ದಾರೆ ಎಂದು ತಿಳಿದುಬಂದಿದೆ.

ಹಾಗೆಂದು ತಾಲಿಬಾನ್ ಸಂಘಟನೆಗೆ ಯಾವುದೇ ದೇಶದ ವಿರುದ್ಧ ಶ್ತಸ್ತ್ರಾಸ್ತ ಪ್ರಯೋಗಿಸುವ ಇರಾದೆ ಇಲ್ಲ ಎಂದೂ ಶಹೀನ್ ಹೇಳಿದ್ದಾರೆ. ತಾಲಿಬಾನಿಗಳು ಈ ಮೊದಲು ಕಾಶ್ಮೀರದ ವಿಚಾರ ಪ್ರಸ್ತಾಪಿಸಿ ಮಾತನಾಡಿದ್ದಾಗ, ಅದು ದೇಶದ ಆಂತರಿಕ ವಿಷಯ ಎಂದು ಹೇಳಿದ್ದರು. ಇದೀಗ ಮಾತು ತಿರುಗಿಸಿರುವುದು ತಾಲಿಬಾನಿಗಳ ನಿಲುವನ್ನು ಅನುಮಾನಿಸುವಂತೆ ಮಾಡಿದೆ.

ಭಾರತದ ವಿದೇಶಾಂಗ ಇಲಾಖೆ ವಕ್ತಾರ ಅರಿಂದಮ್ ಬಾಗ್ಚಿ ಗುರುವಾರ ಮಾತನಾಡಿದ್ದರು. ಆ ವೇಳೆ, ಅಫ್ಘಾನಿಸ್ತಾನದ ನೆಲ ಭಯೋತ್ಪಾದಕ ಕೃತ್ಯಗಳಿಗೆ ಬಳಕೆ ಆಗದಂತೆ ನೋಡಿಕೊಳ್ಳುವುದು ಎಂಬುದು ಭಾರತದ ಮೊದಲ ಉದ್ದೇಶ ಎಂದು ಹೇಳಿಕೆ ನೀಡಿದ್ದರು. ತಾಲಿಬಾನ್ ಜೊತೆಗೆ ಭಾರತದ ಸಂಬಂಧ ಹಾಗೂ ಅದು ಭಯೋತ್ಪಾದಕ ಸಂಘಟನೆ ಅಲ್ಲವೇ ಎಂದು ಪ್ರಶ್ನಿಸಿದಾಗ ಹೀಗೆ ಹೇಳಿದ್ದರು.

ಪಾಕ್ ಆಕ್ರಮಿತ ಕಾಶ್ಮೀರಕ್ಕೆ ಬಂದ 50 ಮಂದಿ ತಾಲಿಬಾನಿಗಳು ಪಾಕಿಸ್ತಾನದ ಬಳಿಕ ಈಗ ಕಾಶ್ಮೀರದ ಮೇಲೆ ತಾಲಿಬಾನಿಗಳ ಕೆಂಗಣ್ಣು ನೆಟ್ಟಿದೆ. ಪಾಕ್ ಆಕ್ರಮಿತ ಕಾಶ್ಮೀರಕ್ಕೆ 50 ತಾಲಿಬಾನಿ ಉಗ್ರರು ಬಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ. ಪಾಕಿಸ್ತಾನದ ಐಎಸ್ಐ ತಾಲಿಬಾನಿ ಉಗ್ರರನ್ನು ಕರೆತಂದಿರುವ ಬಗ್ಗೆ ತಿಳಿದುಬಂದಿದೆ. ಭಾರತ ವಿರುದ್ಧ ದಾಳಿಗೆ ತಾಲಿಬಾನ್ ಉಗ್ರರ ಬಳಕೆಗೆ ಸಂಚು ರೂಪಿಸಲಾಗುತ್ತಿದೆ ಎಂಬ ಅನುಮಾನ ದಟ್ಟವಾಗಿದೆ. ಇಸ್ಲಾಂ ವಿರೋಧಿಗಳಿಂದ ಕಾಶ್ಮೀರವನ್ನು ಸ್ವತಂತ್ರಗೊಳಿಸಿ ಎಂದು ಈಗಾಗಲೇ ಆಲ್‌ಖೈದಾ ಹೇಳಿಕೆ ನೀಡಿದೆ. ಹೀಗಾಗಿ ಭಾರತದ ಮೇಲೆ ದಾಳಿಗೆ ತಾಲಿಬಾನ್ ಉಗ್ರರ ಬಳಕೆಯ ಬಗ್ಗೆ ಸಂಶಯ ಹೆಚ್ಚಿದೆ.

ಇದನ್ನೂ ಓದಿ: Tv9 Exclusive: ಭಾರತ, ಕಾಶ್ಮೀರದ ಬಗ್ಗೆ ನಮ್ಮ ನಿಲುವು ಸ್ಪಷ್ಟವಾಗಿದೆ: ತಾಲಿಬಾನ್ ವಕ್ತಾರ ಸುಹೇಲ್ ಶಾಹಿನ್ ಸಂದರ್ಶನ

ಇದನ್ನೂ ಓದಿ: ಒಮ್ಮೆ ರಷ್ಯಾ, ಮತ್ತೊಮ್ಮೆ ಅಮೆರಿಕ: ದ್ರೋಹ-ವಿಶ್ವಾಸಗಳ ವ್ಯಾಖ್ಯಾನವನ್ನೇ ಬದಲಿಸಬಲ್ಲ ತಂತ್ರಗಾರನಿಗೆ ಅಫ್ಗನ್ ಅಧ್ಯಕ್ಷ ಗಾದಿ

Published On - 3:16 pm, Fri, 3 September 21