Serbia School Shooting: ಸರ್ಬಿಯಾ ಶಾಲೆಯಲ್ಲಿ ಗುಂಡಿನ ದಾಳಿ ನಡೆಸಿದ ಬಾಲಕ; 8 ವಿದ್ಯಾರ್ಥಿಗಳು, ಭದ್ರತಾ ಸಿಬ್ಬಂದಿ ಸಾವು
ಬಾಲಕ ತನ್ನ ಶಿಕ್ಷಕ, ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದು, ಈ ಗುಂಡಿನ ದಾಳಿಯಲ್ಲಿ ಎಂಟು ವಿದ್ಯಾರ್ಥಿಗಳು ಮತ್ತು ಒಬ್ಬ ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ಸರ್ಬಿಯಾದ ಆಂತರಿಕ ಸಚಿವಾಲಯ ತಿಳಿಸಿದೆ.
ಬೆಲ್‌ಗ್ರೇಡ್: 14ರ ಹರೆಯದ ಬಾಲಕನೊಬ್ಬ ಬುಧವಾರ ಬೆಳಗ್ಗೆ ಸರ್ಬಿಯಾದ (Serbia School) ಬೆಲ್‌ಗ್ರೇಡ್ (Belgrade) ತರಗತಿಯೊಂದರಲ್ಲಿ ತನ್ನ ಶಿಕ್ಷಕ, ವಿದ್ಯಾರ್ಥಿಗಳು ಮತ್ತು ಭದ್ರತಾ ಸಿಬ್ಬಂದಿ ಮೇಲೆ ಗುಂಡು ಹಾರಿಸಿದ್ದು, ಈ ಗುಂಡಿನ ದಾಳಿಯಲ್ಲಿ ಎಂಟು ವಿದ್ಯಾರ್ಥಿಗಳು ಮತ್ತು ಒಬ್ಬ ಭದ್ರತಾ ಸಿಬ್ಬಂದಿ ಸಾವಿಗೀಡಾಗಿದ್ದಾರೆ ಎಂದು ಸರ್ಬಿಯಾದ ಆಂತರಿಕ ಸಚಿವಾಲಯ (Serbia’s interior ministry) ತಿಳಿಸಿದೆ. ವ್ಲಾಡಿಸ್ಲಾವ್ ರಿಬ್ನಿಕರ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನಿಯೊಬ್ಬಳ ತಂದೆ ಮಿಲನ್ ಮಿಲೋಸೆವಿಕ್, ತನ್ನ ಮಗಳು ಗುಂಡಿನ ದಾಳಿ ನಡೆದ ತರಗತಿಯಲ್ಲಿದ್ದಾಳೆ ಎಂದು ಹೇಳಿದರು. ಅವಳು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದಳು. ಆ ಬಾಲಕ ಮೊದಲು ಶಿಕ್ಷಕರಿಗೆ ಗುಂಡು ಹಾರಿಸಿದ. ನಂತರ ಎಲ್ಲರ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಮಿಲೋಸೆವಿಕ್ ಬ್ರಾಡ್ಕಾಸ್ಟರ್ N1 ಗೆ ಹೇಳಿದ್ದಾರೆ.
ವೈದ್ಯರು ಶಿಕ್ಷಕನ ಜೀವ ಉಳಿಸಲು ಹೋರಾಡುತ್ತಿದ್ದಾರೆ ಎಂದು ಶಾಲೆ ಇರುವ ಸೆಂಟ್ರಲ್ ವ್ರಕಾರ್ ಜಿಲ್ಲೆಯ ಮೇಯರ್ ಮಿಲನ್ ನೆಡೆಲ್ಜ್ಕೋವಿಕ್ ಹೇಳಿದ್ದಾರೆ.
ಎಂಟು ಮಕ್ಕಳು ಮತ್ತು ಭದ್ರತಾ ಸಿಬ್ಬಂದಿ ಸಾವನ್ನಪ್ಪಿದ್ದಾರೆ. ಶಿಕ್ಷಕರೊಂದಿಗೆ ಆರು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಂತರಿಕ ಸಚಿವಾಲಯದ ಹೇಳಿಕೆ ತಿಳಿಸಿದೆ. ಏಳನೇ ತರಗತಿ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸೆಕ್ಯುರಿಟಿ ಗಾರ್ಡ್ ಮೇಜಿನ ಕೆಳಗೆ ಬಿದ್ದಿರುವುದನ್ನು ನಾನು ನೋಡಿದೆ. ಇಬ್ಬರು ಹುಡುಗಿಯರ ಶರ್ಟ್ ಮೇಲೆ ರಕ್ತದ ಕಲೆಗಳನ್ನೂ ನೋಡಿದೆ. ಅವರು (ಶೂಟರ್) ಶಾಂತ ಮತ್ತು ಉತ್ತಮ ವಿದ್ಯಾರ್ಥಿ ಎಂದು ಅವರು ಹೇಳುತ್ತಾರೆ. ಅವನು ಇತ್ತೀಚೆಗೆ ಅವರ ತರಗತಿಗೆ ಸೇರಿಕೊಂಡಿದ್ ಎಂದು ಮಿಲೋಸೆವಿಕ್ ಹೇಳಿದ್ದಾರೆ.
ಹೆಲ್ಮೆಟ್ ಮತ್ತು ಬುಲೆಟ್ ಪ್ರೂಫ್ ಹೊಂದಿದ್ದ ಅಧಿಕಾರಿಗಳು ಶಾಲೆಯ ಸುತ್ತ ಮುತ್ತಲಿನ ಪ್ರದೇಶವನ್ನು ಸುತ್ತುವರಿದಿದ್ದರು.
ಮಕ್ಕಳು ಶಾಲೆಯಿಂದ ಹೊರಗೆ ಓಡಿಹೋಗುವುದನ್ನು ನಾನು ನೋಡಿದೆ. ಅವರು ಕಿರುಚುತ್ತಿದ್ದರು. ಪೋಷಕರು ಕೂಡಾ ಭಯಭೀತರಾಗಿದ್ದರು. ನಂತರ ನಾನು ಮೂರು ಗುಂಡಿನ ಸದ್ದು ಕೇಳಿದೆ ಎಂದು ವ್ಲಾಡಿಸ್ಲಾವ್ ರಿಬ್ನಿಕರ್ ಪಕ್ಕದ ಪ್ರೌಢಶಾಲೆಗೆ ಹಾಜರಾಗುವ ಹುಡುಗಿಯೊಬ್ಬರು ರಾಜ್ಯ ಟಿವಿ ಆರ್‌ಟಿಎಸ್‌ಗೆ ತಿಳಿಸಿದರು.
ಇದನ್ನೂ ಓದಿ: Australia: ಮೀನು ಹಿಡಿಯಲು ಹೋಗಿ ನಾಪತ್ತೆಯಾಗಿದ್ದ ವ್ಯಕ್ತಿಯ ಮೃತದೇಹ ಮೊಸಳೆಯೊಳಗೆ ಪತ್ತೆ
ಗಾಯಗೊಂಡವರಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಗುಂಡಿನ ದಾಳಿಯ ಹಿಂದಿನ ಉದ್ದೇಶಗಳ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕಟ್ಟುನಿಟ್ಟಾದ ಬಂದೂಕು ಕಾನೂನುಗಳನ್ನು ಹೊಂದಿರುವ ಸರ್ಬಿಯಾದಲ್ಲಿ ಸಾಮೂಹಿಕ ಗುಂಡಿನ ದಾಳಿಗಳು ತುಲನಾತ್ಮಕವಾಗಿ ಅಪರೂಪ. ಆದರೆ 1990 ರ ದಶಕದಲ್ಲಿ ನಡೆದ ಯುದ್ಧಗಳು ಮತ್ತು ಹಿಂಸಾಚಾರ ನಂತರ ಪಶ್ಚಿಮ ಬಾಲ್ಕನ್‌ಗಳು ಅಕ್ರಮ ಶಸ್ತ್ರಾಸ್ತ್ರಗಳಿಂದ ತುಂಬಿವೆ. ಅಕ್ರಮ ಬಂದೂಕುಗಳನ್ನು ಹಸ್ತಾಂತರಿಸಲು ಅಥವಾ ನೋಂದಾಯಿಸಲು ಸರ್ಬಿಯಾದ ಅಧಿಕಾರಿಗಳು ಮಾಲೀಕರಿಗೆ ಹೇಳುತ್ತಲೇ ಇದ್ದಾರೆ.
ಮತ್ತಷ್ಟು ವಿದೇಶ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 4:04 pm, Wed, 3 May 23