ಲಂಡನ್: ಫೈಜರ್/ಬಯೋಎನ್ಟೆಕ್ ಕೊರೊನಾವೈರಸ್ ಲಸಿಕೆಯನ್ನು 12-15 ವಯೋಮಾನದ ಮಕ್ಕಳಿಗೆ ನೀಡಲು ಬ್ರಿಟನ್ ಶುಕ್ರವಾರ ಅನುಮೋದನೆ ನೀಡಿದೆ. ಬ್ರಿಟನ್ನಿನ ಔಷಧ ನಿಯಂತ್ರಕ ಸಂಸ್ಥೆಯಾಗಿರುವ ಮೆಡಿಸಿನ್ಸ್ ಅಂಡ್ ಹೆಲ್ತ್ ಕೇರ್ ಪ್ರಾಡಕ್ಟ್ಸ್ ರೆಗ್ಯುಲೇಟರಿ ಏಜೆನ್ಸಿಯು (ಎಮ್ಎಚ್ಆರ್ಎ) ಮಕ್ಕಳಲ್ಲಿ ಲಸಿಕೆಯ ಸುರಕ್ಷತೆ, ಅದರ ಗುಣಮಟ್ಟ ಮತ್ತು ಪರಿಣಾಮಕತ್ವ ಮುಂತಾದ ಅಂಶಗಳನ್ನು ಪರಿಶೀಲಿಸಿದ ನಂತರ ಲಸಿಕೆಯನ್ನು ಈ ವಯೋಮಾನದ ಮಕ್ಕಳಿಗೆ ನೀಡಲು ಸಮ್ಮತಿ ಸೂಚಿಸಿದೆ.
‘12-15 ವಯೋಮಾನದ ಮಕ್ಕಳಲ್ಲಿ ಕ್ಲಿನಿಕಲ್ ಟ್ರಯಲ್ ಡಾಟಾವನ್ನು ನಾವು ಬಹಳ ಜಾಗರೂಕತೆಯಿಂದ ಪರಿಶೀಲಿಸಿದ ನಂತರ ಫೈಜರ್/ಬಯೋಎನ್ಟೆಕ್ ಕೊರನಾವೈರಸ್ ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿಯಾಗಿದೆ ಎನ್ನುವ ನಿರ್ಧಾರಕ್ಕೆ ಬಂದಿದ್ದೇವೆ. ಈ ವಯೋಮಾನದ ಮಕ್ಕಳಿಗೆ ಲಸಿಕೆ ನೀಡುವುದು ಪ್ರಯೋಜನಕಾರಿ ಆಗಿದೆಯೇ ಹೊರತು ಅದರಿಂದ ಯಾವುದೇ ಅಪಾಯವಿಲ್ಲ,’ ಎಂದು ಎಮ್ಎಮ್ಎಚ್ಆರ್ಎ ಮುಖ್ಯ ನಿರ್ವಹಣಾಧಿಕಾರಿ ಜೂನ್ ರೈನಿ ಹೇಳಿದ್ದಾರೆ
‘ಯನೈಟೆಡ್ ಕಿಂಗಡಮ್ನಲ್ಲಿ ಬಳಸಲು ಅನುಮೋದನೆ ಪಡೆದಿರುವ ಎಲ್ಲ ಕೊವಿಡ್-19 ಲಸಿಕೆಗಳನ್ನು ಸಮಗ್ರ ಸುರಕ್ಷತೆಯ ಪರೀಕ್ಷಣೆಗೆ ಒಳಪಡಿಸಿ ಅವುಗಳ ಸುರಕ್ಷತೆಯನ್ನು ಸತತವಾಗಿ ಮಾನಿಟರ್ ಮಾಡುತ್ತಿರುತ್ತೇವೆ. ಅದರಲ್ಲಿ ಈಗ 12-15 ವಯೋಮಾನದ ಮಕ್ಕಳ ಗುಂಪು ಸಹ ಸೇರಲಿದೆ,’ ಎಂದು ಆಕೆ ಹೇಳಿದ್ದಾರೆ.
ನಿರೀಕ್ಷಿತ ಮಟ್ಟದ ಸುರಕ್ಷತೆ, ಕ್ವಾಲಿಟಿ ಮತ್ತು ಪರಿಣಾಮಕತ್ವ ಸಿಗದೆ ಹೋದರೆ ಲಸಿಕೆ ಅನಮೋದನೆಗೆ ಯೋಗ್ಯವಲ್ಲ ಅಂತ ನಾವು ಪರಿಗಣಿಸುತ್ತೇವೆ ಎಂದು ಜೂನ್ ಹೇಳಿದ್ದಾರೆ.
ಈ ವಯೋಮಾನದವರು ಲಸಿಕೆ ಹಾಕಿಸಿಕೊಳ್ಳುವ ಯೋಜನೆಯಡಿ ಬರುತ್ತಾರೋ ಇಲ್ಲವೋ ಅಂತ ನಿರ್ಧರಿಸುವುದು ವ್ಯಾಕ್ಸಿನೇಶನ್ ಮತ್ತು ಇಮ್ಯುನೈಜೇಷನ್ ಮೇಲಿನ ಜಂಟಿ ಸಮತಿಯ ವಿವೇಚನೆಗೆ ಬಿಟ್ಟ ಸಂಗತಿಯಾಗಿದೆ ಎಂದು ಜೂನ್ ಹೇಳಿದ್ದಾರೆ.
ಯುರೋಪಿಯನ್ ಮೆಡಿಸಿನ್ಸ್ ಏಜೆನ್ಸಿ ಮತ್ತು ಯುಎಸ್ ಫುಡ್ ಮತ್ತು ಡ್ರಗ್ ಅಡ್ಮಿನಿಸ್ಟ್ರೇಷನ್ ಕಳೆದ ತಿಂಗಳು ಯುವ ಜನರನ್ನು ಸಹ ಲಸಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿಸಲು ಮತ್ತು ಫೈಜರ್/ಬಯೋಎನ್ಟೆಕ್ ಕೊರನಾವೈರಸ್ ಲಸಿಕೆ ಪಡೆಯಲು ಅನುಮೋದನೆ ನೀಡಿದ ನಂತರ ಬ್ರಿಟಿಷ್ ಔಷಧ ನಿಯಂತ್ರಕ ಸಂಸ್ಥೆಯು ತನ್ನ ಸಮ್ಮತಿಯನ್ನು ಸೂಚಿಸಿದೆ
ಅಮೇರಿಕಾದಲ್ಲಿ ಬೆಳೆಯುವ ವಯಸ್ಸಿನ ಮಕ್ಕಳಿಗೆ ಲಸಿಕೆ ನೀಡುವುದು ಈಗಾಗಲೇ ಆರಂಭಗೊಂಡಿದೆ ಮತ್ತು ಯುರೋಪಿಯನ್ ಯೂನಿಯನ್ ಸದಸ್ಯ ರಾಷ್ಟ್ರಗಳು ಅದನ್ನು ಈ ತಿಂಗಳು ಶುರು ಮಾಡಲಿವೆ.