ಅಮೆರಿಕಾದಲ್ಲಿ ಏಕ ಕಾಲಕ್ಕೆ 10 ಸಾವಿರ ವಿಮಾನ ಹಾರಾಟ ಸ್ಥಗಿತ! 4,700ಕ್ಕೂ ಹೆಚ್ಚು ಫ್ಲೈಟ್ ಕ್ಯಾನ್ಸಲ್
ಅಮೆರಿಕಾದಲ್ಲಿ FAA ಸಂವಹನ ವ್ಯವಸ್ಥೆಯಲ್ಲಿನ ತಾಂತ್ರಿಕ ವೈಫಲ್ಯದಿಂದ ದೇಶಾದ್ಯಂತ ವಿಮಾನಗಳ ಹಾರಾಟ ಅಸ್ತವ್ಯಸ್ತಗೊಂಡಿದೆ. 22 ವಾಯು ಸಂಚಾರ ನಿಯಂತ್ರಣ ಕೇಂದ್ರಗಳ ಮೇಲೆ ಪರಿಣಾಮ ಬೀರಿದ್ದು, ಸಾವಿರಾರು ವಿಮಾನಗಳು ರದ್ದಾಗಿವೆ ಮತ್ತು ವಿಳಂಬವಾಗಿವೆ. ಸೈಬರ್ ದಾಳಿಯ ಶಂಕೆಯನ್ನು ಅಧಿಕಾರಿಗಳು ತಳ್ಳಿಹಾಕಿದ್ದು, ಹಳೆಯ ವ್ಯವಸ್ಥೆಯನ್ನು ಆಧುನೀಕರಿಸುವ ಅಗತ್ಯವನ್ನು ಒತ್ತಿಹೇಳಿದ್ದಾರೆ. ಈ ವಿಮಾನ ಅವ್ಯವಸ್ಥೆಗೆ ಕಾರಣವೇನು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಮುಖ್ಯಾಂಶಗಳು
- ಅಮೆರಿಕಾದಲ್ಲಿ FAA ಸಂವಹನ ವೈಫಲ್ಯದಿಂದ ಸಾವಿರಾರು ವಿಮಾನಗಳ ಹಾರಾಟ ರದ್ದು.
- ದೇಶದ 22 ವಾಯು ಸಂಚಾರ ನಿಯಂತ್ರಣ ಕೇಂದ್ರಗಳ ಮೇಲೆ ತಾಂತ್ರಿಕ ಸಮಸ್ಯೆ ಪರಿಣಾಮ.
- ಸೈಬರ್ ದಾಳಿ ಶಂಕೆ ತಳ್ಳಿಹಾಕಿದ ಅಧಿಕಾರಿಗಳು, ಹಳೆಯ ವ್ಯವಸ್ಥೆ ಆಧುನೀಕರಣಕ್ಕೆ ಒತ್ತಾಯ.
ಬೆಂಗಳೂರು, ನವೆಂಬರ್ 14: ಅಮೆರಿಕಾದಲ್ಲಿ ವಿಮಾನ ಪ್ರಯಾಣಿಕರಿಗೆ ಭಾರಿ ಸಂಕಷ್ಟ ಎದುರಾಗಿದೆ. ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿನ ಸಂವಹನ ವೈಫಲ್ಯದಿಂದ ದೇಶಾದ್ಯಂತ ವಿಮಾನಗಳ ಹಾರಾಟಕ್ಕೆ ತಾತ್ಕಾಲಿಕ ತಡೆ ನೀಡಲಾಗಿತ್ತು. ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ದೇಶದ ಎಲ್ಲಾ ವಿಮಾನ ನಿಲ್ದಾಣಗಳಿಂದ ಹೊರಡುವ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿತ್ತು. ಇದರಿಂದ ಸಾವಿರಾರು ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದ್ದು, ಲಕ್ಷಾಂತರ ಪ್ರಯಾಣಿಕರು ಪರದಾಡುವಂತಾಗಿದೆ. ಇದೀಗ ವಿಮಾನ ಹಾರಾಟಕ್ಕೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದ್ದರೂ, ವಿಮಾನಯಾನ ಸೇವೆಗಳು ಸಹಜ ಸ್ಥಿತಿಗೆ ಮರಳಲು ಸಮಯ ಬೇಕಾಗಬಹುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.
ಸಂವಹನ ವ್ಯವಸ್ಥೆ ಫೇಲ್ ಆಗಿದ್ದೇಕೆ? 22 ಕೇಂದ್ರಗಳ ಮೇಲೆ ಪರಿಣಾಮ!
ಅಮೆರಿಕದ ಸಾರಿಗೆ ಕಾರ್ಯದರ್ಶಿ ಸೀನ್ ಡಫಿ ನೀಡಿರುವ ಮಾಹಿತಿ ಪ್ರಕಾರ, ಹಳೆಯ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯಲ್ಲಿನ ಸ್ವಿಚ್‌ಗಳು ಮತ್ತು ರೂಟರ್‌ಗಳು ಅತಿಯಾದ ಡೇಟಾ ಒತ್ತಡದಿಂದ ಓವರ್‌ಲೋಡ್ ಆಗಿದ್ದವು. ಇದರಿಂದ ತಪ್ಪಾದ ಹಾಗೂ ಅಸಮಂಜಸ ಮಾಹಿತಿಗಳು ರವಾನೆಯಾಗಿದ್ದು, ಸಂವಹನ ಮತ್ತು ರಾಡಾರ್ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿತ್ತು. ದೇಶದಾದ್ಯಂತ ಇರುವ 22 ಪ್ರಾದೇಶಿಕ ವಾಯು ಸಂಚಾರ ನಿಯಂತ್ರಣ ಕೇಂದ್ರಗಳ ಮೇಲೂ ಇದರ ಪರಿಣಾಮ ಬೀರಿತ್ತು.
ಪೈಲಟ್‌ಗಳು ಮತ್ತು ಏರ್ ಟ್ರಾಫಿಕ್ ಕಂಟ್ರೋಲರ್‌ಗಳ ನಡುವೆ ಸರಿಯಾದ ಸಂವಹನ ಸಾಧ್ಯವಾಗದಿದ್ದರೆ ವಿಮಾನಗಳ ಸುರಕ್ಷತೆಗೆ ಅಪಾಯ ಎದುರಾಗಬಹುದು. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ FAA ವಿಮಾನಗಳ ಟೇಕ್‌ಆಫ್‌ಗೆ ತಡೆ ನೀಡಿತ್ತು. ಆದರೆ ಈಗಾಗಲೇ ಆಕಾಶದಲ್ಲಿದ್ದ ವಿಮಾನಗಳಿಗೆ ಸುರಕ್ಷಿತವಾಗಿ ಲ್ಯಾಂಡ್ ಆಗಲು ಅವಕಾಶ ನೀಡಲಾಗಿತ್ತು.
ಸೈಬರ್ ದಾಳಿ ಶಂಕೆ ತಳ್ಳಿಹಾಕಿದ ಅಧಿಕಾರಿಗಳು!
ಈ ತಾಂತ್ರಿಕ ಸಮಸ್ಯೆಯ ಹಿಂದೆ ಸೈಬರ್ ದಾಳಿ ಅಥವಾ ಕೃತಕ ಬುದ್ಧಿಮತ್ತೆಯ ಕೈವಾಡವಿದೆಯೇ ಎಂಬ ಅನುಮಾನವೂ ವ್ಯಕ್ತವಾಗಿತ್ತು. ಆದರೆ ಪ್ರಾಥಮಿಕ ತನಿಖೆಯಲ್ಲಿ ಸೈಬರ್ ದಾಳಿಯ ಯಾವುದೇ ಪುರಾವೆಗಳು ಸಿಕ್ಕಿಲ್ಲ ಎಂದು ಅಮೆರಿಕದ ಹೋಮ್‌ಲ್ಯಾಂಡ್ ಸೆಕ್ಯುರಿಟಿ ಕಾರ್ಯದರ್ಶಿ ಮಾರ್ಕ್‌ವೇನ್ ಮುಲ್ಲಿನ್ ತಿಳಿಸಿದ್ದಾರೆ. ಮೈಕ್ರೋಸಾಫ್ಟ್ ಸೇವೆಗಳಲ್ಲಿನ ವ್ಯತ್ಯಯಕ್ಕೂ ಈ ಘಟನೆಗೂ ಸಂಬಂಧವಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
ಈ ಘಟನೆಯಿಂದ ಅಮೆರಿಕದಲ್ಲಿ 4 ಸಾವಿರಕ್ಕೂ ಹೆಚ್ಚು ವಿಮಾನಗಳ ಹಾರಾಟ ರದ್ದಾಗಿದ್ದು, 10 ಸಾವಿರಕ್ಕೂ ಅಧಿಕ ವಿಮಾನಗಳು ವಿಳಂಬವಾಗಿವೆ. ಸುಮಾರು 15 ಲಕ್ಷ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ವರದಿಯಾಗಿದೆ. ಏರ್ ಇಂಡಿಯಾ ಕೂಡ ಅಮೆರಿಕಕ್ಕೆ ತೆರಳುವ ಮತ್ತು ಅಲ್ಲಿಂದ ಬರುವ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಬಗ್ಗೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡಿತ್ತು. ಹಳೆಯ ವಾಯು ಸಂಚಾರ ನಿಯಂತ್ರಣ ವ್ಯವಸ್ಥೆಯನ್ನು ಆಧುನೀಕರಿಸಲು 50 ಬಿಲಿಯನ್ ಡಾಲರ್ ಅನುದಾನದ ಅಗತ್ಯವಿದೆ ಎಂದು ಸಾರಿಗೆ ಕಾರ್ಯದರ್ಶಿ ಒತ್ತಾಯಿಸಿದ್ದಾರೆ.
ಇನ್ನಷ್ಟು ವಿದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
