AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಟ್ರಂಪ್ ಆಡಳಿತದ ಕಠಿಣ ನಿಲುವು: ರಷ್ಯಾ ಮತ್ತು ಇರಾನ್ ತೈಲ ವಿನಾಯಿತಿ ರದ್ದು, ಭಾರತದ ಮುಂದಿನ ನಡೆಯೇನು?

ಅಮೆರಿಕವು ರಷ್ಯಾ ಮತ್ತು ಇರಾನ್‌ ಮೇಲಿನ ತೈಲ ಆಮದು ನಿರ್ಬಂಧಗಳ ವಿನಾಯಿತಿಯನ್ನು ರದ್ದುಗೊಳಿಸಿದೆ. ಇತ್ತೀಚೆಗೆ ಈ ರಾಷ್ಟ್ರಗಳಿಂದ ಭಾರಿ ಪ್ರಮಾಣದ ತೈಲ ಆಮದು ಮಾಡಿಕೊಂಡಿದ್ದ ಭಾರತಕ್ಕೆ ಇದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಇಂಧನ ಭದ್ರತೆ ಹಾಗೂ ಅಮೆರಿಕದೊಂದಿಗಿನ ರಾಜತಾಂತ್ರಿಕ ಸಂಬಂಧಗಳ ನಡುವೆ ಸಮತೋಲನ ಕಾಯ್ದುಕೊಳ್ಳುವ ಅನಿವಾರ್ಯತೆ ಭಾರತಕ್ಕಿದೆ. ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಭೀತಿ ಎದುರಾಗಿದೆ.

ಟ್ರಂಪ್ ಆಡಳಿತದ ಕಠಿಣ ನಿಲುವು: ರಷ್ಯಾ ಮತ್ತು ಇರಾನ್ ತೈಲ ವಿನಾಯಿತಿ ರದ್ದು, ಭಾರತದ ಮುಂದಿನ ನಡೆಯೇನು?
ಡೊನಾಲ್ಡ್​ ಟ್ರಂಪ್
ನಯನಾ ರಾಜೀವ್
|

Updated on: Apr 16, 2026 | 8:36 AM

Share

ವಾಷಿಂಗ್ಟನ್, ಏಪ್ರಿಲ್ 16: ವಿಶ್ವದ ಅತಿದೊಡ್ಡ ಆರ್ಥಿಕ ಶಕ್ತಿ ಅಮೆರಿಕ, ರಷ್ಯಾ ಮತ್ತು ಇರಾನ್(Iran) ವಿರುದ್ಧ ತನ್ನ ‘ಆರ್ಥಿಕ ಅಸ್ತ್ರ’ವನ್ನು ಮತ್ತಷ್ಟು ಹರಿತಗೊಳಿಸಿದೆ. ಮಾರ್ಚ್ 11 ರ ಮೊದಲು ಸಮುದ್ರ ಮಾರ್ಗದಲ್ಲಿದ್ದ ತೈಲವನ್ನು ವಿಲೇವಾರಿ ಮಾಡಲು ನೀಡಲಾಗಿದ್ದ ವಿಶೇಷ ಪರವಾನಗಿಯನ್ನು ನವೀಕರಿಸದಿರಲು ಅಮೆರಿಕ ನಿರ್ಧರಿಸಿದೆ. ಇದರೊಂದಿಗೆ, ಇಂಧನಕ್ಕಾಗಿ ಈ ಎರಡು ದೇಶಗಳನ್ನು ಅವಲಂಬಿಸಿರುವ ರಾಷ್ಟ್ರಗಳಿಗೆ ಅಮೆರಿಕ ಕಠಿಣ ಎಚ್ಚರಿಕೆ ನೀಡಿದೆ.

ಭಾರತವು ವಿಶ್ವದ ಅತಿದೊಡ್ಡ ಕಚ್ಚಾ ತೈಲ ಆಮದುದಾರರಲ್ಲಿ ಒಂದು. ಇತ್ತೀಚಿನ ಸಡಿಲಿಕೆಯ ಅವಧಿಯಲ್ಲಿ ಭಾರತವು ರಷ್ಯಾದಿಂದ ಭಾರಿ ಪ್ರಮಾಣದ ತೈಲ ಖರೀದಿಸಿತ್ತು.ಕಳೆದ ವಾರವಷ್ಟೇ ಭಾರತವು ಏಳು ವರ್ಷಗಳ ಸುದೀರ್ಘ ವಿರಾಮದ ನಂತರ ಇರಾನ್‌ನಿಂದ 4 ಮಿಲಿಯನ್ ಬ್ಯಾರೆಲ್ ತೈಲವನ್ನು ಎರಡು ಬೃಹತ್ ಹಡಗುಗಳ ಮೂಲಕ ಪಡೆದುಕೊಂಡಿತ್ತು.

ಏನಿದು ಅಮೆರಿಕದ ಹೊಸ ನಿಲುವು? ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅಮೆರಿಕದ ಖಜಾನೆ ಕಾರ್ಯದರ್ಶಿ ಸ್ಕಾಟ್ ಬೆಸೆಂಟ್, “ರಷ್ಯಾ ಮತ್ತು ಇರಾನ್ ತೈಲದ ಮೇಲಿನ ಸಾಮಾನ್ಯ ಪರವಾನಗಿಯನ್ನು ನಾವು ಇನ್ನು ಮುಂದೆ ವಿಸ್ತರಿಸುವುದಿಲ್ಲ. ಮಾರ್ಚ್ 11 ರ ಒಳಗೆ ಸಮುದ್ರ ಮಾರ್ಗದಲ್ಲಿದ್ದ ತೈಲವನ್ನು ಈಗಾಗಲೇ ಬಳಸಲಾಗಿದೆ. ಹಾಗಾಗಿ ಈ ವಿನಾಯಿತಿಯನ್ನು ಮುಂದುವರಿಸುವ ಅಗತ್ಯವಿಲ್ಲ,” ಎಂದು ಸ್ಪಷ್ಟಪಡಿಸಿದರು. ಭಾರತ ಸರ್ಕಾರವು ತನ್ನಲ್ಲಿ ಸಾಕಷ್ಟು ದಾಸ್ತಾನು ಇರುವುದಾಗಿ ಹೇಳಿಕೊಂಡಿದ್ದರೂ, ಅಮೆರಿಕದ ಈ ಕಠಿಣ ನಿಲುವು ತೈಲ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಭೀತಿ ಹುಟ್ಟಿಸಿದೆ.

ಮತ್ತಷ್ಟು ಓದಿ: ಇರಾನ್ ಮತ್ತೆ ಮಾತುಕತೆಗೆ ಬರಲಿ, ಬರ್ದೇ ಇರ್ಲಿ ಡೋಂಟ್ ಕೇರ್: ಡೊನಾಲ್ಡ್​ ಟ್ರಂಪ್

ಮಧ್ಯಪ್ರಾಚ್ಯದಲ್ಲಿ ಯುದ್ಧದ ವಾತಾವರಣ ನಿರ್ಮಾಣವಾದಾಗ, ತೈಲ ಬೆಲೆ ಏರಿಕೆಯನ್ನು ತಡೆಯಲು ಟ್ರಂಪ್ ಸರ್ಕಾರವು ಈ ವಿನಾಯಿತಿಗಳನ್ನು ನೀಡಿತ್ತು. ಆದರೆ ಈಗ ಆ ಅವಧಿ ಮುಕ್ತಾಯಗೊಳ್ಳುತ್ತಿದ್ದು, ಅಮೆರಿಕವು ಮತ್ತೆ ಈ ದೇಶಗಳ ಮೇಲೆ ‘ಗರಿಷ್ಠ ಒತ್ತಡ’ (Maximum Pressure) ಹೇರುವ ತಂತ್ರಕ್ಕೆ ಮರಳಿದೆ. ಒಂದೆಡೆ ಅಮೆರಿಕ ಬಿಗಿ ನಿಲುವು ತಳೆದಿದ್ದರೆ, ಮತ್ತೊಂದೆಡೆ ಒಮಾನ್‌ನಲ್ಲಿ ಅಮೆರಿಕ ಮತ್ತು ಇರಾನ್ ನಡುವೆ ಎರಡನೇ ಸುತ್ತಿನ ಶಾಂತಿ ಮಾತುಕತೆ ನಡೆಯುವ ಸಾಧ್ಯತೆ ಇದೆ. ಹಾರ್ಮುಜ್ ಜಲಸಂಧಿಯ ಮೂಲಕ ಹಡಗುಗಳ ಸಂಚಾರಕ್ಕೆ ಇರಾನ್ ಅವಕಾಶ ನೀಡಬಹುದು ಎಂಬ ವರದಿಗಳ ಬೆನ್ನಲ್ಲೇ ತೈಲ ಬೆಲೆಯಲ್ಲಿ ಅಲ್ಪ ಇಳಿಕೆ ಕಂಡುಬಂದಿದೆ.

ಭಾರತವು ತನ್ನ ಇಂಧನ ಭದ್ರತೆ ಮತ್ತು ಅಮೆರಿಕದೊಂದಿಗಿನ ರಾಜತಾಂತ್ರಿಕ ಸಂಬಂಧದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕಾದ ಸವಾಲಿನಲ್ಲಿದೆ. ಏಪ್ರಿಲ್ ತಿಂಗಳಿನಲ್ಲಿ ಈ ನಿರ್ಬಂಧಗಳ ವಿನಾಯಿತಿ ಸಂಪೂರ್ಣ ಮುಕ್ತಾಯಗೊಳ್ಳಲಿದ್ದು, ಜಾಗತಿಕ ಮಾರುಕಟ್ಟೆ ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಕುತೂಹಲಕಾರಿಯಾಗಿದೆ.

ಭಾರತಕ್ಕೆ ಸಿಕ್ಕಿದ್ದ ಲಾಭವೇನು? ಈ ನಿರ್ಬಂಧಗಳ ವಿನಾಯಿತಿಯ ಅತಿದೊಡ್ಡ ಫಲಾನುಭವಿ ಭಾರತ ಎಂದರೆ ತಪ್ಪಾಗಲಾರದು. ಹಾರ್ಮುಜ್ ಜಲಸಂಧಿಯ ಬಿಕ್ಕಟ್ಟಿನ ನಡುವೆಯೂ ಭಾರತದ ಸಂಸ್ಕರಣಾಗಾರಗಳು ಸುಮಾರು 30 ಮಿಲಿಯನ್ ಬ್ಯಾರೆಲ್ ರಷ್ಯಾದ ತೈಲಕ್ಕೆ ಆರ್ಡರ್ ನೀಡಿದ್ದವು. ಕಳೆದ ಏಳು ವರ್ಷಗಳಲ್ಲಿ ಮೊದಲ ಬಾರಿಗೆ ಇರಾನ್‌ನಿಂದ ಎರಡು ಬೃಹತ್ ತೈಲ ಹಡಗುಗಳು ಭಾರತದ ಬಂದರನ್ನು ತಲುಪಿದ್ದವು. 2018 ರ ಮೊದಲು ಭಾರತದ ಒಟ್ಟು ತೈಲ ಆಮದಿನಲ್ಲಿ ಇರಾನ್ ಪಾಲು ಶೇ. 11.5 ರಷ್ಟಿತ್ತು.

ಕುತೂಹಲಕಾರಿ ವಿಷಯವೆಂದರೆ, ಟ್ರಂಪ್ ಆಡಳಿತವು ರಷ್ಯಾಕ್ಕೆ ಈ ಹಿಂದೆ ನೀಡಿದ್ದ ವಿನಾಯಿತಿಯನ್ನು ಅಮೆರಿಕದ ವಿರೋಧ ಪಕ್ಷವಾದ ಡೆಮೋಕ್ರಾಟ್‌ಗಳು ತೀವ್ರವಾಗಿ ಖಂಡಿಸಿದ್ದರು. ಟ್ರಂಪ್ ನೀಡಿದ ವಿನಾಯಿತಿಯು ರಷ್ಯಾದ ಯುದ್ಧ ಯಂತ್ರಕ್ಕೆ ದಿನಕ್ಕೆ ಸುಮಾರು 150 ಬಿಲಿಯನ್ ಡಾಲರ್ ಹಣ ಸಿಗುವಂತೆ ಮಾಡಿತು. ಇದು ಉಕ್ರೇನಿಯನ್ ಮಕ್ಕಳ ಹತ್ಯೆಗೆ ರಷ್ಯಾ ಬಳಸುತ್ತಿರುವ ಹಣ ಎಂದು ಸೆನೆಟರ್ ರಿಚರ್ಡ್ ಬ್ಲೂಮೆಂಥಾಲ್ ಕಿಡಿಕಾರಿದ್ದರು.

ಇನ್ನು ಮುಂದೆ ಭಾರತವು ರಷ್ಯಾ ಅಥವಾ ಇರಾನ್‌ನಿಂದ ತೈಲ ಖರೀದಿಸಿದರೆ ಅಮೆರಿಕದ ಕಠಿಣ ನಿರ್ಬಂಧಗಳನ್ನು ಎದುರಿಸಬೇಕಾಗಬಹುದು. ಇದರಿಂದಾಗಿ ರಿಲಯನ್ಸ್‌ನಂತಹ ಪ್ರಮುಖ ಕಂಪನಿಗಳು ಈಗಾಗಲೇ ತಮ್ಮ ಆಮದು ಕಾರ್ಯತಂತ್ರವನ್ನು ಬದಲಾಯಿಸಲು ಶುರು ಮಾಡಿದ್ದು, ಭಾರತವು ತನ್ನ ಇಂಧನ ಅಗತ್ಯಗಳಿಗಾಗಿ ಮತ್ತೆ ಬೇರೆ ದೇಶಗಳತ್ತ ಮುಖ ಮಾಡಬೇಕಾದ ಅನಿವಾರ್ಯತೆ ಎದುರಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Follow Us