ನಾನು ಓಡಿಹೋಗಿಲ್ಲ, 14,131 ಕೋಟಿ ರೂ. ವಸೂಲಿ ಮಾಡಿದ ಮೇಲೂ ನಾನ್ಹೇಗೆ ವಂಚಕ?: ಭಾರತ ಸರ್ಕಾರದ ವಿರುದ್ಧ ವಿಜಯ್ ಮಲ್ಯ ಆಕ್ರೋಶ

ವಿಜಯ್ ಮಲ್ಯ ಭಾರತ ಸರ್ಕಾರ ಮತ್ತು ಮಾಧ್ಯಮಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 14,131 ಕೋಟಿ ರೂ.ಗೂ ಹೆಚ್ಚು ಹಣ ವಸೂಲಿಯಾಗಿದ್ದರೂ, ತಮ್ಮನ್ನು 'ಆರ್ಥಿಕ ಅಪರಾಧಿ' ಎಂದು ಕರೆಯುವುದನ್ನು ಪ್ರಶ್ನಿಸಿದ್ದಾರೆ. ತಾವು ಬ್ರಿಟನ್‌ನ ಖಾಯಂ ನಿವಾಸಿ, ಪಲಾಯನ ಮಾಡಿಲ್ಲ ಎಂದು ಮಲ್ಯ ವಾದಿಸಿದ್ದಾರೆ. ಆದರೆ, ಬಾಂಬೆ ಹೈಕೋರ್ಟ್ ಅವರನ್ನು ಉದ್ದೇಶಪೂರ್ವಕ ತಪ್ಪಿತಸ್ಥ ಎಂದು ತರಾಟೆಗೆ ತೆಗೆದುಕೊಂಡಿದೆ. ಸರ್ಕಾರ ಮಲ್ಯರನ್ನು ಗಡಿಪಾರು ಮಾಡಲು ಯತ್ನಿಸುತ್ತಿದೆ.

ನಾನು ಓಡಿಹೋಗಿಲ್ಲ, 14,131 ಕೋಟಿ ರೂ. ವಸೂಲಿ ಮಾಡಿದ ಮೇಲೂ ನಾನ್ಹೇಗೆ ವಂಚಕ?: ಭಾರತ ಸರ್ಕಾರದ ವಿರುದ್ಧ ವಿಜಯ್ ಮಲ್ಯ ಆಕ್ರೋಶ
ವಿಜಯ್ ಮಲ್ಯ
Image Credit source: Reuters

Updated on: Sep 09, 2026 | 1:38 PM

ಲಂಡನ್, ಸೆಪ್ಟೆಂಬರ್ 09: “ನಾನು ಭಾರತದಿಂದ ಪರಾರಿಯಾದವನಲ್ಲ, 1992ರಿಂದಲೇ ಬ್ರಿಟನ್‌ನ ಖಾಯಂ ನಿವಾಸಿ. ಸಾಲಕ್ಕಿಂತ ದುಪ್ಪಟ್ಟು 14,131 ಕೋಟಿ ರೂ.ಗೂ ಹೆಚ್ಚು ಹಣವನ್ನು ಸರ್ಕಾರ ನನ್ನಿಂದಲೇ ವಸೂಲಿ ಮಾಡಿದೆ. ಆದರೂ ನನ್ನನ್ನು ಇನ್ನೂ ಯಾಕೆ ಆರ್ಥಿಕ ಅಪರಾಧಿ ಎಂದು ಕರೆಯುತ್ತಿದ್ದೀರಿ?” ಎಂದು ವಿಜಯ್ ಮಲ್ಯ ಮತ್ತೊಮ್ಮೆ ಕೇಂದ್ರ ಸರ್ಕಾರದ ವಿರುದ್ಧ ಗುಡುಗಿದ್ದಾರೆ.

ಎಕ್ಸ್ ಖಾತೆಯಲ್ಲಿ ಇಡಿ ಸಲ್ಲಿಸಿದ್ದ ಅಫಿಡವಿಟ್ ದಾಖಲೆಗಳನ್ನು ಮುಂದಿಟ್ಟು ಮಲ್ಯ ಪ್ರಶ್ನಿಸಿದ್ದರೆ, ಇತ್ತ ಬಾಂಬೆ ಹೈಕೋರ್ಟ್ ಮಾತ್ರ ಮಲ್ಯ ಉದ್ದೇಶಪೂರ್ವಕವಾಗಿ ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಕಟುವಾಗಿ ತರಾಟೆಗೆ ತೆಗೆದುಕೊಂಡಿದೆ.

2021ರ ವೇಳೆಗೆ ಜಾರಿ ನಿರ್ದೇಶನಾಲಯ (ED) ತನ್ನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಒಟ್ಟು 14,131.60 ಕೋಟಿ ರೂ. ವಸೂಲಿ ಮಾಡಿದೆ ಎಂದು ಕೋರ್ಟ್ ಅಫಿಡವಿಟ್ ಉಲ್ಲೇಖಿಸಿ ಮಲ್ಯ ವಾದಿಸಿದ್ದಾರೆ. ಬ್ಯಾಂಕುಗಳಿಗೆ ಬರಬೇಕಿದ್ದ ಅಸಲು ಸಾಲ ಸುಮಾರು 6,203 ಕೋಟಿ ರೂ. ಮಾತ್ರವಾಗಿತ್ತು, ಹೀಗಿರುವಾಗ ಹೆಚ್ಚುವರಿ ಹಣ ವಸೂಲಿ ಮಾಡಿರುವ ಸರ್ಕಾರವೇ ನನಗೆ ಬಾಕಿ ಹಣ ನೀಡಬೇಕು ಎಂದು ಅವರು ವಾದ ಮಂಡಿಸಿದ್ದಾರೆ.

ನೌಕರರ ವೇತನ ಪಾವತಿ ಆರೋಪ: ಕಿಂಗ್‌ಫಿಷರ್ ಏರ್‌ಲೈನ್ಸ್ ನೌಕರರಿಗೆ ಬಾಕಿ ಸಂಬಳ ನೀಡಲು ಇಡಿ ತನ್ನ ಜಪ್ತಿ ಮಾಡಿಕೊಂಡ ನಿಧಿಯಿಂದಲೇ 350 ಕೋಟಿಗೂ ಅಧಿಕ ಹಣ ಬಿಡುಗಡೆ ಮಾಡಿದೆ. ನನ್ನ ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದ್ದರಿಂದಲೇ ನಾನಾಗಿಯೇ ನೌಕರರಿಗೆ ಹಣ ಪಾವತಿಸಲು ಸಾಧ್ಯವಾಗಲಿಲ್ಲ ಎಂದು ಮಲ್ಯ ಸಮರ್ಥಿಸಿಕೊಂಡಿದ್ದಾರೆ.

ಮತ್ತಷ್ಟು ಓದಿ: ​​RCB ಮಾರಾಟದ ಬೆನ್ನಲ್ಲೇ ಮಹತ್ವದ ಕೋರಿಕೆ ಇಟ್ಟ ವಿಜಯ್ ಮಲ್ಯ

ಯುಕೆ ಬಿಡಲು ನಿರ್ಬಂಧ: 1992 ರಿಂದಲೂ ಯುನೈಟೆಡ್ ಕಿಂಗ್‌ಡಂನ ಖಾಯಂ ನಿವಾಸಿಯಾಗಿರುವ ತನ್ನನ್ನು ಸ್ಥಳೀಯ ಕಾನೂನು ನಿಯಮಗಳ ಕಾರಣದಿಂದ ದೇಶ ಬಿಟ್ಟು ತೆರಳದಂತೆ ನಿರ್ಬಂಧಿಸಲಾಗಿದೆ; ಆದ್ದರಿಂದ ತಾನು ಭಾರತಕ್ಕೆ ಬರದೆ ಇರುವುದು ಪಲಾಯನವಲ್ಲ ಎಂದು ಮಲ್ಯ ಸ್ಪಷ್ಟನೆ ನೀಡಿದ್ದಾರೆ.

ಮಲ್ಯ ಪೋಸ್ಟ್

ಬಾಂಬೆ ಹೈಕೋರ್ಟ್ ಛೀಮಾರಿ: ಪರಾರಿಯಾದ ಆರ್ಥಿಕ ಅಪರಾಧಿಗಳ ಕಾಯ್ದೆ (FEOA) ಪ್ರಶ್ನಿಸಿ ಮಲ್ಯ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ಬಾಂಬೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಪೀಠ, ನೀವು ಉದ್ದೇಶಪೂರ್ವಕವಾಗಿ ನ್ಯಾಯಾಲಯದ ವ್ಯಾಪ್ತಿಯಿಂದ ದೂರ ಉಳಿದಿದ್ದೀರಿ. ಭಾರತಕ್ಕೆ ಬಂದು ನ್ಯಾಯಾಂಗ ಪ್ರಕ್ರಿಯೆ ಎದುರಿಸದೆ ಯಾವುದೇ ಪರಿಹಾರ ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಖಡಕ್ ಎಚ್ಚರಿಕೆ ನೀಡಿದೆ.

ಕೇಂದ್ರ ಸರ್ಕಾರದ ಅಧಿಕೃತ ನಿಲುವು:2018ರ ಕಾಯ್ದೆಯನ್ವಯ ವಿಜಯ್ ಮಲ್ಯ ಹಾಗೂ ನೀರವ್ ಮೋದಿ ಸೇರಿದಂತೆ 15 ಮಂದಿಯನ್ನು ಪರಾರಿಯಾದ ಆರ್ಥಿಕ ಅಪರಾಧಿಗಳೆಂದು ಘೋಷಿಸಲಾಗಿದೆ. ವಿದೇಶಾಂಗ ಸಚಿವಾಲಯವು ಯುಕೆಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದು, ಕಾನೂನು ಪ್ರಕ್ರಿಯೆಗಳ ಮೂಲಕ ಮಲ್ಯ ಅವರನ್ನು ಭಾರತಕ್ಕೆ ಗಡಿಪಾರು ಮಾಡಿಸಿ ದೇಶೀಯ ನ್ಯಾಯಾಲಯಗಳ ಕಟಕಟೆಯಲ್ಲಿ ನಿಲ್ಲಿಸಲು ಸತತ ಪ್ರಯತ್ನ ನಡೆಸುತ್ತಿದೆ.

ಸಾರ್ವಜನಿಕ ಚರ್ಚೆ: ಸಾಲದ ಮೊತ್ತ ಮರುಪಾವತಿಯಾಗಿದ್ದರೂ, ಬ್ಯಾಂಕ್ ವಂಚನೆ, ಹಣ ವರ್ಗಾವಣೆ ಹಾಗೂ ಉದ್ದೇಶಪೂರ್ವಕ ಸುಸ್ತಿದಾರನಾಗಿ ವಿದೇಶಕ್ಕೆ ತೆರಳಿದ ಅಪರಾಧದ ಹೊಣೆಗಾರಿಕೆಯಿಂದ ಮಲ್ಯ ತಪ್ಪಿಸಿಕೊಳ್ಳಲು ಸಾಧ್ಯವೇ ಎಂಬುದು ಕಾನೂನು ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

 

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Published On - 1:24 pm, Wed, 9 September 26

Loading...
Unable to load recommendations.
Follow Us