Citroen Basalt: ಬಹುನೀರಿಕ್ಷಿತ ಸಿಟ್ರನ್ ಬಸಾಲ್ಟ್ ಎಸ್‌ಯುವಿ ಕೂಪೆ ಭಾರತಕ್ಕೆ ಎಂಟ್ರಿ
ಸಿಟ್ರನ್ ಇಂಡಿಯಾ ಕಂಪನಿಯು ತನ್ನ ಬಹುನೀರಿಕ್ಷಿತ ಬಸಾಲ್ಟ್ ಎಸ್ ಯುವಿ ಕೂಪೆ ಮಾದರಿಯನ್ನು ಭಾರತದಲ್ಲಿ ಅಧಿಕೃತವಾಗಿ ಅನಾವರಣಗೊಳಿಸಿದೆ.
ಹೊಸ ಕಾರುಗಳೊಂದಿಗೆ ಭಾರತದಲ್ಲಿ ಉತ್ತಮ ಬೇಡಿಕೆ ಪಡೆದುಕೊಳ್ಳುತ್ತಿರುವ ಫ್ರೆಂಚ್ ಕಾರು ಉತ್ಪಾದನಾ ಕಂಪನಿಯಾಗಿರುವ ಸಿಟ್ರನ್ (Citroen) ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿದ್ದು, ಇದೀಗ ಹೊಚ್ಚ ಹೊಸ ಬಸಾಲ್ಟ್ ಎಸ್‌ಯುವಿ ಕೂಪೆ ಮಾದರಿಯನ್ನು ಅಧಿಕೃತವಾಗಿ ಅನಾವರಣಗೊಳಿಸಿದೆ. ಹೊಸ ಕಾರು ಭಾರತದಲ್ಲಿ ಮಾತ್ರವಲ್ಲ ದಕ್ಷಿಣ ಅಮೆರಿಕ ಸೇರಿದಂತೆ ಪ್ರಮುಖ ಮಾರುಕಟ್ಟೆಗಳಿಗೆ ಲಗ್ಗೆಯಿಡುತ್ತಿದ್ದು, ಶೀಘ್ರದಲ್ಲಿಯೇ ಹೊಸ ಕಾರು ಖರೀದಿಗೆ ಲಭ್ಯವಿರಲಿವೆ.
ಭಾರತದಲ್ಲಿ ಸದ್ಯ ಸಿ3, ಇಸಿ3, ಸಿ3 ಏರ್ ಕ್ರಾಸ್ ಮತ್ತು ಸಿ5 ಏರ್ ಕ್ರಾಸ್ ಕಾರುಗಳನ್ನು ಮಾರಾಟ ಮಾಡುತ್ತಿರುವ ಸಿಟ್ರನ್ ಕಂಪನಿ ಇದೀಗ 5ನೇ ಕಾರು ಮಾದರಿಯಾಗಿ ಬಸಾಲ್ಟ್ ಎಸ್ ಯುವಿ ಕೂಪೆ ಬಿಡುಗಡೆ ಮಾಡುತ್ತಿದ್ದು, ಇದು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಸಿ3 ಏರ್ ಕ್ರಾಸ್ ಆಧರಿಸಿ ನಿರ್ಮಾಣಗೊಂಡಿದೆ.
ಮಧ್ಯಮ ಕ್ರಮಾಂಕದ ಎಸ್ ಯುವಿ ಕಾರುಗಳಲ್ಲೇ ಅತ್ಯುತ್ತಮ ಫೀಚರ್ಸ್ ಹೊಂದಿರಲಿರುವ ಹೊಸ ಬಸಾಲ್ಟ್ ಕಾರಿನಲ್ಲಿ ಸಿ3 ಏರ್ ಕ್ರಾಸ್ನಲ್ಲಿರುವಂತೆ ಹಲವು ತಾಂತ್ರಿಕ ಅಂಶಗಳನ್ನು ನೀಡಲಾಗಿದ್ದು, ಸ್ಪೋರ್ಟಿ ಲುಕ್ ನೊಂದಿಗೆ ಕ್ರೋಮ್ ಲೈನ್ ಹೊಂದಿರುವ ಚೆವರಾನ್ ಲೊಗೊ, ಎರಡು ಹಂತಗಳಲ್ಲಿ ವಿಭಾಗಗೊಂಡಿರುವ ಫ್ರಂಟ್ ಗ್ರೀಲ್, ಪ್ರೊಜೆಕ್ಟರ್ ಹೆಡ್ ಲ್ಯಾಂಪ್ಸ್, ಎಲ್ಇಡಿ ರನ್ನಿಂಗ್ ಲ್ಯಾಂಪ್ಸ್, ಕ್ಲಾಡಿಂಗ್ ಹೊಂದಿರುವ ವ್ಹೀಲ್ ಆರ್ಚ್, 17 ಇಂಚಿನ ಅಲಾಯ್ ವ್ಹೀಲ್ ಗಳು, ಪೂರ್ಣಪ್ರಮಾಣದಲ್ಲಿ ತೆರೆದುಕೊಳ್ಳುವ ಡೋರ್ ಗಳು, ಹಾಲೋಜೆನ್ ಟೈಲ್ ಲ್ಯಾಂಪ್ಸ್, 3ಡಿ ಎಫೆಕ್ಟ್ ಹೊಂದಿರುವ ಸ್ಪೋರ್ಟಿ ಡ್ಯುಯಲ್ ಟೋನ್ ಬಂಪರ್ ಸೇರಿದಂತೆ ಹಲವಾರು ಫೀಚರ್ಸ್ ನೀಡಲಾಗಿದೆ.
ಹಾಗೆಯೇ ಹೊಸ ಕಾರಿನ ಒಳಭಾಗದ ಫೀಚರ್ಸ್ ಗಳು ಸಹ ಗ್ರಾಹಕರನ್ನು ಸೆಳೆಯಲಿದ್ದು, ಸಿ3 ಏರ್ ಕ್ರಾಸ್ ನಲ್ಲಿರುವಂತೆ ಹೊಸ ವಿನ್ಯಾಸದ ಹ್ವಾಕ್ ಪ್ಯಾನೇಲ್ ನೊಂದಿಗೆ ಟಾಂಗಲ್ ಸ್ವಿಚ್ ಗಳು, ಆಟೋಮ್ಯಾಟಿಕ್ ಎಸಿ, ಅತ್ಯುತ್ತಮವಾಗಿ ಆರ್ಮ್ ರೆಸ್ಟ್, ಹೊಂದಾಣಿಕೆ ಮಾಡಬಹುದಾದ ಹಿಂಬದಿಯ ಆಸನಗಳ ಹೆಡ್ ರೆಸ್ಟ್, ರಿಯರ್ ಎಸಿ ವೆಂಟ್ಸ್ ಜೊತೆಗೆ 470 ಲೀಟರ್ ಸಾಮರ್ಥ್ಯದ ಬೂಟ್ ಸ್ಪೆಸ್ ನೀಡಲಾಗಿದೆ. ಜೊತೆಗೆ ಕನೆಕ್ಟಿವಿ ಸೌಲಭ್ಯಕ್ಕಾಗಿ 10..25 ಇಂಚಿನ ಪ್ಲೊಟರಿಂಗ್ ಇನ್ಪೋಟೈನ್ ಮೆಂಟ್ ಸಿಸ್ಟಂ, 7 ಇಂಚಿನ ಆಲ್ ಡಿಜಿಟಲ್ ಇನ್ ಸ್ಟ್ರುಮೆಂಟ್ ಕ್ಲಸ್ಟರ್, ವೈರ್ ಲೆಸ್ ಸ್ಮಾರ್ಟ್ ಫೋನ್ ಚಾರ್ಜರ್ ಮತ್ತು ತ್ರಿ ಸ್ಪೋಕ್ ಸ್ಟೀರಿಂಗ್ ವ್ಹೀಲ್ ನೀಡಲಾಗಿದೆ.
ಹೊಸ ಕಾರಿನಲ್ಲಿ ಸಿಟ್ರನ್ ಕಂಪನಿಯು 1.2 ಲೀಟರ್ ಪೆಟ್ರೋಲ್ ಎಂಜಿನ್ ಆಯ್ಕೆ ನೀಡಲಾಗಿದ್ದು, ಗ್ರಾಹಕರು ಇದರಲ್ಲಿ ಎರಡು ರೀತಿಯ ಪರ್ಫಾಮೆನ್ಸ್ ಆಯ್ಕೆಗಳನ್ನು ಮಾಡಬಹುದಾಗಿದೆ. ಮೊದಲನೇದಾಗಿ ಆರಂಭಿಕ ಮಾದರಿಯು 5-ಸ್ಪೀಡ್ ಮ್ಯಾನುವಲ್ ಗೇರ್ ಬಾಕ್ಸ್ ಆಯ್ಕೆಯೊಂದಿಗೆ 82 ಹಾರ್ಸ್ ಪವರ್ ಮತ್ತು 115 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಇದರೊಂದಿಗೆ ಟಾಪ್ ಎಂಡ್ ಟರ್ಬೊ ಮಾದರಿಯು 6-ಸ್ಪೀಡ್ ಮ್ಯಾನುವಲ್ ಮತ್ತು 6-ಸ್ಪೀಡ್ ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆಗಳಿದ್ದು, ಇದು 110 ಹಾರ್ಸ್ ಪವರ್ ಮತ್ತು 205 ಎನ್ಎಂ ಟಾರ್ಕ್ ಉತ್ಪಾದಿಸುತ್ತದೆ. ಈ ಮೂಲಕ ಹೊಸ ಕಾರು ಅತ್ಯುತ್ತಮ ಇಂಧನ ದಕ್ಷತೆ ಹೊಂದಿದ್ದು, ಪ್ರತಿ ಲೀಟರ್ ಗೆ ಇದು 18 ಕಿ.ಮೀ ನಿಂದ 19.5 ಕಿ.ಮೀ ಮೈಲೇಜ್ ನೀಡಲಿದೆ.
ಇನ್ನು ಹೊಸ ಕಾರಿನಲ್ಲಿ ಸಿಟ್ರನ್ ಕಂಪನಿಯು ಆರು ಏರ್ ಬ್ಯಾಗ್ ಗಳು, ಎಬಿಎಸ್ ಜೊತೆ ಇಬಿಡಿ, ಇಎಸ್ ಪಿ, ಹಿಲ್ ಹೋಲ್ಡ್ ಅಸಿಸ್ಟ್, ಟೈರ್ ಪ್ರೆಷರ್ ಮಾನಿಟರಿಂಗ್ ಸಿಸ್ಟಂ ಸೇರಿದಂತೆ ಹಲವಾರು ಸುರಕ್ಷಾ ಫೀಚರ್ಸ್ ಗಳಿದ್ದು, ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ, ಹೋಂಡಾ ಎಲಿವೇಟ್ ಕಾರುಗಳಿಗೆ ಪೈಪೋಟಿಯಾಗಿ ಎಕ್ಸ್ ಶೋರೂಂ ಪ್ರಕಾರ ರೂ. 9 ಲಕ್ಷದಿಂದ ರೂ. 14 ಲಕ್ಷ ಬೆಲೆ ಅಂತರದಲ್ಲಿ ಬಿಡುಗಡೆಯಾಗಿದೆ.