AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಭಾರತದಲ್ಲಿ ಹೊಸ ಎಸ್ ಯುವಿ ಬಿಡುಗಡೆ ಮಾಡಲಿದೆ ಹೋಂಡಾ ಕಾರ್ಸ್

ಹೋಂಡಾ ಕಾರ್ಸ್ ಕಂಪನಿಯು ಭಾರತದಲ್ಲಿ ಹೊಸ ಕಂಪ್ಯಾಕ್ಟ್ ಎಸ್ ಯುವಿ ಬಿಡುಗಡೆಗೆ ಸಿದ್ದಗೊಳ್ಳುತ್ತಿದ್ದು, ಹೊಸ ಕಾರು ಮಾದರಿಯನ್ನು ಜಾಗತಿಕ ಮಾರುಕಟ್ಟೆಗಾಗಿ ಪರಿಚಯಿಸುತ್ತಿದೆ. ಹೊಸ ಕಾರು ಮಾದರಿಯು ಮುಂಬರುವ ಕೆಲವೇ ದಿನಗಳಲ್ಲಿ ಭಾರತದಲ್ಲೂ ಬಿಡುಗಡೆಗೆ ಸಿದ್ದಗೊಳ್ಳುತ್ತಿದ್ದು, ಹೊಸ ಕಾರಿನ ವಿಶೇಷತೆಗಳ ಸಂಪೂರ್ಣ ಮಾಹಿತಿ ಇಲ್ಲಿದೆ.

Praveen Sannamani
|

Updated on: Mar 11, 2023 | 9:35 PM

Share

ಭಾರತದಲ್ಲಿ ಹೊಸ ಕಾರುಗಳ ಬಿಡುಗಡೆಗೆ ಸಿದ್ದವಾಗುತ್ತಿರುವ ಹೋಂಡಾ ಕಾರ್ಸ್(Honda Cars) ಕಂಪನಿ ಶೀಘ್ರದಲ್ಲಿಯೇ ಮಧ್ಯಮ ಕ್ರಮಾಂಕದ ಎಸ್ ಯುವಿ ಬಿಡುಗಡೆಯ ಮಾಹಿತಿಯನ್ನ ಖಚಿತಪಡಿಸಿದೆ. ಮಾರುಕಟ್ಟೆಯಲ್ಲಿ ಭಾರೀ ಜನಪ್ರಿಯತೆಯಲ್ಲಿರುವ ಹ್ಯುಂಡೈ ಕ್ರೆಟಾ ಮತ್ತು ಕಿಯಾ ಸೆಲ್ಟೊಸ್ ಕಾರುಗಳಿಗೆ ಪೈಪೋಟಿಯಾಗಿ ಹೊಸ ಕಾರು ಬಿಡುಗಡೆಯಾಗುತ್ತಿದೆ. ಮಾರುಕಟ್ಟೆಯಲ್ಲಿ ಸದ್ಯ ಹೊಸ ಕಾರು ಮಾದರಿಗಳಿಂದ ತೀವ್ರ ಪೈಪೋಟಿ ಎದುರಿಸುತ್ತಿರುವ ಹೋಂಡಾ ಕಂಪನಿ ವಿನೂತನ ಕಾರು ಮಾದರಿಯನ್ನ ಬಿಡುಗಡೆ ಮಾಡುತ್ತಿದ್ದು, ಹೊಸ ಕಾರು ಈ ತಿಂಗಳಾಂತ್ಯಕ್ಕೆ ಅನಾವರಣಗೊಳ್ಳುವ ನೀರಿಕ್ಷೆಯಿದೆ.

ಭಾರತದಲ್ಲಿ ಕಂಪ್ಯಾಕ್ಟ್ ಎಸ್ ಯುವಿ ಕಾರುಗಳ ಕ್ರೇಜ್ ಹೆಚ್ಚುತ್ತಿದ್ದು, ಕಳೆದ ಐದು ವರ್ಷಗಳಲ್ಲಿ ಕಂಪ್ಯಾಕ್ಟ್ ಎಸ್ ಯುವಿ ಕಾರುಗಳ ವಿಭಾಗದಲ್ಲಿನ ಮಾರಾಟ ಬೆಳವಣಿಗೆಯು ಸಾಕಷ್ಟು ಏರಿಕೆಯಾಗಿದೆ. ಈ ವಿಭಾಗದಲ್ಲಿ ಈಗಾಗಲೇ ಹಲವಾರು ಹೊಸ ಕಾರುಗಳು ಮಾರುಕಟ್ಟೆಗೆ ಲಗ್ಗೆಯಿಟ್ಟಿವೆ. ಹೀಗಾಗಿ ಕಂಪ್ಯಾಕ್ಟ್ SUV ವಿಭಾಗಕ್ಕೆ ಇದೀಗ ಹೋಂಡಾ ಕಂಪನಿಯು ತನ್ನ ಮತ್ತೊಂದು ನವೀಕೃತ ಮಾದರಿಯನ್ನು ಬಿಡುಗಡೆ ಮಾಡುತ್ತಿದೆ. ಇದು ಹ್ಯುಂಡೈ ಕ್ರೆಟಾ, ಕಿಯಾ ಸೆಲ್ಟೊಸ್ ಮತ್ತು ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರಾ ಕಾರುಗಳಿಗೆ ಭರ್ಜರಿ ಪೈಪೋಟಿ ನೀಡುವ ನೀರಿಕ್ಷೆಯಿದೆ.

ಹೋಂಡಾ ಕಾರ್ಸ್ ಕಂಪನಿ ಸದ್ಯ ಜಾಗತಿಕ ಮಾರುಕಟ್ಟೆಗಾಗಿ ತನ್ನ ಹೊಸ ಡಬ್ಲ್ಯುಆರ್-ವಿ ಕಂಪ್ಯಾಕ್ಟ್ ಎಸ್ ಯುವಿಯನ್ನು ಬಿಡುಗಡೆ ಮಾಡಿದ್ದು, ಇದೇ ಕಾರು ಮಾದರಿಯನ್ನ ಭಾರತದಲ್ಲಿ ಕೆಲವು ಬದಲಾವಣೆಗಳೊಂದಿಗೆ ಹೆಚ್ಆರ್ ವಿ ಹೆಸರಿನಲ್ಲಿ ಪರಿಚಯಿಸುವ ಸಾಧ್ಯತೆಗಳಿವೆ. ಇತ್ತೀಚೆಗೆ ಕಂಪನಿಯು ಹೊಸ ಕಾರನ್ನ ಇಂಡೋನೇಷ್ಯಾದಲ್ಲಿ ಬಿಡುಗಡೆ ಮಾಡಿದ್ದು, ಮುಂಬರುವ ಕೆಲವೇ ದಿನಗಳಲ್ಲಿ ಭಾರತದಲ್ಲೂ ಬಿಡುಗಡೆಗೆ ಸಿದ್ದವಾಗುತ್ತಿದೆ. ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿನ ಬೇಡಿಕೆಯೆಂತೆ ಹಲವಾರು ಹೊಸ ಫೀಚರ್ಸ್ ಪಡೆದುಕೊಂಡಿರಲಿದೆ.

ಪ್ರತಿಸ್ಪರ್ಧಿ ಮಾದರಿಗಳಿಗೆ ಪೈಪೋಟಿಯಾಗಿ ಹೋಂಡಾ ಕಂಪನಿಯು ಹೊಸ ಕಾರಿನಲ್ಲಿ ಹಲವಾರು ಪ್ರೀಮಿಯಂ ಫೀಚರ್ಸ್ ಜೋಡಣೆ ಮಾಡುತ್ತಿದೆ. ಹೊಸ ಕಾರು ಪ್ರಸ್ತುತ ಮಾರುಕಟ್ಟೆಯಲ್ಲಿರುವ ಪ್ರತಿಸ್ಪರ್ಧಿ ಕಾರಿಗಿಂತಲೂ ಹೆಚ್ಚಿನ ಉದ್ದಳತೆಯೊಂದಿಗೆ ವಿಶಾಲವಾದ ಕ್ಯಾಬಿನ್ ಸ್ಥಳಾವಕಾಶ ಹೊಂದಿರಲಿದೆ. ಈ ಮೂಲಕ ಹೊಸ ಕಾರು ಆರಾಮದಾಯಕ ಪ್ರಯಾಣವನ್ನು ಖಚಿತಪಡಿಸಲಿದ್ದು, ಸ್ಪೋರ್ಟಿ ಲುಕ್ ನಲ್ಲೂ ಮಿಂಚಲಿದೆ.

ಇದರೊಂದಿಗೆ ಹೊಸ ಕಾರಿನಲ್ಲಿ ಹೋಂಡಾ ಕಂಪನಿ ಪವರ್ ಫುಲ್ 1.5 ಲೀಟರ್ ಟರ್ಬೊ ಪೆಟ್ರೋಲ್ ಎಂಜಿನ್ ಜೋಡಣೆ ಮಾಡಲಿದೆ. ಹಾಗೆಯೇ ಸಿಟಿ ಕಾರಿನಲ್ಲಿರುವಂತೆ ಹೈಬ್ರಿಡ್ ಆವೃತ್ತಿಯನ್ನು ಸಹ ಪರಿಚಯಿಸಬಹುದಾಗಿದೆ. ಇದು ಮ್ಯಾನುವಲ್ ಮತ್ತು ಆಟೋಮ್ಯಾಟಿಕ್ ಗೇರ್ ಬಾಕ್ಸ್ ಆಯ್ಕೆ ಹೊಂದಿರಲಿದ್ದು, 121 ಹಾರ್ಸ್ ಪವರ್ ಮತ್ತು 145 ಎನ್ಎಂ ಟಾರ್ಕ್ ಉತ್ಪಾದಿಸಲಿದೆ. ಹಾಗೆಯೇ ಹೊಸ ಕಾರಿನಲ್ಲಿ ಕಂಪನಿಯು ಸಿಟಿ ಸೆಡಾನ್ ಮಾದರಿಯಲ್ಲಿರುವಂತೆ ಗೇರ್ ಬಾಕ್ಸ್ ಆಯ್ಕೆಯನ್ನೇ ಬಳಕೆ ಮಾಡಬಹುದಾಗಿದೆ. ಈ ಮೂಲಕ ಹೊಸ ಕಾರಿನಲ್ಲಿ ಸುರಕ್ಷತೆಗೂ ಹೆಚ್ಚಿನ ಆದ್ಯತೆ ನೀಡಿದ್ದು, ಇದರಲ್ಲಿ 6 ಏರ್ ಬ್ಯಾಗ್ ಗಳು, ಅಡ್ವಾನ್ಸ್ ಡ್ರೈವರ್ ಅಸಿಸ್ಟ್ ಸಿಸ್ಟಂ ಸೇರಿದಂತೆ ಪ್ರಮುಖ ಫೀಚರ್ಸ್ ಗಳಿವೆ. ಜೊತೆಗೆ ಹೊಸ ಕಾರು ಬೆಲೆಯಲ್ಲೂ ಗಮನಸೆಳೆಯಲಿದ್ದು, ಹೊಸ ಕಾರು ರೂ. 12 ಲಕ್ಷದಿಂದ ರೂ. 20 ಲಕ್ಷ ಬೆಲೆ ಹೊಂದಿರಬಹುದಾಗಿದೆ.