Ola Electric: ಇವಿ ಸ್ಕೂಟರ್ ಮಾರಾಟದಲ್ಲಿ ಓಲಾ ಎಲೆಕ್ಟ್ರಿಕ್ ಹೊಸ ದಾಖಲೆ
ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದಲ್ಲಿ ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಮೊದಲ ಬಾರಿಗೆ ಮಾರಾಟದಲ್ಲಿ ಹೊಸ ದಾಖಲೆ ನಿರ್ಮಿಸಿದೆ.
ದೇಶಾದ್ಯಂತ ಎಲೆಕ್ಟ್ರಿಕ್ ವಾಹನಗಳಿಗೆ (Electric Vehicles) ಹೆಚ್ಚುತ್ತಿರುವ ಬೇಡಿಕೆ ಪರಿಣಾಮ ವಿವಿಧ ಇವಿ ವಾಹನ ಉತ್ಪಾದನಾ ಕಂಪನಿಗಳು ಭರ್ಜರಿ ಬೇಡಿಕೆ ಪಡೆದುಕೊಳ್ಳುತ್ತಿದ್ದು, ಎಲೆಕ್ಟ್ರಿಕ್ ಸ್ಕೂಟರ್ ವಿಭಾಗದಲ್ಲಿ ಓಲಾ ಎಲೆಕ್ಟ್ರಿಕ್ (Ola Electric) ಹೊಸ ಸಂಚಲನ ಮೂಡಿಸಿದೆ. ಗ್ರಾಹಕರ ಬೇಡಿಕೆಯೆಂತೆ ವಿವಿಧ ಮಾದರಿಯ ಇವಿ ಸ್ಕೂಟರ್ ಗಳನ್ನು ಮಾರಾಟ ಮಾಡುತ್ತಿರುವ ಓಲಾ ಎಲೆಕ್ಟ್ರಿಕ್ ಕಂಪನಿಯು ಕಳೆದ ತಿಂಗಳು ಮಾರ್ಚ್ ನಲ್ಲಿ ದಾಖಲೆ ಪ್ರಮಾಣದ ಬೇಡಿಕೆ ಪಡೆದುಕೊಂಡಿದೆ.
ಮಾರ್ಚ್ ಅವಧಿಯಲ್ಲಿ ವಿವಿಧ ಎಲೆಕ್ಟ್ರಿಕ್ ವಾಹನ ಕಂಪನಿಗಳಿಗೆ ಭಾರೀ ಪ್ರಮಾಣದ ಬೇಡಿಕೆ ದಾಖಲಾಗಿದ್ದು, ಇದೇ ವೇಳೆ ಓಲಾ ಎಲೆಕ್ಟ್ರಿಕ್ ಕಂಪನಿಯು ಬರೋಬ್ಬರಿ 53 ಸಾವಿರ ಇವಿ ಸ್ಕೂಟರ್ ಗಳನ್ನು ಮಾರಾಟ ಮಾಡಿ ಹೊಸ ದಾಖಲೆ ನಿರ್ಮಿಸಿದೆ.
ಹೊಸ ದಾಖಲೆಯೊಂದಿಗೆ ಓಲಾ ಎಲೆಕ್ಟ್ರಿಕ್ ಕಂಪನಿಯು ಆರ್ಥಿಕ ವರ್ಷಾಂತ್ಯಕ್ಕೆ ಒಟ್ಟು ಶೇ. 115 ರಷ್ಟು ಬೆಳವಣಿಗೆಯೊಂದಿಗೆ 3,28,785 ಯುನಿಟ್ ಇವಿ ಸ್ಕೂಟರ್ ಗಳನ್ನು ಮಾರಾಟ ಮಾಡಿದ್ದು, ಕಳೆದ ವರ್ಷ ಇದೇ ವೇಳೆ 1,52,741 ಇವಿ ಸ್ಕೂಟರ್ ಗಳನ್ನು ಮಾರಾಟ ಮಾಡಿತ್ತು. ಈ ಮೂಲಕ ಓಲಾ ಎಲೆಕ್ಟ್ರಿಕ್ ಕಂಪನಿಯು ವರ್ಷದಿಂದ ವರ್ಷಕ್ಕೆ ದಾಖಲೆ ಮಟ್ಟದ ಬೆಳವಣಿಗೆ ಸಾಧಿಸುತ್ತಿದ್ದು, ಪ್ರತಿ ಸ್ಪರ್ಧಿ ಮಾದರಿಗಳಿಗೆ ಭರ್ಜರಿ ಪೈಪೋಟಿ ನೀಡಿದೆ.
ಇವಿ ಸ್ಕೂಟರ್ ಗಳ ಖರೀದಿ ಮೇಲೆ ಕಳೆದ ತಿಂಗಳು ಹಲವಾರು ಆಫರ್ ನೀಡಿದ್ದ ಓಲಾ ಎಲೆಕ್ಟ್ರಿಕ್ ಕಂಪನಿಯು ಹೆಚ್ಚಿನ ಮಟ್ಟದ ಗ್ರಾಹಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಆಕರ್ಷಕ ಬೆಲೆ ಮತ್ತು ಭರ್ಜರಿ ಮೈಲೇಜ್ ನೊಂದಿಗೆ ಗ್ರಾಹಕರನ್ನು ಆಕರ್ಷಿಸುತ್ತಿವೆ.
ಇದನ್ನೂ ಓದಿ: ಬಿಡುಗಡೆಯಾಗಲಿರುವ ಹೊಸ ಯಮಹಾ ಆರ್‌ಎಕ್ಸ್100 ವಿಶೇಷತೆಗಳೇನು?
ಇನ್ನು ಮಾರುಕಟ್ಟೆಯಲ್ಲಿ ಓಲಾ ಎಲೆಕ್ಟ್ರಿಕ್ ಕಂಪನಿಯು ಸದ್ಯ ಗ್ರಾಹಕರ ಬೇಡಿಕೆಯೆಂತೆ ಎಸ್1 ಪ್ರೊ, ಎಸ್1 ಏರ್, ಎಸ್1 ಎಕ್ಸ್ ಪ್ಲಸ್, ಎಸ್1 ಎಕ್ಸ್(2ಕೆವಿಹೆಚ್), ಎಸ್1 ಎಕ್ಸ್(3ಕೆವಿಹೆಚ್) ಮತ್ತು ಎಸ್1 ಎಕ್ಸ್(4ಕೆವಿಹೆಚ್) ಮಾದರಿಗಳನ್ನು ಮಾರಾಟ ಮಾಡುತ್ತಿದ್ದು, ಮಾರಾಟ ಹೆಚ್ಚಳದೊಂದಿಗೆ ಸರ್ವಿಸ್ ಸೆಂಟರ್ ಗಳ ಸಂಖ್ಯೆಯನ್ನು ಸಹ ಗಮನಾರ್ಹವಾಗಿ ಹೆಚ್ಚಿಸಿದೆ.
ಎಲೆಕ್ಟ್ರಿಕ್ ಸ್ಕೂಟರ್ ಮಾರಾಟದ ನಂತರ ಗ್ರಾಹಕರ ಸೇವೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಓಲಾ ಕಂಪನಿಯು ಸದ್ಯ ದೇಶಾದ್ಯಂತ 414 ಸರ್ವಿಸ್ ಸೆಂಟರ್ ಗಳನ್ನು ತೆರೆದಿದ್ದು, 2024ರ ಏಪ್ರಿಲ್ ಅಂತ್ಯಕ್ಕೆ ಒಟ್ಟು 600 ಸರ್ವಿಸ್ ಸೆಂಟರ್ ಗಳನ್ನು ಹೊಂದಿರುವುದಾಗಿ ಭರವಸೆ ನೀಡಿದೆ. ಹೀಗಾಗಿ ಗ್ರಾಹಕರು ಓಲಾ ಎಲೆಕ್ಟ್ರಿಕ್ ಸ್ಕೂಟರ್ ಆಯ್ಕೆಗೆ ಮುಗಿಬಿಗಿದ್ದು, ಶೀಘ್ರದಲ್ಲಿಯೇ ಮತ್ತಷ್ಟು ಹೊಸ ಇವಿ ಸ್ಕೂಟರ್ ಮತ್ತು ಇವಿ ಬೈಕ್ ಗಳನ್ನು ಬಿಡುಗಡೆ ಮಾಡುವ ಸಿದ್ದತೆಯಲ್ಲಿದೆ.