Teachers Day 2022: ಅಕ್ಷರದ ಜೊತೆಗೆ ಜೀವನದ ಪಾಠ ಕಲಿಸಿದವರು ನಮ್ಮ ಟೀಚರ್
ನನ್ನ ಮೊದಲ ಗುರು ಹೇಳೋಕೆ ಹೇಳ್ತಾರೆ ಜನನಿ ಮೊದಲ ಗುರು ಅಂತ. ಆದರೆ ಅಕ್ಷರವನ್ನು ತನ್ನ ಕೈ ಹಿಡಿದು "ಅ" ದಿಂದ "ಅಮ್ಮ" ಎಂದು ಬರೆಯಲು ಕಲಿಸಿ ಅಷ್ಟು ಮಕ್ಕಳ ಗಲಾಟೆಯನ್ನು ಸಹಿಸಿ ತಾಳ್ಮೆಯಿಂದ ಬೋಧನೆಯನ್ನ, ಕಥೆಯೊಂದಿಗೆ, ಹಾಡನ್ನು ಅಭಿನಯದೊಂದಿಗೆ ಹೇಳಿ ಕೊಟ್ಟವರು.
ಸಾವಿರ ದಿನ ಅಧ್ಯಯನದಲ್ಲಿ ತೊಡಗಿರುವುದಕ್ಕಿಂತ ಒಂದು ದಿನ ಒಳ್ಳೆಯ ಗುರುವಿನ ಜೊತೆಗಿದ್ದರೆ ಸಾಕು, ಇದು ಒಂದು ಜಪಾನಿ ಗಾದೆ ಮಾತು ನನ್ನ ಪಾಲಿಗೆ ಅಕ್ಷರಷ ಸತ್ಯ. ನನ್ನ ಒಂದನೇ ತರಗತಿಯ ಮೆಟ್ಟಿಲು ಹತ್ತಿದ ದಿನ ಇಂತಹ ಏರು ಸ್ವರದ ಅಥವಾ ಗಟ್ಟಿ ಧ್ವನಿಯ ಮತ್ತು ಶಿಸ್ತಿನ ಸಿಪಾಯಿಯಂತಿದ್ದ ಟೀಚರ್ ಸಿಗದೇ ಇರುತ್ತಿದ್ರೆ ನನ್ನ ಅಧ್ಯಯನ, ಅಭ್ಯಾಸ, ಹವ್ಯಾಸಗಳೆಲ್ಲ ಮೊಟಕುಗೊಳ್ಳುತ್ತಿದ್ದವೇನೋ ಅನಿಸ್ತಿದೆ. ಮೊದಲ ಹೆಜ್ಜೆ ಯಾವಾಗಲೂ ಗಟ್ಟಿಯಾಗಿ ಇರ್ಬೇಕು. ನಮ್ಮ ಭಾಷೆಯಲ್ಲಿ ಹೇಳೋದಾದ್ರೆ ಪಂಚಾಂಗ ಗಟ್ಟಿ ಇರ್ಬೇಕು ಅಂತಾರೆ. (ಅಡಿಪಾಯ ಗಟ್ಟಿ ಇರಬೇಕು)
ನನ್ನ ಮೊದಲ ಗುರು ಹೇಳೋಕೆ ಹೇಳ್ತಾರೆ ಜನನಿ ಮೊದಲ ಗುರು ಅಂತ. ಆದರೆ ಅಕ್ಷರವನ್ನು ತನ್ನ ಕೈ ಹಿಡಿದು “ಅ” ದಿಂದ “ಅಮ್ಮ” ಎಂದು ಬರೆಯಲು ಕಲಿಸಿ ಅಷ್ಟು ಮಕ್ಕಳ ಗಲಾಟೆಯನ್ನು ಸಹಿಸಿ ತಾಳ್ಮೆಯಿಂದ ಬೋಧನೆಯನ್ನ, ಕಥೆಯೊಂದಿಗೆ, ಹಾಡನ್ನು ಅಭಿನಯದೊಂದಿಗೆ ಹೇಳಿ ಕೊಟ್ಟ ಗುರುಗಳು ನನ್ನ ಮೊದಲ ಗುರುಯೆಂದು ಹೇಳಲು ಹೆಮ್ಮೆಯೆನಿಸ್ತದೆ.
ನಾನು ಒಂದನೇ ತರಗತಿಗೆ ಸೇರಿದ ಸಂದರ್ಭದಲ್ಲಿ ಅಷ್ಟೂ ಮಕ್ಕಳ ಬೊಬ್ಬೆಯ ಸಹಿಸ್ಕೊಂಡು ಇಂದು ನಾನು ಈ ಮಟ್ಟಕ್ಕೆ ತಲುಪಬೇಕಾದರೆ ಅವರೇ ಕಾರಣ, ಇಂದು ಶಿಕ್ಷಕರ ದಿನಾಚರಣೆಯ ಈ ಸಂದರ್ಭದಲ್ಲಿ ಖಂಡಿತ ನೆನಪು ಮಾಡಿಕೊಳ್ಳಬೇಕಾದ ಗುರುಗಳು ಒಂದನೇ ತರಗತಿಯ ಟೀಚರ್ ಸರೋಜ ಟೀಚರ್
ಯಾವ ವಿದ್ಯಾರ್ಥಿಯಲ್ಲೂ ಬೇಧ -ಭಾವ ಮಾಡದೆ, ತನ್ನ ಸಣ್ಣ ಮಗುವನ್ನು ಜೊತೆಗೆ ಕರ್ಕೊಂಡು ಬಂದು ನಮಗೆ ಪಾಠದ ಜೊತೆಗೆ ನೀತಿ ಕಥೆಗಳನ್ನು ಹೇಳಿಕೊಟ್ಟದ್ದು ಅಲ್ಲದೇ ಹಾಡನ್ನು ಅಭಿನಯದ ಮೂಲಕ ರಾಗವಾಗಿ ಹೇಳಿಕೊಟ್ಟ ಗುರು ಇವರು. ಇಂದು ಅವರಲ್ಲಿ ದೂರವಾಣಿಯ ಮೂಲಕ ಮಾತಾಡುವಾಗ ಅದೇ ಗಾಂಭೀರ್ಯ ಧ್ವನಿ. ಮೊದಲಿಗೆ ಹೆದರಿಕೆ ಆದ್ರೂ ಅವರ ನಗು ಧೈರ್ಯ ತುಂಬುತ್ತದೆ, ನಮಗೆ ಇಂದಿಗೂ ಕೂಡಾ ಯಾರು ಅವರನ್ನು ಹೆಸರು ಹೇಳಿ ಕರೆದದ್ದು ಇಲ್ಲ… ಏನಿದ್ರೂ ಒಂದನೇ ಟೀಚರ್ ಅಂತ ಕರೆಯೋದು.
ಇಂದು ಈ ಮಾತುನ್ನು ನಾನು ಉಲ್ಲೇಖಿಸಲೇ ಬೇಕು. ನಾನು 5ನೇ ತರಗತಿಯಲ್ಲಿ ಇರುವಾಗಲೇ ಬೆಳಿಗ್ಗೆ ಕುಯ್ಯಾರು ಗಂಗಾಧರ ರೈಯವರ ಮನೆಯಿಂದ ಹಾಲಿನ ಡಿಪ್ಪೋಗೆ ಹಾಲು ಕೊಟ್ಟು ಬರುವಾಗ ಅವರಿಗೆ ಸ್ವಲ್ಪ ಹಾಲನ್ನು ಅವರ ಮನೆಗೆ ಕೊಟ್ಟು ಬರುವುದು. ಆ ಹೊತ್ತು ಅವರು ಕಾಫಿ ಕುಡಿತಿದ್ರೆ ನನಗೂ ತಿಂಡಿ ಕಾಫಿ ನೀಡುತ್ತಿದ್ದರು. ಬೇಡ ಅಂದ್ರೂ ಅವರಿಗೆ ನನ್ನ ಹಸಿವು ಅರ್ಥ ಆಗ್ತಿತ್ತು. ಅಷ್ಟೇ ಅಲ್ಲದೇ ಪೆನ್ಸಿಲ್ ಪೆನ್ನು ತಗೋ ಅಂತ ಚಿಲ್ಲರೆ ಕಾಸು ಕೂಡ ನೀಡ್ತಿದ್ರು. ಗುರುಗಳ ಕೈಯಿಂದ ತಗೊಳ್ಬೇಡ ಅಂತ ತಂದೆ ತಾಯಿ ಹೇಳಿದ್ರು.. ಟೀಚರಲ್ಲಿ ಬೇಡ ಅಂದ್ರೆ ಇದು ನಿನ್ನ ಕೆಲಸಕ್ಕೆ ಅಂತ ಜೇಬಿನಲ್ಲಿ ಹಾಕಿ ಒಳಗಡೆ ಹೋಗ್ತಿದ್ರು.
ಇವರಿಗೆ ಸ್ವಲ್ಪ ಸಮಯ ಸಿಕ್ಕಿದ್ರೆ ಸಾಕು ನೀನು ಅಣ್ಣನ ಥರ ಶಾಲೆ ಅರ್ಧಕ್ಕೆ ಬಿಡ್ಬೇಡ. ಚೆನ್ನಾಗಿ ಓದು. ನಿಮಗೆ ಸರ್ಕಾರದ ವಿದ್ಯಾರ್ಥಿ ವೇತನ, ಅಂಕ ಜಾಸ್ತಿ ತೆಗೆದ್ರೆ ಮೆರಿಟ್ ವಿದ್ಯಾರ್ಥಿ ವೇತನ ಎಲ್ಲಾ ಸಿಗುತ್ತೆ. ಅದನ್ನೆಲ್ಲ ಪಡೆದುಕೋ ಎಂದು ಒಂದನೇ ಟೀಚರ್ ಹೇಳುತ್ತಿದ್ದರು. ಯಾವುದೇ ಗುರುಗಳು ವಿದ್ಯಾರ್ಥಿಗಳು ಕೆಟ್ಟವರಾಗಲು ಬಯಸೋದಿಲ್ಲ. ಅಂತ ವಿದ್ಯಾರ್ಥಿಗಳನ್ನು ಕಂಡರೆ ತುಂಬಾ ನೊಂದುಕೊಳ್ಳುವ ಜೀವ ತಂದೆ ತಾಯಿ ಬಿಟ್ರೆ ವಿದ್ಯೆ ಕಲಿಸಿದ ಗುರುಗಳು ಮಾತ್ರ. ಇದೀಗ ನಿವೃತ್ತಿ ಹೊಂದಿ ವಿಶ್ರಾಂತ ಜೀವನವನ್ನು ಮಕ್ಕಳು ಮೊಮ್ಮಕ್ಕಳೊಂದಿಗೆ ಕಳೆಯುತ್ತಿರುವ ನಿಮಗೆ ಆರೋಗ್ಯ ನೆಮ್ಮದಿ ದೇವರು ಕರುಣಿಸಲಿ ಹಾಗು ಶಿಕ್ಷಕರ ದಿನಾಚರಣೆಯ ಶುಭಾಶಯಗಳು
ನಾರಾಯಣ ಕುಂಬ್ರ
ಲ್ಯಾಬ್ ಸಹಾಯಕರು, ರಸಾಯನ ಶಾಸ್ತ್ರ ವಿಭಾಗ, ವಿವೇಕಾನಂದ ಕಾಲೇಜು