ವ್ಯಾಪಾರದ ಚಾಕಲೊಟ್ ತೋರಿಸಿ ಭಾರತ ಪಾಕಿಸ್ತಾನದ ಜಗಳ ನಿಲ್ಲಿಸಿತಾ ಅಮೆರಿಕ?; ಟ್ರಂಪ್ ಹೇಳಿದ್ದು ಸುಳ್ಳೆನ್ನುತ್ತಿದೆ ಸರ್ಕಾರ
Donald Trump's lie?: ಭಾರತ ಮತ್ತು ಪಾಕಿಸ್ತಾನ ದೇಶಗಳೊಂದಿಗೆ ಟ್ರೇಡಿಂಗ್ ಮಾಡುವುದಾಗಿ ಹೇಳಿ ಕದನ ವಿರಾಮಕ್ಕೆ ಒಪ್ಪಿಸಿದ್ದೇವೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು. ಅವರು ಹೇಳಿದ್ದು ಸುಳ್ಳೆಂದು ಹೇಳುತ್ತಿದೆ ಭಾರತದ ಸರ್ಕಾರದ ಮೂಲಗಳು. ಆಪರೇಷನ್ ಸಿಂದೂರದ ಬಳಿಕ ಅಮೆರಿಕದವರು ಭಾರತದೊಂದಿಗೆ ಯಾವ ಟ್ರೇಡಿಂಗ್ ಆಫರ್ ನೀಡಿಲ್ಲ, ಆ ವಿಚಾರವನ್ನೇ ಪ್ರಸ್ತಾಪಿಸಿಲ್ಲ ಎಂದು ವರದಿಗಳು ಹೇಳುತ್ತಿವೆ.

ನವದೆಹಲಿ, ಮೇ 12: ಭಾರತ ಮತ್ತು ಪಾಕಿಸ್ತಾನಕ್ಕೆ ವ್ಯಾಪಾರ ಹೆಚ್ಚಿಸುವ ಭರವಸೆ ನೀಡಿದ ಬಳಿಕ ಆ ಎರಡೂ ದೇಶಗಳು ಕದನ ವಿರಾಮಕ್ಕೆ ಒಪ್ಪಿದವು ಎಂಬರ್ಥದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿಕೆ ನೀಡಿದ್ದರು. ಟ್ರಂಪ್ ಅವರೊಂದಿಗಾಗಲೀ ಅಮೆರಿಕದ ಯಾರೊಂದಿಗಾಗಲೀ ಆಪರೇಷನ್ ಸಿಂದೂರ್ (Operation Sindoor) ಬಳಿಕ ವ್ಯಾಪಾರ ವಿಚಾರವನ್ನು ಸರ್ಕಾರ ಚರ್ಚಿಸಿಲ್ಲ ಎಂದು ಸರ್ಕಾರದ ಮೂಲಗಳು ಹೇಳಿರುವುದನ್ನು ಉಲ್ಲೇಖಿಸಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.
‘ಆಪರೇಷನ್ ಸಿಂದೂರ್ ಶುರುವಾದ ಬಳಿಕ ಮೇ 9ರಂದು ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ನರೇಂದ್ರ ಮೋದಿ ಜೊತೆ ಮಾತನಾಡಿದರು. ಮೇ 8 ಮತ್ತು 10ರಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಅವರು ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಜೊತೆ ಮಾತನಾಡಿದರು. ಮೇ 10 ರಂದು ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೊತೆಯೂ ಮಾತನಾಡಿದರು. ಆ ವೇಳೆ ವ್ಯಾಪಾರ ವಿಚಾರವಾಗಿ ಯಾವ ಚರ್ಚೆಗಳೂ ಆಗಿಲ್ಲ’ ಎಂದು ಮೂಲಗಳು ಖಚಿತಪಡಿಸಿವೆ ಎಂದು ವರದಿಯಲ್ಲಿ ಹೇಳಲಾಗಿದೆ.
ಇದನ್ನೂ ಓದಿ: ಆಪರೇಷನ್ ಸಿಂದೂರ ನಿಂತಿಲ್ಲ: ಉಗ್ರರು, ಪಾಕಿಸ್ತಾನಕ್ಕೆ ಎಚ್ಚರಿಕೆ ಕೊಟ್ಟ ಪ್ರಧಾನಿ ಮೋದಿ
ಡೊನಾಲ್ಡ್ ಟ್ರಂಪ್ ಅವರು ಮೇ 10, ಶನಿವಾರದಂದು ಸಂಜೆ, ಭಾರತ ಮತ್ತು ಪಾಕಿಸ್ತಾನ ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಹೇಳಿ ಎಕ್ಸ್ನಲ್ಲಿ ಪೋಸ್ಟ್ ಮಾಡಿದ್ದರು. ತಾನು ಮಧ್ಯಸ್ತಿಕೆ ವಹಿಸಿ ಭೀಕರ ಯುದ್ಧ ತಪ್ಪಿಸಿದ್ದಾಗಿ ಅವರು ಹೇಳಿಕೊಂಡರು.
ಎರಡು ಪರಮಾಣು ಶಕ್ತ ದೇಶಗಳ ನಡುವೆ ಪರಿಸ್ಥಿತಿ ಕೈಮೀರಿ ಹೋಗುವುದನ್ನು ತಪ್ಪಿಸಲು ತಮ್ಮ ಸರ್ಕಾರ ಮಹತ್ವದ ಪಾತ್ರ ವಹಿಸಿದೆ. ಈ ಎರಡು ದೇಶಗಳ ಮಧ್ಯೆ ಖಾಯಂ ಆಗಿ ಬಿಕ್ಕಟ್ಟು ನಿಲ್ಲಿಸಲು ಮಧ್ಯಸ್ತಿಕೆ ವಹಿಸಿದ್ದೇವೆ ಎಂದರು.
ಇಷ್ಟಕ್ಕೆ ಸುಮ್ಮನಾಗದ ಟ್ರಂಪ್, ‘ನಾವು ಸಾಕಷ್ಟು ಸಹಾಯ ಮಾಡಿದೆವು. ವ್ಯಾಪಾರದ ಮೂಲಕ ಸಹಾಯ ಮಾಡಿದೆವು. ನಿಮ್ಮೊಂದಿಗೆ ಸಾಕಷ್ಟು ವ್ಯಾಪಾರ ಮಾಡುತ್ತೇವೆ. ಇದನ್ನು ಇಲ್ಲಿಗೇ ನಿಲ್ಲಿಸಿ. ನೀವು ನಿಲ್ಲಿಸಿದರೆ ನಾವು ವ್ಯಾಪಾರಕ್ಕೆ ಸಿದ್ಧ. ನೀವು ನಿಲ್ಲಸಿದಿದ್ದರೆ ನಿಮ್ಮೊಂದಿಗೆ ಯಾವ ವ್ಯಾಪಾರವೂ ಇಲ್ಲ’ ಎಂದು ಸುದ್ದಿಗೋಷ್ಠಿಯೊಂದರಲ್ಲಿ ಹೇಳಿದರು.
ಇದನ್ನೂ ಓದಿ: ರಕ್ತ, ನೀರು ಒಟ್ಟಿಗೆ ಹರಿಯಲ್ಲ: ಪಾಕಿಸ್ತಾನಕ್ಕೆ ಖಡಕ್ ಎಚ್ಚರಿಕೆ ಸಂದೇಶ ರವಾನಿಸಿದ ಪ್ರಧಾನಿ ನರೇಂದ್ರ ಮೋದಿ
ಅಂದರೆ, ಭಾರತ ಮತ್ತು ಪಾಕಿಸ್ತಾನ ದೇಶಗಳಿಗೆ ವ್ಯಾಪಾರವೆಂಬ ಚಾಕೊಲೇಟ್ ಆಸೆ ತೋರಿಸಿ ಜಗಳ ನಿಲ್ಲಿಸಿದೆ ಎನ್ನುವ ಅರ್ಥದಲ್ಲಿ ಟ್ರಂಪ್ ಹೇಳಿದ್ದರು. ಆದರೆ, ಆಪರೇಷನ್ ಸಿಂದೂರ ಶುರುವಾದ ಬಳಿಕ ಭಾರತದ ಆಡಳಿತದೊಂದಿಗೆ ಸಂಪರ್ಕದಲ್ಲಿದ್ದ ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಆಗಲೀ, ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೋ ಅವರಾಗಲೀ ವ್ಯಾಪಾರದ ಆಫರ್ ಅನ್ನು ನೀಡಿಯೇ ಇಲ್ಲ ಎಂಬುದು ಸರ್ಕಾರದೊಳಗಿರುವವರ ವಾದ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ