ಬಜೆಟ್ ದಿನ ಕೈಕೊಟ್ಟ ವಿದೇಶೀ ಹೂಡಿಕೆದಾರರು; ಕೈ ಹಿಡಿದ ದೇಶೀ ಹೂಡಿಕೆದಾರರು

Stock market on Budget day: ಮುಂಗಡಪತ್ರ ಮಂಡನೆಯಾದ ಶನಿವಾರ ಷೇರು ಮಾರುಕಟ್ಟೆ ಪ್ರತಿಕ್ರಿಯೆ ಮಿಶ್ರವಾಗಿತ್ತು. ಹೆಚ್ಚಿನ ಏರುಪೇರು ಇಲ್ಲದೆ ಮಾರುಕಟ್ಟೆ ಅಂತ್ಯವಾಯಿತು. ಈ ಮಧ್ಯೆ, ವಿದೇಶೀ ಸಾಂಸ್ಥಿಕ ಹೂಡಿಕೆದಾರರಿಂದ ಷೇರು ಖರೀದಿಗಿಂತ ಷೇರು ಮಾರಾಟವೇ ಹೆಚ್ಚಾಗಿತ್ತು. ದೇಶೀಯ ಹೂಡಿಕೆದಾರರು ಹೆಚ್ಚಿನ ಮೊತ್ತದ ಷೇರುಗಳನ್ನು ಬಿಕರಿ ಮಾಡಿದರೂ, ಅದಕ್ಕಿಂತ ಹೆಚ್ಚು ಖರೀದಿ ಮಾಡಿರುವುದು ದತ್ತಾಂಶದಿಂದ ತಿಳಿದುಬರುತ್ತದೆ.

ಬಜೆಟ್ ದಿನ ಕೈಕೊಟ್ಟ ವಿದೇಶೀ ಹೂಡಿಕೆದಾರರು; ಕೈ ಹಿಡಿದ ದೇಶೀ ಹೂಡಿಕೆದಾರರು
ಮಾರುಕಟ್ಟೆ
Follow us
ಸುಗ್ಗನಹಳ್ಳಿ ವಿಜಯಸಾರಥಿ
|

Updated on: Feb 02, 2025 | 4:34 PM

ನವದೆಹಲಿ, ಫೆಬ್ರುವರಿ 2: ಶನಿವಾರ ಷೇರುಮಾರುಕಟ್ಟೆಗೆ ರಜೆಯ ದಿನವಾದರೂ ನಿನ್ನೆ ಬಜೆಟ್ ಇದ್ದ ಕಾರಣ ಮಾರುಕಟ್ಟೆ ತೆರೆದಿತ್ತು. ಆರಂಭದಿಂದ ಕೊನೆಯವರೆಗೂ ಮಾರುಕಟ್ಟೆ ಅನಿಶ್ಚಿತ ಸ್ಥಿತಿಯಲ್ಲೇ ಗಿರಕಿ ಹೊಡೆಯುತ್ತಿತ್ತು. ವಹಿವಾಟು ಆರಂಭದಲ್ಲಿ ಗರಿಗೆದರಿದ್ದ ಷೇರುಪೇಟೆ, ಕೊನೆಯಲ್ಲಿ ಮಿಶ್ರಫಲ ಕಂಡಿತು. ಸೆನ್ಸೆಕ್ಸ್ ತುಸು ಅಂಕ ಗಳಿಸಿದರೆ, ನಿಫ್ಟಿ ಅಲ್ಪ ಮೊತ್ತದ ಅಂಕ ಕಳೆದುಕೊಂಡಿತು. ಅಂತಿಮವಾಗಿ ಮಾರುಕಟ್ಟೆಗೆ ಹೆಚ್ಚಿನ ಘಾಸಿಯಾಗಲಿಲ್ಲ. ಬಜೆಟ್ ಪರಿಣಾಮವಾಗಿ ಕೆಲ ವಲಯದ ಷೇರುಗಳು ಏರಿಕೆ ಕಂಡವು. ಇನ್ನೂ ಕೆಲವ ವಲಯದ ಷೇರುಗಳು ಬೆಲೆ ಕಳೆದುಕೊಂಡವು.

ಮಾರುಕಟ್ಟೆಯ ಚಲನೆಗೆ ಕಾರಣವಾಗುವುದು ಹೂಡಿಕೆದಾರರು. ಅದರಲ್ಲೂ ಪ್ರಮುಖವಾಗಿ ವಿದೇಶೀ ಹೂಡಿಕೆದಾರರು ಮತ್ತು ದೇಶೀಯ ಹೂಡಿಕೆದಾರರು ಇಲ್ಲಿ ಪ್ರಮುಖ ಪಾತ್ರ ವಹಿಸುತ್ತಾರೆ. ಬಜೆಟ್ ದಿನ ವಿದೇಶೀ ಸಾಂಸ್ಥಿಕ ಹೂಡಿಕೆದಾರರು (ಎಫ್​​ಐಐ) ಷೇರು ಖರೀದಿಗಿಂತ ಮಾರಾಟ ಮಾಡಿದ್ದೇ ಹೆಚ್ಚು. ಇದಕ್ಕೆ ತದ್ವಿರುದ್ಧವಾಗಿ ದೇಶೀಯ ಹೂಡಿಕೆದಾರರು (ಡಿಐಐ) ಮಾರಾಟಕ್ಕಿಂತ ಷೇರು ಖರೀದಿ ಮಾಡಿದ್ದೇ ಹೆಚ್ಚು. ಮಾರುಕಟ್ಟೆ ದತ್ತಾಂಶದ ಪ್ರಕಾರ ಎಫ್​ಐಐಗಳಿಂದ 1,327 ಕೋಟಿ ರೂನಷ್ಟು ನಿವ್ವಳ ಷೇರು ಮಾರಾಟವಾಗಿದೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು 824 ಕೋಟಿ ರೂನಷ್ಟು ನಿವ್ವಳ ಖರೀದಿ ಮಾಡಿದ್ದಾರೆ.

ಇದನ್ನೂ ಓದಿ: ನೆಹರೂ ಕಾಲದಲ್ಲಿ ನೀವು 12 ಲಕ್ಷ ರೂ ಗಳಿಸುತ್ತಿದ್ದರೆ… ಕಾಂಗ್ರೆಸ್ ಪಕ್ಷವನ್ನು ಛೇಡಿಸಿದ ಪ್ರಧಾನಿ ಮೋದಿ

ಶನಿವಾರದ ಟ್ರೇಡಿಂಗ್ ಸೆಷನ್​ನಲ್ಲಿ ಡಿಐಐಗಳು 13,364 ಕೋಟಿ ರೂ ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದಾರೆ. ಹಾಗೆಯೇ, 12,539 ಕೋಟಿ ರೂ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿದ್ದಾರೆ. ಅತ್ತ, ಎಫ್​ಐಐಗಳು ಖರೀದಿ ಮಾಡಿದ ಷೇರುಗಳ ಮೌಲ್ಯ 987 ಕೋಟಿ ರೂ ಆಗಿದ್ದರೆ, 2,314 ಕೋಟಿ ರೂ ಮೌಲ್ಯದ ಷೇರುಗಳನ್ನು ಬಿಕರಿ ಮಾಡಿದ್ದಾರೆ.

ಈ ವರ್ಷ ಜನವರಿ 1ರಿಂದ ಇಲ್ಲಿವರೆಗೆ ಎಫ್​ಐಐಗಳಿಂದ ಆಗಿರುವ ನಿವ್ವಳ ಮಾರಾಟ 88,693 ಕೋಟಿ ರೂನಷ್ಟಿದೆ. ಅದಕ್ಕೆ ಬಹುತೇಕ ಸಮಾನವಾಗಿ ಡಿಐಐಗಳು ಖರೀದಿ ಮಾಡಿದ್ದಾರೆ. ಇವರಿಂದ ಆಗಿರುವ ನಿವ್ವಳ ಖರೀದಿ 87,413 ಕೋಟಿ ರೂ ಮೌಲ್ಯದ ಷೇರುಗಳು.

ಇದನ್ನೂ ಓದಿ: Tariff war: ಅಮೆರಿಕ ವರ್ಸಸ್ ಕೆನಡಾ, ಮೆಕ್ಸಿಕೋ ಚೀನಾ ತೆರಿಗೆ ಯುದ್ಧ; ಭಾರತಕ್ಕಿದೆ ಲಾಭ

ಎಫ್​​ಐಐಗಳ ಮಾರಾಟ ಭರಾಟೆ ಅನಿರೀಕ್ಷಿತವಲ್ಲ…

ಈ ವರ್ಷ ಎಫ್​ಐಐಗಳು ಬಹುತೇಕ ಎಲ್ಲಾ ಟ್ರೇಡಿಂಗ್ ದಿನಗಳಲ್ಲೂ ಖರೀದಿಗಿಂತ ಮಾರಾಟವನ್ನೇ ಹೆಚ್ಚು ಮಾಡಿರುವುದು. ಜನವರಿ 10 ಮತ್ತು ಜನವರಿ 23ರಂದು ಮಾತ್ರ ಆ ಹೂಡಿಕೆದಾರರಿಂದ ನಿವ್ವಳ ಖರೀದಿ ಆಗಿತ್ತು. ಅದು ಬಿಟ್ಟರೆ ಉಳಿದ ದಿನಗಳಲ್ಲಿ ನಿವ್ವಳ ಮಾರಾಟವೇ ದಾಖಲಾಗಿದೆ. ಅದರಲ್ಲೂ ಜನವರಿ 9 ಮತ್ತು 14ರಂದು ನಿವ್ವಳ ಮಾರಾಟವು 7,000 ಕೋಟಿ ರೂಗಿಂತಲೂ ಹೆಚ್ಚಿತ್ತು.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ