ನವದೆಹಲಿ: ಭಾರತದಲ್ಲಿ ಕಡಿಮೆ ಬೆಲೆಗೆ ವಿಮಾನ ಪ್ರಯಾಣ ಸೌಲಭ್ಯ ಒದಿಸುವ ಸಂಸ್ಥೆಗಳ ಗ್ರಹಚಾರ ವಕ್ರವಾದಂತಿದೆ. ಸಾಲ ಮತ್ತು ನಷ್ಟದ ಹೊಡೆತಕ್ಕೆ ಸಾಲು ಸಾಲಾಗಿ ಪತನಗೊಳ್ಳುತ್ತಿವೆ. ಇತ್ತೀಚೆಗಷ್ಟೇ ಗೋ ಫಸ್ಟ್ ಏರ್ಲೈನ್ ಸಂಸ್ಥೆ ತಾನೇ ಖುದ್ದಾಗಿ ಇನ್ಸಾಲ್ವೆನ್ಸಿಗೆ ಮನವಿ ಅರ್ಜಿ ಹಾಕಿದೆ. ಇದೀಗ ಸ್ಪೈಸ್ಜೆಟ್ ಸಂಸ್ಥೆ ವಿರುದ್ಧ ಮೂರನೇ ಇನ್ಸಾಲ್ವೆನ್ಸಿ ಅರ್ಜಿ (Insolvency Plea) ಸಲ್ಲಿಕೆಯಾಗಿದೆ. ಸ್ಪೈಸ್ಜೆಟ್ನಿಂದ ತನ್ನ ಸಾಲ ವಸೂಲಾತಿ ಮಾಡಿಸಿಕೊಡುವಂತೆ ವಿಲ್ಮಿಂಗ್ಟನ್ ಟ್ರಸ್ಟ್ ಎಸ್ಪಿ ಸರ್ವಿಸಸ್ ಸಂಸ್ಥೆ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿ (NCLT- National Company Law Tribunal) ಮೆಟ್ಟಿಲೇರಿದೆ. ವಿಲ್ಮಿಂಗ್ಟನ್ ಟ್ರಸ್ಟ್ ಸಂಸ್ಥೆಯು ವಿಮಾನಗಳನ್ನು ಗುತ್ತಿಗೆಗೆ ನೀಡುವ ಸಂಸ್ಥೆ. ಇದೇ ರೀತಿ ವಿಮಾನ ಗುತ್ತಿಗೆ ನೀಡುವ ಇನ್ನೆರಡು ಕಂಪನಿಗಳೂ ಈ ಮುಂಚೆ ಸ್ಪೈಸ್ಜೆಟ್ ವಿರುದ್ಧ ಇನ್ಸಾಲ್ವೆನ್ಸಿಗೆ ಅರ್ಜಿ ಸಲ್ಲಿಸಿದ್ದವು. ಈ ಅರ್ಜಿಗಳ ವಿಚಾರಣೆ ಎನ್ಸಿಎಲ್ಟಿಯಲ್ಲಿ ನಡೆಯುತ್ತಿದೆ. ವಿಲ್ಮಿಂಗ್ಟನ್ ಟ್ರಸ್ಟ್ ಸಂಸ್ಥೆಯ ಅರ್ಜಿಯ ವಿಚಾರಣೆ ಜೂನ್ 12ರಂದು ನಡೆಯುವ ನಿರೀಕ್ಷೆ ಇದೆ.
ಸ್ಪೈಸ್ಜೆಟ್ನ ಮೂರು ವಿಮಾನಗಳ ನೊಂದಣಿಯನ್ನು ಡಿಜಿಸಿಎ ಕಳೆದ ತಿಂಗಳು (2023 ಮೇ) ರದ್ದು ಮಾಡಿತ್ತು. ಇದರಲ್ಲಿ ವಿಲ್ಮಿಂಗ್ಟನ್ಗೆ ಸೇರಿದ ಒಂದು ವಿಮಾನವೂ ಇದೆ. ವಿಲ್ಮಿಂಗ್ಟನ್ ಟ್ರಸ್ಟ್ ಎಸ್ಪಿ ಸರ್ವಿಸಸ್, ಸಬರಮತಿ ಏವಿಯೇಶನ್ ಲೀಸಿಂಗ್ ಹಾಗೂ ಫಾಲ್ಗು ಏವಿಯೇಶನ್ ಲೀಸಿಂಗ್ ಸಂಸ್ಥೆಗಳು ಸ್ಪೈಸ್ಜೆಟ್ನಿಂದ ಹಣಬಾಕಿ ಪಾವತಿಯಾಗಿಲ್ಲ ಎಂದು ಆರೋಪಿಸಿ, ತಮ್ಮ ವಿಮಾನಗಳನ್ನು ಡೀರಿಜಿಸ್ಟರ್ ಮಾಡುವಂತೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (ಡಿಜಿಸಿಎ) ಬಳಿ ಮನವಿ ಮಾಡಿದ್ದವು. ಅದರಂತೆ ಸ್ಪೈಸ್ಜೆಟ್ನ ವಿಟಿ–ಎಂಎಕ್ಸ್ಜೆ, ಎಂಎಕ್ಸ್ಎಫ್ ಮತ್ತು ಎಸ್ಝಡ್ಜೆ ವಿಮಾನಗಳ ನೊಂದಣಿಯನ್ನು ಡಿಜಿಸಿಎ ರದ್ದು ಮಾಡಿತ್ತು.
ವಿಲ್ಮಿಂಗ್ಟನ್ ಟ್ರಸ್ಟ್ ಎಸ್ಪಿ ಸರ್ವಿಸಸ್ಗಿಂತ ಮುಂಚೆ ಏರ್ಕ್ಯಾಸಲ್ ಮತ್ತು ವಿಲ್ಲಿಸ್ ಲೀಸ್ ಫೈನಾನ್ಸ್ ಸಂಸ್ಥೆಗಳು ಎನ್ಸಿಎಲ್ಟಿ ಬಳಿ ಇನ್ಸಾಲ್ವೆನ್ಸಿಗೆ ಅರ್ಜಿ ಹಾಕಿದ್ದವು. ಇದರಲ್ಲಿ ಏರ್ಕ್ಯಾಸಲ್ ಸಂಸ್ಥೆ ವಿಮಾನಗಳ ಗುತ್ತಿಗೆ ನೀಡುವ ಸಂಸ್ಥೆಯಾದರೆ, ವಿಲ್ಲಿಸ್ ಎಂಜಿನ್ನುಗಳ ಗುತ್ತಿಗೆ ನೀಡುವಂತಹ ಕಂಪನಿ.
ವಿಲ್ಲಿಸ್ ಲೀಸಿಂಗ್ ಕಂಪನಿಯ ಅರ್ಜಿ ಜುಲೈ 4ಕ್ಕೆ ನಿಗದಿಯಾಗಿದ್ದರೆ, ಏರ್ಕ್ಯಾಸಲ್ನ ಅರ್ಜಿಯ ವಿಚಾರಣೆ ಜುಲೈ 17ರಂದು ನಡೆಯಲಿದೆ. ಈಗ ಇನ್ಸಾಲ್ವೆನ್ಸಿ ಕ್ರಮಕ್ಕೆ ಅರ್ಜಿ ಹಾಕಿರುವ ವಿಲ್ಮಿಂಗ್ಟನ್ ಟ್ರಸ್ಟ್ನ ಅರ್ಜಿವಿಚಾರಣೆ ಜೂನ್ 12, ಅಂದರೆ ನಾಳೆಯೇ ನಡೆಯಲಿದೆ. ಈ ಮೂರಷ್ಟೇ ಅಲ್ಲದೇ ಈ ಹಿಂದೆ ಎಕ್ರೆಸ್ ಬ್ಯುಲ್ಡ್ವೆಲ್ ಪ್ರೈ ಲಿ ಎಂಬ ರಿಯಲ್ ಎಸ್ಟೇಟ್ ಸಂಸ್ಥೆಯೂ ಸ್ಪೈಸ್ಜೆಟ್ ವಿರುದ್ಧ ಇನ್ಸಾಲ್ವೆನ್ಸಿಗೆ ಅರ್ಜಿ ಹಾಕಿತ್ತು. ಆದರೆ, ಎರಡೂ ಕಡೆಯಿಂದ ರಾಜಿಸಂಧಾನವಾದ್ದರಿಂದ ತನ್ನ ಅರ್ಜಿಯನ್ನು ಹಿಂಪಡೆಯಲು ನಿರ್ಧರಿಸಿದೆ ರಿಯಲ್ ಎಸ್ಟೇಟ್ ಕಂಪನಿ.
ಇದನ್ನೂ ಓದಿ: RBI: ನೀವು ಬ್ಯಾಂಕ್ನಲ್ಲಿ ಅಡಮಾನ ಇಟ್ಟಿದ್ದ ಮೂಲ ಆಸ್ತಿ ದಾಖಲೆ ಕಳೆದುಹೋದರೆ ಏನಾಗುತ್ತೆ? ಆರ್ಬಿಐ ತರುತ್ತಿದೆ ಹೊಸ ಕಾನೂನು
ಇನ್ನೊಂದೆಡೆ, 2022ರ ವರದಿ ಪ್ರಕಾರ ಸ್ಪೈಸ್ಜೆಟ್ ಸಂಸ್ಥೆ ಸುಮಾರು 1020ಕೋಟಿ ರೂ ಸಾಲ ಹೊಂದಿದೆ. ತಾನು ಇನ್ಸಾಲ್ವೆನ್ಸಿಗೆ ಅರ್ಜಿ ಹಾಕುವ ಪ್ರಮೇಯಕ್ಕೇನೂ ಸಿಲುಕಿಲ್ಲ. ಸರ್ಕಾರದ ಎಮರ್ಜೆನ್ಸಿ ಕ್ರೆಡಿಟ್ ಲೈನ್ ಗ್ಯಾರಂಟಿ ಸ್ಕೀಮ್ನಿಂದ (ಇಸಿಎಲ್ಜಿಎಸ್) 50 ಮಿಲಿಯನ್ ಡಾಲರ್ (ಸುಮಾರು 820 ಕೋಟಿ ರೂ) ಸಾಲ ಸಿಕ್ಕಿದ್ದು ಅದನ್ನು ವಿಮಾನಗಳ ಮರುಚಾಲನೆಗೆ ಬಳಸಿಕೊಳ್ಳಲಾಗುತ್ತಿದೆ. ಇನ್ಸಾಲ್ವೆನ್ಸಿಗೆ ಅರ್ಜಿ ಹಾಕುವ ಉದ್ದೇಶ ಇಲ್ಲ ಎಂದು ಸ್ಪೈಸ್ಜೆಟ್ ಸ್ಪಷ್ಟಪಡಿಸಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ