
ಇದೊಂದು ವಿಚಿತ್ರ ಘಟನೆ. 500 ರೂಪಾಯಿ ವಿಥ್ ಡ್ರಾ ಮಾಡುವುದಕ್ಕೆ ಪ್ರಯತ್ನ ಮಾಡಿದರೆ 2500 ರೂಪಾಯಿ ಬಂದರೆ ಏನನಿಸುತ್ತದೆ? ಹೀಗೆ ಆಗಿರುವುದು ಮಹಾರಾಷ್ಟ್ರದ ನಾಗ್ಪುರದಲ್ಲಿ. ಹೌದು, ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯಲ್ಲಿ ಎಟಿಎಂನಿಂದ (ATM) ರೂ. 500 ಡ್ರಾ ಮಾಡಲು ಪ್ರಯತ್ನಿಸಿದಾಗ ವ್ಯಕ್ತಿಯೊಬ್ಬರು ಆಶ್ಚರ್ಯಕ್ಕೆ ಗುರಿ ಆಗಿದ್ದಾರೆ. ಏಕೆಂದರೆ, ನಗದು ವಿತರಕದಿಂದ ರೂ. 500 ಮುಖಬೆಲೆಯ ಐದು ಕರೆನ್ಸಿ ನೋಟುಗಳನ್ನು ಪಡೆದಿದ್ದಾರೆ. ಅಂದರೆ ಒಂದು ನೋಟು ಬರಬೇಕಾದ ಕಡೆ ಐದು ನೋಟು ಬಂದಿದೆ. ಇದ್ಯಾಕೆ ಹೀಗೆ ಎಂದು ಪರೀಕ್ಷೆ ಮಾಡುವ ಸಲುವಾಗಿ ಈ ಪ್ರಕ್ರಿಯೆಯನ್ನು ಪುನರಾವರ್ತಿಸಿದ್ದಾರೆ. ಆಗ ಕೂಡ ಅವರು ರೂ. 500 ಹಿಂಪಡೆಯಲು ಪ್ರಯತ್ನಿಸಿದಾಗ ಮತ್ತೊಮ್ಮೆ ರೂ. 2,500 ಪಡೆದಿದ್ದಾರೆ. ನಾಗ್ಪುರ ನಗರದಿಂದ ಸುಮಾರು 30 ಕಿಮೀ ದೂರದಲ್ಲಿರುವ ಖಪರ್ಖೇಡಾ ಪಟ್ಟಣದ ಖಾಸಗಿ ಬ್ಯಾಂಕ್‌ನ ಆಟೋಮೆಟಿವ್ ಟೆಲ್ಲರ್ ಮಶೀನ್ (ಎಟಿಎಂ)ನಲ್ಲಿ ಬುಧವಾರ ಈ ಘಟನೆ ಸಂಭವಿಸಿದೆ.
ಈ ಸುದ್ದಿ ಕಾಳ್ಗಿಚ್ಚಿನಂತೆ ಹರಡುತ್ತಿದ್ದಂತೆ ಶೀಘ್ರದಲ್ಲಿ ಎಟಿಎಂ ಕೇಂದ್ರದ ಹೊರಗೆ ನಗದು ಹಿಂಪಡೆಯಲು ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದಾರೆ. ಆ ನಂತರ, ಬ್ಯಾಂಕ್ ಗ್ರಾಹಕರು ಸ್ಥಳೀಯ ಪೊಲೀಸರಿಗೆ ಮಾಹಿತಿ ತಲುಪಿಸಿದ್ದಾರೆ. ಅವರು ಸ್ಥಳಕ್ಕೆ ಧಾವಿಸಿ ಎಟಿಎಂ ಕೇಂದ್ರವನ್ನು ಮುಚ್ಚಿ, ಬ್ಯಾಂಕ್‌ಗೆ ಮಾಹಿತಿ ನೀಡಿದರು ಎಂದು ಖಪರ್ಖೇಡ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತಾಂತ್ರಿಕ ದೋಷದಿಂದ ಎಟಿಎಂ ಹೆಚ್ಚುವರಿ ಹಣ ನೀಡುತ್ತಿದೆ ಎಂಬ ಮಾಹಿತಿ ತಿಳಿಸಲಾಗಿದೆ. ರೂ. 100 ಮುಖಬೆಲೆಯ ನೋಟುಗಳನ್ನು ವಿತರಿಸಲು ಎಟಿಎಂ ಟ್ರೇನಲ್ಲಿ ರೂ. 500 ಮುಖಬೆಲೆಯ ಕರೆನ್ಸಿ ನೋಟುಗಳನ್ನು ತಪ್ಪಾಗಿ ಇಡಲಾಗಿದೆ ಎಂದು ಅಧಿಕಾರಿ ತಿಳಿಸಿದ್ದಾರೆ. ಈ ಸಂಬಂಧ ಇದುವರೆಗೆ ಯಾವುದೇ ಪ್ರಕರಣ ದಾಖಲಾಗಿಲ್ಲ ಎಂದು ಅವರು ಮಾಹಿತಿ ನೀಡಿದ್ದಾರೆ.
ಇನ್ನಷ್ಟು ವಾಣಿಜ್ಯ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ:Viral Video: ಎಟಿಎಂನಲ್ಲಿ ಹಣ ಡ್ರಾ ಮಾಡಿದ ಖುಷಿಗೆ ಸ್ಟೆಪ್ ಹಾಕಿ, ಸೆಲ್ಯೂಟ್ ಹೊಡೆದ ಯುವತಿ; ವಿಡಿಯೋ ಇಲ್ಲಿದೆ