Edible Oil: ಬ್ರ್ಯಾಂಡೆಡ್ ಕಂಪೆನಿಗಳ ಖಾದ್ಯ ತೈಲ ಲೀಟರ್ಗೆ 15 ರೂಪಾಯಿ ತನಕ ಕಡಿಮೆ
ಪ್ರಮುಖ ಖಾದ್ಯ ತೈಲ ಬೆಲೆಯಲ್ಲಿ ಲೀಟರ್ಗೆ 15 ರೂಪಾಯಿ ಇಳಿಕೆ ಆಗಿದೆ. ಹೀಗೆ ಬೆಲೆ ಇಳಿಕೆ ಆಗಿರುವುದರ ಹಿಂದಿನ ಕಾರಣ ಏನು ಎಂಬ ವಿವರ ಇಲ್ಲಿದೆ.
ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೆಲೆ ಇಳಿಕೆ ಆಗಿರುವುದರಿಂದ ಬ್ರ್ಯಾಂಡೆಡ್ ತಾಳೆ ಎಣ್ಣೆ, ಸೂರ್ಯಕಾಂತಿ ಮತ್ತು ಸೋಯಾಬೀನ್ ಎಣ್ಣೆ ಬೆಲೆ ಕೂಡ ಲೀಟರ್ಗೆ 15 ರೂಪಾಯಿ ತನಕ ಕಡಿಮೆ ಆಗಿದೆ. ತಾಳೆ ಎಣ್ಣೆ ಬೆಲೆ ಲೀಟರ್ಗೆ 7ರಿಂದ 8 ರೂಪಾಯಿ ದರ ಇಳಿಕೆ ಆಗಿದೆ. ಸೂರ್ಯಕಾಂತಿ ಎಣ್ಣೆ ದರ ಲೀಟರ್ಗೆ 10ರಿಂದ 15 ರೂಪಾಯಿ ಕಡಿಮೆ ಆಗಿದ್ದು, ಇನ್ನು ಸೋಯಾಬೀನ್ ಎಣ್ಣೆ ದರ ಲೀಟರ್ಗೆ 5 ರೂಪಾಯಿ ಕೆಳಗೆ ಇಳಿದಿದೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಬೆಲೆಯಲ್ಲಿ ಇಳಿಕೆ ಆಗಿರುವುದರಿಂದ ಬೇಡಿಕೆ ಜಾಸ್ತಿ ಆಗಬಹುದು ಎಂಬ ನಿರೀಕ್ಷೆಯಲ್ಲಿ ವಿತರಕರು ದಾಸ್ತಾನು ಮಾಡುವುದು ಹೆಚ್ಚಿಸಿದ್ದಾರೆ. ಖಾದ್ಯ ತೈಲದ ಬೆಲೆಯಲ್ಲಿ ಇಳಿಕೆ ಆಗಿರುವುದು ಆಹಾರ ಹಣದುಬ್ಬರದ ಮೇಲೆ ಪರಿಣಾಮ ಬೀರಲಿದೆ. ಆಹಾರ ಹಣದುಬ್ಬರದ ಪ್ರಮುಖ ಕೊಡುಗೆ ಖಾದ್ಯ ತೈಲದ್ದಾಗಿದೆ (Edible Oil).
ಖಾದ್ಯ ತೈಲ ಹಾಗೂ ಫ್ಯಾಟ್ ವಿಭಾಗವು ಮೇ ತಿಂಗಳಲ್ಲಿ ಶೇ 13.26ರಷ್ಟು ಕೊಡುಗೆ ನೀಡಿವೆ. ಇದಕ್ಕೆ ಬಹುತೇಕ ಕಾರಣ ಆಗಿದ್ದು ಕಳೆದ ಒಂದು ವರ್ಷದಿಂದ ಏರಿಕೆ ಕಾಣುತ್ತಾ ಬಂದಿದ್ದಾಗಿತ್ತು ಎಂದು ಇಂಡಿಯನ್ ವೆಜಿಟೇಬಲ್ ಆಯಿಲ್ ಪ್ರೊಡ್ಯೂಸರ್ಸ್ ಅಸೋಸಿಯೇಷನ್ ಅಧ್ಯಕ್ಷ ಸುಧಾಕರ್ ರಾವ್ ಹೇಳಿದ್ದಾಗಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಹೈದರಾಬಾದ್ ಮೂಲದ ಜೆಮಿನಿ ಎಡಿಬಲ್ಸ್ ಅಂಡ್ ಫ್ಯಾಟ್ಸ್ ತನ್ನ ಫ್ರೀಡಂ ಸನ್ಫ್ಲವರ್ ತೈಲದ ಬೆಲೆಯನ್ನು ಲೀಟರ್ಗೆ 15 ರೂಪಾಯಿ ಇಳಿಸಿದ್ದು, ಈಗ ಲೀಟರ್ಗೆ 220 ರೂಪಾಯಿ ಇದೆ. ಕಳೆದ ವಾರವಷ್ಟೇ ಬೆಲೆ ಇಳಿಸಿರುವ ಕಂಪೆನಿ, ಮುಂದಿನ ವಾರ ಇನ್ನೂ 20 ರೂಪಾಯಿ ಇಳಿಸಲಿದ್ದು, ಬೆಲೆ ಲೀಟರ್ಗೆ 200 ರೂಪಾಯಿ ಆಗಲಿದೆ. ಈ ಮಧ್ಯೆ ಭಾರತದ ತಾಳೆ ಎಣ್ಣೆ ರಫ್ತು ಮೇ ತಿಂಗಳಲ್ಲಿ ಅದರ ಒಂದು ತಿಂಗಳ ಹಿಂದಿನ ಅವಧಿಗಿಂತ ಶೇ 10ರಷ್ಟು ಕಡಿಮೆಯಾಗಿದೆ. ಇದಕ್ಕೆ ಕಾರಣ ಆಗಿದ್ದು ಇಂಡೋನೇಷ್ಯಾದಿಂದ ಖಾದ್ಯ ತೈಲದ ರಫ್ತಿನ ಮೇಲೆ ಹೇರಿದ ನಿರ್ಬಂಧ. ಏಪ್ರಿಲ್ನಲ್ಲಿ 5,72,508 ಟನ್ಗಳಷ್ಟು ತಾಳೆ ಎಣ್ಣೆ ಆಮದು ಮಾಡಿಕೊಳ್ಳಲಾಗಿತ್ತು. ಅದು ಮೇ ತಿಂಗಳಲ್ಲಿ 5,14,022 ಟನ್ಗೆ ಇಳಿದಿದೆ.
ವಿಶ್ವದಲ್ಲೇ ಅತಿದೊಡ್ಡ ತಾಳೆ ಎಣ್ಣೆ ಆಮದುದಾರ ದೇಶ ಭಾರತ. ಬೇಡಿಕೆ ಪೂರೈಕೆಗಾಗಿ ಇಂಡೋನೇಷ್ಯಾ ಹಾಗೂ ಮಲೇಷ್ಯಾವನ್ನು ಅವಲಂಬಿಸಿದೆ. ಭಾರತ ಪ್ರತಿ ವರ್ಷ 13.5 ಮಿಲಿಯನ್ ಖಾದ್ಯ ತೈಲ ಆಮದು ಮಾಡಿಕೊಳ್ಳುತ್ತದೆ. ಅದರಲ್ಲಿ 8ರಿಂದ 8.5 ಮಿಲಿಯನ್ (ಶೇ 63ರಷ್ಟು) ತಾಳೆ ಎಣ್ಣೆ. ಈಗ ಹತ್ತಿರ ಹತ್ತಿರ ಶೇ 45ರಷ್ಟು ಇಂಡೋನೇಷ್ಯಾದಿಂದ ಬರುತ್ತದೆ. ಬಾಕಿ ನೆರೆಯ ಮಲೇಷ್ಯಾದಿಂದ ಆಮದು ಮಾಡಿಕೊಳ್ಳುತ್ತದೆ. ಭಾರತವು ಹತ್ತಿರ ಹತ್ತಿರ 4 ಮಿಲಿಯನ್ ಟನ್ಗಳಷ್ಟು ತಾಳೆ ಎಣ್ಣೆಯನ್ನು ಪ್ರತಿ ವರ್ಷ ಇಂಡೋನೇಷ್ಯಾದಿಂದ ಆಮದು ಮಾಡಿಕೊಳ್ಳುತ್ತದೆ. ಏಪ್ರಿಲ್ ತಿಂಗಳಲ್ಲಿ ಇಂಡೋನೇಷ್ಯಾ ತಾಳೆ ಎಣ್ಣೆ ರಫ್ತು ನಿಷೇಧಿಸಿತ್ತು. ಈ ನಿರ್ಬಂಧ ಕಚ್ಚಾ ತೈಲ ಎಣ್ಣೆಗೆ ಅನ್ವಯಿಸುತ್ತಿರಲಿಲ್ಲ. ಕವರ್ ರಿಫೈನ್ಡ್, ಬ್ಲೀಚ್ಡ್, ಡಿಯೊಡರೈಸ್ಡ್ಗೆ (RBD) ಪಾಮೋಲಿನ್ಗೆ ಮಾತ್ರ ಅನ್ವಯಿಸಿತು. ನಿಷೇಧ ಹೇರಿದ ಹೆಚ್ಚೂಕಮ್ಮಿ ಒಂದು ತಿಂಗಳ ನಂತರ ಮೇ 23ಕ್ಕೆ ರಫ್ತು ನಿಷೇಧ ತೆರವುಗೊಳಿಸಿತು.
ನಿಷೇಧ ಹೇರಿದ ಮೇಲೆ ಪೂರೈಕೆ ನಿಂತಿತು. ಭಾರತದಲ್ಲಿ ಖಾದ್ಯ ತೈಲ ಬೆಲೆ ಏರಿಕೆ ಆಯಿತು. ಇದರಿಂದಾಗಿಯೇ ವಿವಿಧ ಉತ್ಪನ್ನಗಳ ಬೆಲೆಯಲ್ಲೂ ಹೆಚ್ಚಳವಾಯಿತು. ತಾಳೆ ಎಣ್ಣೆ ಮತ್ತು ಅದರ ಉತ್ಪನ್ನಗಳನ್ನು ವಿವಿಧ ಆಹಾರ ಪದಾರ್ಥಗಳು, ಡಿಟರ್ಜೆಂಟ್ಗಳು, ಕಾಸ್ಮೆಟಿಕ್ಸ್ ಮತ್ತು ಬಯೋಫ್ಯುಯೆಲ್ಸ್ನಲ್ಲಿ ಬಳಸಲಾಗುತ್ತದೆ. ದಿನಬಳಕೆ ವಸ್ತುಗಳಾದ ಸಾಬೂನು, ಶಾಂಪೂ, ನೂಡಲ್ಸ್, ಬಿಸ್ಕತ್ ಚಾಕೊಲೇಟ್ಗಳಲ್ಲೂ ಬಳಸಲಾಗುತ್ತದೆ. ಆದ್ದರಿಂದ ತಾಳೆ ಎಣ್ಣೆ ಬೆಲೆಯಲ್ಲಿ ಏರಿಕೆಯಾದಲ್ಲಿ ಎಲ್ಲ ಕೈಗಾರಿಕೆಗಳ ಇನ್ಪುಟ್ ವೆಚ್ಚವು ಜಾಸ್ತಿ ಆಗುತ್ತದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ, ಪ್ರಮುಖ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಇದನ್ನೂ ಓದಿ: WPI Based Inflation: ಸಗಟು ದರ ಹಣದುಬ್ಬರ ದರ ಮೇ ತಿಂಗಳಲ್ಲಿ ದಾಖಲೆಯ ಶೇ 15.88ರ ಗರಿಷ್ಠ ಮಟ್ಟಕ್ಕೆ