China BRI: ಚೀನಾದ ಬೆಲ್ಟ್ ಮತ್ತು ರೋಡ್ ಪ್ರಾಜೆಕ್ಟ್ ಅನುಷ್ಠಾನ ಯೋಜನೆಗೆ ಸಹಿಹಾಕುತ್ತೇವೆ: ನೇಪಾಳ ಉಪಪ್ರಧಾನಿ ಹೇಳಿಕೆ
Nepal Dy PM Speaks: ಚೀನಾದ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ ಯೋಜನೆ ನೇಪಾಳದಲ್ಲಿ ಶೀಘ್ರವೇ ಜಾರಿಗೆ ಬರುವ ಸಾಧ್ಯತೆ ಇದೆ. ಬಿಆರ್ಐ ಅನುಷ್ಠಾನ ಯೋಜನೆಗೆ ನೇಪಾಳ ಮತ್ತು ಚೀನಾ ಸಹಿಹಾಕಲಿವೆ ಎಂದು ನೇಪಾಳ ಉಪಪ್ರಧಾನಿ ಸ್ಪಷ್ಟಪಡಿಸಿದ್ದಾರೆ. ಚೀನಾ ಮತ್ತು ನೇಪಾಳ ಸಂಬಂಧದಲ್ಲಿ ಹುಳಿಹಿಂಡಲು ಕೆಲ ದೇಶಗಳು ಪ್ರಯತ್ನಿಸುತ್ತಿವೆ ಎಂದು ಚೀನಾದ ಕಮ್ಯೂನಿಸ್ಟ್ ಪಕ್ಷದ ನಾಯಕ ಆಪಾದಿಸಿದ್ದಾರೆ.
ಕಠ್ಮಂಡು, ಜನವರಿ 29: ಚೀನಾದ ಮಹತ್ವಾಕಾಂಕ್ಷಿ ಬಿಆರ್ಐ ಯೋಜನೆ ಅಥವಾ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ ಯೋಜನೆ (BRI- Belt and Road Initiative) ಜಾರಿಗೆ ನೇಪಾಳ ಕೊನೆಯ ಹೆಜ್ಜೆ ಹಾಕುತ್ತಿದೆ. ಬಿಆರ್ಐ ಅನುಷ್ಠಾನ ಯೋಜನೆಗೆ ನೇಪಾಳ ಮತ್ತು ಚೀನಾ ಬಹಳ ಶೀಘ್ರದಲ್ಲೇ ಸಹಿ ಹಾಕಲಿವೆ ಎಂದು ನೇಪಾಳದ ಉಪಪ್ರಧಾನಿ ನಾರಾಯಣ್ ಕಾಜಿ ಶ್ರೇಷ್ಠ (Narayan Kaji Shrestha) ಹೇಳಿದ್ದಾರೆ. ಇದರೊಂದಿಗೆ, ಏಳು ವರ್ಷದ ಹಿಂದೆ ಆದ ಒಪ್ಪಂದ ಜಾರಿಯಾಗುವ ಕಾಲ ಸನ್ನಿಹಿತವಾಗಿದೆ.
ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ ಅಥವಾ ಸಿಲ್ಕ್ ರೋಡ್ ಪ್ರಾಜೆಕ್ಟ್ ಚೀನಾದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾಗಿದೆ. ಚೀನಾ ಹಾಗೂ ವಿಶ್ವದ ಇತರ ಭಾಗಗಳ ನಡುವೆ ವ್ಯಾಪಾರ ಮಾರ್ಗ ಸೃಷ್ಟಿಸುವ ದೂರಾಲೋಚನೆಯ ಯೋಜನೆ ಇದು. ನೇಪಾಳ, ಪಾಕಿಸ್ತಾನ ಹೀಗೆ ವಿವಿಧ ದೇಶಗಳ ಮೂಲಕ ಈ ವ್ಯಾಪಾರ ಮಾರ್ಗ ಹಾದು ಹೋಗುತ್ತದೆ. ವಿವಿಧ ದೇಶಗಳಲ್ಲಿ ಇದಕ್ಕೆ ಬೇಕಾದ ಮೂಲಸೌಕರ್ಯಗಳನ್ನು ಚೀನಾ ನಿರ್ಮಿಸುತ್ತದೆ. ಆದರೆ, ಆಯಾ ದೇಶಗಳೇ ಈ ಸೌಕರ್ಯ ನಿರ್ಮಾಣದ ವೆಚ್ಚವನ್ನು ಭರಿಸಬೇಕು. ಚೀನಾದ ಈ ಮಹಾ ವ್ಯಾಪಾರ ಮಾರ್ಗದಿಂದ ಆಯಾ ದೇಶಗಳ ಆರ್ಥಿಕ ಬೆಳವಣಿಗೆಗೂ ಸಹಕಾರಿ ಆಗುತ್ತದೆ ಎಂಬುದು ಚೀನಾದ ವಾದ.
ಭಾರತದ ಬಗ್ಗೆ ಪರೋಕ್ಷವಾಗಿ ಟೀಕೆ
ನೇಪಾಳವೂ ಚೀನಾದ ಬಿಆರ್ಐ ಯೋಜನೆಯಿಂದ ಲಾಭವಾಗಬಹುದು ಎಂಬ ನಿರೀಕ್ಷೆಯಲ್ಲಿದೆ. ಮೊನ್ನೆ ಚೀನಾದ ಆಡಳಿತಾರೂಢ ಕಮ್ಯೂನಿಸ್ಟ್ ಪಕ್ಷದ ಹಿರಿಯ ನಾಯಕ ಸುನ್ ಹೈಯಾನ್ ನೇಪಾಳಕ್ಕೆ ಭೇಟಿ ನೀಡಿದ್ದರು. ಈ ವೇಳೆ ನೇಪಾಳ ಮತ್ತು ಚೀನಾ ಸಂಬಂಧಕ್ಕೆ ಹುಳಿ ಹಿಂಡುವ ಬೇರೆ ದೇಶಗಳು ಪ್ರಯತ್ನಿಸುತ್ತಿವೆ ಎಂದು ಸುನ್ ಶಂಕೆ ವ್ಯಕ್ತಪಡಿಸಿದ್ದಾರೆ.
‘ನೇಪಾಳ ಮತ್ತು ಚೀನಾ ಸಂಬಂಧದ ಜೊತೆಗೆ ಬೇರೆ ದೇಶಗಳು ಆಟವಾಡಲು ಪ್ರಯತ್ನಿಸುತ್ತಿವೆ. ಈ ದೇಶಗಳು ಬರುತ್ತವೆ, ಹೋಗುತ್ತವೆ. ಅವರ ಚಟುವಟಿಕೆಯಿಂದ ಬಾಧಿತರಾಗುವುದು ನೇಪಾಳ ಮತ್ತು ಚೀನಾದ ಜನರೇ’ ಎಂದು ಸುನ್ ಹೈಯಾನ್ ಹೇಳಿದ್ದಾರೆ.
ಇದನ್ನೂ ಓದಿ: Savings: ಇನ್ನೊಂದು ವರ್ಷ ಸಮಯಾವಕಾಶ ಇರುವ ಮಹಿಳಾ ಸಮ್ಮಾನ್ ಸೇವಿಂಗ್ಸ್ ಸರ್ಟಿಫಿಕೇಟ್ ಸ್ಕೀಮ್ನ ಲಾಭ ತಿಳಿಯಿರಿ
ಆದರೆ, ಚೀನಾದ ಕಮ್ಯೂನಿಸ್ಟ್ ಮುಖಂಡ ಭಾರತದ ಹೆಸರೆತ್ತದೆಯೇ ಪರೋಕ್ಷವಾಗಿ ಬೊಟ್ಟು ಮಾಡಿ ತೋರಿಸಿದಂತಿತ್ತು. ಚೀನಾದ ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್ ಯೋಜನೆಗೆ ಭಾರತ ಶಾಮೀಲಾಗಿಲ್ಲ. ಚೀನಾದ ಏಕಮುಖಿ ಧೋರಣೆಯನ್ನು ಭಾರತ ಆಕ್ಷೇಪಿಸುತ್ತಾ ಬಂದಿದೆ. ನೇಪಾಳ ಮತ್ತು ಭಾರತದ ಮಧ್ಯೆ ಐತಿಹಾಸಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ಬೆಸುಗೆ ಇದೆ. ನೇಪಾಳದ ಒಂದು ವರ್ಗವು ಚೀನಾದ ಸಿಲ್ಕ್ ರೋಡ್ ಪ್ರಾಜೆಕ್ಟ್ ಅನ್ನು ವಿರೋಧಿಸುತ್ತದೆ. ಈ ವಿರೋಧಕ್ಕೆ ಭಾರತವೇ ಕುಮ್ಮಕ್ಕು ನೀಡುತ್ತಿರಬಹುದು ಎಂಬುದು ಚೀನಾದ ಶಂಕೆ.
ಮಾಲ್ಡೀವ್ಸ್ನ ರೀತಿಯಲ್ಲಿ ನೇಪಾಳವೂ ಕೂಡ ಭಾರತ ಮತ್ತು ಚೀನಾ ನಡುವೆ ಹೊಯ್ದಾಡುತ್ತಲೇ ಇದೆ. ನೇಪಾಳದಲ್ಲಿ ಒಂದು ವರ್ಗವು ಭಾರತವನ್ನು ಬೆಂಬಲಿಸಿದರೆ, ಮತ್ತೊಂದು ವರ್ಗವು ಚೀನಾ ಪರ ನಿಲುವು ಹೊಂದಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಬಿಸಿನೆಸ್ ವೆಬ್ ಸ್ಟೋರಿಗಳಿಗೆ ಇಲ್ಲಿ ಕ್ಲಿಕ್ ಮಾಡಿ