
ಒಂದು ಕಾರ್ಖಾನೆ. ಲೈಟ್ ಇಲ್ಲ, ಮನುಷ್ಯರ ಸುಳಿವೇ ಇಲ್ಲ ಎಂದರೆ ಅದ್ಯಾವುದೋ ಪಾಳುಬಿದ್ದ ಹಾಂಟೆಡ್ ಪ್ಲೇಸ್ ಎಂದು ನೀವು ಭಾವಿಸಬಹುದು. ಆದರೆ, ಇದರಲ್ಲಿ ಮನುಷ್ಯರ ಬದಲು ರೋಬೋಗಳಿದ್ದರೆ? ಹಾಲಿವುಡ್ನ ಸ್ಕೈಫೈ ಸಿನಿಮಾಗಳನ್ನು ನೋಡುವವರ ಕಲ್ಪನೆಗಳಿಗೂ ಮೀರಿದಂತಹ ದೃಶ್ಯಗಳನ್ನು ಈ ಕಾರ್ಖಾನೆಯಲ್ಲಿ ಕಾಣಬಹುದು. ಅದುವೇ ಚೀನಾದ ಡಾರ್ಕ್ ಫ್ಯಾಕ್ಟರಿ. ಒಂದಲ್ಲ, ಎರಡಲ್ಲ, ಇಂಥ ಹಲವು ಡಾರ್ಕ್ ಫ್ಯಾಕ್ಟರಿಗಳು ಚೀನಾದಲ್ಲಿವೆ. ಚೀನಾದ ತಂತ್ರಜ್ಞಾನ ಕ್ರಾಂತಿಯ ಅತ್ಯಂತ ರೋಮಾಂಚಕ ಮತ್ತು ಆಘಾತಕಾರಿ ಮುಖವೇ ಈ ‘ಡಾರ್ಕ್ ಫ್ಯಾಕ್ಟರಿಗಳು’ (Dark Factories) ಅಥವಾ ‘ಲೈಟ್ಸ್-ಔಟ್ ಫ್ಯಾಕ್ಟರಿಗಳು’ (Lights-out Factories). ಹೆಸರೇ ಸೂಚಿಸುವಂತೆ, ಈ ಕಾರ್ಖಾನೆಗಳಲ್ಲಿ ಸಂಪೂರ್ಣ ಕತ್ತಲಿರುತ್ತದೆ! ಅಲ್ಲಿ ಕೆಲಸ ಮಾಡಲು ಯಾವುದೇ ಮನುಷ್ಯರಿಲ್ಲದ ಕಾರಣ, ಲೈಟ್‌ಗಳು ಅಥವಾ ಫ್ಯಾನ್‌ಗಳ ಅಗತ್ಯವೇ ಇರುವುದಿಲ್ಲ. ಕೇವಲ ಕೃತಕ ಬುದ್ಧಿಮತ್ತೆ (AI) ಮತ್ತು ರೋಬೋಟ್‌ಗಳು ಮಾತ್ರ 24 ಗಂಟೆಯೂ ನಿರಂತರವಾಗಿ ಕೆಲಸ ಮಾಡುತ್ತವೆ.
ಇದು ಸಂಪೂರ್ಣವಾಗಿ ಸ್ವಯಂಚಾಲಿತ (Fully Automated) ಉತ್ಪಾದನಾ ಘಟಕವಾಗಿದೆ. ಇಲ್ಲಿ ಕಚ್ಚಾ ವಸ್ತುಗಳನ್ನು ಒಳಗೆ ಕಳುಹಿಸುವುದರಿಂದ ಹಿಡಿದು, ಸಿದ್ಧವಾದ ವಸ್ತುವನ್ನು ಪ್ಯಾಕ್ ಮಾಡಿ ಹೊರತರುವವರೆಗಿನ ಎಲ್ಲಾ ಪ್ರಕ್ರಿಯೆಗಳನ್ನು ಯಂತ್ರಗಳೇ ಮಾಡುತ್ತವೆ.
ಯಂತ್ರಗಳಿಗೆ ಕಣ್ಣುಗಳ ಅಗತ್ಯವಿಲ್ಲ, ಅವು ಇನ್ಫ್ರಾರೆಡ್ (Infrared) ಕ್ಯಾಮೆರಾಗಳು ಮತ್ತು ಸೆನ್ಸಾರ್‌ಗಳ ಮೂಲಕ ಕಾರ್ಯನಿರ್ವಹಿಸುತ್ತವೆ. ಹಾಗಾಗಿ ಇಡೀ ಕಾರ್ಖಾನೆಯಲ್ಲಿ ಲೈಟ್ ಆಫ್ ಮಾಡಲಾಗಿರುತ್ತದೆ.
ಇದನ್ನೂ ಓದಿ: ಭಾರತದಲ್ಲಿ ಶೀತವಾದರೆ ಅಮೆರಿಕದಲ್ಲಿ ನೆಗಡಿ..! ಭಾರತದ ಎಲ್ಪಿಜಿ ಬಿಕ್ಕಟ್ಟಿನಿಂದ ಕ್ಯಾಲಿಫೋರ್ನಿಯಾ ತತ್ತರ; ಹೇಗೆ?
ಇಡೀ ಫ್ಯಾಕ್ಟರಿಯನ್ನು ಒಂದು ಕೇಂದ್ರೀಕೃತ AI ಸಾಫ್ಟ್‌ವೇರ್ ನಿಯಂತ್ರಿಸುತ್ತದೆ. ಯಾವ ರೋಬೋಟ್ ಯಾವಾಗ, ಏನು ಕೆಲಸ ಮಾಡಬೇಕು ಎಂಬುದನ್ನು ಈ ಎಐ ನಿರ್ಧರಿಸುತ್ತದೆ. ಇವು ಮನುಷ್ಯರ ಕೈಗಳಿಗಿಂತ ಹತ್ತು ಪಟ್ಟು ವೇಗವಾಗಿ ಮತ್ತು ನಿಖರವಾಗಿ ಬಿಡಿಭಾಗಗಳನ್ನು ಜೋಡಿಸುತ್ತವೆ. ಕಾರ್ಖಾನೆಯ ಒಳಗೆ ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಾಮಗ್ರಿಗಳನ್ನು ಸಾಗಿಸಲು ಚಾಲಕರಿಲ್ಲದ ಸಣ್ಣ ರೋಬೋಟ್ ಗಾಡಿಗಳನ್ನು ಬಳಸಲಾಗುತ್ತದೆ.
ಚೀನಾದ ಪ್ರಮುಖ ಸ್ಮಾರ್ಟ್‌ಫೋನ್ ಕಂಪನಿಯಾದ ಶವೋಮಿಯ ಬೀಜಿಂಗ್‌ನಲ್ಲಿರುವ ‘ಚಾಂಗ್‌ಪಿಂಗ್’ ಸ್ಮಾರ್ಟ್ ಫ್ಯಾಕ್ಟರಿಯಲ್ಲಿ ವರ್ಷಕ್ಕೆ 1 ಕೋಟಿ ಫ್ಲ್ಯಾಗ್‌ಶಿಪ್ ಫೋನ್‌ಗಳನ್ನು ಉತ್ಪಾದಿಸಲಾಗುತ್ತದೆ. ಇಲ್ಲಿ ದಿನದ 24 ಗಂಟೆಯೂ ಮನುಷ್ಯರಿಲ್ಲದೆ ಕೆಲಸ ನಡೆಯುತ್ತದೆ. ವರದಿಗಳ ಪ್ರಕಾರ, ಈ ಫ್ಯಾಕ್ಟರಿಯಲ್ಲಿ ಪ್ರತಿ ಸೆಕೆಂಡಿಗೆ ಒಂದು ಸ್ಮಾರ್ಟ್‌ಫೋನ್ ತಯಾರಾಗುತ್ತದೆ.
ಆಪಲ್ ಫೋನ್‌ಗಳನ್ನು ತಯಾರಿಸುವ ಫಾಕ್ಸ್ಕಾನ್ ಸಂಸ್ಥೆಯು (Foxconn) ಚೀನಾದ ತನ್ನ ಕುನ್ಶಾನ್ ಪ್ಲಾಂಟ್‌ನಲ್ಲಿ ರೋಬೋಟ್‌ಗಳನ್ನು ಅಳವಡಿಸಿದೆ. ಒಂದೇ ಬಾರಿಗೆ ಸುಮಾರು 60,000 ಕಾರ್ಮಿಕರನ್ನು ಕೆಲಸದಿಂದ ಮುಕ್ತಗೊಳಿಸಿದೆ.
ಚೀನಾದ ಪ್ರಸಿದ್ಧ ಇವಿ ಕಾರು ಸಂಸ್ಥೆಗಳಾದ BYD ಮತ್ತು Zeekr ಇಂತಹ ಡಾರ್ಕ್ ಫ್ಯಾಕ್ಟರಿಗಳ ಮೂಲಕ ದಿನಕ್ಕೆ ಸಾವಿರಾರು ಕಾರುಗಳನ್ನು ಸಿದ್ಧಪಡಿಸುತ್ತಿವೆ. ಇತ್ತೀಚಿನ ವರದಿಗಳ ಪ್ರಕಾರ, ಚೀನಾ ತನ್ನ ಅತ್ಯಾಧುನಿಕ J-20 ಸ್ಟೆಲ್ತ್ ಯುದ್ಧ ವಿಮಾನಗಳ ಬಿಡಿಭಾಗಗಳನ್ನು ತಯಾರಿಸಲು ಕೂಡ ಇಂತಹ ಎಐ ಚಾಲಿತ ಡಾರ್ಕ್ ಫ್ಯಾಕ್ಟರಿಯನ್ನು ಬಳಸುತ್ತಿದ್ದು, ಇದು ಉತ್ಪಾದನಾ ಸಾಮರ್ಥ್ಯವನ್ನು ದುಪ್ಪಟ್ಟುಗೊಳಿಸಿದೆ.
ಮನುಷ್ಯರಿಗೆ ಕೆಲಸ ಸಾಮರ್ಥ್ಯ ಸೀಮಿತವಾಗಿರುತ್ತದೆ. ಆದರೆ, ರೋಬೋಗಳು ಯಂತ್ರಗಳಾದ್ದರಿಂದ ಆಯಾಸ ಎಂಬುದಿರೋದಿಲ್ಲ. 24×7 ನಿರಂತರ ಕೆಲಸ ಮಾಡುತ್ತಿರುತ್ತವೆ. ರಜೆ, ಶಿಫ್ಟ್ ಇತ್ಯಾದಿ ತಡೆಗಳಿಲ್ಲ. ದಿನಕ್ಕೆ 24 ಗಂಟೆ, ವರ್ಷಕ್ಕೆ 365 ದಿನವೂ ರೋಬೋಗಳಿಗೆ ಕೆಲಸವೋ ಕೆಲಸ.
ಇದನ್ನೂ ಓದಿ: ಮೈಕ್ರೋಸಾಫ್ಟ್ ಎಐ ಮುಖ್ಯಸ್ಥರ ಎಚ್ಚರಿಕೆ; ಇನ್ನು, 12-18 ತಿಂಗಳಲ್ಲಿ ಇನ್ನಿಲ್ಲವಾಗುತ್ತವಂತೆ ವೈಟ್ ಕಾಲರ್ ಜಾಬ್ಗಳು
ಲೈಟ್‌ಗಳು ಮತ್ತು ಎಸಿ (Air Conditioning) ಅಗತ್ಯವಿಲ್ಲದಿರುವುದರಿಂದ ಭಾರಿ ಪ್ರಮಾಣದ ವಿದ್ಯುತ್ ಉಳಿತಾಯವಾಗುತ್ತದೆ. ಮನುಷ್ಯರಿಗೆ ಕೊಡುವ ಸಂಬಳ ಮತ್ತು ಇತರೆ ಸೌಲಭ್ಯಗಳ ಖರ್ಚು ಇರುವುದಿಲ್ಲ.
ಮನುಷ್ಯರು ಮಾಡುವಂತೆ ರೋಬೋಟ್‌ಗಳು ಅಳತೆಯಲ್ಲಿ ಅಥವಾ ಜೋಡಣೆಯಲ್ಲಿ ತಪ್ಪು ಮಾಡುವುದಿಲ್ಲ. ಹಾಗಾಗಿ ಗುಣಮಟ್ಟ ಅತ್ಯುತ್ತಮವಾಗಿರುತ್ತದೆ.
ಈ ತಂತ್ರಜ್ಞಾನವು ಉತ್ಪಾದನಾ ಕ್ಷೇತ್ರಕ್ಕೆ ವರದಾನವಾಗಿದ್ದರೂ, ಮಾನವ ಸಮಾಜಕ್ಕೆ ದೊಡ್ಡ ಸವಾಲಾಗಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ, ಚೀನಾದಲ್ಲಿ ಉತ್ಪಾದನಾ ವಲಯದ ಉದ್ಯೋಗಿಗಳ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಕೇವಲ ಹತ್ತು ವರ್ಷಗಳಲ್ಲಿ ಕೋಟ್ಯಂತರ ಕಾರ್ಮಿಕರು ತಮ್ಮ ಕೆಲಸ ಕಳೆದುಕೊಂಡಿದ್ದಾರೆ.
ಜಾಗತಿಕ ಮಾರುಕಟ್ಟೆ ಸಂಶೋಧನಾ ಸಂಸ್ಥೆಗಳ ಪ್ರಕಾರ, ಮುಂಬರುವ ದಿನಗಳಲ್ಲಿ ಜಗತ್ತಿನ ಶೇ. 60 ಕ್ಕೂ ಹೆಚ್ಚು ಪ್ರಮುಖ ಉತ್ಪಾದನಾ ಕಂಪನಿಗಳು ಈ ‘ಡಾರ್ಕ್ ಫ್ಯಾಕ್ಟರಿ’ ಮಾದರಿಯನ್ನು ಅಳವಡಿಸಿಕೊಳ್ಳಲಿವೆ. ತಾಂತ್ರಿಕವಾಗಿ ಇದು ಅದ್ಭುತ ಸಾಧನೆಯಾದರೂ, “ಭವಿಷ್ಯದಲ್ಲಿ ಸಾಮಾನ್ಯ ಜನರಿಗೆ ಉದ್ಯೋಗ ಎಲ್ಲಿಂದ ಸಿಗುತ್ತದೆ?” ಎಂಬ ಯಕ್ಷಪ್ರಶ್ನೆ ಜಗತ್ತಿನ ಎದುರಿಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ