
ನವದೆಹಲಿ, ಮೇ 19: ರಾಷ್ಟ್ರ ರಾಜಧಾನಿನಗರಿಯಲ್ಲಿನ ಕಮರ್ಷಿಯಲ್ ವಾಹನಗಳ ಚಾಲಕರ ಒಕ್ಕೂಟಗಳು (Commercial vehicle drivers unions ಮೂರು ದಿನಗಳ ಮುಷ್ಕರ (Strike) ನಡೆಸುವುದಾಗಿ ಘೋಷಿಸಿವೆ. ಮೇ 21, ಗುರುವಾರದಿಂದ ಮೇ 23, ಶನಿವಾರದವರೆಗೆ ಈ ಪ್ರತಿಭಟನೆ ನಡೆಯಲಿದೆ. ದೆಹಲಿಯಲ್ಲಿ ಇಂಧನ ದರ ಏರಿಕೆ ಹಿನ್ನೆಲೆಯಲ್ಲಿ ಟ್ಯಾಕ್ಸಿ ಮತ್ತು ಆಟೊರಿಕ್ಷಾ ದರಗಳನ್ನು (Taxi fares) ಹೆಚ್ಚಿಸಬೇಕೆಂದು ಆಗ್ರಹಿಸಿ ಈ ಮುಷ್ಕರ ನಡೆಸಲಾಗುತ್ತಿದೆ.
ಇದನ್ನೂ ಓದಿ: ಮೈಕ್ರೋಸಾಫ್ಟ್ ಎಐ ಮುಖ್ಯಸ್ಥರ ಎಚ್ಚರಿಕೆ; ಇನ್ನು, 12-18 ತಿಂಗಳಲ್ಲಿ ಇನ್ನಿಲ್ಲವಾಗುತ್ತವಂತೆ ವೈಟ್ ಕಾಲರ್ ಜಾಬ್ಗಳು
ದೆಹಲಿಯಲ್ಲಿ ಸಿಎನ್ಜಿ, ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಕಮರ್ಷಿಯಲ್ ವಾಹನಗಳ ಪ್ರಯಾಣ ದರ ಪರಿಷ್ಕರಣೆ ಮಾಡಬೇಕು ಮತ್ತು ಬೆಲೆ ಏರಿಕೆಯಿಂದ ಬಾಧಿತರಾದ ಚಾಲಕರಿಗೆ ಪರಿಹಾರ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದು ಈ ಸಂಘಟನೆಗಳ ಪ್ರಮುಖ ಒತ್ತಾಯವಾಗಿದೆ. ಈ ಸಂಬಂಧ ಅಖಿಲ ಭಾರತ ಮೋಟಾರು ಸಾರಿಗೆ ಸಂಸ್ಥೆಯು (All India Motor Transport Congress) ನಿನ್ನೆ ಸೋಮವಾರ (ಮೇ 18) ದೆಹಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಮತ್ತು ದೆಹಲಿ ಲೆಫ್ಟಿನೆಂಟ್ ಗವರ್ನರ್ ತರಂಜಿತ್ ಸಿಂಗ್ ಸಂಧು ಅವರಿಗೆ ಪತ್ರ ಬರೆದು ಒತ್ತಾಯಪಡಿಸಿತ್ತು.
‘ಇಂಧನ ಬೆಲೆಗಳು ಸತತವಾಗಿ ಏರುತ್ತಿರುವ ಹಿನ್ನೆಲೆಯಲ್ಲಿ ಮಧ್ಯಮ ವರ್ಗದ ಚಾಲಕರು ತಮ್ಮ ಜೀವನ ನಿರ್ವಹಿಸಲು ಪರದಾಡುವಂತಾಗಿದೆ. ಆದ್ದರಿಂದ ದೆಹಲಿಯ ಇತರ ಸಂಘಟನೆಗಳೊಂದಿಗೆ ಸಹಕಾರದಲ್ಲಿ ಚಾಲಕ ಶಕ್ತಿ ಒಕ್ಕೂಟವು ಚಕ್ಕಾ ಜಾಮ್ಗೆ (ಮುಷ್ಕರ) ಕರೆ ನೀಡಿದೆ. ಮೇ 21, 22 ಮತ್ತು 23ರಂದು ವಾಹನ ಚಲಾಯಿಸದಿರಿ ಎಂದು ಮನವಿ ಮಾಡಲಾಗಿದೆ’ ಎಂದು ಚಾಲಕ್ ಶಕ್ತಿ ಯೂನಿಯನ್ನ ಉಪಾಧ್ಯಕ್ಷ ಅನುಜ್ ಕುಮಾರ್ ರಾಥೋಡ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಬೈಕು, ಬಸ್ಸು, ಕಾರು, ರೈಲು, ಹೀಗೆ ನೀವು ಯಾವುದರಲ್ಲಿ ಪ್ರಯಾಣಿಸಿದ್ದು ಎಂಬುದು ಗೂಗಲ್ಗೆ ಗೊತ್ತಾಗೋದು ಹೇಗೆ?
ಒಂದು ವೇಳೆ, ದೆಹಲಿ ಸರ್ಕಾರವು ಮುಂದಿನ ಒಂದೆರಡು ವಾರದೊಳಗೆ ಟ್ಯಾಕ್ಸಿ ಪ್ರಯಾಣದರವನ್ನು ಪರಿಷ್ಕರಿಸಲು ವಿಫಲವಾದಲ್ಲಿ ಈ ಪ್ರತಿಭಟನೆ ಉಗ್ರ ರೂಪ ಪಡೆಯುತ್ತದೆ. ದೊಡ್ಡ ಮಟ್ಟದಲ್ಲಿ ಮುಷ್ಕರ ನಡೆಸಲಾಗುತ್ತದೆ. ಇದಕ್ಕೆ ದೆಹಲಿ ಸರ್ಕಾರವೇ ಹೊಣೆಯಾಗುತ್ತದೆ ಎಂದೂ ಚಾಲಕರ ಒಕ್ಕೂಟವು ಎಚ್ಚರಿಕೆ ನೀಡಿದೆ.
ಪೆಟ್ರೋಲ್ ಮತ್ತು ಡೀಸಲ್ ಬೆಲೆಗಳು ಇತ್ತೀಚೆಗೆ ರಾಷ್ಟ್ರಾದ್ಯಂತ 3 ರೂ ಏರಿಕೆ ಆಗಿವೆ. ಇದಕ್ಕೆ ಹೆಚ್ಚುವರಿಯಾಗಿ ದೆಹಲಿಯಲ್ಲಿ ಸಿಎನ್ಜಿ ಮತ್ತು ಪೆಟ್ರೋಲ್, ಡೀಸಲ್ ದರಗಳನ್ನು ಹೆಚ್ಚಿಸಲಾಗಿದೆ.
ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:39 am, Tue, 19 May 26