Akshaya Tritiya: ಚಿನ್ನದ ಗಟ್ಟಿಯೋ ಸವರನ್ ಗೋಲ್ಡ್ ಬಾಂಡ್ ಚಿನ್ನದ ಇಟಿಎಫ್ ಯಾವುದು ಹೂಡಿಕೆಗೆ ಉತ್ತಮ?

|

Updated on: May 14, 2021 | 11:45 AM

ಅಕ್ಷಯ ತೃತೀಯ ದಿನ ಚಿನ್ನದ ಗಟ್ಟಿ, ನಾಣ್ಯ ಅಥವಾ ಬಾರ್ ಖರೀದಿಸುವುದು ಇವತ್ತಿನ ಸನ್ನಿವೇಶಕ್ಕೆ ಖರೀದಿಸುವುದೂ ಕಷ್ಟ ಹಾಗೂ ಹೂಡಿಕೆ ದೃಷ್ಟಿಯಿಂದ ಅದು ಉತ್ತಮವೂ ಅಲ್ಲ ಏಕೆ?

Akshaya Tritiya: ಚಿನ್ನದ ಗಟ್ಟಿಯೋ ಸವರನ್ ಗೋಲ್ಡ್ ಬಾಂಡ್ ಚಿನ್ನದ ಇಟಿಎಫ್ ಯಾವುದು ಹೂಡಿಕೆಗೆ ಉತ್ತಮ?
ಇಟಿಎಫ್ (ಪ್ರಾತಿನಿಧಿಕ ಚಿತ್ರ)
Follow us on

ಇವತ್ತು (ಮೇ 14, 2021) ಅಕ್ಷಯ ತೃತೀಯ. ಭಾರತದ ನಾನಾ ಭಾಗಗಳಲ್ಲಿ ತುಂಬ ಪವಿತ್ರವಾದ ದಿನ ಇದು. ಧನ- ಧಾನ್ಯ, ವಸ್ತು, ವಾಹನಾದಿಗಳು ಈ ದಿನ ಖರೀದಿಸಿದರೆ ಅವುಗಳ ಸಂಖ್ಯೆ ವೃದ್ಧಿ ಆಗುತ್ತದೆ ಎಂಬ ನಂಬಿಕೆ ಇರುವಂಥ ದಿನ ಇದು. ಅಷ್ಟೇ ಅಲ್ಲ, ಮದುವೆ ಮೊದಲಾದಿ ಕಾರ್ಯಕ್ರಮಗಳು, ಹೊಸ ವ್ಯಾಪಾರ- ವ್ಯವಹಾರ ಆರಂಭ, ಚಿನ್ನ ಖರೀದಿಗೆ ಕೂಡ ಈ ದಿನವನ್ನು ಪ್ರಾಶಸ್ತ್ಯ ಎಂದುಕೊಳ್ಳಲಾಗುತ್ತದೆ. ಕೋವಿಡ್- 19 ಎರಡನೇ ಅಲೆಯ ಕಾರಣಕ್ಕೆ ದೇಶದ ಹಲವೆಡೆ ಸ್ಥಳೀಯ ಲಾಕ್​ಡೌನ್ ಘೋಷಣೆ ಮಾಡಲಾಗಿದೆ. ಆ ಕಾರಣಕ್ಕೆ ಭೌತಿಕವಾಗಿ (ಫಿಸಿಕಲ್) ಚಿನ್ನ ಖರೀದಿ ಅವಕಾಶ ಕಡಿಮೆ. ಒಂದು ವೇಳೆ ಹಾಗೊಮ್ಮೆ ಖರೀದಿಗೆ ಅವಕಾಶ ಇದ್ದರೂ ಅದು ಬುದ್ಧಿವಂತಿಕೆ ಅಲ್ಲ. ಅದರಲ್ಲೂ ಹೂಡಿಕೆ ಉದ್ದೇಶಕ್ಕೆ ಚಿನ್ನ ಖರೀದಿ ಮಾಡಬೇಕು ಎಂದಿದ್ದಲ್ಲಿ ಖಂಡಿತಾ ಈ ನಿರ್ಧಾರ ಸರಿಹೋಗಲ್ಲ.

ಒಟ್ಟಾರೆಯಾಗಿ ಹೇಳಬೇಕೆಂದರೆ, ಚಿನ್ನದ ಗಟ್ಟಿ, ನಾಣ್ಯ ಅಥವಾ ಬಾರ್ ಇಂಥವುಗಳನ್ನು ಮಾರಾಟ ಮಾಡುವಾಗಲೇ ಸಮಸ್ಯೆಗಳು ಎದುರಾಗುತ್ತವೆ. ಏಕೆಂದರೆ, ಒಂದು ಸಲ ಗ್ರಾಹಕರಿಗೆ ಮಾರಿದ ಮೇಲೆ ಬ್ಯಾಂಕ್​ಗಳು ಮತ್ತೆ ಅದನ್ನು ವಾಪಸ್ ಖರೀದಿ ಮಾಡಲ್ಲ. ಅದು ಏನಿದ್ದರೂ ಅಧಿಕೃತವಾದ ಚಿನ್ನದ ಮಾರಾಟ ಸಂಸ್ಥೆ, ಜ್ಯುವೆಲ್ಲರ್​ಗಳು, ರೀಟೇಲ್​ ವೆಬ್​ಸೈಟ್​ಗಳು ಅಥವಾ ನಗದಿಗಾಗಿ ಚಿನ್ನ ಖರೀದಿಸುವ ವೆಬ್​ಸೈಟ್​ಗಳಷ್ಟೇ ಹಣವನ್ನು ನೀಡಬೇಕು. ಇವರೆಲ್ಲರೂ ಚಿನ್ನದ ಶುದ್ಧತೆ, ತೂಕ, ಆ ದಿನ ಏನು ಬೆಲೆ ಇರುತ್ತದೋ ಅದಕ್ಕೆ ತಕ್ಕಂತೆ ನೀಡುತ್ತಾರೆ. ಈ ಕಾರಣಕ್ಕೆ ಮಾರಾಟಗಾರರಿಗೆ ತಮ್ಮ ಹೂಡಿಕೆ ಮೇಲಿನ ದರದ ವಿಚಾರದಲ್ಲಿ ಸ್ವಲ್ಪ ಮಟ್ಟಿಗೆ ಕೂಡ ಹತೋಟಿ ಇರುವುದಿಲ್ಲ.

ಹೋಗಲಿ, ಸ್ವಲ್ಪ ಕಡಿಮೆ ಹಣ ಸಿಗುತ್ತಾ, ಸರಿ ಏನೋ ಹಣ ಬರಲಿ ಅಂದುಕೊಳ್ಳಬಹುದು. ಆದರೆ ಭೌತಿಕವಾಗಿ ಇರುವ ಚಿನ್ನವನ್ನು ಜೋಪಾನ ಮಾಡುವುದು ಬಹಳ ಕಷ್ಟ. ಬ್ಯಾಂಕ್​ ಲಾಕರ್​ನಲ್ಲೋ, ವಾರ್​ಡ್ರೋಬ್ ಅಥವಾ ಬ್ಯಾಂಕ್​ ವಾಲ್ಟ್​ನಲ್ಲಿ ಇಡುತ್ತೀವಿ ಅಂತ ಅಂದರೂ ಚಿನ್ನದ ಸುರಕ್ಷತೆ ಬಗ್ಗೆ ಪ್ರಶ್ನೆ ಇದ್ದೇ ಇರುತ್ತದೆ. ಆದರೆ ಈ ಸಮಸ್ಯೆ ಡಿಜಿಟಲ್ ಗೋಲ್ಡ್ ಅಥವಾ ಪೇಪರ್ ಸ್ವರೂಪದಲ್ಲಿ ಇರುವ ಚಿನ್ನದಲ್ಲಿ ಇರುವುದಿಲ್ಲ.

ಡಿಜಿಟಲ್ ಚಿನ್ನ
ನಿಮ್ಮ ಹತ್ತಿರ ಪ್ರೀಪೇಯ್ಡ್ ಮೊಬೈಲ್ ಫೋನ್ ಇದ್ದು, ಅದಕ್ಕೆ ಟಾಕ್​ ಟೈಮ್ ರೀಚಾರ್ಜ್​ ಮಾಡಿಸುವಷ್ಟು ಸಲೀಸಾಗಿ ಡಿಜಿಟಲ್ ಚಿನ್ನ ಖರೀದಿಸಬಹುದು. ಆನ್​ಲೈನ್​ನಲ್ಲಿ ನಂಬಿಕಸ್ತ ಮೂಲಗಳಿಂದ ಖರೀದಿ ಮಾಡಬಹುದು. ಗ್ರಾಹಕರ ಪರವಾಗಿ ಮಾರಾಟಗಾರರು ಚಿನ್ನವನ್ನು ಮಾರಾಟಗಾರರು ಇನ್ಷೂರ್ಡ್​ ವಾಲ್ಟ್​ಗಳಲ್ಲಿ ಸಂಗ್ರಹಿಸುತ್ತಾರೆ. ಅಷ್ಟೇ ಅಲ್ಲ, ಮೊಬೈಲ್ ಇ-ವ್ಯಾಲೆಟ್​ಗಳಾದ ಪೇಟಿಎಂ, ಗೂಗಲ್ ಪೇ ಮತ್ತು ಫೋನ್​ಪೇ ಮೂಲಕ ಕೂಡ ಹೂಡಿಕೆ ಮಾಡಬಹುದು. ಎಚ್​ಡಿಎಫ್​ಸಿ ಸೆಕ್ಯೂರಿಟೀಸ್, ಮೋತಿಲಾಲ್​ ಓಸ್ವಾಲ್​ ಕೂಡ ಡಿಜಿಟಲ್ ಚಿನ್ನದಲ್ಲಿ ಹೂಡಿಕೆ ಮಾಡಲು ಅವಕಾಶ ನೀಡುತ್ತವೆ. ಈ ಹೂಡಿಕೆಗೆ ಸಂಬಂಧಿಸಿದಂತೆ ನಿಯಮಾವಳಿಗಳ ಕೊರತೆ, ಜಿಎಸ್​ಟಿ ವೆಚ್ಚ, ಹೋಲ್ಡಿಂಗ್ ವೆಚ್ಚ, ಡೆಲಿವರಿ ಮತ್ತು ಮೇಕಿಂಗ್ ವೆಚ್ಚಗಳು, ಹೂಡಿಕೆ ಅವಕಾಶವನ್ನು ಮಿತಿಗೊಳಿಸಿ, ಡಿಜಿಟಲ್​ ಚಿನ್ನದ ಬಗ್ಗೆ ಇರುವ ಆಕರ್ಷಣೆ ಕಡಿಮೆ ಮಾಡುತ್ತದೆ.

ಸವರನ್ ಗೋಲ್ಡ್ ಬಾಂಡ್ಸ್ ವರ್ಸಸ್ ಗೋಲ್ಡ್​ ಇಟಿಎಫ್​ಗಳು
ಚಿನ್ನದ ಮೇಲಿನ ಹೂಡಿಕೆ ಅಂದಾಕ್ಷಣ ಹಣಕಾಸು ಪ್ಲಾನರ್​ಗಳು ಸಹ ಒಪ್ಪುವಂಥದ್ದು ಪೇಪರ್ ಚಿನ್ನ ಮತ್ತು ಪೇಪರ್-ರಹಿತ ಚಿನ್ನ (ಗೋಲ್ಡ್​ ಇಟಿಫ್​ಗಳು ಮತ್ತು ಸವರನ್​ ಗೋಲ್ಡ್​ ಬಾಂಡ್​ಗಳು) ಉಳಿದ ಎಲ್ಲ ಬಗೆಯ ಹೂಡಿಕೆಗಿಂತ ಉತ್ತಮ ಎನ್ನುತ್ತಾರೆ. ಚಿನ್ನದ ಎಕ್ಸ್​ಚೇಂಜ್ ಟ್ರೇಡೆಡ್​ ಫಂಡ್​ಗಳು (ಇಟಿಎಫ್​) ಓಪನ್ ಎಕ್ಸ್​ಚೇಂಜ್- ಟ್ರೇಡೆಡ್ ಫಂಡ್​ಗಳು ಶೇ 99.5ರಷ್ಟು ಶುದ್ಧವಾಗಿರುವ ಚಿನ್ನದಲ್ಲಿ ಹೂಡಿಕೆ ಮಾಡುತ್ತದೆ. ಫಂಡ್ ಮ್ಯಾನೇಜರ್​ಗಳು ಸ್ಟಾಕ್​ ಎಕ್ಸ್​ಚೇಂಜ್​ಗಳಲ್ಲಿ ಗೋಲ್ಡ್ ಇಟಿಎಫ್ ಯೂನಿಟ್​​ಗಳ ಬೆಲೆಯನ್ನು ಅನುಸರಿಸುತ್ತಾರೆ. ಇಟಿಎಫ್ ಗೋಲ್ಡ್ ಯೂನಿಟ್​ಗಳನ್ನು ಖರೀದಿಸಬೇಕು ಅಂದರೆ ಡಿಮ್ಯಾಟ್​ ಖಾತೆ ಬೇಕಾಗುತ್ತದೆ.

ಇನ್ನು ಸವರನ್​ ಗೋಲ್ಡ್ ಬಾಂಡ್​​ಗಳು (SGB) ಸರ್ಕಾರದ ಪರವಾಗಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾವು ವಿತರಣೆ ಮಾಡುತ್ತದೆ. ಈ ಬಾಂಡ್​ಗಳ ಕನಿಷ್ಠ ಯೂನಿಟ್ 1 ಗ್ರಾಮ್​ ಖರೀದಿಸಬೇಕಾಗುತ್ತದೆ. ವೈಯಕ್ತಿಕ ಖರೀದಿದಾರರು, ಹಿಂದೂ ಅವಿಭಕ್ತ ಕುಟುಂಬ, ಟ್ರಸ್ಟ್​ಗಳು, ವಿಶ್ವವಿದ್ಯಾಲಯಗಳು ಮತ್ತು ದತ್ತಿ ಸಂಸ್ಥೆಗಳು ಖರೀದಿಸಬಹುದು. ಈ ಗೋಲ್ಡ್​ ಬಾಂಡ್​ಗಳ ಮೆಚ್ಯೂರಿಟಿ (ಪಕ್ವತೆ) ಅವಧಿ 8 ವರ್ಷಗಳು. ಐದು ವರ್ಷಗಳು ಪೂರ್ತಿಯಾದ ಮೇಲೆ ಮುಂದಿನ ಬಡ್ಡಿ ಪಾವತಿ ಬಾಕಿ ವೇಳೆಯಲ್ಲಿ ಹೊರಬರಬಹುದು.

ಚಿನ್ನ ಇಟಿಎಫ್​ ಎಂಬುದು ಸವರನ್​ ಗೋಲ್ಡ್​ ಬಾಂಡ್​ಗಿಂತ ಉತ್ತಮ ನಗದೀಕರಣ ಅವಕಾಶ ಒದಗಿಸುತ್ತದೆ. ದೀರ್ಘಾವಧಿ ಹೂಡಿಕೆಗೆ ಸವರನ್ ಗೋಲ್ಡ್ ಬಾಂಡ್ ಅಡ್ಡಿಯಿಲ್ಲ. ಏಕೆಂದರೆ ಸೆಕೆಂಡರಿ ಮಾರ್ಕೆಟ್​ನಲ್ಲಿ ಇಟಿಎಫ್ ಮಾರಾಟ ಮಾಡಿ, ನಗದು ಪಡೆಯಬಹುದು. ಅದೇ ಸವರನ್ ಗೋಲ್ಡ್ ಬಾಂಡ್​ನಿಂದ ಕನಿಷ್ಠ 5 ವರ್ಷ ಹಣ ವಾಪಸ್ ಪಡೆಯಲು ಸಾಧ್ಯವಿಲ್ಲ. ಆದರೆ ದೀರ್ಘಾವಧಿ ಹೂಡಿಕೆಗೆ ಉತ್ತಮ ಆಯ್ಕೆ. 8 ವರ್ಷಕ್ಕೆ ಮೆಚ್ಯೂರ್ ಆಗುತ್ತದೆ. ಅಲ್ಲಿಯ ತನಕ ಇಟ್ಟುಕೊಂಡಲ್ಲಿ ಕ್ಯಾಪಿಟಲ್ ಗೇಯ್ನ್ಸ್ ತೆರಿಗೆ ವಿನಾಯಿತಿಯೂ ಇದೆ. ಆದರೆ ಚಿನ್ನದ ಇಟಿಎಫ್ ಮಾರಾಟ ಹಣಕ್ಕೆ ಕ್ಯಾಪಿಟಲ್ ಗೇಯ್ನ್ಸ್ ಅನ್ವಯಿಸುತ್ತದೆ.

ಸವರನ್​ ಗೋಲ್ಡ್​ ಬಾಂಡ್​ಳಗಳಿಂದ 5, 6 ಮತ್ತು 7ನೇ ವರ್ಷದಲ್ಲಿ ಭಾಗಶಃ ಹಣ ವಾಪಸ್ ಪಡೆಯುವ ಅವಕಾಶ ಇದೆ. ಸೆಕೆಂಡರಿ ಮಾರ್ಕೆಟ್​ನಲ್ಲಿ ಮಾರಾಟ ಮಾಡಿ, ಹೂಡಿಕೆಯಿಂದ ಹೊರಬರಬಹುದು. ಮೂರು ವರ್ಷದ ನಂತರ, ಮೆಚ್ಯೂರಿಟಿಗೆ ಮುಂಚೆ ಸವರನ್ ಗೋಲ್ಡ್ ಬಾಂಡ್ ಮಾರಿದಲ್ಲಿ ಲಾಂಗ್ ಟರ್ಮ್ ಕ್ಯಾಪಿಟಲ್ ಗೇಯ್ನ್ಸ್ ಶೇ 20ರಷ್ಟು ಕ್ಯಾಪಿಟಲ್ ಗೇಯ್ನ್ಸ್ ಅನ್ವಯಿಸುತ್ತದೆ. ಗೋಲ್ಡ್ ಬಾಂಡ್​ಗೆ ವರ್ಷಾವರ್ಷ ಶೇ 2.5 ಬಡ್ಡಿ ಬರುತ್ತದೆ. ಚಿನ್ನದ ಇಟಿಎಫ್​ಗೆ ಈ ಅನುಕೂಲ ಇಲ್ಲ. ಇಟಿಎಫ್​ಗಳ ಮ್ಯಾನೇಜರ್​ಗಳಿಗೆ ನಿಧಿ ನಿರ್ವಹಣೆ ಶುಲ್ಕ ಮತ್ತು ಪ್ರವೇಶ ಹಾಗೂ ಹೊರಬರುವ ವೇಳೆಯಲ್ಲಿ ಬ್ರೋಕರೇಜ್ ಹೋಗುತ್ತದೆ. ಸವರನ್ ಗೋಲ್ಡ್ ಬಾಂಡ್​ಗೆ ಅಂಥ ಶುಲ್ಕ ಇಲ್ಲ.

ಇದನ್ನೂ ಓದಿ: Akshaya Tritiya: ಜ್ಯೋತಿಷ ಪ್ರಕಾರ ಅಕ್ಷಯ ತೃತೀಯಕ್ಕೆ ಯಾವ ರಾಶಿಯವರು ಏನು ಖರೀದಿಸಿದರೆ ಉತ್ತಮ?

ಇದನ್ನೂ ಓದಿ: ಚಿನ್ನ ಅಗತ್ಯ ಸೇವೆಯಲ್ಲ; ಅಕ್ಷಯ ತೃತೀಯದಂದು ಅಂಗಡಿ ತೆರೆಯಲು ಅನುಮತಿ ನಿರಾಕರಿಸಿದ ರಾಜ್ಯದ ಮುಖ್ಯ ಕಾರ್ಯದರ್ಶಿ

( Akshaya Tritiya: Digital gold or SGB or Gold ETF which investment best alternative to physical gold on the occasion of Akshaya Tritiya)